ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್‌ಬಿಐ ಸುಧಾರಣಾ ಕ್ರಮ

Last Updated 25 ಜೂನ್ 2012, 19:30 IST
ಅಕ್ಷರ ಗಾತ್ರ

ನವದೆಹಲಿ(ಪಿಟಿಐ): ಡಾಲರ್ ಎದುರು ರೂಪಾಯಿ ಕುಸಿತ ತಡೆ ನಿಟ್ಟಿನಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್(ಆರ್‌ಬಿಐ) ಹಣಕಾಸು  ಮಾರುಕಟ್ಟೆಗೆ ಸಂಬಂಧಿಸಿ ಹಲವು ಸುಧಾರಣಾ ಕ್ರಮಗಳನ್ನು ಸೋಮವಾರ ಪ್ರಕಟಿಸಿದೆ. ಆದರೆ ಈ ಕ್ರಮದಿಂದ ಷೇರುಪೇಟೆಯಲ್ಲಿ ಚೇತರಿಕೆಯೇನೂ ಕಂಡುಬರಲಿಲ್ಲ. ವಿನಿಮಯ ಮಾರುಕಟ್ಟೆಯಲ್ಲಿಯೂ ರೂ ಮೌಲ್ಯವರ್ಧನೆಯೂ ನಿರೀಕ್ಷಿತ ಪ್ರಮಾಣದಲ್ಲಿ ಆಗಲಿಲ್ಲ.

ವಿದೇಶಿ ಸಾಂಸ್ಥಿಕ ಹೂಡಿಕೆದಾರರಿಗೆ (ಎಫ್‌ಐಐ) ಸರ್ಕಾರಿ ಸಾಲಪತ್ರಗಳು ಮತ್ತು ಬಾಂಡ್‌ಗಳಲ್ಲಿನ ಹೂಡಿಕೆ ಮಿತಿಯನ್ನು ಸದ್ಯದ 1500 ಕೋಟಿ ಡಾಲರ್‌ನಿಂದ  2000 ಕೋಟಿ  ಡಾಲರ್(ಸದ್ಯದ ಮೌಲ್ಯದಲ್ಲಿ  ರೂ. 1.14 ಲಕ್ಷ ಕೋಟಿ)ಗೆ ಹೆಚ್ಚಿಸಲಾಗಿ ದೆ. ಜತೆಗೆ ದೇಶದ ಕಾರ್ಪೊರೇಟ್ ವಲಯವು ಒಟ್ಟು 1000 ಕೋಟಿ ಡಾಲರ್‌ವರೆಗೆ ಸಾಲ ಪಡೆಯಲು ಅವಕಾಶ ಮಾಡಿಕೊಡಲಾಗಿದೆ. ಒಟ್ಟಾರೆ ಬಂಡವಾಳ ಖಾತೆ ವಹಿವಾಟಿನಲ್ಲಿ ಉದಾರೀಕರಣ ಕ್ರಮ ಅಳವಡಿಸಿಕೊಳ್ಳಲಾಗಿದೆ.

ಈ ಎಲ್ಲ ಕ್ರಮಗಳ ಮೂಲಕ ದೇಶದೊಳಕ್ಕೆ ಅಮೆರಿಕದ ಡಾಲರ್ ಸೇರಿದಂತೆ ವಿದೇಶಿ ನಗದು ಹಣ ಹೆಚ್ಚಿನ ಪ್ರಮಾಣದಲ್ಲಿ ಹರಿದುಬರುವಂತೆ ಮಾಡಲಾಗಿದೆ.

ದೀರ್ಘಾವಧಿಯ `ಸಾವರಿನ್ ವೆಲ್ತ್ ಫಂಡ್~(ಎಸ್‌ಡಬ್ಲ್ಯುಎಫ್)ಗಳು, `ಇನ್ಷೂರೆನ್ಸ್ ಫಂಡ್‌`ಪೆನ್ಷನ್  ಅಂಡ್ ಎಂಡೊಮೆಂಟ್  ಫಂಡ್~ ಸೇರಿದಂತೆ ವಿವಿಧ ದೇಶಗಳಲ್ಲಿನ ಸಾಂಸ್ಥಿಕ ಹೂಡಿಕೆದಾರರು ಭಾರತದ ಸರ್ಕಾರಿ ಸಾಲಪತ್ರಗಳು ಮತ್ತು ಬಾಂಡ್‌ಗಳಲ್ಲಿ ಇನ್ನು ಮುಂದೆ 2000 ಕೋಟಿ ಡಾಲರ್‌ವರೆಗೂ ಹೂಡಿಕೆ ಮಾಡಬಹುದಾಗಿದೆ. ಆ ಮೂಲಕ ಹೆಚ್ಚುವರಿ 500 ಕೋಟಿ ಡಾಲರ್ ದೇಶದ ಹಣಕಾಸು ಮಾರುಕಟ್ಟೆಗೆ ಹರಿದು ಬರಲು ಅವಕಾಶ ಮಾಡಿಕೊಡಲಾಗಿದೆ. ಇದಕ್ಕೆ 3 ವರ್ಷಗಳ ವಿಶೇಷ ವಾಯಿದೆಯನ್ನೂ ನೀಡಲಾಗಿದೆ ಎಂದು `ಆರ್‌ಬಿಐ~ ಹೇಳಿದೆ.

ಸರಕು ತಯಾರಿಕೆ ಮತ್ತು ಮೂಲ ಸೌಕರ್ಯ ವಲಯದಲ್ಲಿ ಬಂಡವಾಳ ತೊಡಗಿಸಿರುವ ದೇಶೀಯ ಕಂಪೆನಿಗಳಿಗೆ ಬಾಕಿ ಸಾಲ ಮರುಪಾವತಿಗೆ ನೆರವಾಗುವಂತೆ  `ಬಾಹ್ಯ ವಾಣಿಜ್ಯ ಸಾಲ~(ಇಸಿಬಿ) ಮಿತಿಯನ್ನು  1000 ಕೋಟಿ ಡಾಲರ್‌ಗಳಿಗೆ ಹೆಚ್ಚಿಸಲಾಗಿದೆ. ಭಾರತೀಯ ಸಾಲಪತ್ರ ಮತ್ತು ವಿನಿಮಯ ಮಂಡಳಿ(ಸೆಬಿ)ಯಲ್ಲಿ ನೋಂದಾಯಿಸಿಕೊಂಡಿರುವ `ಎಫ್‌ಐಐ~ಗಳಿಗೆ ಮಾತ್ರ ಹೆಚ್ಚುವರಿ ಮಿತಿ ಅನ್ವಯಿಸಲಿದೆ.

ಮ್ಯೂಚುವಲ್ ಫಂಡ್ ಹೂಡಿಕೆಯಲ್ಲಿ ವಿದೇಶಿ ಹೂಡಿಕೆದಾರರಿಗೆ ಇದ್ದ ಹಲವು ನಿರ್ಬಂಧಗಳನ್ನು ಸಡಿಲಗೊಳಿಸಲಾಗಿದೆ. ಅರ್ಹ ವಿದೇಶಿ ಹೂಡಿಕೆದಾರರು(ಕ್ಯುಎಫ್‌ಐಎಸ್) ಮ್ಯೂಚುವಲ್ ಫಂಡ್‌ಗಳಲ್ಲಿ ಗರಿಷ್ಠ ಹೂಡಿಕೆ ಮಾಡಬಹುದಾಗಿದ್ದು, ಇದರಲ್ಲಿ ಶೇ 25ರಷ್ಟು ಹೂಡಿಕೆ ಮೂಲಸೌಕರ್ಯ ವಲಯಕ್ಕೆ ಮೀಸಲಿಡಬೇಕು ಎಂದು `ಆರ್‌ಬಿಐ~ ಸ್ಪಷ್ಟವಾಗಿ ಹೇಳಿದೆ.

ಇನ್ನಷ್ಟು ಕ್ರಮ ಅಗತ್ಯ: ಮೊಂಟೆಕ್

`ದೇಶೀಯ ಮಾರುಕಟ್ಟೆಯಲ್ಲಿ ಡಾಲರ್ ಲಭ್ಯತೆ ಹೆಚ್ಚುವಂತೆ ಮಾಡಲು ಇನ್ನಷ್ಟು ಕ್ರಮಗಳನ್ನು ಕೈಗೊಳ್ಳುವ ಅಗತ್ಯ ಇದೆ~ ಎಂದು ಕೇಂದ್ರ ಯೋಜನಾ ಆಯೋಗದ ಉಪಾಧ್ಯಕ್ಷ ಮೊಂಟೆಕ್ ಸಿಂಗ್ ಅಹ್ಲುವಾಲಿಯಾ ಹೇಳಿದ್ದಾರೆ.

ವಿದೇಶಿ ಸಾಂಸ್ಥಿಕ ಹೂಡಿಕೆದಾರರನ್ನು(ಎಫ್‌ಐಐ) ಆಕರ್ಷಿಸುವ ಮೂಲಕ ನಮ್ಮಲ್ಲಿನ ವಿದೇಶಿ ವಿನಿಮಯ ಸಂಗ್ರಹ ಹೆಚ್ಚಿಸಿಕೊಳ್ಳಬಹುದು. ಆ ಮೂಲಕ ಮಾರುಕಟ್ಟೆಯಲ್ಲಿ ಡಾಲರ್ ಲಭ್ಯತೆ ಹೆಚ್ಚಿಸಿ, ರೂಪಾಯಿ ಅಪಮೌಲ್ಯ ತಡೆಯಬಹುದು. ಈ ನಿಟ್ಟಿನಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಸೋಮವಾರ ಪ್ರಕಟಿಸಿದ ಕ್ರಮಗಳು ಸೂಕ್ತವಾಗಿವೆ. ಆದರೂ, ಡಾಲರ್ ಒಳಹರಿವು ಹೆಚ್ಚಿಸಲು  ಇನ್ನೂ ಹಲವು ಸುಧಾರಣೆಗಳ ಅಗತ್ಯವಿದೆ ಎಂದರು.

ಕುಸಿದ ಸೂಚ್ಯಂಕ: ಸೋಮವಾರ ಬೆಳಿಗ್ಗೆ ವಹಿವಾಟಿನಲ್ಲಿ ಏಳು ವಾರಗಳಲ್ಲಿಯೇ ಗರಿಷ್ಠ ಮಟ್ಟಕ್ಕೆ ಏರಿಕೆ ಕಂಡಿದ್ದ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ, `ಆರ್‌ಬಿಐ~ ಕ್ರಮ ಪ್ರಕಟಗೊಳ್ಳುತ್ತಿದ್ದಂತೆಯೇ 90 ಅಂಶ ಕುಸಿತ ಕಂಡಿತು. ದಿನದ ಅಂತ್ಯಕ್ಕೆ 168882.16 ಅಂಶಗಳಿಗೆ ವಹಿವಾಟು ಕೊನೆಗೊಳಿಸಿತು.
ರೂಪಾಯಿ ಅಲ್ಪ ಚೇತರಿಕೆ!

ಮುಂಬೈ(ಪಿಟಿಐ): ಭಾರತೀಯ ರಿಸರ್ವ್ ಬ್ಯಾಂಕ್ ಕ್ರಮದ ಮೊದಲ ಪರಿಣಾಮ ದೇಶದ ವಿದೇಶಿ ವಿನಿಮಯ ಮಾರುಕಟ್ಟೆ ಮೇಲಾಗಿದೆ.

ದಿನದ ವಹಿವಾಟಿನಲ್ಲಿ ಡಾಲರ್ ಎದುರು ಗರಿಷ್ಠ ಮಟ್ಟದವರೆಗೂ (ರೂ. 57.92) ಅಪಮೌಲ್ಯಗೊಂಡಿದ್ದ ರೂಪಾಯಿ, ಆರ್‌ಬಿಐ ಹೊಸ ಸುಧಾರಣೆ ಕ್ರಮಗಳನ್ನು ಮಧ್ಯಾಹ್ನ ಘೋಷಿಸಿದ ನಂತರದಲ್ಲಿ ಅಲ್ಪ ಚೇತರಿಕೆ ಕಂಡಿತು. ಕಡೆಗೆ ಅಮೆರಿಕದ ಡಾಲರ್ ಎದುರು 14 ಪೈಸೆಯಷ್ಟು(ಹಿಂದಿನ ದಿನಕ್ಕಿಂತ) ಸಾಮರ್ಥ್ಯ ಹೆಚ್ಚಿಸಿಕೊಂಡು ರೂ. 57.01ರಲ್ಲಿ ಕೊನೆಗೊಂಡಿತು.

ತಜ್ಞರ `ಮಿಶ್ರ~ ಪ್ರತಿಕ್ರಿಯೆ

ನವದೆಹಲಿ(ಪಿಟಿಐ): ದೇಶದ ಹಣಕಾಸು ಮಾರುಕಟ್ಟೆಯಲ್ಲಿ ಉತ್ತೇಜನ ತರಲು ಭಾರತೀಯ ರಿಸರ್ವ್ ಬ್ಯಾಂಕ್ ಸೋಮವಾರ ಕೈಗೊಂಡ ಕ್ರಮಗಳಿಗೆ ಹಣಕಾಸು ತಜ್ಞರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಆರ್‌ಬಿಐನ ಈಗಿನ ಕ್ರಮದಿಂದ ವಿದೇಶಿ ನಗದು ಹೆಚ್ಚು ಪ್ರಮಾಣದಲ್ಲಿ ಹರಿದುಬರಲಿದ್ದು, ದೇಶದ ಹಣಕಾಸು ಮಾರುಕಟ್ಟೆಯಲ್ಲಿ ಚೇತರಿಕೆ ಉಂಟು ಮಾಡಲಿದೆ. ಜತೆಗೆ ರೂ. ಕುಸಿತಕ್ಕೂ ತಡೆಯಾಗಲಿದೆ ಎಂದು ಪ್ರಧಾನ ಮಂತ್ರಿಗಳ ಆರ್ಥಿಕ ಸಲಹಾ ಸಮಿತಿ ಅಧ್ಯಕ್ಷ ಸಿ.ರಂಗರಾಜನ್ ಪ್ರತಿಕ್ರಿಯಿಸಿದ್ದಾರೆ.

ರೇಟಿಂಗ್ ಸಂಸ್ಥೆ `ಕ್ರಿಸಿಲ್~ನ ಮುಖ್ಯ ಅರ್ಥಶಾಸ್ತ್ರಜ್ಞ ಡಿ.ಕೆ.ಜೋಷಿ, `ಆರ್‌ಬಿಐನ ಈಗಿನ ಕ್ರಮದಿಂದ ತಕ್ಷಣದಲ್ಲಿ ಯಾವುದೇ ಪರಿಣಾಮಗಳನ್ನೂ ನಿರೀಕ್ಷಿಸುವಂತಿಲ್ಲ~ ಎಂದಿದ್ದಾರೆ.

ಆರ್‌ಬಿಐನ ನಡೆ ವಿದೇಶಿ ನಗದು ದೇಶಕ್ಕೆ ಹೆಚ್ಚು ಬರುವಂತೆ ಮಾಡುವುದೇ ಆಗಿದ್ದರೂ ಅದೇನಿದ್ದರೂ ಅಂತರರಾಷ್ಟ್ರೀಯ ಮಾರುಕಟ್ಟೆಯ ಸ್ಥಿತಿಗತಿ ಮತ್ತು ವಿದೇಶಿ ಹೂಡಿಕೆ ಸಂಸ್ಥೆಗಳ ಮನೋಭಾವವನ್ನು ಅವಲಂಬಿಸಿದೆ ಎಂದು ಜೋಷಿ ವಿಶ್ಲೇಷಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT