ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್‌ಟಿಇ ಕಾಯ್ದೆ ಅನುಷ್ಠಾನದಲ್ಲಿ ಹಿಂದುಳಿದ ಬೆಂಗಳೂರು ದಕ್ಷಿಣ, ಉತ್ತರ ವಲಯ

Last Updated 15 ಜೂನ್ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯ ಸರ್ಕಾರದ ಮಾರ್ಗಸೂಚಿ ಪ್ರಕಾರ ಸಾರ್ವಜನಿಕ ಶಿಕ್ಷಣ ಇಲಾಖೆಯ ಬೆಂಗಳೂರು ದಕ್ಷಿಣ, ಉತ್ತರ ಹಾಗೂ ಗ್ರಾಮಾಂತರ ಉಪನಿರ್ದೇಶಕರ ಕಚೇರಿ ವ್ಯಾಪ್ತಿಯಲ್ಲಿ ಅಲ್ಪಸಂಖ್ಯಾತರ ಶಿಕ್ಷಣ ಸಂಸ್ಥೆಗಳನ್ನು ಹೊರತುಪಡಿಸಿ ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಯ (ಆರ್‌ಟಿಇ) ವ್ಯಾಪ್ತಿಗೆ ಒಳಪಟ್ಟ ಶಾಲೆಗಳು 2,847. ಈ ಶಾಲೆಗಳಿಗೆ ಪ್ರವೇಶ ಪಡೆದ ಒಟ್ಟು ವಿದ್ಯಾರ್ಥಿಗಳು 5,143!

ಮೂರು ವಲಯದ ಶಿಕ್ಷಣ ಇಲಾಖೆ ಅಧಿಕಾರಿಗಳೇ ನೀಡಿರುವ ಅಂಕಿ-ಅಂಶ ಇದು. ಇಲಾಖೆ ಅಂಕಿ ಅಂಶದ ಪ್ರಕಾರ ಪ್ರತಿ ಶಾಲೆಗೆ ಸೇರ್ಪಡೆಯಾದ ವಿದ್ಯಾರ್ಥಿಗಳ ಸಂಖ್ಯೆ ಎರಡಕ್ಕಿಂತಲೂ ಕಡಿಮೆ!ಆರ್‌ಟಿಇ ಅಡಿಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ಶೇ 25 ಮೀಸಲಾತಿ ನೀಡಲಾಗಿದೆ.

2011-12ನೇ ಸಾಲಿನ ಒಂದನೇ ತರಗತಿಯ ದಾಖಲಾತಿ ಪ್ರಕಾರ ಆರ್‌ಟಿಇ ಅಡಿಯಲ್ಲಿ ದಕ್ಷಿಣ, ಉತ್ತರ ಹಾಗೂ ಗ್ರಾಮಾಂತರ ವ್ಯಾಪ್ತಿಯಲ್ಲಿ ಹಿಂದುಳಿದ ವಿದ್ಯಾರ್ಥಿಗಳ ಶಾಲಾ ಸೇರ್ಪಡೆಗೆ 27,953 ಸ್ಥಾನಗಳನ್ನು ಕಾಯ್ದಿರಿಸಲಾಗಿತ್ತು. ಇಲ್ಲಿನ 2,847 ಖಾಸಗಿ ಶಾಲೆಗಳಲ್ಲಿ 6,239 ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದು, ಇದರಲ್ಲಿ 1,096 ಅರ್ಜಿಗಳು ತಿರಸ್ಕೃತಗೊಂಡಿವೆ. ಕಾಯ್ದೆಯ ನಿಬಂಧನೆಗಳನ್ನು ಪೂರೈಸಿ 5,143 ವಿದ್ಯಾರ್ಥಿಗಳ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ.

ಮೂರು ವಲಯಗಳ ಪೈಕಿ ಗ್ರಾಮಾಂತರ ಜಿಲ್ಲೆಯಲ್ಲೇ ಸ್ಥಿತಿ ಉತ್ತಮವಾಗಿದ್ದು, ಇಲ್ಲಿ ಶೇ 68ರಷ್ಟು ವಿದ್ಯಾರ್ಥಿಗಳು ಕಾಯ್ದೆಯ ಪ್ರಯೋಜನ ಪಡೆದಿದ್ದಾರೆ. ಬೆಂಗಳೂರು ದಕ್ಷಿಣ ಹಾಗೂ ಉತ್ತರ ವಿಭಾಗದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದ್ದಾರೆ. ದಕ್ಷಿಣದಲ್ಲಿ ಶೇ 14.5, ಉತ್ತರದಲ್ಲಿ ಶೇ 18.60 ಮಂದಿ ವಿದ್ಯಾರ್ಥಿಗಳು ಖಾಸಗಿ ಶಾಲೆಗಳಿಗೆ ಸೇರ್ಪಡೆಯಾಗಿದ್ದಾರೆ.

`ಶಾಲೆಗಳಿಗೆ ಬಂದಿರುವ ಅರ್ಜಿಗಳೇ ಕಡಿಮೆ. ಕೆಲವು ಶಾಲೆಗಳಿಗೆ ಅರ್ಜಿಗಳೇ ಬಂದಿರಲಿಲ್ಲ. ನೆರೆಹೊರೆಯ ಎರಡು-ಮೂರು ಶಾಲೆಗಳಿಗೆ ಪೋಷಕರು ಅರ್ಜಿ ಸಲ್ಲಿಸಿದ ಉದಾಹರಣೆಗಳು ಇವೆ. ಅಲ್ಲದೆ ಆದಾಯ ಪ್ರಮಾಣಪತ್ರ ಹಾಗೂ ಜಾತಿಪ್ರಮಾಣ ಪತ್ರಗಳನ್ನು ಸರಿಯಾಗಿ ನೀಡದ ಅರ್ಜಿಗಳನ್ನು ತಿರಸ್ಕರಿಸಲಾಗಿದೆ.

ಬಂದಿರುವ ಅರ್ಜಿಗಳನ್ನು ಪರಿಶೀಲಿಸಿ ಕಾಯ್ದೆಯ ನಿಬಂಧನೆಗಳಿಗೆ ಪೂರೈಸಿ ಅರ್ಹ ವಿದ್ಯಾರ್ಥಿಗಳಿಗೆ ಪ್ರವೇಶ ಅವಕಾಶ ಕಲ್ಪಿಸಲಾಗಿದೆ~ ಎಂದು ಬೆಂಗಳೂರು ದಕ್ಷಿಣದ ಆರ್‌ಟಿಇ ನೋಡೆಲ್ ಅಧಿಕಾರಿ ಮಹಾದೇವ `ಪ್ರಜಾವಾಣಿ~ಗೆ ತಿಳಿಸಿದರು. 

`ಈ ವರ್ಷ ಶಾಲೆ ಆರಂಭವಾಗಲು ಒಂದು ತಿಂಗಳು ಇರುವಾಗ ಕಾಯ್ದೆಯನ್ನು ಕಡ್ಡಾಯ ಮಾಡಲಾಯಿತು. ಕಾಯ್ದೆಯ ಬಗ್ಗೆ ಸೂಕ್ತ ರೀತಿಯಲ್ಲಿ ಪ್ರಚಾರ ಆಗಿಲ್ಲ. ಈಗಲೂ ಪೋಷಕರು ಆರ್‌ಟಿಇ ಅಡಿಯಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಇದೆಯೇ ಎಂದು ಪ್ರಶ್ನಿಸುತ್ತಿದ್ದಾರೆ. ಕೆಲವೆಡೆ ಪೋಷಕರು ಮಕ್ಕಳನ್ನು ಶಾಲೆಗೆ ಸೇರಿಸಿ ಆಗಿತ್ತು. ಹೀಗಾಗಿ ಸ್ವಲ್ಪ ಮಟ್ಟಿಗೆ ಹಿನ್ನಡೆಯಾಗಿದೆ. ಮುಂದಿನ ವರ್ಷ ಎಲ್ಲ ಗೊಂದಲಗಳು ನಿವಾರಣೆ ಆಗಿ ಕಾಯ್ದೆ ಪರಿಪೂರ್ಣವಾಗಿ ಜಾರಿಗೆ ಬರಲಿದೆ~ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

`ಆರ್‌ಟಿಇ ಪ್ರಕಾರ ಈ ವರ್ಷ ಪೂರ್ವ ಪ್ರಾಥಮಿಕ ಹಾಗೂ ಒಂದನೇ ತರಗತಿಗೆ ಹಿಂದುಳಿದ ವಿದ್ಯಾರ್ಥಿಗಳ ಸೇರ್ಪಡೆಗೆ ಅವಕಾಶ ಇದೆ. ಆದರೆ, ಪೂರ್ವ ಪ್ರಾಥಮಿಕದಿಂದ ಏಳನೇ ತರಗತಿವರೆಗೆ ಅರ್ಜಿಗಳು ಬಂದಿವೆ. ಎರಡರಿಂದ ಏಳನೇ ತರಗತಿವರೆಗೆ ಪ್ರವೇಶ ಬಯಸಿ ಬಂದಿರುವ ಅರ್ಜಿಗಳನ್ನು ತಿರಸ್ಕರಿಸಲಾಗಿದೆ.

ಖಾಸಗಿ ಶಾಲೆಗಳಲ್ಲಿ ಪ್ರವೇಶ ನಿರಾಕರಣೆ ಮಾಡಿರುವ ಬಗ್ಗೆ ಇಲಾಖೆಗೆ ಯಾವುದೇ ದೂರುಗಳು ಬಂದಿಲ್ಲ~ ಎಂದು ಗ್ರಾಮಾಂತರ ಡಿಡಿಪಿಐ ಎಚ್.ವಿ. ವೆಂಕಟೇಶಪ್ಪ ಹಾಗೂ ಉತ್ತರದ ಆರ್‌ಟಿಇ ನೋಡೆಲ್ ಅಧಿಕಾರಿ ಜಯಸಿಂಹ ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT