ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್‌ಟಿಐ ಸದ್ಬಳಕೆಗೆ ತಂಗರಾಜು ಸಲಹೆ

Last Updated 13 ಅಕ್ಟೋಬರ್ 2011, 12:40 IST
ಅಕ್ಷರ ಗಾತ್ರ

ಮೈಸೂರು: `ಮಾಹಿತಿ ಹಕ್ಕು ಕಾಯ್ದೆ (ಆರ್‌ಟಿಐ) ಕುರಿತಾಗಿ ಸರ್ಕಾರಿ ನೌಕರರು ಮತ್ತು ಅಧಿಕಾರಿಗಳ ಮನೋಭಾವನೆ ಬದಲಾಗಬೇಕು~ ಎಂದು ಕರ್ನಾಟಕ ರಾಜ್ಯ ಮಾಹಿತಿ ಆಯೋಗದ ಆಯುಕ್ತ ಡಿ.ತಂಗರಾಜು ಬುಧವಾರ ತಿಳಿಸಿದರು.

ಆಡಳಿತ ತರಬೇತಿ ಸಂಸ್ಥೆಯಲ್ಲಿ ಏರ್ಪಡಿಸಿದ್ದ ದಕ್ಷಿಣ ರಾಜ್ಯಗಳ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, `ಯಾರಾದರು  ಮಾಹಿತಿ ಬಯಸಿ ಅರ್ಜಿ ಸಲ್ಲಿಸಿದರೆ ನಿಗದಿತ ಸಮಯದಲ್ಲಿ ಕ್ರಮ ತೆಗೆದುಕೊಳ್ಳಬೇಕು. ಇದನ್ನು ಬಿಟ್ಟು ಸಿಬ್ಬಂದಿ ಕೊರತೆ, ಮಹತ್ವದ ಕೆಲಸಗಳ ನೆಪ ಹೇಳುವುದು ಸರಿಯಲ್ಲ.

ಏಕೆಂದರೆ ಮಾಹಿತಿಗಾಗಿ ಅರ್ಜಿ ಸಲ್ಲಿಸಿದವರಿಗೂ ಅದು ಮುಖ್ಯವಾಗಿರುತ್ತದೆ. ಕೆಲವು ಕಚೇರಿಗಳಲ್ಲಿ ಸಿಬ್ಬಂದಿ ಕೊರತೆ ಇರುವುದು ನಿಜ. ಸರ್ಕಾರ ಇತ್ತ ಗಮನ ಹರಿಸಿ ಖಾಲಿ ಹುದ್ದೆಗಳನ್ನು ಭರ್ತಿ ಮಾಡಬೇಕು~ ಎಂದು ಹೇಳಿದರು.

`ಹೆಚ್ಚಿನ ಸರ್ಕಾರಿ ನೌಕರರು, ಅಧಿಕಾರಿಗಳು ಅರ್ಜಿಯನ್ನು ಸುಲಭವಾಗಿ ತಿರಸ್ಕರಿಸಿಬಿಡುತ್ತಾರೆ. ಆದರೆ ಕಡತದಲ್ಲಿ ಅದಕ್ಕೆ ಕಾರಣವನ್ನು ಬರೆಯುವುದಿಲ್ಲ. ಇದು ಸರಿಯಲ್ಲ. ಹಳ್ಳಿಯ ಮುಗ್ಧರು ರೇಷನ್ ಕಾರ್ಡ್, ಪಿಂಚಣಿಗಾಗಿ ಅರ್ಜಿ ಸಲ್ಲಿಸಿರುತ್ತಾರೆ. ಆದರೆ ಅವರ ಅರ್ಜಿಯನ್ನು ಕಾರಣವನ್ನು ತಿಳಿಸದೇ ತಿರಸ್ಕರಿಸಲಾಗಿರುತ್ತದೆ~ ಎಂದರು.

`ಮಾಹಿತಿ ಹಕ್ಕು ಕಾಯ್ದೆಯನ್ನು ಸಾಮಾನ್ಯ ಜನರು ತಮಗಾಗಿ ಬಳಸಿಕೊಂಡರೆ, ವಿದ್ಯಾವಂತರು ಸರ್ಕಾರ ಹೇಗೆ ಕೆಲಸ ಮಾಡುತ್ತಿದೆ ಎನ್ನುವುದನ್ನು ತಿಳಿಯಲು ಉಪಯೋಗಿಸಿಕೊಳ್ಳುತ್ತಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಹಸ್ಯ ಎನ್ನುವುದು ಇಲ್ಲ. ಸರ್ಕಾರಿ ಕಚೇರಿಗಳು ದಾಖಲೆಗಳನ್ನು ವ್ಯವಸ್ಥಿತವಾಗಿ ಇಡಬೇಕು.
 
ಆಸಕ್ತರು, ಅವಶ್ಯ ಇರುವವರು ಮಾಹಿತಿ ಬಯಸಿದಾಗ ನೀಡಬೇಕು. ಕರ್ನಾಟಕದಲ್ಲಿ ಶೇಕಡಾ 50 ರಷ್ಟು ಕಚೇರಿಗಳು ಕಂಪ್ಯೂಟರೀಕರಣಗೊಂಡಿವೆ. ಇನ್ನು  ಒಂದೆರಡು ವರ್ಷಗಳಲ್ಲಿ ಸಂಪೂರ್ಣ ಕಂಪ್ಯೂಟರೀಕರಣಗೊಳ್ಳಲಿವೆ~ ಎಂದು ಹೇಳಿದರು.

ದುರುಪಯೋಗ ತಪ್ಪು:`ಮಾಹಿತಿ ಹಕ್ಕು ಕಾಯ್ದೆಯ ದುರುಪಯೋಗವಾಗುತ್ತಿದೆ ಎನ್ನುವ ಆರೋಪಗಳು ಇವೆ. ಇದಕ್ಕೆ ಮುಖ್ಯ ಕಾರಣ ಕಾಯ್ದೆಯ ಕುರಿತು ಜನರಲ್ಲಿ ಅರಿವು ಇಲ್ಲ. ಆದ್ದರಿಂದ ಮಾಹಿತಿ ಹಕ್ಕು ಕಾಯ್ದೆ ಬಗ್ಗೆ ಅರಿವು ಉಂಟು ಮಾಡಬೇಕು. ಯಾರೋ ಕೆಲವರು ದುರುಪಯೋಗ ಪಡಿಸಿಕೊಂಡರು ಎನ್ನುವ ಕಾರಣಕ್ಕೆ ಕಾಯ್ದೆಯೇ ಬೇಡ ಎನ್ನುವುದು ತಪ್ಪು. ಇದರಿಂದ ಸಾವಿರಾರು ಮಂದಿಗೆ ಅನುಕೂ ಲವಾಗುತ್ತದೆ ಎಂದರು.

`ಮಾಹಿತಿ ಹಕ್ಕು ಕಾಯ್ದೆಯ ಉಪಯೋಗವನ್ನು ಹೆಚ್ಚಾಗಿ ಸ್ವಯಂ ಸೇವಾ ಸಂಘದವರು, ಸಾಮಾಜಿಕ ಕಾರ್ಯಕರ್ತರು ಪಡೆಯುತ್ತಿದ್ದಾರೆ. ಇವರು ಕಾಯ್ದೆ ಯನ್ನು ಪ್ರಜಾಪ್ರಭುತ್ವ ವ್ಯವಸ್ಥೆಯ ಉತ್ತಮ ಗೊಳ್ಳುವಿಕೆ, ಭ್ರಷ್ಟಾಚಾರ ನಿಯಂತ್ರಣ, ಸರ್ಕಾರದ ಪಾರದರ್ಶಕ ಆಡಳಿತ ಹಾಗೂ ದೇಶದ ಅಭಿವೃದ್ಧಿಗೆ ಬಳಸಿಕೊಳ್ಳಬೇಕು~ ಎಂದು ಮನವಿ ಮಾಡಿದರು.ಸರ್ಕಾರದ ಉಪ ಕಾರ್ಯದರ್ಶಿ ಡಾ.ಅಮಿತಾಪ್ರಸಾದ್ ಇದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT