ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಲಮಟ್ಟಿ ಎತ್ತರ: ಕೊಟ್ಟು ಕಿತ್ತುಕೊಂಡ ನ್ಯಾಯಮಂಡಳಿ

Last Updated 16 ಫೆಬ್ರುವರಿ 2011, 19:00 IST
ಅಕ್ಷರ ಗಾತ್ರ

ವಿಜಾಪುರ: ನ್ಯಾ.ಬ್ರಿಜೇಶ್‌ಕುಮಾರ ನೇತೃತ್ವದ ಕೃಷ್ಣಾ ಎರಡನೆಯ ನ್ಯಾಯಮಂಡಳಿ ಆಲಮಟ್ಟಿ ಜಲಾಶಯದ ಎತ್ತರವನ್ನು 524.256 ಮೀಟರ್‌ಗೆ ಹೆಚ್ಚಿಸಲು ಅನುಮತಿ ನೀಡಿದೆ. ಆದರೆ, ಎತ್ತರ ಹೆಚ್ಚಿಸಿದ ಬಳಿಕ ಆಲಮಟ್ಟಿ ಜಲಾಶಯದಲ್ಲಿ ನಿಲ್ಲುವ ನೀರನ್ನೆಲ್ಲ ಕರ್ನಾಟಕವೇ ಬಳಸಿಕೊಳ್ಳಲು ಸಂಪೂರ್ಣ ಹಕ್ಕು ನೀಡಿಲ್ಲ!

‘ಜಲಾಶಯದ ಎತ್ತರವನ್ನು ಹೆಚ್ಚಿಸಿದ ನಂತರ ಅದರಲ್ಲಿ ಸಂಗ್ರಹವಾಗುವ ಎಲ್ಲ ನೀರು ನಮ್ಮ ಉಪಯೋಗಕ್ಕೇ ಸಿಗುತ್ತದೆ ಎಂದೇನಿಲ್ಲ. ಜಲಾಶಯ ಭರ್ತಿಯಾಗಿದ್ದರೂ ಮಳೆಗಾಲ ಕಡಿಮೆಯಾದ ವರ್ಷಗಳಲ್ಲಿ ಆ ನೀರನ್ನು ನಾವು ಉಪಯೋಗಿಸದೇ ಆಂಧ್ರ ಪ್ರದೇಶದವರಿಗೆ ಬಿಡಬೇಕಾಗುತ್ತದೆ. ಇದು ನ್ಯಾಯಮಂಡಳಿಯ ತೀರ್ಪು ಕರ್ನಾಟಕಕ್ಕೆ ಕೊಟ್ಟಿರುವ ಮತ್ತೊಂದು ಬರೆ’ ಎಂದು ಕೆಲ ನೀರಾವರಿ ಎಂಜಿನಿಯರರು ಹಾಗೂ ರೈತ ಮುಖಂಡರು ವಿಶ್ಲೇಷಿಸುತ್ತಿದ್ದಾರೆ.

ಕೃಷ್ಣಾ ಮೇಲ್ದಂಡೆ ನೀರಾವರಿ ಯೋಜನೆಗಳಿಗೆ ‘ಎ’ ಸ್ಕೀಂನಲ್ಲಿ 173 ಟಿಎಂಸಿ ಅಡಿ ನೀರು ಲಭಿಸಿದ್ದು, ‘ಬಿ’ ಸ್ಕೀಂನಲ್ಲಿ ಈಗ 130 ಟಿಎಂಸಿ ಅಡಿ ನೀರನ್ನು ಹಂಚಿಕೆ ಮಾಡಲಾಗಿದೆ. ಆಲಮಟ್ಟಿ ಜಲಾಶಯದಲ್ಲಿ ಈಗಿರುವ 519.6 ಮೀಟರ್ ಎತ್ತರದಲ್ಲಿ 123 ಟಿಎಂಸಿ ಅಡಿ ನೀರು ಸಂಗ್ರಹಿಸಲಾಗುತ್ತಿದೆ. ಜಲಾಶಯದ ಎತ್ತರವನ್ನು 524.256 ಮೀಟರ್‌ಗೆ ಹೆಚ್ಚಿಸಿದರೆ 104 ಟಿಎಂಸಿ ಅಡಿ ಹೆಚ್ಚುವರಿ ನೀರು ಸಂಗ್ರಹವಾಗಲಿದೆ.

‘ಜಲಾಶಯದಿಂದ, ಉತ್ತಮ ಮಳೆಯಾದ ವರ್ಷಗಳಲ್ಲಿ 303 ಟಿಎಂಸಿ ಅಡಿ ಹಾಗೂ ಕಡಿಮೆ ಮಳೆಯಾದ ವರ್ಷಗಳಲ್ಲಿ ಕೇವಲ 198 ಟಿಎಂಸಿ ಅಡಿ ನೀರು ಉಪಯೋಗಿಸಿಕೊಳ್ಳಬೇಕು ಎಂದು ನ್ಯಾಯಮಂಡಳಿ ಕಟ್ಟಳೆ ವಿಧಿಸಿದೆ. 10 ವರ್ಷಗಳಲ್ಲಿ 5 ವರ್ಷ ಮಾತ್ರ 303 ಟಿಎಂಸಿ ಅಡಿ ನೀರು ನಮ್ಮ ಬಳಕೆಗೆ ದೊರೆಯಲಿದೆ. ನಮ್ಮಲ್ಲಿ ಬರಗಾಲ ಇದ್ದಾಗ ನಮ್ಮ ಜಲಾಶಯ ಭರ್ತಿಯಾಗಿದ್ದರೂ ಸಹ ಆ ನೀರನ್ನು ನಾವು ಆಂಧ್ರಕ್ಕೆ ಬಿಡಬೇಕಾಗುತ್ತದೆ. ಇದು ಸರಿಯಲ್ಲ. ಪ್ರತಿ ವರ್ಷವೂ 303 ಟಿಎಂಸಿ ಅಡಿ ನೀರು ಬಳಕೆಗೆ ನಮಗೆ ಅವಕಾಶ ದೊರೆಯಬೇಕಿತ್ತು’ ಎಂಬುದು ಅವರ ವಾದ.

ಕೃಷ್ಣಾ ಮೇಲ್ದಂಡೆ ಯೋಜನೆಯ ‘ಎ’ ಸ್ಕೀಂನಲ್ಲಿ 173 ಟಿಎಂಸಿ ಅಡಿ ನೀರು ಬಳಸಲು ಕಾಲುವೆ ನಿರ್ಮಿಸಲಾಗಿದೆ. 6.25 ಲಕ್ಷ ಹೆಕ್ಟೇರ್ ಅಚ್ಚುಕಟ್ಟು ಪ್ರದೇಶ ಇದೆ. ಈಗ ‘ಬಿ’ ಸ್ಕೀಂನಲ್ಲಿ 130 ಟಿಎಂಸಿ ಅಡಿ ನೀರು ಸಿಕ್ಕಿದೆ. ಇದರಿಂದ ಇನ್ನೂ 5.30 ಲಕ್ಷ ಹೆಕ್ಟೇರ್ ನೀರಾವರಿ ಮಾಡಬೇಕಿದೆ.

‘ಎ’ ಮತ್ತು ‘ಬಿ’ ಸ್ಕೀಂಗಳ ಅನುಷ್ಠಾನದಿಂದ ಒಟ್ಟಾರೆ 11.55 ಲಕ್ಷ ಹೆಕ್ಟೇರ್ ಪ್ರದೇಶ ನೀರಾವರಿಯಾಗುವ ಅಂದಾಜಿದೆ. ಮಳೆಗಾಲದಲ್ಲಿ 11.55 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯುವ ಒಂದು ಬೆಳೆಗೆ 198 ಟಿಎಂಸಿ ನೀರು ಬಳಕೆಯಾಗಲಿದೆ. ಉತ್ತಮ ಮಳೆಯಾದ ವರ್ಷಗಳಲ್ಲಿ ಹೆಚ್ಚುವರಿ 105 ಟಿಎಂಸಿ ನೀರು ದೊರೆತರೆ ಆಗ ಮಾತ್ರ ಇನ್ನೊಂದು ಬೆಳೆ ಬೆಳೆಯಲು ಅವಕಾಶ ಉಂಟು. 

ಇದು ಈ ತೀರ್ಪು ಕರ್ನಾಟಕದ ರೈತರಿಗೆ ನೀಡಿರುವ ದೊಡ್ಡ ಆಘಾತ ಎಂಬುದು ಅವರ ಆತಂಕಕ್ಕೆ ಕಾರಣ.ಇಲ್ಲಿಯವರೆಗೆ ನೀರು ನಿರ್ವಹಣೆ ಅಥವಾ ತೀರ್ಪು ಅನುಷ್ಠಾನ ಸಮಿತಿ ಇರಲಿಲ್ಲ. ಇನ್ನು ಅದು ರಚನೆಯಾಗಲಿದೆ. ಹೀಗಾಗಿ ಮಹಾರಾಷ್ಟ್ರ, ಕರ್ನಾಟಕ, ಆಂಧ್ರಪ್ರದೇಶ ರಾಜ್ಯಗಳು ಪ್ರತಿ ದಿನ ನೀರು ಬಳಕೆಯ ಮಾಹಿತಿಯನ್ನು ಈ ಸಮಿತಿಗೆ ಕಡ್ಡಾಯವಾಗಿ ನೀಡಬೇಕಾಗುತ್ತದೆ. ಮೇಲಾಗಿ ಬೆಳೆ ಪದ್ಧತಿ ಕಟ್ಟುನಿಟ್ಟಾಗಿ ಅನುಷ್ಠಾನಗೊಂಡರೆ ನಾಲೆಯ (ಕಾಲುವೆ) ನೀರಿನಿಂದ ನಿಷೇಧಿತ ಕಬ್ಬು, ಬಾಳೆ, ಭತ್ತ ಮತ್ತಿತರ ಅಧಿಕ ನೀರಿನ ಬೆಳೆ ಬೆಳೆಯುವುದನ್ನು ಕಡ್ಡಾಯವಾಗಿ ನಿಷೇಧಿಸಬೇಕಾಗುತ್ತದೆ.

‘ಜೂನ್1 ರಿಂದ ಮುಂದಿನ ವರ್ಷದ ಮೇ 31ರ ವರೆಗೆ ಒಂದು ನೀರಾವರಿ ವರ್ಷ ಎಂದು ಪರಿಗಣಿಸಲಾಗುತ್ತಿದೆ. ಜಲಾಶಯದಲ್ಲಿ ಒಂದು ವರ್ಷದಲ್ಲಿ ಬಾಕಿ ಉಳಿಯುವ ನೀರನ್ನು ಮುಂದಿನ ವರ್ಷ ಉಪಯೋಗಕ್ಕಾಗಿ ಅದನ್ನು ಇಟ್ಟುಕೊಳ್ಳಲು ಬಚಾವತ್ ಐತೀರ್ಪಿನಲ್ಲಿ ಅವಕಾಶ ಇತ್ತು. ಆದರೆ, ಈ ನ್ಯಾಯಮಂಡಳಿ ಒಂದು ವರ್ಷದಲ್ಲಿ ಲಭ್ಯವಿರುವ ಎಲ್ಲ ನೀರನ್ನು ಅದೇ ವರ್ಷ ಮೂರೂ ರಾಜ್ಯಗಳು ಒಟ್ಟಾಗಿ ಉಪಯೋಗಿಸಬೇಕು ಎಂದಿದೆ.ಮಳೆ ಹೆಚ್ಚಾದ ವರ್ಷಗಳಲ್ಲಿ ನಾವು ನಮ್ಮ ಜಲಾಶಯಗಳಲ್ಲಿ ನೀರು ಉಳಿಸಿಕೊಂಡು ಅದನ್ನು ಮುಂದಿನ ವರ್ಷ ಬಳಸಲೂ ಅವಕಾಶ ಇಲ್ಲ. ನಮಗೆ ನಿಗದಿಪಡಿಸಿದ ನೀರನ್ನು ಬಳಸಿದ ನಂತರ ಉಳಿಯುವ ಎಲ್ಲ ನೀರನ್ನೂ ಅದೇ ವರ್ಷ ಆಂಧ್ರ ಪ್ರದೇಶಕ್ಕೆ ಬಿಡಲೇಬೇಕಾಗುತ್ತದೆ’ ಎಂದು ಹೇಳುತ್ತಾರೆ.

‘ಜಲಾಶಯದಲ್ಲಿ ನಿಲ್ಲಿಸುವ ನೀರು ಆವಿಯಾದರೆ ಅದನ್ನೂ ಬಳಕೆ ಎಂದೇ ಪರಿಗಣಿಸುತ್ತಿರುವುದು ಮತ್ತೊಂದು ಆಘಾತ. ಆಲಮಟ್ಟಿಯಲ್ಲಿ ಈಗಿರುವ 519.6 ಮೀಟರ್ ಎತ್ತರದವರೆಗೆ ನೀರು ನಿಲ್ಲಿಸಿದರೆ ಪ್ರತಿ ವರ್ಷ 10 ಟಿಎಂಸಿ ಅಡಿ ನೀರು ಆವಿಯಾಗುತ್ತಿದೆ ಎಂದು ರಾಜ್ಯ ಸರ್ಕಾರವೇ ಅಂದಾಜು ಮಾಡಿದೆ. ಜಲಾಶಯದ ಎತ್ತರವನ್ನು ಹೆಚ್ಚಿಸಿದರೆ ಹಿನ್ನೀರು ಮತ್ತಷ್ಟು ವ್ಯಾಪಿಸುವುದರಿಂದ ಒಂದು ವರ್ಷದಲ್ಲಿ ಒಟ್ಟಾರೆ ಅಂದಾಜು 15 ಟಿಎಂಸಿ ಅಡಿ ನೀರು ಆವಿಯಾಗಲಿದೆ. ಅಷ್ಟೊಂದು ಪ್ರಮಾಣದ ನೀರು ನಮ್ಮ ಬಳಕೆಗೆ ಇಲ್ಲವಾಗುತ್ತದೆ. ಇದರಿಂದ ನೀರಾವರಿ ಕ್ಷೇತ್ರವೂ ಕಡಿಮೆಯಾಗಲಿದೆ’ ಎಂದು ನೀರಾವರಿ ಎಂಜಿನಿಯರರು, ಪರಿಣತರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
‘ಜಲಾಶಯದ ಎತ್ತರ ಹೆಚ್ಚಳದಿಂದ ಸುಮಾರು ಒಂದು ಲಕ್ಷ ಎಕರೆ ಫಲವತ್ತಾದ ಭೂಮಿ ಹಾಗೂ ಬಾಗಲಕೋಟೆ ನಗರದ ಬಹುಭಾಗ, 22 ಗ್ರಾಮಗಳು ಮುಳುಗಡೆಯಾಗಲಿವೆ. ನಮ್ಮ ತ್ಯಾಗದ ಫಲ ನಮ್ಮವರಿಗೇ ದೊರೆಯಬೇಕು. ಆಲಮಟ್ಟಿ ಜಲಾಶಯದಿಂದ ಪ್ರತಿ ವರ್ಷ ಕನಿಷ್ಠ 303 ಟಿಎಂಸಿ ಅಡಿ ನೀರಿನ ಬಳಕೆಗೆ ನಮಗೆ ಅವಕಾಶ ಇರಬೇಕು. ಹಾಗಂತ ರಾಜ್ಯ ಸರ್ಕಾರ ನ್ಯಾಯ ಮಂಡಳಿಗೆ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಿ ನ್ಯಾಯ ಪಡೆಯಬೇಕು’ ಎಂಬುದು ರೈತರ ಹಕ್ಕೊತ್ತಾಯ.

ತೀರ್ಪು ಅನುಷ್ಠಾನ ಸಮಿತಿ
ಎರಡನೆಯ ನ್ಯಾಯಮಂಡಳಿಯ ತೀರ್ಪಿನ ಪ್ರಕಾರ ‘ಕೃಷ್ಣಾ ನೀರು ನಿರ್ವಹಣೆ ಅಥವಾ ತೀರ್ಪು ಅನುಷ್ಠಾನ ಸಮಿತಿ’ ರಚನೆಯಾಗಿದೆ. ಕೃಷ್ಣಾ ಕಣಿವೆ ಪ್ರದೇಶದ ಮಹಾರಾಷ್ಟ್ರ, ಕರ್ನಾಟಕ ಮತ್ತು ಆಂಧ್ರಪ್ರದೇಶ ಸರ್ಕಾರಗಳು ನೇಮಿಸುವ ತಲಾ ಒಬ್ಬ ಸದಸ್ಯರು ಹಾಗೂ ಕೇಂದ್ರ ಸರ್ಕಾರ ನೇಮಿಸುವ ಇಬ್ಬರು ಸದಸ್ಯರು ಈ ಸಮಿತಿಯಲ್ಲಿರುತ್ತಾರೆ.

ಕೃಷ್ಣಾ ಕಣಿವೆ ನದಿಗಳ ನೀರಿನ ಪ್ರಮಾಣ, ಮೂರು ರಾಜ್ಯಗಳ ನೀರು ಬಳಕೆಯ ಪ್ರಮಾಣದ ಮೇಲೆ ಈ ಸಮಿತಿ ನಿಗಾ ವಹಿಸಲಿದೆ. ಆಯಾ ವರ್ಷದ ನೀರಿನ ಲಭ್ಯತೆ ಪರಿಗಣಿಸಿ ಯಾವ ರಾಜ್ಯಗಳು ಎಷ್ಟು ನೀರನ್ನು ಬಳಸಬೇಕು ಎಂಬುದನ್ನು ನಿರ್ಧರಿಸುವುದೂ ಸೇರಿದಂತೆ ಹಲವು ಅಧಿಕಾರ ಈ ಸಮಿತಿಗೆ ಇದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT