ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್‌ಟಿಇ: ಇನ್ನೂ ಸಿಗದ ಅನುದಾನ, ಖಾಸಗಿ ಶಿಕ್ಷಣ ಸಂಸ್ಥೆಗಳ ಅಸಮಾಧಾನ

Last Updated 2 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಶಿಕ್ಷಣ ಹಕ್ಕು ಕಾಯ್ದೆಯಡಿ (ಆರ್‌ಟಿಇ) ಉಚಿತವಾಗಿ ಪ್ರವೇಶ ಪಡೆದಿರುವ ಶೇ 25ರಷ್ಟು ಮಕ್ಕಳ ಶಿಕ್ಷಣದ ವೆಚ್ಚವನ್ನು ಸೆಪ್ಟೆಂಬರ್ ತಿಂಗಳು ಮುಗಿದರೂ ರಾಜ್ಯ ಸರ್ಕಾರ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಪಾವತಿಸಿಲ್ಲ. ರಾಜ್ಯ ಸರ್ಕಾರದ ನಿಧಾನಗತಿಯ ಧೋರಣೆ ಖಾಸಗಿ ಶಾಲೆಗಳ ಅಸಮಾಧಾನಕ್ಕೆ ಕಾರಣವಾಗಿದೆ.

ರಾಜಧಾನಿ (ಬೆಂಗಳೂರು ದಕ್ಷಿಣ ಹಾಗೂ ಉತ್ತರ) ಹಾಗೂ ಗ್ರಾಮಾಂತರ ಜಿಲ್ಲೆಯಲ್ಲಿ 2,900ಕ್ಕೂ ಅಧಿಕ ಶಾಲೆಗಳಲ್ಲಿ 6,000ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಆರ್‌ಟಿಇ ಅಡಿಯಲ್ಲಿ ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲಾಗಿತ್ತು. ಆ ಮಕ್ಕಳಿಗೆ ಶಿಕ್ಷಣ ನೀಡಲು ಖಾಸಗಿ ಶಾಲೆಗಳು ಮಾಡುವ ವೆಚ್ಚವನ್ನು ಸರ್ಕಾರ ಮರುಪಾವತಿ ಮಾಡಬೇಕಿದೆ. ಪ್ರತಿ ವಿದ್ಯಾರ್ಥಿಗೆ ವಾರ್ಷಿಕ ಗರಿಷ್ಠ 11,848 ರೂಪಾಯಿ ಪಾವತಿಸುವುದಾಗಿ ಸರ್ಕಾರ ತಿಳಿಸಿತ್ತು. ಮೊದಲ ಕಂತನ್ನು ಸೆಪ್ಟೆಂಬರ್ ತಿಂಗಳಿನಲ್ಲಿ ಹಾಗೂ ಎರಡನೇ ಕಂತನ್ನು ಫೆಬ್ರುವರಿಯಲ್ಲಿ ಪಾವತಿಸಲಾಗುವುದು ಎಂದು ಶಿಕ್ಷಣ ಇಲಾಖೆ ಭರವಸೆ ನೀಡಿತ್ತು. ಆದರೆ, ಈವರೆಗೂ ಮೊದಲ ಕಂತಿನ ಮೊತ್ತ ತಲುಪಿಲ್ಲ ಎಂದು ಖಾಸಗಿ ಶಾಲೆಗಳು ಆಕ್ಷೇಪ ವ್ಯಕ್ತಪಡಿಸಿವೆ.

`ಸೀಮಿತ ಸಂಖ್ಯೆಯ ಖಾಸಗಿ ಶಾಲೆಗಳು ಲಾಭ ಗಳಿಸುತ್ತಿವೆ. ಸೇವಾ ಮನೋಭಾವದ ಶಿಕ್ಷಣ ಸಂಸ್ಥೆಗಳು ಸಾಕಷ್ಟು ಇವೆ. ಸರ್ಕಾರದ ವಿಳಂಬಗತಿಯ ಧೋರಣೆ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳಿಗೆ ದೊಡ್ಡ ಹೊಡೆತ. ಸೆಪ್ಟೆಂಬರ್ ಆರಂಭದಲ್ಲಿ ಮೊದಲ ಕಂತು ಪಾವತಿಯಾಗುವ ವಿಶ್ವಾಸ ಇತ್ತು. ಆದರೆ, ರಾಜ್ಯ ಸರ್ಕಾರ ಇಲ್ಲೂ ದ್ರೋಹ ಮಾಡಿದೆ~ ಎಂದು ರಾಜ್ಯ ಖಾಸಗಿ ಶಾಲೆಗಳ ಆಡಳಿತ ಮಂಡಳಿ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಡಿ.ಶಶಿಕುಮಾರ್ ದೂರಿದರು.

`ಖಾಸಗಿ ಶಾಲೆಗಳು ಈಗಾಗಲೇ ಉತ್ತಮ ಶಿಕ್ಷಕರ ಕೊರತೆಯನ್ನು ಎದುರಿಸುತ್ತಿವೆ. ಪ್ರತಿ ತಿಂಗಳು ಶಿಕ್ಷಕರಿಗೆ ಸಕಾಲಕ್ಕೆ ವೇತನ ಪಾವತಿಯಾಗದಿದ್ದರೆ ಅವರು ಕರ್ತವ್ಯಕ್ಕೆ ಹಾಜರಾಗುವುದಿಲ್ಲ. ಇತರ ಖರ್ಚು ವೆಚ್ಚಗಳು ಸಾಕಷ್ಟು ಇವೆ. ಆಡಳಿತ ಮಂಡಳಿಗಳ ಸಮಸ್ಯೆಗೆ ಸರ್ಕಾರ ಸ್ಪಂದಿಸಬೇಕು~ ಎಂದು ಅವರು ಒತ್ತಾಯಿಸಿದರು.

ಟ್ರಸ್ಟ್‌ಗೆ ಪಾವತಿಸಿ: `ಶಾಲಾ ಮುಖ್ಯ ಶಿಕ್ಷಕರ ಖಾತೆಗೆ ಈ ಮೊತ್ತವನ್ನು ಸಂದಾಯ ಮಾಡಲು ಶಿಕ್ಷಣ ಇಲಾಖೆ ಉದ್ದೇಶಿಸಿದೆ. ಎಲ್ಲ ಸಂಸ್ಥೆಗಳು ಟ್ರಸ್ಟ್ ರಚಿಸಿಕೊಂಡು ಲೆಕ್ಕಪತ್ರ ಇಟ್ಟುಕೊಂಡಿರುತ್ತವೆ. ಶುಲ್ಕವನ್ನು ಈ ಟ್ರಸ್ಟ್ ಹೆಸರಿಗೆ ಪಾವತಿ ಮಾಡಬೇಕು. ಇಲ್ಲದಿದ್ದರೆ ಮತ್ತೆ ಗೊಂದಲ ನಿರ್ಮಾಣವಾಗಲಿದೆ. ಈ ಸಂಬಂಧ ಶಿಕ್ಷಣ ಸಚಿವರನ್ನು ಭೇಟಿ ಮಾಡಿ ಸಮಸ್ಯೆಯನ್ನು ಮನವರಿಕೆ ಮಾಡಲಾಗಿದೆ~ ಎಂದು ಖಾಸಗಿ ಶಾಲೆಗಳ ಆಡಳಿತ ಮಂಡಳಿಯ ಜಂಟಿ ಸಮಿತಿಯ ಅಧ್ಯಕ್ಷ ಎಲ್.ಆರ್. ಶಿವರಾಮೇಗೌಡ ತಿಳಿಸಿದರು.  

`ಎಲ್ಲ ಶಾಲೆಗಳಿಗೆ ಏಕರೂಪದ ಶುಲ್ಕವನ್ನು ಮರುಪಾವತಿ ಮಾಡಬೇಕು. ಈ ವಿಚಾರದಲ್ಲಿ ತಾರತಮ್ಯ ಮಾಡಬಾರದು. ಅಲ್ಲದೆ, ಕಳೆದ ಬಾರಿಯ ಪ್ರತಿ ವಿದ್ಯಾರ್ಥಿಯ ವೆಚ್ಚದ ಮಾಹಿತಿ ಪಡೆದು ಅದೇ ಮೊತ್ತವನ್ನು ನೀಡುವುದು ಉತ್ತಮ ಕ್ರಮವಲ್ಲ~ ಎಂದು ಅವರು ಅಭಿಪ್ರಾಯಪಟ್ಟರು.

`ರಾಜ್ಯಕ್ಕೆ ಕೇಂದ್ರ ಸರ್ಕಾರ ಸರ್ವ ಶಿಕ್ಷಣ ಅಭಿಯಾನದಡಿಯಲ್ಲಿ ಶೇ 65ರಷ್ಟು ಅನುದಾನ ನೀಡುತ್ತಿದೆ. ಈ ಮೊತ್ತವನ್ನೇ ಆರ್‌ಟಿಇ ಅನುಷ್ಠಾನಕ್ಕೆ ಬಳಸಿಕೊಳ್ಳುವಂತೆ ಕೇಂದ್ರ ಸರ್ಕಾರ ಸೂಚಿಸಿದೆ. ಈ ಸಂಬಂಧ ನಿರ್ಮಾಣವಾಗಿರುವ ಗೊಂದಲವನ್ನು ನಿವಾರಿಸುವಂತೆ ಕೇಂದ್ರ ಸರ್ಕಾರದ ಗಮನ ಸೆಳೆಯಲಾಗಿದೆ.

ಕೇಂದ್ರದಿಂದ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ಈ ವರ್ಷ ಮರುಪಾವತಿ ಮೊತ್ತವನ್ನು ರಾಜ್ಯ ಸರ್ಕಾರದಿಂದಲೇ ಪಾವತಿಸಲು ಉದ್ದೇಶಿಸಲಾಗಿದೆ~ ಎಂದು ಶಿಕ್ಷಣ ಇಲಾಖೆಯ ಮೂಲಗಳು ತಿಳಿಸಿವೆ.

15 ದಿನಗಳಲ್ಲಿ ಪಾವತಿ: ಡಿಡಿಪಿಐ
`ಖಾಸಗಿ ಶಾಲೆಗಳಿಗೆ ಶುಲ್ಕ ಮರುಪಾವತಿ ಮಾಡಲು ದಾಖಲೆಗಳ ಪರಿಶೀಲನೆ ಪ್ರಕ್ರಿಯೆ ನಡೆದಿದೆ. ಕಾಯ್ದೆ ಅನುಷ್ಠಾನದ ಮೊದಲ ವರ್ಷವಾದ್ದರಿಂದ ಈ ಕಾರ್ಯ ಸ್ವಲ್ಪ ವಿಳಂಬವಾಗಿದೆ. ಇನ್ನು 15-20 ದಿನಗಳಲ್ಲಿ ಜಿಲ್ಲೆಯ ಶಾಲೆಗಳಲ್ಲಿ ಶುಲ್ಕ ಮರುಪಾವತಿ ಮಾಡಲು ಕ್ರಮ ಕೈಗೊಳ್ಳಲಾಗುವುದು~ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಪ ನಿರ್ದೇಶಕ ಎಚ್.ವಿ.ವೆಂಕಟೇಶಪ್ಪ `ಪ್ರಜಾವಾಣಿ~ಗೆ ತಿಳಿಸಿದರು.

`ಶಾಲೆಗಳ ಕಳೆದ ವರ್ಷದ ಲೆಕ್ಕಪರಿಶೋಧನಾ ವರದಿಯನ್ನು ಪರಿಶೀಲಿಸಿ ಈ ವರ್ಷ ಅದೇ ಮೊತ್ತವನ್ನು ವಿದ್ಯಾರ್ಥಿಗಳಿಗೆ ಮರುಪಾವತಿ ಮಾಡಲಾಗುವುದು. ಎಲ್ಲ ಶಾಲೆಗಳಲ್ಲಿ 11,848 ರೂಪಾಯಿ ಶುಲ್ಕವನ್ನು ಮರುಪಾವತಿ ಮಾಡುವುದಿಲ್ಲ. ಈ ಮೊತ್ತ ಖಾಸಗಿ ಶಾಲೆಗಳಿಗೆ ಮರುಪಾವತಿ ಮಾಡುವ ಗರಿಷ್ಠ ಮೊತ್ತ. ಜಿಲ್ಲೆಯ ಒಂದೆರಡು ಶಾಲೆಗಳಿಗೆ ಈ ಮೊತ್ತ ಪಾವತಿಯಾಗಲಿದೆ~ ಎಂದು ಅವರು ಸ್ಪಷ್ಟಪಡಿಸಿದರು.

`ಸೆಪ್ಟೆಂಬರ್ ತಿಂಗಳಿನಲ್ಲೇ ಶುಲ್ಕ ಮರುಪಾವತಿಸಲು ಯೋಜಿಸಲಾಗಿತ್ತು. ಸೆಪ್ಟೆಂಬರ್ 30ರೊಳಗೆ ವಿಭಾಗವಾರು ಪಟ್ಟಿಯನ್ನು ಕಳುಹಿಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚಿಸಲಾಗಿತ್ತು. ಪಟ್ಟಿ ಇನ್ನೂ ಬಂದಿಲ್ಲ. ವಾರದೊಳಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮಾಹಿತಿ ಲಭ್ಯವಾಗಲಿದೆ. ಖಾಸಗಿ ಶಾಲೆಗಳು ಆತಂಕಕ್ಕೆ ಒಳಗಾಗುವ ಅಗತ್ಯ ಇಲ್ಲ~ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT