ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್‌.ಎನ್‌.ನಾಯಕರಿಗೆ ವಿದಾಯ

Last Updated 23 ಡಿಸೆಂಬರ್ 2013, 9:47 IST
ಅಕ್ಷರ ಗಾತ್ರ

ಅಂಕೋಲಾ: ಹಂತಕರ ಗುಂಡಿಗೆ ಬಲಿಯಾದ ಸಹಕಾರಿ ಧುರೀಣ ಆರ್.ಎನ್. ನಾಯಕ ಅವರ ಅಂತ್ಯ ಸಂಸ್ಕಾರವನ್ನು ಸಾವಿರಾರು ಅಭಿಮಾನಿಗಳ ಸಮ್ಮುಖದಲ್ಲಿ ಭಾನುವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಕುಂಬಾರಕೇರಿಯ ಅವರ ಖಾಸಗಿ ಜಾಗದಲ್ಲಿ ನಡೆಸಲಾಯಿತು.

ಶನಿವಾರ ಮಧ್ಯಾಹ್ನ ಆರ್.ಎನ್. ನಾಯಕ ಅವರು ಹಂತಕನ ಗುಂಡಿಗೆ ಬಲಿಯಾಗಿದ್ದರು. ನಂತರ ಇವರ ಪಾರ್ಥಿವ ಶರೀರವನ್ನು ಪಟ್ಟಣದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗಿತ್ತು. ಆದರೆ ಶವ ಪರೀಕ್ಷೆಗೆ ತಜ್ಞ ವೈದ್ಯರು ಇಲ್ಲದಿದ್ದರಿಂದ ಭಾನುವಾರ ಶವ ಪರೀಕ್ಷೆ ನಡೆಸಬೇಕಾಯಿತು.

ಹುಬ್ಬಳ್ಳಿಯ ವಿಧಿ ವಿಜ್ಞಾನ ವಿಭಾಗದ ಮುಖ್ಯಸ್ಥ ಡಾ. ಗಜಾನನ ನಾಯಕ ಹಾಗೂ ಸಹಾಯಕ ವೈದ್ಯ ಡಾ. ರವಿ, ಬೆಂಗಳೂರಿನ ಮದ್ದು, ಗುಂಡು, ಆಯುಧ ಪರಿಣಿತ ತಜ್ಞ ವೈದ್ಯ ಡಾ. ರವಿಶಂಕರ ಭಾನುವಾರ ಸತತ ಮೂರು ತಾಸುಗಳವರೆಗೆ ಶವ ಪರೀಕ್ಷೆ ನಡೆಸಿದರು. ತಾಲ್ಲೂಕು ವೈದ್ಯಾಧಿಕಾರಿ ಡಾ. ವರದರಾಜ ನಾಯಕ, ವೈದ್ಯರಾದ ಡಾ.ಸುಬ್ರಾಯ ಬಂಟ, ಡಾ.ಅನುಪಮಾ, ಡಾ.ಶರದ್‌ ನಾಯಕ ಸಹಕರಿಸಿದರು.

ಆರ್.ಎನ್. ನಾಯಕ ಅವರಿಗೆ ಒಂದೇ ಗುಂಡು ತಗುಲಿದ್ದು, ಬಲ ಭುಜಕ್ಕೆ ಬಿದ್ದ ಗುಂಡು ಹೃದಯಕ್ಕೆ ನಾಟಿದ್ದರಿಂದಾಗಿ ಸ್ಥಳದಲ್ಲಿಯೇ ಕುಸಿದುಬಿದ್ದು ಸಾವನ್ನಪ್ಪಿದ್ದರು. ಅಂಗ ರಕ್ಷಕ ನಡೆಸಿದ ದಾಳಿಗೆ ಒಬ್ಬ ಹಂತಕ ಬಲಿಯಾಗಿ, ಇನೊಬ್ಬ ಸೆರೆಸಿಕ್ಕಿದ್ದ.

ಭಾನುವಾರ ಮಧ್ಯಾಹ್ನ ಪಾರ್ಥಿವ ಶರೀರವನ್ನು ಪಟ್ಟಣದ ಕೆ.ಸಿ. ರಸ್ತೆಯಲ್ಲಿರುವ ಅವರ ‘ಅರಮನೆ’ ನಿವಾಸಕ್ಕೆ ಸಾಗಿಸಲಾಯಿತು. ಅಲ್ಲಿ ನೆರೆದಿದ್ದ ಸಾವಿರಾರು ಜನರು ಅಂತಿಮ ದರ್ಶನ ಪಡೆದು ನಂತರ ನಡೆದ ಮೆರವಣಿಗೆಯಲ್ಲಿ ಜೊತೆಗೂಡಿ ಕುಂಬಾರಕೇರಿಯಲ್ಲಿ ನಡೆದ ಅಂತ್ಯ ಸಂಸ್ಕಾರದಲ್ಲಿಯೂ ಪಾಲ್ಗೊಂಡಿದ್ದರು.

ಮಧ್ಯಾಹ್ನ 3 ಗಂಟೆಗೆ ನಡೆದ ಅಂತ್ಯ ಸಂಸ್ಕಾರದಲ್ಲಿ ಆರ್.ಎನ್. ನಾಯಕ ಅವರ ಪುತ್ರ ಮಯೂರ ಅಂತಿಮ ವಿಧಿ-ವಿಧಾನಗಳನ್ನು ಪೂರೈಸಿದರು.

ಮಾಜಿ ಸಚಿವರಾದ ವಿಶ್ವೇಶ್ವರ ಹೆಗಡೆ ಕಾಗೇರಿ, ಆನಂದ ಅಸ್ನೋಟಿಕರ, ಶಿವಾನಂದ ನಾಯ್ಕ, ಸಂಸದ ಅನಂತಕುಮಾರ ಹೆಗಡೆ, ಮಾಜಿ ಶಾಸಕ ಉಮೇಶ ಭಟ್, ಬಿಜೆಪಿ ಮುಖಂಡ ಸೂರಜ ನಾಯ್ಕ ಸೋನಿ, ಕಾಂಗ್ರೆಸ್ ಪ್ರಮುಖ ನಿವೇದಿತ ಆಳ್ವಾ, ಪ್ರಮುಖರಾದ ರಮಾನಂದ ನಾಯಕ, ಗೋಪಾಲಕೃಷ್ಣ ನಾಯಕ, ಉಮೇಶ ನಾಯ್ಕ, ಡಾ. ಶಿವಾನಂದ ನಾಯಕ ಸೇರಿದಂತೆ ಸಾವಿರಾರು ಜನರು ಅಂತಿಮ ದರ್ಶನ ಪಡೆದರು.

ಸಮ್ಮೇಳನ ಮುಂದಕ್ಕೆ
ಅಂಕೋಲಾ: ಆರ್
.ಎನ್. ನಾಯಕ ಅವರ ನಿಧನದಿಂದಾಗಿ ಪಟ್ಟಣದಲ್ಲಿ ಜನವರಿ 4, 5ರಂದು ನಡೆಯಬೇಕಿದ್ದ ಸಾಹಿತ್ಯ ಸಮ್ಮೇಳನವನ್ನು ಮುಂದೂಡಲಾಗಿದ್ದು, ಮುಂದಿನ ದಿನಾಂಕವನ್ನು ನಿಗದಿಪಡಿಸಲು ಡಿ. 25ರಂದು ಸಂಜೆ 4.-30ಕ್ಕೆ ಪಟ್ಟಣದ ಕನ್ನಡ ಭವನದಲ್ಲಿ ಜಿಲ್ಲಾ ಕಾರ್ಯಕಾರಿ ಸಮಿತಿ, ಉನ್ನತ ಸಲಹಾ ಸಮಿತಿ ಹಾಗೂ ಉಪ ಸಮಿತಿಗಳ ಸಭೆ ಕರೆಯಲಾಗಿದೆ ಎಂದು ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷ ರೋಹಿದಾಸ ನಾಯಕ, ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿಯ ಕಾರ್ಯಾಧ್ಯಕ್ಷ ವಿಷ್ಣು ನಾಯ್ಕ, ಜಿಲ್ಲಾ ಗೌರವ ಕಾರ್ಯದರ್ಶಿ ಪಿ.ಆರ್. ನಾಯ್ಕ, ಉನ್ನತ ಸಲಹಾ ಸಮಿತಿ ಸದಸ್ಯ ಬಿ.ಎನ್. ವಾಸರೆ  ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT