ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್‌ಸಿಬಿಗೆ ಮಾಡು ಇಲ್ಲವೇ ಮಡಿ ಪಂದ್ಯ

Last Updated 19 ಮೇ 2012, 19:30 IST
ಅಕ್ಷರ ಗಾತ್ರ

ಹೈದರಾಬಾದ್ (ಪಿಟಿಐ): ಚೊಚ್ಚಲ ಪ್ರಶಸ್ತಿ ಗೆಲ್ಲಬೇಕೆಂಬ ಕನಸಿನೊಂದಿಗೆ ಈ ಬಾರಿಯ ಐಪಿಎಲ್‌ನಲ್ಲಿ ತನ್ನ ಅಭಿಯಾನ ಆರಂಭಿಸಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈಗ ಅತಿಯಾದ ಒತ್ತಡದಲ್ಲಿದೆ.

ಲೀಗ್‌ನಲ್ಲಿ ಇನ್ನು ಬಾಕಿ ಉಳಿದಿರುವುದು ಕೇವಲ ಒಂದು ಪಂದ್ಯ ಮಾತ್ರ. ಇದುವರೆಗೂ `ಪ್ಲೇ ಆಫ್~ನಲ್ಲಿ ಸ್ಥಾನ ಖಚಿತಪಡಿಸಲು ಆಗದ್ದು ಈ ಒತ್ತಡಕ್ಕೆ ಕಾರಣ. ಆದ್ದರಿಂದ ಭಾನುವಾರ ನಡೆಯುವ ಡೆಕ್ಕನ್ ಚಾರ್ಜರ್ಸ್ ವಿರುದ್ಧದ ಅಂತಿಮ ಲೀಗ್ ಪಂದ್ಯ ಆರ್‌ಸಿಬಿ ಪಾಲಿಗೆ `ಮಾಡು ಇಲ್ಲವೇ ಮಡಿ~ ಹೋರಾಟ ಎನಿಸಿದೆ.

ಡೇನಿಯಲ್ ವೆಟೋರಿ ಬಳಗ 15 ಪಂದ್ಯಗಳಿಂದ 17 ಪಾಯಿಂಟ್‌ಗಳನ್ನು ಹೊಂದಿದೆ. ಕೊನೆಯ ಲೀಗ್ ಪಂದ್ಯದವರೆಗೂ `ಪ್ಲೇ ಆಫ್~ನಲ್ಲಿ ಸ್ಥಾನ ಖಚಿತವಾಗದ್ದು ಈ ತಂಡದ ದುರದೃಷ್ಟ ಅನ್ನಬೇಕು. ಕೆಲವೊಂದು ಪಂದ್ಯಗಳಲ್ಲಿ ಗೆಲುವಿನ ಸನಿಹ ಎಡವಿದ್ದರಿಂದ ತಂಡಕ್ಕೆ ಇಂತಹ ಪರಿಸ್ಥಿತಿ ಎದುರಾಗಿದೆ.

ಆರ್‌ಸಿಬಿ ಕಳೆದ ಪಂದ್ಯದಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್ ವಿರುದ್ಧ ಜಯ ಸಾಧಿಸಿತ್ತು. ಆದರೆ ಪಂದ್ಯದ ಬಳಿಕ ನಡೆದ `ಲೂಕ್ ಪಾಮರ್ಸ್‌ಬ್ಯಾಚ್~ ಘಟನೆಯಿಂದಾಗಿ ತಂಡಕ್ಕೆ ಅಲ್ಪ ಹಿನ್ನಡೆ ಉಂಟಾಗಿದೆ. ಈ ವಿವಾದವನ್ನು ಮರೆತು ಆಟದತ್ತ ಗಮನ ಕೇಂದ್ರೀಕರಿಸಬೇಕಾದ ಸವಾಲು ಕೂಡಾ ಡೇನಿಯಲ್ ವೆಟೋರಿ ಬಳಗದ ಮುಂದಿದೆ.

`ಅದೇ ರಾಗ, ಅದೇ ಹಾಡು~ ಎಂಬಂತೆ ಚಾಲೆಂಜರ್ಸ್ ತಂಡ ಈ ಪಂದ್ಯದಲ್ಲೂ ಬ್ಯಾಟಿಂಗ್‌ನಲ್ಲಿ ಕ್ರಿಸ್ ಗೇಲ್ ಅವರನ್ನೇ ನೆಚ್ಚಿಕೊಂಡಿದೆ. ಈ ಆರಂಭಿಕ ಬ್ಯಾಟ್ಸ್‌ಮನ್ ಕಳೆದ ಪಂದ್ಯದಲ್ಲಿ ಅಜೇಯ 128 ರನ್ ಗಳಿಸಿದ್ದರು.

ರಾಜೀವ್ ಗಾಂಧಿ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲೂ ಗೇಲ್ ಅವರಿಂದ ಅದೇ ರೀತಿಯ ಅಬ್ಬರದ ಆಟವನ್ನು ನಿರೀಕ್ಷಿಸಲಾಗುತ್ತಿದೆ. ಅವರು ಟೂರ್ನಿಯಲ್ಲಿ ಒಟ್ಟು 706 ರನ್ ಪೇರಿಸಿದ್ದಾರೆ. ವಿರಾಟ್ ಕೊಹ್ಲಿ ಎಂದಿನ ಲಯಕ್ಕೆ ಮರಳಿರುವುದು ಆರ್‌ಸಿಬಿ ಸಂತಸಕ್ಕೆ ಕಾರಣವಾಗಿದೆ.  ಡೇರ್‌ಡೆವಿಲ್ಸ್ ವಿರುದ್ಧ ಕೊಹ್ಲಿ ಅಜೇಯ 73 ರನ್ ಗಳಿಸಿದ್ದರು. ಎಬಿ ಡಿವಿಲಿಯರ್ಸ್ ಮತ್ತು ತಿಲಕರತ್ನೆ ದಿಲ್ಶಾನ್ ಅವರ ಸಾನಿಧ್ಯವೂ ಬ್ಯಾಟಿಂಗ್‌ನ ಬಲ ಹೆಚ್ಚಿಸಲಿದೆ.

ಈ ಹಿಂದೆ ಬೆಂಗಳೂರಿನಲ್ಲಿ ಇವೆರಡು ತಂಡಗಳು ಎದುರಾಗಿದ್ದಾಗ ಡಿವಿಲಿಯರ್ಸ್ ಕೇವಲ 17 ಎಸೆತಗಳಲ್ಲಿ 47 ರನ್ ಗಳಿಸಿ ಆರ್‌ಸಿಬಿಯ ಗೆಲುವಿನ ರೂವಾರಿ ಎನಿಸಿದ್ದರು. ವೆಟೋರಿ ಇಂದಿನ ಪಂದ್ಯದಲ್ಲಿ ಆಡುವರೇ ಎಂಬುದು ಖಚಿತವಾಗಿಲ್ಲ. ನ್ಯೂಜಿಲೆಂಡ್‌ನ ಈ ಸ್ಪಿನ್ನರ್ ಕಣಕ್ಕಿಳಿದರೆ, ಮುತ್ತಯ್ಯ ಮುರಳೀಧರನ್ ಹೊರಗೆ ಕುಳಿತುಕೊಳ್ಳುವುದು ಅನಿವಾರ್ಯ.

ಡೆಕ್ಕನ್ ಚಾರ್ಜರ್ಸ್ ತಂಡವನ್ನು ಸುಲಭವಾಗಿ ಕಡೆಗಣಿಸುವಂತಿಲ್ಲ. ಏಕೆಂದರೆ ಕಳೆದ ಪಂದ್ಯದಲ್ಲಿ ರಾಜಸ್ತಾನ ರಾಯಲ್ಸ್ ತಂಡವನ್ನು ಮಣಿಸಿ ಆ ತಂಡದ `ಪ್ಲೇ ಆಫ್~ ಕನಸನ್ನು ಭಗ್ನಗೊಳಿಸಿತ್ತು. ಅಂತಿಮ ಪಂದ್ಯದಲ್ಲಿ ಗೆದ್ದು ಆರ್‌ಸಿಬಿಯ `ಪ್ಲೇ ಆಫ್~ ಕನಸಿಗೆ ಅಡ್ಡಿಯಾಗುವುದು ನಮ್ಮ ಗುರಿ ಎಂದು ಚಾರ್ಜರ್ಸ್ ತಂಡದ ಕ್ಯಾಮರೂಮ್ ವೈಟ್ ಈಗಾಗಲೇ ಎಚ್ಚರಿಕೆ ನೀಡಿದ್ದಾರೆ.

ಆಡಿದ 15 ಪಂದ್ಯಗಳಿಂದ ಚಾರ್ಜರ್ಸ್ ಕಲೆಹಾಕಿರುವುದು ಏಳು ಪಾಯಿಂಟ್ ಮಾತ್ರ. ಆದರೂ ಈ ತಂಡ ಯಾವುದೇ ಒತ್ತಡವಿಲ್ಲದೆ ಇಂದು ಕಣಕ್ಕಿಳಿಯಲಿದೆ. ಇಂದಿನ ಪಂದ್ಯದಲ್ಲಿ ಆರ್‌ಸಿಬಿ ಗೆದ್ದರೆ ಕಳೆದ ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡದ `ಪ್ಲೇ ಆಫ್~ ಕನಸು ನುಚ್ಚುನೂರಾಗಲಿದೆ.
 
ಪಂದ್ಯ ಮಳೆಯಿಂದ ರದ್ದುಗೊಂಡು ಪಾಯಿಂಟ್ ಹಂಚಿಕೆಯಾದರೂ ಚಾಲೆಂಜರ್ಸ್ ತಂಡ ಮಹೇಂದ್ರ ಸಿಂಗ್ ದೋನಿ ಬಳಗವನ್ನು (17 ಪಾಯಿಂಟ್) ಹಿಂದಿಕ್ಕಿ ಅಗ್ರ ನಾಲ್ಕರಲ್ಲಿ ಸ್ಥಾನ ಪಡೆಯಲಿದೆ.
ಪಂದ್ಯದ ಆರಂಭ: ಸಂಜೆ 4.00ಕ್ಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT