ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್‌ಎಂಎಸ್‌ಎ ಶಾಲೆ ಸ್ಥಳಾಂತರ ವಿವಾದ: ಶೀಘ್ರವೇ ದೆಹಲಿಗೆ ನಿಯೋಗ...

Last Updated 27 ಆಗಸ್ಟ್ 2011, 6:20 IST
ಅಕ್ಷರ ಗಾತ್ರ

ಜಗಳೂರು: ತಾಲ್ಲೂಕಿನ ತಮಲೇಹಳ್ಳಿ ಗ್ರಾಮದ ಆರ್‌ಎಂಎಸ್‌ಎ ಶಾಲೆಯನ್ನು ಬೇರೆಡೆಗೆ ಸ್ಥಳಾಂತರ ಮಾಡಿರುವ ಆದೇಶವನ್ನು ಹಿಂಪಡೆಯುವಂತೆ ಒತ್ತಾಯಿಸಿ ಗ್ರಾಮದ ಮುಖಂಡರೊಂದಿಗೆ ದೆಹಲಿಗೆ ನಿಯೋಗ ತೆರಳಲಾಗುವುದು ಎಂದು ಹಟ್ಟಿ ಚಿನ್ನದ ಗಣಿ ಅಧ್ಯಕ್ಷ ಎಸ್.ವಿ. ರಾಮಚಂದ್ರ ಅವರು ಭರವಸೆ ನೀಡಿದ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ನಾಲ್ಕು ದಿನಗಳಿಂದ ಗ್ರಾಮಸ್ಥರು ನಡೆಸುತ್ತಿರುವ ಅಹೋರಾತ್ರಿ ಪ್ರತಿಭಟನೆಯನ್ನು ಶುಕ್ರವಾರ ಅಂತ್ಯಗೊಳಿಸಲಾಯಿತು.
 
ಪಟ್ಟಣದ ಬಿಇಒ ಕಚೇರಿ ಎದುರು ಧರಣಿ ನಡೆಯುತ್ತಿದ್ದ ಸ್ಥಳಕ್ಕೆ ಶುಕ್ರವಾರ ಭೇಟಿ ನೀಡಿದ ಶಾಸಕರು, ಶಾಲೆ ಸ್ಥಳಾಂತರ ವಿಷಯದಲ್ಲಿ ಯಾವುದೇ ರಾಜಕೀಯ ನಡೆದಿಲ್ಲ. ಜನಪ್ರತಿನಿಧಿಗಳ ಗಮನಕ್ಕೆ ತಾರದೆ ಶಿಕ್ಷಣ ಇಲಾಖೆ ಅಧಿಕಾರಿಗಳು ಏಕಪಕ್ಷೀಯವಾಗಿ ನಿರ್ಧಾರ ಕೈಗೊಂಡಿದ್ದಾರೆ ಎಂದು ಸ್ಪಷ್ಟಪಡಿಸಿದರು.

ಶಾಲೆ ಸ್ಥಳಾಂತರಕ್ಕೆ ಆದೇಶಿಸಿರುವ ಶಿಕ್ಷಣ ಇಲಾಖೆಯ ಹಿಂದಿನ ಉಪ ನಿರ್ದೇಶಕ ಬೆಳ್ಳಶೆಟ್ಟಿ ಅವರ ವಿರುದ್ದ ಶಿಸ್ತು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಮುಖ್ಯಮಂತ್ರಿ ಹಾಗೂ ಶಿಕ್ಷಣ ಸಚಿವರಿಗೆ ದೂರು ಸಲ್ಲಿಸಲಾಗಿದೆ.  ಗ್ರಾಮದ ಬಡ ಹಾಗೂ ದಲಿತ ಮಕ್ಕಳಿಗೆ ತೀವ್ರ ಅನ್ಯಾವಾಗಿದ್ದು ನನಗೆ ನೋವು ತಂದಿದೆ.
 
ಶಾಲೆಯ ವಿದ್ಯಾರ್ಥಿಗಳು ಬೇರೆಡೆಗೆ ಹೋಗದಂತೆ ಹೆಚ್ಚುವರಿ ಶಿಕ್ಷಕರನ್ನು ನಿಯೋಜಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಮುಂದಿನ ಶೈಕ್ಷಣಿಕ ವರ್ಷದಿಂದ ಆರ್‌ಎಂಎಸ್‌ಎ ಶಾಲೆಯ ಮರು ಪ್ರಾರಂಭಕ್ಕೆ ಆಗ್ರಹಿಸಿ ದೆಹಲಿಗೆ ಶೀಘ್ರವೇ ತೆರಳಲಾಗುವುದು ಎಂದು ರಾಮಚಂದ್ರ ಹೇಳಿದರು.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ಮುಖಂಡ ಎಚ್.ಪಿ. ರಾಜೇಶ್ ಮಾತನಾಡಿ, ಶಾಲೆಯನ್ನು ದಿಢೀರ್ ಆಗಿ ಸ್ಥಳಾಂತರ ಮಾಡಿರುವ ಹಿಂದೆ ರಾಜಕೀಯ ಕೈವಾಡ ಇದೆ. ಜಿಲ್ಲಾ ಉಸ್ತುವಾರಿ ಸಚಿವರ ಪತ್ರದ ಹಿನ್ನೆಲೆಯಲ್ಲಿ ಅಧಿಕಾರಿಗಳು ಶಾಲೆ ಸ್ಥಳಾಂತರಕ್ಕೆ ಆದೇಶ ನೀಡಿದ್ದಾರೆ. ಕೆಟ್ಟ ರಾಜಕೀಯಕ್ಕೆ ಬಡ ಮಕ್ಕಳು ಬಲಿಪಶು ಆಗುತ್ತಿದ್ದಾರೆ ಎಂದು ಆರೋಪಿಸಿದರು. ಹಲವು ಪ್ರತಿಭಟನಾಕಾರರು ಆರೋಪಕ್ಕೆ ದನಿಗೂಡಿಸಿದರು.

 ಶಾಸಕ ರಾಮಚಂದ್ರ ಪ್ರತಿಕ್ರಿಯಿಸಿ, ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಈ ಪ್ರಮಾದವಾಗಿದ್ದು, ಮಕ್ಕಳ ವಿಷಯದಲ್ಲಿ ರಾಜಕೀಯ ಬೆರೆಸುವುದು ಬೇಡ. 3 ವರ್ಷದ ಹಿಂದೆ ನಾನು ಕಾಂಗ್ರೆಸ್ ಶಾಸಕನಾಗಿದ್ದ ಅವಧಿಯಲ್ಲಿ ಕೇಂದ್ರ ಸರ್ಕಾರದ ಶಾಲೆ ಮಂಜೂರಾಗಿದ್ದು, ಪ್ರಸ್ತುತ ನಾನು ಶಾಸಕನಾಗಿದ್ದರೂ ನನ್ನ ಗಮನಕ್ಕೆ ತಾರದೇ ಸ್ಥಳಾಂತರ ಆಗಿರುವುದರಿಂದ ಗ್ರಾಮಸ್ಥರ ಕ್ಷಮೆ ಯಾಚಿಸುತ್ತೇನೆ ಎಂದು ಅವರು ಸ್ಪಷ್ಟಪಡಿಸಿದರು.

ತಾ.ಪಂ. ಅಧ್ಯಕ್ಷ ಬಿ.ಆರ್. ಅಂಜಿನಪ್ಪ, ಜಿ.ಪಂ. ಸದಸ್ಯರಾದ ಕೆ.ಪಿ. ಪಾಲಯ್ಯ, ಎಚ್. ನಾಗರಾಜ್, ನೇತ್ರಾವತಿ ಕೃಷ್ಣಮೂರ್ತಿ, ಪ.ಪಂ. ಅಧ್ಯಕ್ಷ ಜೆ.ವಿ. ನಾಗರಾಜ್, ಎಪಿಎಂಸಿ ಅಧ್ಯಕ್ಷ ರೇವಣಸಿದ್ದಪ್ಪ, ಡಿ.ಆರ್. ಹನುಮಂತಪ್ಪ, ಲೋಕೇಶ್, ಮಾರುತಿ, ಚೌಡಪ್ಪ, ಬೋರಪ್ಪ ನಾಯಕ, ಎಚ್‌ಸಿ ಮಹೇಶ್, ಡಿಡಿಪಿಐ ರಾಜಶೇಖರ್, ತಹಶೀಲ್ದಾರ್ ಎಚ್.ಪಿ. ನಾಗರಾಜ್, ಡಿವೈಎಸ್‌ಪಿ ಅನಿತಾ, ಬಿಇಒ ಜಿ. ಕೊಟ್ರೇಶ್, ಪಿಎಸ್‌ಐ ಲಕ್ಷ್ಮಣ್‌ನಾಯ್ಕ ಹಾಜರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT