ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್‌ಟಿಇ ಕಾಯ್ದೆ ದೋಷ ಸರಿಪಡಿಸಲು ಆಗ್ರಹ

Last Updated 22 ಡಿಸೆಂಬರ್ 2012, 19:40 IST
ಅಕ್ಷರ ಗಾತ್ರ

ಬೆಂಗಳೂರು: ಶಿಕ್ಷಣ ಹಕ್ಕು ಕಾಯ್ದೆಯಲ್ಲಿ (ಆರ್‌ಟಿಇ) ಇರುವ ದೋಷಗಳನ್ನು ಸರಿಪಡಿಸಲು ಸರ್ಕಾರ ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಆಗ್ರಹಿಸಿದರು.

ಕರ್ನಾಟಕ ಖಾಸಗಿ ಶಾಲೆಗಳ ಆಡಳಿತ ಮಂಡಳಿ ಒಕ್ಕೂಟ ಶನಿವಾರ ಶಿಕ್ಷಕರ ಸದನದಲ್ಲಿ ಏರ್ಪಡಿಸಿದ್ದ ರಾಜ್ಯ ಮಟ್ಟದ ಶೈಕ್ಷಣಿಕ ಸಮಾವೇಶದಲ್ಲಿ ಅವರು ಮಾತನಾಡಿದರು.

ಆರ್‌ಟಿಇ ಕಾಯ್ದೆಯನ್ನು ಸರ್ಕಾರಿ ಅಧಿಕಾರಿಗಳ ಮಕ್ಕಳಿಗೆ ಅನುಕೂಲವಾಗುವಂತೆ ರೂಪಿಸಲಾಗಿದೆ. ಶೇಕಡ 25ರಷ್ಟು ಬಡ ಮಕ್ಕಳಿಗೆ ಪ್ರವೇಶ ನೀಡುವುದನ್ನು ಕಡ್ಡಾಯ ಮಾಡಲಾಗಿದೆ. ಆದರೆ ವಾರ್ಷಿಕ 3.5 ಲಕ್ಷ ರೂಪಾಯಿ ಆದಾಯ ಹೊಂದಿರುವವರಿಗೂ ಈ ಕೋಟಾದಡಿ ಪ್ರವೇಶ ಪಡೆಯಲು ಅವಕಾಶ ನೀಡಿರುವುದು ಸರಿಯಲ್ಲ. ಅದನ್ನು ಬದಲಿಸಿ ಬಡತನ ರೇಖೆಗಿಂತ ಕೆಳಗಿರುವ ಮಕ್ಕಳಿಗೆ ಮಾತ್ರ ಈ ಕಾಯ್ದೆಯಡಿ ಪ್ರವೇಶ ನೀಡಬೇಕು ಎಂದರು.

ರಾಜ್ಯದಲ್ಲಿ ಸರ್ಕಾರಿ ಶಾಲೆಗಳು ಸಂಪೂರ್ಣ ವಿಫಲವಾಗಿವೆ. ತನ್ನ ವೈಫಲ್ಯವನ್ನು ಮರೆಮಾಚಲು ಖಾಸಗಿ ಶಿಕ್ಷಣ ಸಂಸ್ಥೆಗಳ ಮೇಲೆ ಆರ್‌ಟಿಇ ಕಾಯ್ದೆ ಮೂಲಕ ಒತ್ತಡ ಹೇರಲು ಸರ್ಕಾರ ಮುಂದಾಗಿದೆ. ಇದನ್ನು ಶಿಕ್ಷಣ ಸಂಸ್ಥೆಗಳು ಪ್ರತಿಭಟಿಸಬೇಕು. ಆದರೆ ಗುಣಮಟ್ಟದ ಶಿಕ್ಷಣ ನೀಡುವ ಜೊತೆಗೆ ಸಮಾಜಮುಖಿಯಾಗಿ ಕಾರ್ಯ ನಿರ್ವಹಿಸಬೇಕಾದ ಹೊಣೆ ಈ ಸಂಸ್ಥೆಗಳ ಮೇಲಿದೆ. ಶೈಕ್ಷಣಿಕ ಸಮಾನತೆಯನ್ನು ಸಾಧಿಸಲು ಖಾಸಗಿ ಸಂಸ್ಥೆಗಳೂ ಶ್ರಮಿಸಬೇಕು ಎಂದು ಅವರು ಸಲಹೆ ನೀಡಿದರು.

ಶಿಕ್ಷಣ ಸಂಸ್ಥೆಗಳ ಜಂಟಿ ಕ್ರಿಯಾ ಸಮಿತಿ ಅಧ್ಯಕ್ಷ ಎಲ್.ಆರ್.ಶಿವರಾಮೇಗೌಡ ಮಾತನಾಡಿ, ಆರ್‌ಟಿಇ ಕಾಯ್ದೆ ಕರ್ನಾಟಕದಲ್ಲಿ ವಿಫಲವಾದರೆ ಅದಕ್ಕೆ ಯಾವುದೇ ಖಾಸಗಿ ಶಿಕ್ಷಣ ಸಂಸ್ಥೆಗಳು ಹೊಣೆಯಲ್ಲ. ಬದಲಾಗಿ ರಾಜ್ಯ ಸರ್ಕಾರವೇ ಹೊಣೆಯಾಗಬೇಕಾಗುತ್ತದೆ ಎಂದರು.

`ಆರ್‌ಟಿಇ ಕಾಯ್ದೆಗೆ ನಮ್ಮ ಸಂಪೂರ್ಣ ಬೆಂಬಲವಿದೆ. ಅದರಲ್ಲಿರುವ ಕೆಲವು ದೋಷಗಳನ್ನು ಪ್ರಾಯೋಗಿಕ ನೆಲೆಯಲ್ಲಿ ಸರಿಪಡಿಸಬೇಕು ಎನ್ನುವುದಷ್ಟೇ ನಮ್ಮ ಬೇಡಿಕೆ. ಆದರೆ, ಸರ್ಕಾರ ಇದಕ್ಕೆ ಸ್ಪಂದಿಸುತ್ತಿಲ್ಲ. ಇಲಾಖೆಯ ಕೆಲ ಅಧಿಕಾರಿಗಳು ಸ್ವಾರ್ಥ ಸಾಧನೆಗಾಗಿ ಕಾಯ್ದೆಯನ್ನು ಬಳಸಿಕೊಳ್ಳುತ್ತಿದ್ದಾರೆ. ಇದರಿಂದ ಬಡವರಿಗೆ ಸಹಾಯ ಆಗುವುದಿಲ್ಲ' ಎಂದು ಅವರು ದೂರಿದರು.

`ಸರ್ಕಾರಿ ಶಾಲೆಗಳ ಗುಣಮಟ್ಟದ ಬಗ್ಗೆ ಸರ್ಕಾರ ತಲೆ ಕೆಡಿಸಿಕೊಳ್ಳುತ್ತಿಲ್ಲ. ಸ್ವಂತ ಶಕ್ತಿಯಿಂದ ಬೆಳೆದು ಬಂದ ಖಾಸಗಿ ಸಂಸ್ಥೆಗಳ ಮೇಲೆ ಕೆಂಗಣ್ಣು ಬೀರುತ್ತಿದೆ. ಈ ಕಾಯ್ದೆಯಡಿ ಪ್ರವೇಶ ನೀಡಲಾಗುವ ಪ್ರತಿ ಮಗುವಿಗೆ ವಾರ್ಷಿಕ ರೂ 11,800 ಅನುದಾನ ನೀಡುವುದಾಗಿ ವಾಗ್ದಾನ ಮಾಡಿದ್ದ ಸರ್ಕಾರ, ಈಗ ಅದನ್ನೂ ಬಿಡುಗಡೆ ಮಾಡಿಲ್ಲ. ಈ ಕಾಯ್ದೆಯ ಬಗ್ಗೆ ತಜ್ಞರ ಸಮಿತಿ ರಚಿಸುವುದಾಗಿ ಹೇಳಿತ್ತು. ಅದನ್ನೂ ನೆರವೇರಿಸಿಲ್ಲ' ಎಂದು ಅವರು ದೂರಿದರು.

ತಜ್ಞರ, ಶಿಕ್ಷಣ ಸಂಸ್ಥೆಗಳ ಜೊತೆ ರಾಜ್ಯ ಮಟ್ಟದಲ್ಲಿ ಚರ್ಚೆ ನಡೆಸಿ ಆರ್‌ಟಿಇ ಕಾಯ್ದೆಯ ದೋಷಗಳನ್ನು ಸರಿಪಡಿಸಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ರೂಪಿಸಲಾಗುವುದು ಎಂದು ಅವರು ಎಚ್ಚರಿಸಿದರು.

ಬಿಎಚ್‌ಎಸ್ ಉನ್ನತ ಶಿಕ್ಷಣ ಸಂಸ್ಥೆಯ ಜಂಟಿ ಕಾರ್ಯದರ್ಶಿ ಡಾ.ಸಮೀರ್ ಸಿಂಹ, ವಕೀಲೆ ಅಂಜಲಿ ರಾಮಣ್ಣ, ಕರ್ನಾಟಕ ಅನುದಾನರಹಿತ ಶಾಲೆಗಳ ಆಡಳಿತ ಮಂಡಳಿಗಳ ಸಂಘದ (ಕುಸ್ಮಾ) ಅಧ್ಯಕ್ಷ ಜಿ.ಎಸ್.ಶರ್ಮ, ಒಕ್ಕೂಟದ ಅಧ್ಯಕ್ಷ ಎಂ.ಎ.ಆನಂದ್, ಕಾರ್ಯದರ್ಶಿ ಸುಡಿ ಸುರೇಶ್ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT