ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್‌ಟಿಇ: ಕ್ರಿಯಾ ಯೋಜನೆ ಅಗತ್ಯ

Last Updated 21 ಅಕ್ಟೋಬರ್ 2012, 18:55 IST
ಅಕ್ಷರ ಗಾತ್ರ

ಬೆಂಗಳೂರು: `ರಾಜ್ಯದಲ್ಲಿ ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಲು ರಾಜ್ಯ ಸರ್ಕಾರ ಕ್ರಿಯಾಯೋಜನೆಯನ್ನು ತಯಾರಿಸಿ ಬಿಡುಗಡೆ ಮಾಡಬೇಕು~ ಎಂದು ನಗರದ `ಚೈಲ್ಡ್ ರೈಟ್ ಟ್ರಸ್ಟ್~ ಸ್ವಯಂಸೇವಾ ಸಂಸ್ಥೆಯ ನಿರ್ದೇಶಕ ವಾಸುದೇವ ಶರ್ಮ ಆಗ್ರಹಿಸಿದರು.  

ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ (ಆರ್‌ಟಿಇ) ಕಾರ್ಯಪಡೆಯ ಆಶ್ರಯದಲ್ಲಿ ನಗರದಲ್ಲಿ ಭಾನುವಾರ ನಡೆದ ಆರ್‌ಟಿಇ ಮಾಹಿತಿ ಕಾರ್ಯಾಗಾರ ಹಾಗೂ `ಮಕ್ಕಳ ಶಿಕ್ಷಣದ ಹಕ್ಕು ಪರಿಚಯ~ ಕೈಪಿಡಿ ಬಿಡುಗಡೆ ಸಮಾರಂಭದಲ್ಲಿ ಅವರು  ಮಾತನಾಡಿದರು.

`ರಾಜ್ಯದಲ್ಲಿ ಆರ್‌ಟಿಇ ಜಾರಿಗೆ ಬಂದಿದ್ದರೂ ಈ ವರೆಗೂ ಕ್ರಿಯಾಯೋಜನೆ ರೂಪಿಸಿಲ್ಲ. ಕಾಯ್ದೆಯಲ್ಲಿ ಲೋಪಗಳಿವೆ ಎಂದು ಬಿಂಬಿಸಲು ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳಿಗೆ ಇದರಿಂದಾಗಿ ಅನುಕೂಲವಾಗಿದೆ. ಖಾಸಗಿ ಶಾಲೆಗಳು ವಿದ್ಯಾರ್ಥಿಗಳಿಂದ ಮನಸ್ಸಿಗೆ ಬಂದಂತೆ ಶುಲ್ಕ ವಸೂಲಿ ಮಾಡುತ್ತಿವೆ. ಇಂತಹ ಪ್ರವೃತ್ತಿಗಳಿಗೆ ಕಡಿವಾಣ ಹಾಕಲು ತಮಿಳುನಾಡು ಮಾದರಿಯಲ್ಲೇ ಶುಲ್ಕ ಪ್ರಾಧಿಕಾರವನ್ನು ರಚಿಸಬೇಕು~ ಎಂದು ಅವರುಒತ್ತಾಯಿಸಿದರು.

`ಶಿಕ್ಷಣ ಹಕ್ಕು ಯಾವುದೇ ಶಾಲೆಯ ಸ್ವತ್ತು ಅಲ್ಲ, ಅದು ಜನರ ಸ್ವತ್ತು ಆಗಬೇಕು. ಹಿಂದುಳಿದ ವಿದ್ಯಾರ್ಥಿಗಳಿಗೆ ಶೇ 25 ಮೀಸಲಾತಿ ನೀಡುವುದು ಮಾತ್ರ ಆರ್‌ಟಿಇ ಅಲ್ಲ. ಶಾಲೆಗಳಿಗೆ ಮೂಲಸೌಕರ್ಯ ಒದಗಿಸುವುದು ಸೇರಿದಂತೆ ಸಾಕಷ್ಟು ಧನಾತ್ಮಕ ಅಂಶಗಳು ಈ ಕಾಯ್ದೆಯಲ್ಲಿ ಇವೆ. ಇವುಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಆಗಬೇಕಿದೆ~ ಎಂದು ಅವರು ಸಲಹೆ ನೀಡಿದರು.

`ಈ ಕಾಯ್ದೆಯಲ್ಲಿರುವ ಎಲ್ಲ ಅಂಶಗಳನ್ನೂ ಏಕಾಏಕಿ ಅನುಷ್ಠಾನಗೊಳಿಸುವುದು ಅಸಾಧ್ಯ. ಖಾಸಗಿ ಶಾಲೆಗಳಲ್ಲಿ ಹಾಗೂ ಪೋಷಕರಲ್ಲಿ ಜಾಗೃತಿ ಮೂಡಿಸಿ ಹಂತಹಂತವಾಗಿ ಕಾಯ್ದೆಯನ್ನು ಅನುಷ್ಠಾನಗೊಳಿಸುವ ಬಗ್ಗೆ ಸರ್ಕಾರ ಗಮನ ಹರಿಸಬೇಕು~ ಎಂದರು.

`ಅಪ್ಸಾ~ ಸಂಘಟನೆಯ ಲಕ್ಷ್ಮೀಪ್ರಸನ್ನ ವಿಷಯ ಮಂಡಿಸಿ, `ಸರ್ಕಾರಿ ಶಾಲೆಗಳಿಗೆ ಮೂಲಸೌಕರ್ಯ ಒದಗಿಸಿ ಈ ಶಾಲೆಗಳನ್ನು ಬಲಪಡಿಸಲು ಸರ್ಕಾರ ಗಮನ ಹರಿಸಬೇಕು. ಶಾಲಾಭಿವೃದ್ಧಿ ಸಮಿತಿಗಳನ್ನು (ಎಸ್‌ಡಿಎಂಸಿ) ಉಳಿಸಲು ಆಂದೋಲನ ಹಮ್ಮಿಕೊಳ್ಳಬೇಕು~ ಎಂದರು.

ಆರ್‌ಟಿಇ ಕಾರ್ಯಪಡೆಯ ಸಂಚಾಲಕ ನಾಗಸಿಂಹ ಜಿ.ರಾವ್ ಮಾತನಾಡಿ, `ಶಿಕ್ಷಣ ಹಕ್ಕು ಕಾಯ್ದೆಯ ಬಗ್ಗೆ ಶಿಕ್ಷಕರಲ್ಲಿ ಹಾಗೂ ಪೋಷರಲ್ಲಿ ಹಲವಾರು ಗೊಂದಲಗಳಿವೆ. ಖಾಸಗಿ ಶಾಲೆಗಳಲ್ಲಿ ಶೇ 25ರಷ್ಟು ಮೀಸಲಾತಿಯಷ್ಟೇ ಈ ಕಾಯ್ದೆ ಎಂದು ತಿಳಿದಿರುವವರೇ ಅನೇಕ ಮಂದಿ. ಕಾಯ್ದೆಯ ಉತ್ತಮ ಅಂಶಗಳ ಬಗ್ಗೆ ಪೋಷಕರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಆರ್‌ಟಿಇ ಅಡಿಯಲ್ಲಿ ಸೇರ್ಪಡೆಯಾದ ವಿದ್ಯಾರ್ಥಿಗಳ ಸ್ಥಿತಿಗತಿಯ ಕುರಿತು ಕೂಡಾ ಮಾಹಿತಿ ಸಂಗ್ರಹಿಸಲಾಗುವುದು~ ಎಂದರು.

`ಸಿವಿಕ್ ಬೆಂಗಳೂರು~ ಸ್ವಯಂಸೇವಾ ಸಂಸ್ಥೆಯ ಕಾರ್ಯನಿರ್ವಾಹಕ ಟ್ರಸ್ಟಿ ಕಾತ್ಯಾಯಿನಿ ಚಾಮರಾಜ್ ಪುಸ್ತಕ ಬಿಡುಗಡೆ ಮಾಡಿದರು. ಕಾರ್ಯಪಡೆಯ ಅನಿಲ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

ಕಳವಳ
`ವಿದ್ಯಾರ್ಥಿಗಳ ಕೊರತೆಯ ಕಾರಣ ನೀಡಿ ಸರ್ಕಾರಿ ಶಾಲೆಗಳನ್ನು ಮುಚ್ಚುತ್ತಿರುವುದು ಕಳವಳಕಾರಿ. ಇದನ್ನು ತಡೆಯಲು ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳು ಭರ್ತಿಯಾದ ಬಳಿಕವೇ ಖಾಸಗಿ ಶಾಲೆಗಳಲ್ಲಿ ಪ್ರವೇಶ ಪ್ರಕ್ರಿಯೆ ಆರಂಭಿಸಲು ಅನುಮತಿ ನೀಡಬೇಕು~ ಎಂದು ವಾಸುದೇವ ಶರ್ಮ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT