ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಲಮಟ್ಟಿ ಅಣೆ: ರಾಜ್ಯಕ್ಕೆ ಮನ್ನಣೆ

Last Updated 31 ಡಿಸೆಂಬರ್ 2010, 6:40 IST
ಅಕ್ಷರ ಗಾತ್ರ

ನವದೆಹಲಿ: ಕಳೆದ 43 ವರ್ಷಗಳಿಂದ ಕಗ್ಗಂಟಾಗಿ ಕಾಡಿದ್ದ ಕೃಷ್ಣಾ ನದಿ ಹೆಚ್ಚುವರಿ ನೀರು ಹಂಚಿಕೆ ಕುರಿತು ಕೃಷ್ಣಾ ನೀರು ಹಂಚಿಕೆ ನ್ಯಾಯಮಂಡಳಿ ಗುರುವಾರ ಅಂತಿಮ ತೀರ್ಪು ನೀಡಿದ್ದು, ಕರ್ನಾಟಕಕ್ಕೆ 174 ಟಿಎಂಸಿ ಅಡಿ ಹೆಚ್ಚು ನೀರು ಲಭ್ಯವಾಗಲಿದೆ. ಆಲಮಟ್ಟಿ ಅಣೆಕಟ್ಟೆ ಎತ್ತರವನ್ನು 524.256 ಮೀಟರ್‌ಗಳಿಗೆ ಹೆಚ್ಚಿಸಲು ಮಂಡಳಿ ಅನುಮತಿ ನೀಡಿದ್ದು,  ತನ್ನ ಪಾಲಿಗೆ ಇದು ‘ಚರಿತ್ರಾರ್ಹ ದಿನ’ ಎಂದು ಕರ್ನಾಟಕ ಬಣ್ಣಿಸಿದೆ.ಹೆಚ್ಚುವರಿ ನೀರಿನ ಪೈಕಿ ನೆರೆಯ ಆಂಧ್ರಪ್ರದೇಶಕ್ಕೆ ಗರಿಷ್ಠ ಪಾಲು ಸಂದಾಯವಾಗಿದ್ದರೆ  ಮಹಾರಾಷ್ಟ್ರದ ಪಾಲನ್ನೂ ಹೆಚ್ಚಿಸಲಾಗಿದೆ.

ಮಂಡಳಿ ಸದಸ್ಯರಾದ ನ್ಯಾಯಮೂರ್ತಿ ಡಿ.ಕೆ.ಸೇಠ್ ಮತ್ತು ನ್ಯಾಯಮೂರ್ತಿ ಎಸ್.ಪಿ.ಶ್ರೀವಾತ್ಸವ ಅವರ ಸಮ್ಮುಖದಲ್ಲಿ ಬ್ರಿಜೇಶ್ ಕುಮಾರ್ 18 ಪುಟಗಳ ತೀರ್ಪನ್ನು ನ್ಯಾಯಾಲಯದ ಸಭಾಂಗಣದಲ್ಲಿ ಓದಿದರು. ತೀರ್ಪು ಒಟ್ಟು 830 ಪುಟಗಳನ್ನು ಒಳಗೊಂಡಿದ್ದು ತಾನು ಪಟ್ಟಿ ಮಾಡಿದ್ದ ಎಲ್ಲಾ 30 ವಿಷಯಗಳ ಕುರಿತು ವಿವರವಾಗಿ ಪ್ರಸ್ತಾಪಿಸಲಾಗಿದೆ.

ಆಲಮಟ್ಟಿ ಅಣೆಕಟ್ಟೆಯಲ್ಲಿ ನೀರು ಸಂಗ್ರಹ ಮಟ್ಟ ಹೆಚ್ಚಿಸಿರುವುದರಿಂದ (524.256 ಮೀ) ಅದರ ಧಾರಣಾ ಸಾಮರ್ಥ್ಯ 173 ಟಿಎಂಸಿ ಅಡಿಗಳಿಂದ 303 ಟಿಎಂಸಿ ಅಡಿಗಳಿಗೆ ಹೆಚ್ಚಳವಾಗಲಿದೆ. ಈವರೆಗೆ ಈ ಜಲಾಶಯದಲ್ಲಿ 519.6 ಮೀಟರ್‌ವರೆಗೆ ಮಾತ್ರ ನೀರು ಸಂಗ್ರಹಿಸಲಾಗುತ್ತಿತ್ತು.

ಹೆಚ್ಚುವರಿ ನೀರಿನಲ್ಲಿ 174 ಟಿಎಂಸಿ ನೀರು ಕರ್ನಾಟಕಕ್ಕೆ ಲಭ್ಯವಾಗಿದ್ದರೆ ಸುಮಾರು 190 ಟಿಎಂಸಿ ಅಡಿ ನೀರು ಆಂಧ್ರಕ್ಕೆ ಲಭ್ಯವಾಗಿದೆ. 88 ಟಿಎಂಸಿ ಅಡಿ ನೀರು ಮಹಾರಾಷ್ಟ್ರಕ್ಕೆ ಸಂದಿದೆ. ಅಂದರೆ ಹೆಚ್ಚುವರಿ ನೀರಿನಲ್ಲಿ ಶೇ 40ರಷ್ಟು ಕರ್ನಾಟಕಕ್ಕೆ, ಶೇ 43ರಷ್ಟು ಆಂಧ್ರಕ್ಕೆ ಹಾಗೂ ಶೇ 17ರಷ್ಟು ಮಹಾರಾಷ್ಟ್ರಕ್ಕೆ ದೊರೆಯಲಿದೆ.

ಹಾಗೆಯೇ, ಕೃಷ್ಣಾ ನದಿಯಲ್ಲಿ ಒಟ್ಟಾರೆ ಲಭ್ಯವಿರುವ ನೀರಿನಲ್ಲಿ ಆಂಧ್ರಪ್ರದೇಶ ಹಿಂದಿನ 811 ಟಿಎಂಸಿಗೆ ಬದಲಾಗಿ 1,001 ಟಿಎಂಸಿ ನೀರು ಪಡೆಯಲಿದೆ. ಕರ್ನಾಟಕ 734 ಟಿಎಂಸಿಗೆ ಬದಲು 911 ಟಿಎಂಸಿ ನೀರನ್ನು ಹಾಗೂ ಮಹಾರಾಷ್ಟ್ರ 585 ಟಿಎಂಸಿಗೆ ಬದಲಾಗಿ  666 ಟಿಎಂಸಿ ನೀರು ಪಡೆಯಲಿದೆ.

ಕಳೆದ 45 ವರ್ಷಗಳಿಂದ ಇದ್ದ ಒಳಹರಿವಿನ ಪ್ರಮಾಣವನ್ನು ಗಣನೆಗೆ ತೆಗೆದುಕೊಂಡು ಈ ತೀರ್ಪು ನೀಡಲಾಗಿದೆ. ಮಂಡಳಿಯ ಪ್ರಕಾರ ಹೆಚ್ಚುವರಿ ನೀರಿನ ಪ್ರಮಾಣ 458 ಟಿಎಂಸಿ ಅಡಿ ಆಗಿದ್ದು, ಇದನ್ನು ಮೂರೂ ಫಲಾನುಭವಿಗಳ ಮಧ್ಯೆ ಹಂಚಿದೆ. ಇಲ್ಲಿಯವರೆಗೆ ಹೆಚ್ಚುವರಿ ನೀರನ್ನು ಆಂಧ್ರಪ್ರದೇಶ ಮಾತ್ರ ಬಳಸಿಕೊಳ್ಳುತ್ತಿತ್ತು. ಇದೇ ವೇಳೆ ಪ್ರತಿವರ್ಷದ ಜೂನ್- ಜುಲೈ ತಿಂಗಳುಗಳಲ್ಲಿ ಆಂಧ್ರಕ್ಕೆ 8ರಿಂದ 10 ಟಿಎಂಸಿ ಅಡಿ ನೀರು ಹರಿಸುವಂತೆ ಕರ್ನಾಟಕಕ್ಕೆ ಹೇಳಿದೆ.

ಈ ತೀರ್ಪು 2050ರ ಮೇ 31ರವರೆಗೆ ಅನ್ವಯವಾಗಲಿದೆ. ನ್ಯಾಯಮಂಡಳಿಯು ಸುಪ್ರೀಂಕೋರ್ಟ್‌ಗೆ ಸಮಾನವಾದ ನ್ಯಾಯಾಂಗ ಅಧಿಕಾರ ಹೊಂದಿರುವುದರಿಂದ ಈ ಕುರಿತು ನ್ಯಾಯಮಂಡಳಿ ಬಿಟ್ಟು ಬೇರೆಲ್ಲೂ ಮೇಲ್ಮನವಿ ಸಲ್ಲಿಸಲು ಸಾಧ್ಯವಾಗದು. ಯಾವುದೇ ರಾಜ್ಯ ಈ ತೀರ್ಪಿನ ಮರು ಪರಿಶೀಲನೆ ಅಥವಾ ತೀರ್ಪು ಕುರಿತು ವಿವರಣೆ ಬಯಸುವುದಾದರೆ ಮೂರು ತಿಂಗಳೊಳಗೆ ಮಂಡಳಿ ಮುಂದೆ ಅರ್ಜಿ ಸಲ್ಲಿಸಬೇಕೆಂದು ನ್ಯಾಯಮೂರ್ತಿಗಳು ಸೂಚಿಸಿದ್ದಾರೆ.

ಈ ತೀರ್ಪನ್ನು ಅನುಷ್ಠಾನಗೊಳಿಸುವ ಉದ್ದೇಶದಿಂದ ಮೂರು ತಿಂಗಳಾಗುತ್ತಿದ್ದಂತೆ ‘ಕೃಷ್ಣಾ ನೀರು ಹಂಚಿಕೆ ಅನುಷ್ಠಾನ ಮಂಡಳಿ’ಯನ್ನು ರಚಿಸುವಂತೆ  ನ್ಯಾಯಮೂರ್ತಿಗಳು ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಿದ್ದಾರೆ. ತಾವು ಬಳಸಿಕೊಂಡ ನೀರಿನ ಕುರಿತ ಅಂಕಿ ಅಂಶವನ್ನು ಮಂಡಳಿಗೆ ಪ್ರತಿ 10 ದಿನಗಳಿಗೊಮ್ಮೆ ನಿಯಮಿತವಾಗಿ ಸಲ್ಲಿಸುವಂತೆ ಫಲಾನುಭವಿ ರಾಜ್ಯಗಳಿಗೆ ಸೂಚಿಸಲಾಗಿದೆ.

ಚೆನ್ನೈಗೆ ಕುಡಿಯುವ ನೀರು: ಮೂರೂ ರಾಜ್ಯಗಳು ಚೆನ್ನೈಗೆ ಕುಡಿಯುವ ನೀರು ಪೂರೈಸಲು ಜುಲೈನಿಂದ ಅಕ್ಟೋಬರ್‌ವರೆಗೆ ಪ್ರತಿ ತಿಂಗಳು ತಲಾ 3.3 ಟಿಎಂಸಿ ನೀರು ಹರಿಸಬೇಕು. ಹಾಗೆಯೇ ಜನವರಿಯಿಂದ ಏಪ್ರಿಲ್‌ವರೆಗಿನ ಅವಧಿಯಲ್ಲಿ ಚೆನ್ನೈಗೆ ತಲಾ 1.70 ಟಿಎಂಸಿ ನೀರು ಹರಿಸಬೇಕು ಎಂದು ಮಂಡಳಿ ನಿರ್ದೇಶಿಸಿದೆ.

ಆಂಧ್ರ ದಿಗ್ಭ್ರಮೆ:
ಈ ತೀರ್ಪಿನ ಬಗ್ಗೆ ಕರ್ನಾಟಕ ಮತ್ತು ಮಹಾರಾಷ್ಟ್ರ ಸಮಾಧಾನ ವ್ಯಕ್ತಪಡಿಸಿದ್ದರೆ ಆಂಧ್ರ ದಿಗ್ಭ್ರಮೆ ವ್ಯಕ್ತಪಡಿಸಿದೆ. ಹೆಚ್ಚುವರಿ ನೀರಿನಲ್ಲಿ 300 ಟಿಎಂಸಿಗಳಷ್ಟು ನೀರು ತನ್ನ ಹಕ್ಕು ಎಂದು ಪ್ರತಿಪಾದಿಸಿದ್ದ ಆಂಧ್ರಕ್ಕೆ ಈಗ 190 ಟಿಎಂಸಿ ನೀರು ಮಾತ್ರ ಲಭ್ಯವಾಗಲಿದೆ. 

ಹೀಗಾಗಿ 50,000 ಕೋಟಿ ರೂಪಾಯಿಗಳ ವೆಚ್ಚದಲ್ಲಿ ತಾನು ಕೈಗೊಂಡಿರುವ ಮಹತ್ವಾಕಾಂಕ್ಷೆಯ ‘ಜಲಯಜ್ಞಂ’ ನೀರಾವರಿ ಕಾಮಗಾರಿ ನೆನೆಗುದಿಗೆ ಬೀಳಲಿದೆ ಎಂಬ ಭೀತಿ ಆಂಧ್ರದಲ್ಲಿ ಮನೆ ಮಾಡಿದೆ.

ತೀರ್ಪಿನಿಂದ ಆಘಾತಗೊಂಡಿರುವ ಆಂಧ್ರ ಮುಖ್ಯಮಂತ್ರಿ ಕಿರಣ್ ಕುಮಾರ್ ರೆಡ್ಡಿ ಹೈದರಾಬಾದ್‌ನಲ್ಲಿ ಸಚಿವ ಸಂಪುಟ ಸಭೆ ನಡೆಸಿದರು. ಕಾಮಗಾರಿಗಳ ಬಗ್ಗೆ ಭಾರಿ ನಿರೀಕ್ಷೆ ಹೊಂದಿದ್ದ ಆಂಧ್ರದ ವಿವಿಧ ರಾಜಕೀಯ ಪಕ್ಷಗಳು, ಅಧಿಕಾರಿಗಳು, ನೀರಾವರಿ ತಜ್ಞರು ಮತ್ತು ರೈತರಿಂದ  ಈಗಾಗಲೇ ಟೀಕೆಗಳು ಕೇಳಿಬರುತ್ತಿವೆ. ಹೆಚ್ಚುವರಿ ನೀರಿನಲ್ಲಿ ತನಗೆ ಕಡಿಮೆ ಪಾಲು ಸಿಕ್ಕಿರುವುದರಿಂದ ಈಗಾಗಲೇ ಚಾಲನೆಗೊಂಡಿರುವ ‘ಜಲಯಜ್ಞಂ’ ಕಾಮಗಾರಿಗಳು ಪುರಾತನ ಅವಶೇಷಗಳಂತೆ ಸ್ಥಗಿತವಾಗಬೇಕಾಗುತ್ತದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

300 ಟಿಎಂಸಿ ಅಡಿಗಳಷ್ಟು ಹೆಚ್ಚುವರಿ ನೀರನ್ನು ಬಳಸಿಕೊಳ್ಳುವುದು ತನ್ನ ಹಕ್ಕು ಎಂದು ಪ್ರತಿಪಾದಿಸಿದ್ದ ಆಂಧ್ರ ಮಾಜಿ ಮುಖ್ಯಮಂತ್ರಿ ದಿವಂಗತ ವೈ.ಎಸ್.ರಾಜಶೇಖರ ರೆಡ್ಡಿ, ಈ ಮಹತ್ವಾಕಾಂಕ್ಷೆಯ ಯೋಜನೆಗೆ ಚಾಲನೆ ನೀಡಿದ್ದರು. ನೆಟ್ಟಂಪಾಡು, ವೆಲಿಗೊಂಡ ಸೇರಿದಂತೆ ಹಲವೆಡೆ ಈ ಕಾಮಗಾರಿಗಳು ಪ್ರಗತಿಯಲ್ಲಿದ್ದು ರಾಜ್ಯ ಸರ್ಕಾರ ಈಗಾಗಲೇ 32,000 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದೆ.

ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ಒಳಹರಿವಿನ ಸಾಧ್ಯತೆ ಇಲ್ಲವಾದ್ದರಿಂದ ಚೆನ್ನೈಗೆ ಕುಡಿಯುವ ನೀರಿನ ಪೂರೈಕೆಗಾಗಿ 7 ಟಿಎಂಸಿಗಳಷ್ಟು ನೀರನ್ನು ಆಂಧ್ರಪ್ರದೇಶವೇ ಬಿಡಬೇಕಾಗುತ್ತದೆ ಎಂದೂ ನೀರಾವರಿ ತಜ್ಞರು ಅನುಮಾನಿಸಿದ್ದಾರೆ.

ಒಟ್ಟಾರೆ ತೀರ್ಪಿನ ಬಗ್ಗೆ ಮಹಾರಾಷ್ಟ್ರ ಸಮಾಧಾನ ವ್ಯಕ್ತಪಡಿಸಿದ್ದರೂ ಆಲಮಟ್ಟಿ ಜಲಾಶಯದಲ್ಲಿ ಹೆಚ್ಚು ನೀರು ಸಂಗ್ರಹಿಸಲು ಅನುಮತಿ ನೀಡಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದೆ. ಈ ಅಣೆಕಟ್ಟೆಯಲಿ ಹೆಚ್ಚು ನೀರು ಸಂಗ್ರಹಿಸಿದರೆ ತನ್ನ ವ್ಯಾಪ್ತಿಯ ಸಾಂಗ್ಲಿ, ಕೊಲ್ಲಾಪುರ ಮತ್ತು ಸತಾರ ಜಿಲ್ಲೆಗಳು ತೀವ್ರ ಪ್ರವಾಹಕ್ಕೆ ತುತ್ತಾಗುತ್ತವೆ ಎಂದು ಅದು ಧ್ವನಿ ಎತ್ತಿದೆ. ಈ ಹಿನ್ನೆಲೆಯಲ್ಲಿ ಮುಂಬೈನ ಸಚಿವಾಲಯದಲ್ಲಿ ತುರ್ತು ಪ್ರತಿಕಾಗೋಷ್ಠಿ ಕರೆದ ಮುಖ್ಯಮಂತ್ರಿ ಪೃಥ್ವಿರಾಜ್ ಚವಾಣ್ ಜಲಾಶಯದ ಮಟ್ಟ ಹೆಚ್ಚಿಸಲು ಅನುಮತಿ ನೀಡಿರುವುದು ಕಳವಳಕಾರಿ ಎಂದಿದ್ದಾರೆ.

ಅಣೆಕಟ್ಟೆಯ ಎತ್ತರವನ್ನು ಈಗಿರುವ 519.6 ಮೀಟರ್‌ಗಳಿಗಿಂತಲೂ ಕಡಿಮೆ ಮಾಡಬೇಕೆಂದು ಮಹಾರಾಷ್ಟ್ರ ನ್ಯಾಯಮಂಡಳಿಯನ್ನು ಕೋರಿತ್ತು.

ಆದರೆ ತೀರ್ಪಿನ ಬಗ್ಗೆ ಸಮಾಧಾನದ ಮಾತುಗಳನ್ನಾಡಿರುವ ಮಹಾರಾಷ್ಟ್ರ ಜಲಸಂಪನ್ಮೂಲ ಸಚಿವ ರಾಮರಾಜ್ಯ ನಿಂಬಾಳ್ಕರ್, ‘ಯಾವುದೇ ತೀರ್ಪು ಎಲ್ಲರಿಗೂ ಕೇಳಿದ್ದೆಲ್ಲವನ್ನೂ ನೀಡಲು ಸಾಧ್ಯವಿಲ್ಲ’ ಎಂದಿದ್ದಾರೆ.

‘ನಮಗೆ ಹಿಂದೆ ಇದ್ದುದಕ್ಕಿಂತ 100 ಟಿಎಂಸಿ ಹೆಚ್ಚು ನೀರು ಸಿಗುವ ಜತೆಗೆ ಕೊಯ್ನಾ ಅಣೆಕಟ್ಟೆಯಿಂದಲೂ 25 ಟಿಎಂಸಿ ಹೆಚ್ಚುವರಿ ನೀರು ಲಭ್ಯವಾಗಲಿದೆ. ಇದರಿಂದ ಸಂತಸವಾಗಿದೆ’ ಎಂದು ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT