ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಲೆಮನೆ ಹಬ್ಬದಲ್ಲಿ ಜೋನಿ ಬೆಲ್ಲದ ಸುವಾಸನೆ

Last Updated 11 ಜನವರಿ 2014, 6:21 IST
ಅಕ್ಷರ ಗಾತ್ರ

ಶಿರಸಿ: ಮುಸ್ಸಂಜೆಯ ಚುಮು ಚುಮು ಚಳಿಯಲ್ಲಿ ತಣ್ಣನೆ ಕಬ್ಬಿನ ಹಾಲು ಕುಡಿಯುವ, ಬಿಸಿಬಿಸಿ ಜೋನಿ ಬೆಲ್ಲ, ಗರಿಗರಿ ಮಂಡಕ್ಕಿ ಮೆಲ್ಲುವ, ಎತ್ತು ಸುತ್ತುವ ಗಾಣ ನೋಡುವ ವಿಭಿನ್ನ ಅನುಭವ ತಾಲ್ಲೂಕಿನ ಇಸಳೂರು ಸಮೀಪ ಮಾವಿನಕೊಪ್ಪದಲ್ಲಿ ಕಾಣಸಿಗುತ್ತಿದೆ.

ಮಲೆನಾಡಿನ ಹಳ್ಳಿಗರ ಊರ ಹಬ್ಬ ಆಲೆಮನೆಗೆ ಕೃಷಿ ಪ್ರವಾಸೋದ್ಯಮದ ಹೊಳಹು ನೀಡುವ ಪ್ರಯತ್ನವಾಗಿ ಹಮ್ಮಿಕೊಂಡಿರುವ ನಾಲ್ಕು ದಿನಗಳ ಆಲೆಮನೆ ಹಬ್ಬಕ್ಕೆ ಶುಕ್ರವಾರ ಚಾಲನೆ ದೊರೆತಿದೆ. ಪೇಟೆಯ ತಿನಿಸು ಕೈಬಿಟ್ಟು ಹಳ್ಳಿಯ ಹೆಂಗಸರು ಮನೆಯಲ್ಲಿ ಸಿದ್ಧಪಡಿಸಿದ ಸ್ವಾದಿಷ್ಟ ತಿನಿಸುಗಳ ಜೊತೆ ಕಬ್ಬಿನ ಹಾಲು ಸವಿಯುವ, ಗ್ರಾಮೀಣ ಪರಿಸರದಲ್ಲಿ ಕಾಲಕಳೆಯುವ ಅವಕಾಶ ಇದಾಗಿದೆ.

‘ಗಾಣದಲ್ಲಿ ಹಾಲು ಹೀರಿ ಬೀಸಾ­ಡುವ ಕಬ್ಬಿನ ಸಿಪ್ಪೆಯನ್ನು ಕಟ್ಟಿಗೆಗೆ ಪರ್ಯಾಯವಾಗಿ ಬಳಸಿಕೊಳ್ಳುವು­ದರಿಂದ ಒಂದು ಕೊಪ್ಪರಿಗೆ ಹಾಲನ್ನು ಬೆಲ್ಲವಾಗಿ ಪರಿವರ್ತಿಸಲು ಬೇಕಾಗುವ ಸುಮಾರು 2 ಕ್ವಿಂಟಾಲ್‌ ಕಟ್ಟಿಗೆ ಉಳಿತಾಯವಾಗುತ್ತದೆ. ಕೇವಲ ಕಬ್ಬಿನ ಸಿಪ್ಪೆಯ ಬೆಂಕಿಯಿಂದ ಒಂದೂವರೆ ತಾಸಿನಲ್ಲಿ ಬೆಲ್ಲ ಸಿದ್ಧವಾಗುತ್ತದೆ’ ಎನ್ನುತ್ತಾರೆ ಆಲೆಮನೆ ಹಬ್ಬದ ಸಂಘಟಕ ಮಂಜುನಾಥ ಹೆಗಡೆ.

ಆಲೆಮನೆ ಹಬ್ಬವನ್ನು ವೃಕ್ಷಲಕ್ಷ ಆಂದೋಲನದ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಗಾಣಕ್ಕೆ ಕಬ್ಬು ಹಾಕುವ ಮೂಲಕ ಉದ್ಘಾಟಿಸಿದರು. ‘ಶಿವಮೊಗ್ಗ ಜಿಲ್ಲೆಯ ಬಾಣಿಗಾದಲ್ಲಿ ಕಟ್ಟಿಗೆ ರಹಿತ ಆಲೆಮನೆ ಸತತ ನಾಲ್ಕು ತಿಂಗಳು ನಡೆದಿದ್ದು, 3 ಸಾವಿರ ಡಬ್ಬಿ ಬೆಲ್ಲ ತಯಾರಿಸಲಾಗಿದೆ. ಇದರಿಂದ ಸಾವಿರಾರು ಟನ್‌ ಕಟ್ಟಿಗೆ ಉಳಿತಾಯವಾಗಿದೆ. ಒಂದು ತಿಂಗಳ ಆಲೆಮನೆಗೆ ಸುಮಾರು 250 ಮರಗಳು ಬೇಕು. ಕಟ್ಟಿಗೆ ರಹಿತ ಆಲೆಮನೆ ಪ್ರಚಾರ ವ್ಯಾಪಕವಾದರೆ ಕಾಡು ಸಂರಕ್ಷಣೆಯಾಗುತ್ತದೆ’ ಎಂದರು.

ಕಬ್ಬಿನ ಹಾಲಿನಿಂದ ಸಿದ್ಧಪಡಿಸಿದ ತಿನಿಸುಗಳ ಪ್ರದರ್ಶನದಲ್ಲಿ ಅನಸೂಯಾ ಹೆಗಡೆ, ಅಶ್ವಿನಿ ಹೆಗಡೆ, ರೇಖಾ ಹೆಗಡೆ ಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ಪಡೆದರು.

ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಗುರುಪಾದ ಹೆಗಡೆ, ಜಿಲ್ಲಾ ಪಂಚಾಯ್ತಿ ಸದಸ್ಯೆ ಉಷಾ ಹೆಗಡೆ, ಕೆನರಾ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಎನ್‌.ಎಲ್‌.ಶಾಂತಕುಮಾರ್‌, ಉಪವಿಭಾಗಾಧಿಕಾರಿ ಕೆ.ರಾಜು ಮೊಗವೀರ, ತೋಟಗಾರಿಕಾ ಕಾಲೇಜಿನ ಡೀನ್‌ ಎನ್‌.ಬಸವರಾಜ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಶಿವಕುಮಾರ್ ಮಲ್ಲಾಡದ, ಕದಂಬ ಮಾರ್ಕೆಟಿಂಗ್‌ ಅಧ್ಯಕ್ಷ ಶಂಭುಲಿಂಗ ಹೆಗಡೆ ಉಪಸ್ಥಿತರಿದ್ದರು. ಮಂಜುನಾಥ ಹೆಗಡೆ ಸ್ವಾಗತಿಸಿದರು. ವಿಶ್ವೇಶ್ವರ ಭಟ್ಟ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT