ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್‌ಟಿಒ ದಾಳಿ: 9 ಖಾಸಗಿ ಬಸ್ ವಶ;ಕಾಂಟ್ರಾಕ್ಟ್ ಕ್ಯಾರೇಜ್ ಪರವಾನಿಗೆಯಲ್ಲಿ ಸ್ಟೇಜ್ ಕ್ಯಾರೇಜ್ ಓಡಾಟ

Last Updated 22 ಮೇ 2012, 6:25 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಕಾನೂನು ಬಾಹಿರವಾಗಿ ದೂರದ ಊರುಗಳಿಗೆ ಓಡಾಟ ನಡೆಸುವ ಖಾಸಗಿ ಬಸ್‌ಗಳ ವಿರುದ್ಧ ಪ್ರಾದೇಶಿಕ ಸಾರಿಗೆ ಇಲಾಖೆ (ಆರ್‌ಟಿಒ) ಅಧಿಕಾರಿಗಳ ತಂಡ ಭಾನುವಾರ ಮತ್ತು ಸೋಮವಾರ ಕಾರ್ಯಾಚರಣೆ ನಡೆಸಿ ಒಂಬತ್ತು ಬಸ್ ವಶಕ್ಕೆ ಪಡೆದು 12 ಪ್ರಕರಣಗಳನ್ನು ದಾಖಲಿಸಿಕೊಂಡಿದೆ.

`ಒಪ್ಪಂದ ರಹದಾರಿ (ಕಾಂಟ್ರ್ಯಾಕ್ಟ್ ಕ್ಯಾರೇಜ್) ಪಡೆದು ಕಾನೂನುಬಾಹಿರವಾಗಿ ಬಸ್ ನಿಲ್ದಾಣಗಳಿಂದ ಪ್ರಯಾಣಿಕರನ್ನು ಕರೆದೊಯ್ಯತ್ತಿದ್ದ (ಸ್ಟೇಜ್ ಕ್ಯಾರೇಜ್) ಬಸ್‌ಗಳನ್ನು ಅವಳಿ ನಗರದ ಮಧ್ಯದ ವಿವಿಧ ಪ್ರದೇಶಗಳಲ್ಲಿ ಸಾರಿಗೆ ಇಲಾಖೆಯ ವಿಶೇಷ ತಂಡ ದಾಳಿ ನಡೆಸಿ ವಶಪಡಿಸಿಕೊಂಡಿದೆ~ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಜೆ. ಪುರುಷೋತ್ತಮ `ಪ್ರಜಾವಾಣಿ~ಗೆ ತಿಳಿಸಿದ್ದಾರೆ.

`ಧಾರವಾಡ ವ್ಯಾಪ್ತಿಯಲ್ಲಿ ಹುಬ್ಬಳ್ಳಿಯಿಂದ ಬೆಳಗಾವಿ, ಬಾಗಲಕೋಟೆ, ಹಾವೇರಿ, ಬಿಜಾಪುರ, ದಾವಣಗೆರೆ, ಗದಗ ಮುಂತಾದ ಸ್ಥಳಗಳಿಗೆ ಕರಾರು ಒಪ್ಪಂದದ ರಹದಾರಿ ಷರತ್ತುಗಳನ್ನು ಉಲ್ಲಂಘಿಸಿ ಬಾಡಿಗೆ ವಾಹನದಂತೆ ಅನಧಿಕೃತವಾಗಿ ಈ ಖಾಸಗಿ ಬಸ್ಸುಗಳು ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದವು.

ಈ ಬಗ್ಗೆ ಖಚಿತ ಮಾಹಿತಿ ಲಭಿಸಿದ್ದು, ಈ ಹಿನ್ನೆಲೆಯಲ್ಲಿ ಭಾನುವಾರ ಮತ್ತು ಸೋಮವಾರ ಬೆಳಿಗ್ಗಿನಿಂದ ಸಂಜೆವರೆಗೆ ಇಲಾಖೆ ಅಧಿಕಾರಿಗಳು ಹುಬ್ಬಳ್ಳಿ- ಧಾರವಾಡ  ಮಾರ್ಗದ ಮಧ್ಯೆ ಕಾದು ಕುಳಿತು ಕಾರ್ಯಾಚರಣೆ ನಡೆಸಿ ಬಸ್‌ಗಳನ್ನು ವಶಕ್ಕೆ ಪಡೆದುಕೊಂಡರು~ ಎಂದು ಅವರು ತಿಳಿಸಿದ್ದಾರೆ.

`ವಶಪಡಿಸಿಕೊಂಡ ಬಸ್‌ಗಳ ವಿರುದ್ಧ ತನಿಖೆ ನಡೆಸಿ ಮೋಟಾರು ವಾಹನ ಕಾಯ್ದೆ ಸೆಕ್ಷನ್ 60(1) 192 ಎ ಯಡಿ ಕೋರ್ಟ್‌ಗೆ ದೋಷಾರೋಪ ಪಟ್ಟಿ ಸಲ್ಲಿಸಲಾಗುವುದು. ಕಾನೂನು ಉಲ್ಲಂಘನೆ ಸಾಬೀತಾದರೆ ಮೊದಲ ಬಾರಿ ರೂ 5 ಸಾವಿರ, ಎರಡನೇ ಬಾರಿ ರೂ10 ಸಾವಿರ ದಂಡ ವಿಧಿಸಲಾಗುವುದು.

ಅಲ್ಲದೆ ಇಂತಹ ಬಸ್‌ಗಳ ಪರವಾನಿಗೆಯನ್ನೇ ರದ್ದುಮಾಡುವಂತೆ ರಾಜ್ಯ ಸಾರಿಗೆ ಪ್ರಾಧಿಕಾರಕ್ಕೆ ವರದಿ ನೀಡಲಾಗುವುದು. ಒಪ್ಪಂದ ರಹದಾರಿ ಬಸ್ಸುಗಳ ವಿರುದ್ಧ ಕಾರ್ಯಾಚರಣೆ ಮುಂದುವರಿಸಲಾಗುವುದು~ ಎಂದು ಪುರುಷೋತ್ತಮ ಅವರು ತಿಳಿಸಿದ್ದಾರೆ.ಹಿರಿಯ ಮೋಟಾರು ವಾಹನ ನಿರೀಕ್ಷಕರಾದ ಸುನೀಲ್ ಸಿ,  ರವೀಂದ್ರ ಕವಲಿ, ಬಾಲಚಂದ್ರ ತೊದಲಬಾಗಿ ಈ ಕಾರ್ಯಾಚರಣೆ ನಡೆಸಿದರು.

`ಅಪಘಾತ ಸಂಭವಿಸಿದರೆ ವಿಮೆ ಇಲ್ಲ~
ಕೆಎಸ್‌ಆರ್‌ಟಿಸಿ ಬಸ್‌ಗಳ ಕೊರತೆಯ `ಲಾಭ~ ಪಡೆಯುವ ಖಾಸಗಿ ಬಸ್‌ಗಳು ದೂರದ ಊರುಗಳಿಗೆ ಪ್ರಯಾಣಿಕರನ್ನು ಕರೆದೊಯ್ಯತ್ತವೆ. ಸರ್ಕಾರಿ ಬಸ್ ಪ್ರಯಾಣ ದರಕ್ಕಿಂತ ಕಡಿಮೆ ಹಣ ವಸೂಲಿ ಮಾಡಿ ಈ ಬಸ್‌ಗಳು ಓಡಾಟ ನಡೆಸುವುದರಿಂದ ಪ್ರಯಾಣಿಕರು ಈ ಬಸ್‌ಗಳನ್ನು ಆಶ್ರಯಿಸುತ್ತಿದ್ದಾರೆ.

`ಅಕ್ರಮವಾಗಿ ಪರವಾನಿಗೆ ಉಲ್ಲಂಘಿಸಿ ಸಂಚರಿಸುವ ಬಸ್‌ಗಳಲ್ಲಿ ಪ್ರಯಾಣಿಸುವ ವೇಳೆ ಅಪಘಾತ ಸಂಭವಿಸಿದರೆ ವಿಮೆ ಹಣ ಪಡೆಯಲು ಸಾಧ್ಯ ಇಲ್ಲ. ಹೀಗಾಗಿ ಇಂತಹ ಪ್ರಯಾಣಿಕರು ಎಚ್ಚರಿಕೆ ವಹಿಸಬೇಕು~ ಎಂದೂ ಸಾರಿಗೆ ಅಧಿಕಾರಿ ತಿಳಿಸಿದ್ದಾರೆ.

ದೂರದ ಊರುಗಳಿಗೆ ಖಾಸಗಿ ಬಸ್‌ಗಳು ಅನಧಿಕೃತವಾಗಿ ಸರ್ವೀಸ್ ನಡೆಸಿ ಹಣ ಗಳಿಸುತ್ತಿರುವಾಗ ಇನ್ನಷ್ಟು ಸರ್ಕಾರಿ ಬಸ್‌ಗಳನ್ನು ಓಡಿಸಲು ಕೆಸ್‌ಆರ್‌ಟಿಸಿ ಹಿಂದೇಟು ಹಾಕಲು ಕಾರಣವೇನು? ಸಾಕಷ್ಟು ಸಂಖ್ಯೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳ ಸೇವೆ ಲಭ್ಯವಾದರೆ ಆ ಬಸ್‌ಗಳನ್ನೇ ಜನರು ಬಳಸಬಹುದು.

ಆಗ ಸ್ವಾಭಾವಿಕವಾಗಿ ಖಾಸಗಿ ಬಸ್‌ಗಳು ನಷ್ಟ ಅನುಭವಿಸಬೇಕಾಗಿ ಬರುವುದರಿಂದ ಈ ಕಾನೂನುಬಾಹಿರ ಓಡಾಟಕ್ಕೆ ಕಡಿವಾಣ ಬೀಳಬಹುದು~ ಎಂದು ಹೆಸರು ಹೇಳಲಿಚ್ಚಿಸಿದ ಸಾರಿಗೆ ಇಲಾಖೆ ಅಧಿಕಾರಿಯೊಬ್ಬರು `ಪ್ರಜಾವಾಣಿ~ಗೆ ತಿಳಿಸಿದರು.

ಬೆಂಕಿ: ವಿವಾಹಿತ ಮಹಿಳೆ ಸಾವು
ಹುಬ್ಬಳ್ಳಿ: ಸುಟ್ಟ ಗಾಯಗಳಿಂದ ನಗರದ ಕಿಮ್ಸ ಆಸ್ಪತ್ರೆಗೆ ದಾಖಲಾಗಿದ್ದ ವಿವಾಹಿತ ಮಹಿಳೆ ಸಾವಿಗೀಡಾದ ಘಟನೆ ಸೋಮವಾರ ರಾತ್ರಿ ನಡೆದಿದೆ.ಮೃತಪಟ್ಟ ಯುವತಿಯನ್ನು ಮಂಟೂರು ಗ್ರಾಮದ ಗೀತಾ ಅಂಜನಪ್ಪ ಹೊನ್ನರ್ (18) ಎಂದು ಗುರುತಿಸಲಾಗಿದೆ. ವರ್ಷದ ಹಿಂದೆ ಈಕೆಯ ವಿವಾಹ ಆಗಿತ್ತು.

ಪತಿ ಮನೆಯವರು ನೀಡಿದ ವರದಕ್ಷಿಣೆ ಕಿರುಕುಳವೇ ಈಕೆಯ ಸಾವಿಗೆ ಕಾರಣವಾಗಿದೆ ಎನ್ನಲಾಗಿದೆ. ಕಿಮ್ಸ ಆಸ್ಪತ್ರೆಯಲ್ಲಿ ಶವಮಹಜರು ನಡೆಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT