ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಲಹಳ್ಳಿ ಕೆರೆಯಲ್ಲಿ ಮತ್ತೆ ಶ್ರಮದಾನ

Last Updated 15 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: ಆಲಹಳ್ಳಿ ಕೆರೆ ಮತ್ತು ಸುತ್ತಲಿನ ಪ್ರದೇಶ ಅಭಿವೃದ್ಧಿ ಟ್ರಸ್ಟ್ ವತಿಯಿಂದ ಭಾನುವಾರ ಮತ್ತೆ ಕೆರೆ ಸ್ವಚ್ಛತಾ ಆಂದೋಲನ ನಡೆಯಿತು. ಕೆರೆ ಸುತ್ತಲಿನ ಸುಮಾರು ನೂರಕ್ಕೂ ಅಧಿಕ ನಿವಾಸಿಗಳು ಬೆಳಗಿನಿಂದ ಮಧ್ಯಾಹ್ನ­ದವರೆಗೆ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡರು.

ಆಂದೋಲನದಲ್ಲಿ ಪಾಲ್ಗೊಂಡಿದ್ದ ಸಿಟಿಜನ್‌ ಆಕ್ಷನ್‌ ಫೋರಂ ಅಧ್ಯಕ್ಷ ಎನ್‌.­ಎಸ್‌. ಮುಕುಂದ್‌, ಕೆರೆಗಳ ಪುನರು­ಜ್ಜೀವನದ ಅಗತ್ಯವನ್ನು ಸ್ವಯಂಸೇವಕ­ರಿಗೆ ಮನದಟ್ಟು ಮಾಡಿಕೊಟ್ಟರು. ಕೆರೆ­ಗಳ ಮಧ್ಯೆ ಸಂಪರ್ಕ ಕಲ್ಪಿಸಿ, ಎಲ್ಲ ಕೆರೆ­ಗಳೂ ಶುದ್ಧ ನೀರಿನಿಂದ ತುಂಬಿರುವಂತೆ ನೋಡಿಕೊಳ್ಳಬೇಕಿದೆ ಎಂದು ತಿಳಿಸಿದರು.

ನಗರ ವಿಷಯಗಳ ತಜ್ಞ ಡಾ. ಅಶ್ವಿನ್‌ ಮಹೇಶ್‌ ಸಹ ಭಾಗವಹಿಸಿದ್ದರು. ಕೆರೆ ಸುತ್ತಲೂ ಸ್ವಚ್ಛತಾ ಕಾರ್ಯದಲ್ಲಿ ನಿರತ­ರಾಗಿದ್ದ ಸ್ವಯಂಸೇವಕರ ಜೊತೆ ಚರ್ಚೆ ನಡೆಸಿ, ಅಲ್ಲಿನ ಸಮಸ್ಯೆಗಳಿಗೆ ಕೆಲವು ಪರಿಹಾರ ಸೂಚಿಸಿದರು. ಮಾರತ್‌ಹಳ್ಳಿ­ಯಿಂದ ‘ಸೇವೆಗಾಗಿ ಯುವಕರು’ ಸಂಘಟನೆ ಸದಸ್ಯರು, ಗುರುಕುಲ ಶಾಲೆ ಮತ್ತು ಸರ್ಕಾರಿ ಉರ್ದು ಶಾಲೆ ಶಿಕ್ಷಕರು ಆಂದೋಲನದಲ್ಲಿ ಪಾಲ್ಗೊಂಡಿದ್ದರು.

ಕಲಾವಿದ ಜಾನ್ ದೇವರಾಜ್‌ ಅವರ ‘ಬಾರ್ನ್‌ ಫ್ರೀ ಆರ್ಟ್‌’ ಕಲಾಶಾಲೆಯ ವಿದ್ಯಾರ್ಥಿಗಳು ಬಂದಿದ್ದರು. ಆ ಶಾಲೆಯ ಜಪಾನಿ ವಿದ್ಯಾರ್ಥಿಗಳು ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಸ್ವಯಂಸೇವಕರಲ್ಲಿ ಉತ್ಸಾಹ ತುಂಬಲು ‘ಬಾರ್ನ್‌ ಫ್ರೀ ಆರ್ಟ್‌’ ಕಲಾಶಾಲೆಯ ವಿದ್ಯಾರ್ಥಿಗಳು ಸಂಗೀತ ಮತ್ತು ನೃತ್ಯ ಪ್ರದರ್ಶನವನ್ನೂ ನೀಡಿದರು.

ಪಾದಚಾರಿ ಮಾರ್ಗದ ಸುತ್ತ ಬೆಳೆದಿದ್ದ ಗಿಡ–ಕಂಟಿ ಸ್ವಚ್ಛಗೊಳಿಸಿದ ತಂಡ, ಕೆರೆ ಅಂಗಳದಲ್ಲಿ ಎಸೆಯಲಾಗಿದ್ದ ತ್ಯಾಜ್ಯವನ್ನೂ ತೆಗೆದುಹಾಕಿತು. ಆಲಹಳ್ಳಿ, ಅಂಜನಾಪುರ, ನಂದಿ ಗಾರ್ಡನ್‌ ಮತ್ತು ರಾಯಲ್‌ ಪಾರ್ಕ್‌ ರೆಸಿಡೆನ್ಸಿ ಪ್ರದೇಶಗಳ ನಿವಾಸಿಗಳು ಶ್ರಮದಾನದಲ್ಲಿ ಪಾಲ್ಗೊಂಡಿದ್ದರು.

‘ಕೆರೆಯ ಪುನರುಜ್ಜೀವನ ಕಾರ್ಯ ಯಶಸ್ವಿಯಾಗುವ ತನಕ ಪ್ರತಿ ಭಾನುವಾರ ಶ್ರಮದಾನ ಮಾಡುತ್ತೇವೆ’ ಎಂದು ಸ್ವಯಂಸೇವಕರು ಘೋಷಿಸಿದರು. ಟ್ರಸ್ಟ್‌ನ ಆನಂದ ಯಾದವಾಡ, ವೀನುತಾ ರೆಡ್ಡಿ, ಸುರೇಶಕೃಷ್ಣ, ಚಿದಂಬರಂ ಮತ್ತು ಶ್ರೀನಿವಾಸ್‌ (ಚಂದ್ರಣ್ಣ) ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT