ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಲಮಟ್ಟಿ: ವಿದ್ಯುತ್ ಉತ್ಪಾದನೆ ಕುಸಿತ

Last Updated 5 ಏಪ್ರಿಲ್ 2013, 5:15 IST
ಅಕ್ಷರ ಗಾತ್ರ

ಆಲಮಟ್ಟಿ: ಕಳೆದ ವರ್ಷ ಮುಂಗಾರು ಮತ್ತು ಹಿಂಗಾರು ಮಳೆ ಕೈಕೊಟ್ಟ ಕಾರಣ ಆಲಮಟ್ಟಿ ಜಲಾಶಯದಿಂದ ಬಿಡುವ ನೀರಿನ ಪ್ರಮಾಣ ತಗ್ಗಿದೆ. ಇದರಿಂದಾಗಿ ಇದೇ ಮೊದಲ ಬಾರಿಗೆ  ಆಲಮಟ್ಟಿ ವಿದ್ಯುತ್ ಉತ್ಪಾದನಾ ಕೇಂದ್ರದಲ್ಲಿ  ವಿದ್ಯುತ್ ಉತ್ಪಾದನೆ ಪ್ರಮಾಣವೂ ಕುಸಿತ ಕಂಡಿದೆ.

ಆಲಮಟ್ಟಿ ಜಲಾಶಯದಿಂದ ನೀರು ಬಿಡುಗಡೆಯಾಗುವ ಆಧಾರದ ಮೇಲೆ ಇಲ್ಲಿ ವಿದ್ಯುತ್ ಉತ್ಪಾದನೆಯಾಗುತ್ತದೆ. ಮಾರ್ಚ್ ಅಂತ್ಯಕ್ಕೆ 2012-13 ನೇ ಆರ್ಥಿಕ ಸಾಲಿನಲ್ಲಿ ಒಟ್ಟು 418 ದಶಲಕ್ಷ ಯೂನಿಟ್ ವಿದ್ಯುತ್ ಉತ್ಪಾದನೆಯಾಗಿದೆ. ಈ ಕೇಂದ್ರಕ್ಕೆ ಈ ಬಾರಿ 560 ದಶಲಕ್ಷ ಯೂನಿಟ್ ಉತ್ಪಾದನೆಯ ಗುರಿ ನೀಡಲಾಗಿತ್ತು.

`ಮಳೆಯ  ಪ್ರಮಾಣ ಕಡಿಮೆಯಾದ ಕಾರಣ ಗುರಿ ಸಾಧಿಸಲು ಸಾಧ್ಯವಾಗಿಲ್ಲ. 2005 ರಿಂದ ಇಲ್ಲಿ ಪೂರ್ಣ ಪ್ರಮಾಣದ ವಿದ್ಯುತ್ ಉತ್ಪಾದನೆ ಆರಂಭಗೊಂಡರೂ ಇದೇ ಮೊದಲ ಬಾರಿಗೆ ವಿದ್ಯುತ್ ಉತ್ಪಾದನೆಯಲ್ಲಿ ಕುಸಿತ ಉಂಟಾಗಿದೆ' ಎನ್ನುತ್ತಾರೆ ಆಲಮಟ್ಟಿ ವಿದ್ಯುತ್ ಉತ್ಪಾದನಾ ಕೇಂದ್ರದ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಬಿ. ಬಿಸ್ಲಾಪುರ.

ಆಲಮಟ್ಟಿ ಜಲವಿದ್ಯುತ್ ಘಟಕದಿಂದ 2007-08ರಲ್ಲಿ ಅತಿ ಹೆಚ್ಚು 664 ದಶಲಕ್ಷ ಯೂನಿಟ್ ವಿದ್ಯುತ್ ಉತ್ಪಾದನೆಗೊಂಡಿತ್ತು. ಇದು ಆಲಮಟ್ಟಿ ವಿದ್ಯುತ್ ಉತ್ಪಾದನಾ ಘಟಕ ಪ್ರಾರಂಭ ಆದಾಗಿನಿಂದ ಆಗಿರುವ ಅತಿ ಹೆಚ್ಚು ವಿದ್ಯುತ್ ಉತ್ಪಾದನೆ.

2008-09ರಲ್ಲೂ ವಿದ್ಯುತ್ ಉತ್ಪಾದನೆ ಕುಸಿತಗೊಂಡಿತ್ತು. ಆಗ 435 ದಶಲಕ್ಷ ಯೂನಿಟ್ ವಿದ್ಯುತ್ ಉತ್ಪಾದನೆಯಾಗಿದೆ. 2009-10ರಲ್ಲಿ 531 ದಶಲಕ್ಷ ಯೂನಿಟ್, 2010-11ರಲ್ಲಿ 534 ದಶಲಕ್ಷ ಯೂನಿಟ್, 2011-12 ರಲ್ಲಿ 516 ದಶಲಕ್ಷ ಯೂನಿಟ್ ವಿದ್ಯುತ್ ಉತ್ಪಾದನೆಯಾಗಿದ್ದರೂ,  ಈ ಬಾರಿ ಮಾತ್ರ 560 ದಶಲಕ್ಷ ಯೂನಿಟ್ ಉತ್ಪಾದನೆಯ ಗುರಿ ನೀಡಿದ್ದರೂ ಕೇವಲ 418 ದಶಲಕ್ಷ ಯೂನಿಟ್ ವಿದ್ಯುತ್ ಉತ್ಪಾದನೆಗೊಂಡಿದೆ.

ಪ್ರತಿ ವರ್ಷ ಮಾರ್ಚ್ ಅಂತ್ಯಕ್ಕೆ ಜಲಾಶಯದಿಂದ ನೀರು ಬಿಡುಗಡೆ ಬಂದ್ ಆಗುವುದರಿಂದ ಅಲ್ಲಿಂದಲೇ ವಿದ್ಯುತ್ ಉತ್ಪಾದನೆ ಬಂದಾಗಿ, ಜುಲೈನಲ್ಲಿ ನೀರು ಬಿಡುಗಡೆಯಾದಾಗ ವಿದ್ಯುತ್ ಉತ್ಪಾದನೆ ಪ್ರಾರಂಭಗೊಳ್ಳುತ್ತದೆ.

`ಕಳೆದ ವರ್ಷ ಜುಲೈ 1ರಿಂದಲೇ ವಿದ್ಯುತ್ ಉತ್ಪಾದನೆ ಆರಂಭಗೊಂಡಿತ್ತು. ಆದರೆ 2013ರ ಫೆಬ್ರುವರಿ 25ಕ್ಕೆ ನೀರು ಬಿಡುವ ಪ್ರಕ್ರಿಯೆ ನಿಂತಾಗ ವಿದ್ಯುತ್ ಉತ್ಪಾದನೆಯೂ ಸ್ಥಗಿತ ಗೊಂಡಿತ್ತು. ಸದ್ಯ ಆಲಮಟ್ಟಿ ಜಲಾಶಯದಿಂದ ಪ್ರತಿನಿತ್ಯ ಕುಡಿಯುವ ನೀರಿಗಾಗಿ ವಿದ್ಯುತ್ ಉತ್ಪಾದನಾ ಘಟಕದಿಂದ 1500 ಕ್ಯುಸೆಕ್ ನೀರನ್ನು ಮೂರು ಗಂಟೆಗಳ ಕಾಲ  ಬಿಡಲಾಗುತ್ತಿದ್ದು, ಇದೂ ವಿದ್ಯುತ್ ಉತ್ಪಾದನೆ ತಗ್ಗಲು ಕಾರಣವಾಗಿದೆ. ಇದರಿಂದಾಗಿ ಪ್ರತಿನಿತ್ಯ ಕೇವಲ ಆರು ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಯಾಗುತ್ತಿದೆ' ಎಂದು ಬಿಸ್ಲಾಪುರ ತಿಳಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT