ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್‌ಬಿಐ ಹಣಕಾಸು ನೀತಿ: ಹಣದುಬ್ಬರ ಅಲ್ಪ ಇಳಿಕೆ

Last Updated 16 ಜುಲೈ 2012, 19:30 IST
ಅಕ್ಷರ ಗಾತ್ರ

ನವದೆಹಲಿ(ಪಿಟಿಐ): ತಯಾರಿಕಾ ಸರಕುಗಳ ಬೆಲೆ ಇಳಿದಿರುವುದರಿಂದ ಸಗಟು ಸೂಚ್ಯಂಕ ಆಧರಿಸಿದ(ಡಬ್ಲ್ಯುಪಿಐ) ಹಣದುಬ್ಬರ ದರ ಜೂನ್‌ನಲ್ಲಿ ತುಸು ತಗ್ಗಿದ್ದು, ಶೇ 7.25ಕ್ಕೆ ಇಳಿಕೆ ಕಂಡಿದೆ. ಸರ್ಕಾರ ಈ ಅಂಕಿ-ಅಂಶಗಳನ್ನು ಸೋಮವಾರ ಪ್ರಕಟಿಸಿದೆ.

ಮೇ ತಿಂಗಳಲ್ಲಿ `ಡಬ್ಲ್ಯುಪಿಐ~ ಶೇ 7.55ರಷ್ಟಿತ್ತು. ತಯಾರಿಕೆಯಾಗುವ ಸರಕುಗಳು ಅಗ್ಗವಾದರೂ, ಹಾಲು, ಹಣ್ಣು, ತರಕಾರಿ, ಧಾನ್ಯಗಳು ಸೇರಿದಂತೆ ಇತರೆ ಆಹಾರ ಪದಾರ್ಥಗಳ ಬೆಲೆ ಇನ್ನೂ ಗರಿಷ್ಠ ಮಟ್ಟದಲ್ಲೇ ಇವೆ.

ಇದರಿಂದಾಗಿ ಒಟ್ಟಾರೆ ಆಹಾರ ಹಣದುಬ್ಬರ ದರ ಜೂನ್‌ನಲ್ಲಿ ಮತ್ತೆ ಶೇ 10.81ಕ್ಕೆ ಏರಿದೆ. ಆಹಾರ ಪದಾರ್ಥಗಳ ಬೆಲೆ ಏರಿಕೆಯ ಬಿಸಿ, ಭಾರತೀಯ ರಿವರ್ಸ್ ಬ್ಯಾಂಕ್ (ಆರ್‌ಬಿಐ) ಜುಲೈ 31ರಂದು ಪ್ರಕಟಿಸಲಿರುವ ತ್ರೈಮಾಸಿಕ ಹಣಕಾಸು ನೀತಿ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. 

2011ರ ಜೂನ್‌ನಲ್ಲಿ `ಡಬ್ಲ್ಯುಪಿಐ~ ಮತ್ತು ಆಹಾರ ಹಣದುಬ್ಬರ ದರ ಕ್ರಮವಾಗಿ ಶೇ 9.51 ಮತ್ತು 10.74ರಷ್ಟು ಇದ್ದಿತು. ಒಟ್ಟಾರೆ ಹಣದುಬ್ಬರ ದರ ತಗ್ಗಿದರೂ, ಆಹಾರ ಪದಾರ್ಥಗಳ ಧಾರಣೆ ಇಳಿಯದಿರುವುದು ಪೂರೈಕೆ ವಿಭಾಗದ ಲೋಪಗಳನ್ನು ತೋರಿಸುತ್ತದೆ ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಿಸಿದ್ದಾರೆ.

ಆಹಾರ ಪದಾರ್ಥಗಳು `ಡಬ್ಲ್ಯುಪಿಐ~ಗೆ ಶೇ 14.3ರಷ್ಟು ಕೊಡುಗೆ ನೀಡುವುದರಿಂದ ಇದು `ಕಳವಳಕಾರಿ~ ಅಂಶ ಎಂದು ಕೇಂದ್ರ ಯೋಜನಾ ಆಯೋಗದ ಉಪಾಧ್ಯಕ್ಷ ಮೊಂಟೆಕ್ ಸಿಂಗ್ ಅಹ್ಲುವಾಲಿಯಾ ಪ್ರತಿಕ್ರಿಯಿಸಿದ್ದಾರೆ.

ಆಹಾರ ಮತ್ತು ಆಹಾರೇತರ ಸರಕುಗಳ ಬೆಲೆಯು ನಿರಂತರವಾಗಿ ಹೆಚ್ಚುತ್ತಿದೆ. ಸರ್ಕಾರ ಬಜೆಟ್‌ನಲ್ಲಿ ಅಂದಾಜು ಮಾಡಿದ್ದ ಅಂಕಿ ಅಂಶಗಳನ್ನು ದಾಟಿ ಹಣದುಬ್ಬರ ಸೂಚ್ಯಂಕ ಏರುತ್ತಿದೆ. ಈ ನಿಟ್ಟಿನಲ್ಲಿ `ಆರ್‌ಬಿಐ~ ಈ ಬಾರಿಯೂ ಅಲ್ಪಾವಧಿ ಬಡ್ಡಿ ದರ ತಗ್ಗಿಸುವುದಿಲ್ಲ ಎಂದು `ಕ್ರಿಸಿಲ್~ನ ಹಿರಿಯ ಆರ್ಥಿಕ ತಜ್ಞ ಡಿ.ಕೆ.ಜೋಶಿ ಅಭಿಪ್ರಾಯಪಟ್ಟಿದ್ದಾರೆ.

`ಒಟ್ಟಾರೆ ಹಣದುಬ್ಬರ ತಗ್ಗಿರುವುದನ್ನು `ಆರ್‌ಬಿಐ~ ಗಮನಿಸುತ್ತಿದೆ. ಈ ಹಿನ್ನೆಲೆಯಲ್ಲಿ ಧನಾತ್ಮಕ ನೀತಿ ನಿರೀಕ್ಷಿಸಬಹುದು. ಮುಂಗಾರು ನಿಧಾನವಾಗಿ ಚುರುಕುಗೊಳ್ಳುತ್ತಿರುವ ಸೂಚನೆ ಕೂಡ ನಮಗೆ ಅನುಕೂಲವಾಗಿದೆ~ ಎಂದು ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಆರ್.ಗೋಪಾಲನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

`ಆಹಾರ ಪದಾರ್ಥಗಳ ಬೆಲೆ ಏರಿಕೆ ತಡೆಗೆ ಪೂರೈಕೆ ವಿಭಾಗದಲ್ಲಿನ ಲೋಪಗಳನ್ನು ಮೊದಲು ಸರಿಪಡಿಸಬೇಕಿದೆ~ ಎಂದು ಹಣಕಾಸು ಖಾತೆ ರಾಜ್ಯ ಸಚಿವ ನಮೋ ನಾರಾಯಣ ಮೀನಾ ಹೇಳಿದ್ದಾರೆ.

ಹಣದುಬ್ಬರ ಗರಿಷ್ಠ ಮಟ್ಟದಲ್ಲಿದ್ದ ಕಾರಣ ಹಿಂದಿನ ಹಣಕಾಸು ಪರಾಮರ್ಶೆ ಸಂದರ್ಭದಲ್ಲಿ `ಆರ್‌ಬಿಐ~ ರೆಪೊ ಮತ್ತು ರಿವರ್ಸ್ ರೆಪೊ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT