ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಲೆಮನೆಗೆ ಕಬ್ಬು: ರೈತರಿಗೆ ಲಾಭ

Last Updated 1 ಡಿಸೆಂಬರ್ 2012, 20:44 IST
ಅಕ್ಷರ ಗಾತ್ರ

ಚಿಕ್ಕೋಡಿ: ಬೆಳಗಾವಿ ಜಿಲ್ಲೆಯಲ್ಲಿ ಪ್ರಸಕ್ತ ವರ್ಷ ಕಬ್ಬು ಬೆಳೆ ಗಣನೀಯವಾಗಿ ಕುಸಿದಿದೆ. ಲಭ್ಯವಿರುವ ಕಬ್ಬನ್ನು ರೈತರಿಂದ ಪಡೆಯಲು ಸಕ್ಕರೆ ಕಾರ್ಖಾನೆಗಳು ಪರದಾಡುತ್ತಿದ್ದರೆ ತಾಲ್ಲೂಕಿನಲ್ಲಿರುವ ಆಲೆಮನೆಗಳಿಗೆ ಮಾತ್ರ ಕಬ್ಬಿನ ಕೊರತೆ ಕಾಡದೆ ಬೆಲ್ಲದ ತಯಾರಿಕೆ ಭರದಿಂದ ಸಾಗಿದೆ.

ಇದಕ್ಕೆ ಮುಖ್ಯ ಕಾರಣವೆಂದರೆ ಸಕ್ಕರೆ ಕಾರ್ಖಾನೆಗಳು ಕಬ್ಬಿಗೆ ನೀಡುವ ದರಕ್ಕಿಂತ ಹೆಚ್ಚಿನ ಹಣವನ್ನು  ಆಲೆಮನೆ ಮಾಲೀಕರು ನೀಡುತ್ತಿರುವುದು. ಮಾರುಕಟ್ಟೆಯಲ್ಲಿ ಬೆಲ್ಲಕ್ಕೆ ಒಳ್ಳೆಯ ಧಾರಣೆ ಇದೆ. ಜತೆಗೆ ಬೇಡಿಕೆಯೂ ಹೆಚ್ಚಾಗಿದೆ. ಹಾಗಾಗಿ ಆಲೆಮನೆಗಳ ಮಾಲೀಕರು ಟನ್ ಕಬ್ಬಿಗೆ 2,600 ರಿಂದ 2,700 ರೂಪಾಯಿ ನೀಡುತ್ತಿರುವುದರಿಂದ ರೈತರು ಅತ್ತ ಮುಖ ಮಾಡಿದ್ದಾರೆ..

`ಸಕ್ಕರೆ ಕಾರ್ಖಾನೆಗಳು ಪ್ರಸಕ್ತ ವರ್ಷ ಟನ್‌ಗೆ 2,300 ರಿಂದ 2,400 ರೂಪಾಯಿವರೆಗೆ ನೀಡುತ್ತಿವೆ. ನಾವು ಇದಕ್ಕಿಂತ ಸುಮಾರು 300 ರೂಪಾಯಿ ಹೆಚ್ಚು ನೀಡುತ್ತಿದ್ದೇವೆ. ಜತೆಗೆ ಕಟಾವು ಮತ್ತು ಸಾರಿಗೆ ವೆಚ್ಚವನ್ನೂ  ಭರಿಸುತ್ತೇವೆ. ಹೀಗಾಗಿ ರೈತರಿಗೆ ಹೆಚ್ಚು ಹಣ ಸಿಗುತ್ತದೆ~ ಎನ್ನುತ್ತಾರೆ ತಾಲ್ಲೂಕಿನ ಕಾಡಾಪುರ ಗ್ರಾಮದ ಆಲೆಮನೆಯ ಮಾಲೀಕ ಶಿವಾಜಿ ಮಾರುತಿ ಶಿಂಧೆ.

`ಕಬ್ಬು ಉತ್ಪಾದನೆ ವೆಚ್ಚ ಹೆಚ್ಚಿದೆ. ಕೃಷಿ ಉತ್ಪನ್ನಕ್ಕೆ ಒಳ್ಳೆ ಬೆಲೆ ಬಂದಾಗ ಮಾತ್ರ ರೈತನ ನಷ್ಟ ತಪ್ಪುತ್ತದೆ.  ಟನ್‌ಗೆ 2,700 ರೂಪಾಯಿ ನೀಡಿ ಕಬ್ಬು ಖರೀದಿಸಿದರೂ ಆಲೆಮನೆಗಳ ಮಾಲೀಕರಿಗೆ ಲಾಭವಾಗುತ್ತದೆ. ಅದೇ ದರವನ್ನು ನೀಡಲು ಸಕ್ಕರೆ ಕಾರ್ಖಾನೆಗಳಿಗೆ ಏಕೆ ಸಾಧ್ಯವಾಗುವುದಿಲ್ಲ~ ಎಂದು ಅವರು ಪ್ರಶ್ನಿಸುತ್ತಾರೆ.

`ಬೆಲ್ಲ ತಯಾರಿಸುವುದರಿಂದ ಲಾಭ ಆಗುತ್ತೋ ಇಲ್ಲವೋ ಎರಡನೇ ಮಾತು. 20 ಜನರಿಗೆ ಇದರಿಂದ ಕೆಲಸ ಸಿಗುತ್ತದೆ. ಅಲ್ಲದೇ ಕಬ್ಬಿನ ಸಿಪ್ಪೆ ಮತ್ತು ಬೂದಿಯಿಂದ ಗೊಬ್ಬರವೂ ಉತ್ಪಾದನೆಯಾಗುತ್ತದೆ. ಚಿಕ್ಕೋಡಿ ಹಾಗೂ ರಾಯಬಾಗ ತಾಲ್ಲೂಕುಗಳಲ್ಲಿ ಪ್ರತಿವರ್ಷ ಸಕ್ಕರೆ ಕಾರ್ಖಾನೆಗಳಿಗಿಂತ ಹೆಚ್ಚಿನ ದರ ನೀಡಿ ಕಬ್ಬು ಖರೀದಿಸುವುದರಿಂದ ಗಾಣದ ಮನೆಗಳಿಗೆ ಎಂದೂ ಕಬ್ಬಿನ ಕೊರತೆ ಉಂಟಾಗಿಲ್ಲ. ಗಾಣದ ಮನೆಗಳ ಮಾಲೀಕರು ಸಕ್ಕರೆ ಕಾರ್ಖಾನೆಗಳಿಗಿಂತ ಹೆಚ್ಚಿನ ದರ ನೀಡುತ್ತಿರುವುದರಿಂದ ರೈತರು ಧಾರಾಳವಾಗಿ ಕಬ್ಬು ನೀಡುತ್ತಿದ್ದಾರೆ~ ಎನ್ನುತ್ತಾರೆ ಶಿಂಧೆ.

ಆಲೆಮನೆಗಳಲ್ಲಿ ವರ್ಷ ಪೂರ್ತಿ ಬೆಲ್ಲ ತಯಾರಿಸಲಾಗುತ್ತದೆ. ಆದರೆ, ನವೆಂಬರ್‌ನಿಂದ ಮೇವರೆಗೆ ಮಾತ್ರ ಹೆಚ್ಚಿನ ಇಳುವಳಿ ಲಭ್ಯವಾಗುತ್ತದೆ. ಒಂದು ಟನ್ ಕಬ್ಬಿನಿಂದ ಕನಿಷ್ಠ 110 ಕೆಜಿ ಬೆಲ್ಲ ತಯಾರಿಸಬಹುದು. ಜೂನ್‌ನಿಂದ ಅಕ್ಟೋಬರ್‌ವರೆಗೆ ಇಳುವರಿ ಕಡಿಮೆ ಇದ್ದು, ಟನ್‌ಗೆ 90 ರಿಂದ 100 ಕೆಜಿ ಬೆಲ್ಲ  ತಯಾರಾಗುತ್ತದೆ. ಆಲೆಮನೆಯೊಂದರಲ್ಲಿ ದಿನಕ್ಕೆ 8 ರಿಂದ 10 ಕ್ವಿಂಟಾಲ್ ಬೆಲ್ಲ ತಯಾರಿಸಬಹುದಾಗಿದೆ.

ಬೆಲ್ಲ ತಯಾರಿಸಲು ಸ್ಥಳೀಯವಾಗಿಯೇ ಕಾರ್ಮಿಕರು ಸಿಗುತ್ತಾರೆ. ಇಲ್ಲಿ ತಯಾರಾದ ಬೆಲ್ಲಕ್ಕೆ  ಸಾಂಗ್ಲಿ, ಗಡಹಿಂಗ್ಲಜ, ಸಂಕೇಶ್ವರ ಪ್ರಮುಖ ಮಾರುಕಟ್ಟೆಗಳು. ಈಗ ಕ್ವಿಂಟಲ್ ಬೆಲ್ಲದ ಧಾರಣೆ 3,200 ರೂಪಾಯಿ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT