ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಲ್‌ಬಟ್ರಾಸ್- ಸೋಜಿಗ

Last Updated 12 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ

1. ‘ಅಲ್‌ಬಟ್ರಾಸ್’- ಅದೆಂಥ ಹಕ್ಕಿ?
* ಅಲ್‌ಬಟ್ರಾಸ್-ಅದೊಂದು ಕಡಲ ಹಕ್ಕಿ. ಆಹಾರಕ್ಕೆ ಕಡಲನ್ನೂ, ಬದುಕಿಗೆ ಮುಗಿಲನ್ನೂ ಆಶ್ರಯಿಸಿರುವ ಸೋಜಿಗದ ಖಗ ಅದು. ನಿರಂತರವಾಗಿ ಹಗಲೂ ಇರುಳೂ ಕಡಲ ಮೇಲೇ ಹಾರುತ್ತ, ಆಕಾಶದಲ್ಲೇ ತೇಲುತ್ತ, ಇಡೀ ಭೂಮಂಡಲವನ್ನೇ ಸುತ್ತುತ್ತ.... ಹಾಗೆಯೇ ಬೇಟೆಯಾಡಿ, ಊಟಮಾಡಿ, ನಿದ್ರೆಯನ್ನೂ ಮಾಡುವ ಈ ಹಕ್ಕಿ ಎರಡು ವರ್ಷಗಳಿಗೊಮ್ಮೆ ಮಾತ್ರ ಸಂತಾನಾಭಿವೃದ್ಧಿಗೆಂದು ನೆಲ ಮುಟ್ಟುತ್ತದೆ. ಹಾಗೆ ಐವತ್ತು ವರ್ಷಗಳ ಜೀವಿತಾವಧಿಯಲ್ಲಿ ಅರವತ್ತರಿಂದ ಎಪ್ಪತ್ತು ಲಕ್ಷ ಕಿ.ಮೀ. ಆಕಾಶ ಯಾನ ನಡೆಸುವ ಅಸದೃಶ ‘ಜೀವಂತ ವಿಮಾನ’ ಇದು!

2. ಆಲ್‌ಬಟ್ರಾಸ್‌ನ ವೈಶಿಷ್ಟ್ಯ ಏನು?
* ಖಗ ಸಾಮ್ರಾಜ್ಯದಲ್ಲಿ ನಾನಾ ವೈಶಿಷ್ಟ್ಯಗಳ ಹಕ್ಕಿ ವಿಧಗಳು ಬೇಕಾದಷ್ಟಿವೆ. ಅದ್ಭುತ ಮುಳುಗುಗಾರರು (ಚಿತ್ರ-1), ಬಹುದೂರದ ವಲಸೆಗಾರರು (ಚಿತ್ರ-2), ಅತಿ ಸಮರ್ಥ ಬೇಟೆಗಾರರು (ಚಿತ್ರ-3), ಅತಿ ವೇಗದ ಹಾರಾಟಗಾರರು ಅತ್ಯಾಕರ್ಷಕ ಅಲಂಕೃತರು, ಬಹುಕುಶಲ ವಾಸ್ತುಶಿಲ್ಪಿಗಳು ಇತ್ಯಾದಿ. ಹಾಗೆ ಆಲ್‌ಬಟ್ರಾಸ್‌ನ ಪರಮ ವೈಶಿಷ್ಟ್ಯಗಳು ಅದರ ರೆಕ್ಕೆ ವಿಸ್ತಾರ ಮತ್ತು ತೇಲುಸಾಮರ್ಥ.

ಆಲ್‌ಬಟ್ರಾಸ್‌ಗಳಿಗಿರುವಷ್ಟು ರೆಕ್ಕೆ ವಿಸ್ತಾರ ಮತ್ತು ತೇಲು ಸಾಮರ್ಥ್ಯ. ಆಲ್‌ಬಟ್ರಾಸ್‌ಗಳಿಗಿರುವಷ್ಟು ರೆಕ್ಕೆ ವಿಸ್ತಾರ- ಹನ್ನೊಂದೂವರೆಯಿಂದ ಹನ್ನೆರಡು ಅಡಿ (ಚಿತ್ರ 4, 8) ಬೇರಾವ ಹಕ್ಕಿಗೂ ಇಲ್ಲ. ಹಾಗೆಯೇ ಆಲ್‌ಬಟ್ರಾಸ್‌ನಂತೆ ರೆಕ್ಕೆಯನ್ನೇ ಬಡಿಯದೆ ದಿನಗಟ್ಟಳೆ ಕಾಲ ತೇಲಬಲ್ಲ ದಿನ-ರಾತ್ರಿ ನಿರಂತರ ತೇಲುತ್ತಲೇ ಇರಬಲ್ಲ ಹಕ್ಕಿ ಬೇರೊಂದಿಲ್ಲ (ಚಿತ್ರ-7) ವಿಸ್ತಾರ ರೆಕ್ಕೆಗಳನ್ನು ತೆರೆದು ಹಿಡಿದು ಆಗಸದಲ್ಲೂ (ಚಿತ್ರ-6) ಕಡಲ ಮೇಲೂ (ಚಿತ್ರ-5) ಏರುತ್ತ ಇಳಿಯುತ್ತ ತೇಲುತ್ತ ತಾಸಿಗೆ ಒಂದು ನೂರು ಕಿ.ಮೀ. ಅನ್ನೂ ಮೀರುವ ವೇಗದಲ್ಲಿ ದಿನಕ್ಕೆ ಸಾವಿರಾರು ಕಿ.ಮೀ. ಪಯಣಿಸುವ ಆಲ್‌ಬಟ್ರಾಸ್- ಅದೊಂದು ಅನನ್ಯ ಅತ್ಯದ್ಭುತ ಹಕ್ಕಿ.

3. ಆಲ್‌ಬಟ್ರಾಸ್‌ಗಳಲ್ಲಿ ಎಷ್ಟು ಪ್ರಭೇದಗಳಿವೆ?
* ಆಲ್‌ಬಟ್ರಾಸ್‌ಗಳಲ್ಲಿ ಹನ್ನೆರಡು ಪ್ರಭೇದಗಳನ್ನು ಗುರುತಿಸಲಾಗಿದೆ (ಚಿತ್ರ 4 ರಿಂದ 11 ರಲ್ಲಿ ಗಮನಿಸಿ). ಆ ಪೈಕಿ ಮೂರು ಪ್ರಭೇದಗಳು ‘ದಿ ಗ್ರೇಟ್ ಆಲ್‌ಬಟ್ರಾಸಸ್’ ಎಂದೇ ಪ್ರಸಿದ್ಧ. ‘ದಿ ವ್ಯಾಂಡರಿಂಗ್ ಆಲ್‌ಬಟ್ರಾಸ್’, ‘ಆ್ಯಮ್‌ಸ್ಟರ್‌ಡ್ಯಾಂ ಆಲ್‌ಬಟ್ರಾಸ್’ ಮತ್ತು ‘ದಿ ರಾಯಲ್ ಆಲ್‌ಬಟ್ರಾಸ್’ ಎಂಬ ಆ ಮೂರು ಪ್ರಭೇದಗಳೇ ಈ ಹಕ್ಕಿವರ್ಗದ ಹಿರಿಮೆಗಳ ಸಕಲ ದಾಖಲೆಗಳನ್ನೂ ಸೃಷ್ಟಿಸಿವೆ.

4. ಆಲ್‌ಬಟ್ರಾಸ್‌ಗಳ ವಾಸಕ್ಷೇತ್ರ ಯಾವುದು?
* ಆಲ್‌ಬಟ್ರಾಸ್‌ಗಳ ಪ್ರಧಾನ ವಾಸಕ್ಷೇತ್ರ ಆಕಾಶ. ದಕ್ಷಿಣ ಗೋಳಾರ್ಧದ ಕಡಲಿನಾವಾರದ ಮೇಲಿನ ಆಕಾಶದಲ್ಲಿ ಎಂಟು ಪ್ರಭೇದಗಳು, ಉತ್ತರ ಗೋಳಾರ್ಧದಲ್ಲಿ ಮೂರು ಪ್ರಭೇದಗಳು ಮತ್ತು ಸಮಭಾಜಕದ ಆಸುಪಾಸಿನಲ್ಲಿ ಒಂದು ಪ್ರಭೇದ-ಹೀಗೆ ಅವು ನೆಲೆಗೊಂಡಿವೆ. ಸಂತಾನ ಬೆಳೆಸಲು ಮಾತ್ರ ಅದದೇ ಪ್ರದೇಶಗಳ ನಿರ್ದಿಷ್ಟ ಚಿಕ್ಕಪುಟ್ಟ ಏಕಾಂಗಿ ದ್ವೀಪಗಳಲ್ಲಿಳಿಯುತ್ತವೆ. ಅದೆಲ್ಲ ಅಲ್ಪ ಅವಧಿಗೆ ಮಾತ್ರ. ನೆಲದ ಬದುಕು ಆಲ್‌ಬಟ್ರಾಸ್‌ಗಳಿಗೆ ಒಪ್ಪುವುದಿಲ್ಲ. ನೆಲದ ಮೇಲೆ ಸಲೀಸಾಗಿ ನಡೆದಾಡುವುದೂ ಅವಕ್ಕೆ ಸಾಧ್ಯ ಇಲ್ಲ.

5. ಈ ಹಕ್ಕಿಗಳ ಆಹಾರ ಏನು?
* ಆಲ್‌ಬಟ್ರಾಸ್‌ಗಳ ಆಹಾರ ಸಾಗರವಾಸಿ ಮತ್ಸ್ಯಗಳು ಹಾಗೂ ‘ಸ್ಕ್ವಿಡ್’ಗಳಂಥ ಮೃದ್ವಂಗಿಗಳು. ವಿಶೇಷವಾಗಿ ಈ ಹಕ್ಕಿಗಳು ಆಹಾರಕ್ಕಾಗಿ ‘ಸ್ಕ್ವಿಡ್’ಗಳನ್ನೇ (ಅಷ್ಟಪದಿ ಸಂಬಂಧೀ ಪ್ರಾಣಿ) ಅಪೇಕ್ಷಿಸುತ್ತವೆ. ನಿರಂತರ ಹಾರಾಟಕ್ಕೆ ಅವಶ್ಯವಾದ ಸತ್ವಯುತ ‘ಇಂಧನ’ ಪಡೆಯಲು ಈ ಮೃದ್ವಂಗಿಗಳನ್ನೇ ಹುಡುಕುತ್ತವೆ. ಕಡಲ ಮೇಲ್ಮೈ ಸನಿಹದಲ್ಲೇ ಹಾರಾಡುತ್ತ ಸ್ಕ್ವಿಡ್‌ಗಳನ್ನೂ, ಮೀನುಗಳನ್ನೂ ಹಿಡಿದು ನುಂಗುತ್ತವೆ.

6. ಆಲ್‌ಬಟ್ರಾಸ್‌ಗಳ ಸಂತಾನ ವರ್ಧನೆ ಹೇಗೆ?
* ಆಲ್‌ಬಟ್ರಾಸ್‌ಗಳದು ‘ಜೀವನ ಸಂಗಾತಿ’ಗಳಾಗುವ ಕ್ರಮ. ಒಮ್ಮೆ ಜೊತೆಯಾದ ಗಂಡು-ಹೆಣ್ಣು ಪ್ರತಿ ಎರಡು ವರ್ಷಗಳಿಗೊಮ್ಮೆ ಒಮ್ಮೆ ಆರಿಸಿಕೊಂಡ ನಿರ್ದಿಷ್ಟ ದ್ವೀಪಕ್ಕೇ ಬಂದಿಳಿಯುತ್ತವೆ. ಹೀಗೆ ನೂರರಗಟ್ಟಳೆ ಸಾವಿರಗಟ್ಟಳೆ ಸಂಖ್ಯೆಯಲ್ಲಿ ಗುಂಪು ಸೇರುವ ಜೋಡಿಗಳ ಗಂಡುಗಳು ರೆಕ್ಕೆ ಅಗಲಿಸಿ, ಪ್ರಣಯ ನರ್ತನ ನಡೆಸಿ (ಚಿತ್ರ-8) ಹೆಣ್ಣುಗಳ ಮನ ಒಲಿಸಿ ಕೂಡಿದ ನಂತರ ಹೆಣ್ಣು ಹಕ್ಕಿಗಳು ಒಂದೊಂದೇ ಮೊಟ್ಟೆ ಇಡುತ್ತವೆ. ನೆಲದ ಮೇಲೇ ಹುಲ್ಲಿನ ಗುಚ್ಛಗಳ ಮೇಲೆ ಇಡುವ ಮೊಟ್ಟೆಗೆ ಹೆಣ್ಣು-ಗಂಡುಗಳೆರಡೂ ಸರದಿ ಪ್ರಕಾರ ಕಾವು-ಕೊಟ್ಟು ಮರಿ ಮಾಡುತ್ತವೆ. ಮರಿಗೆ ಪುಕ್ಕಗಳು ಬಂದೊಡನೆ ಪೋಷಕ ಹಕ್ಕಿಯೊಂದರ ರಕ್ಷಣೆಯಲ್ಲಿ ಮರಿಯನ್ನು ಇರಿಸಿ ತಂದೆ-ತಾಯಿ ಎರಡೂ ಆಹಾರಾನ್ವೇಷಣೆಗೆ ಹೊರಡುತ್ತವೆ.

ಪ್ರತಿ ಸರದಿಯಲ್ಲೂ ಎರಡು-ಮೂರು ವಾರ ಹಾರಿ, ಹತ್ತಾರು ಸಾವಿರ ಕಿ.ಮೀ. ಪಯಣಿಸಿ, ಆಹಾರ ಸಂಗ್ರಹಿಸಿ, ಭಾಗಶಃ ಜೀರ್ಣಿಸಿ, ‘ಎಣ್ಣೆಯಂಥ ದ್ರವ’ವನ್ನಾಗಿ ಪರಿವರ್ತಿಸಿ ಹೊಟ್ಟೆಯಲ್ಲಿ ಹೊತ್ತು ತಂದು ಆ ಪೋಷಕಾಂಶಭರಿತ ತೈಲವನ್ನು ‘ವಾಹನಕ್ಕೆ ಇಂಧನ ತುಂಬುವಂತೆ’ ಮರಿಯ ಗಂಟಲಿಗೆ ಸುರಿಯುತ್ತವೆ. ಕೆಲ ತಿಂಗಳುಗಳಲ್ಲಿ ಮರಿ ಪ್ರೌಢವಾಗುತ್ತದೆ; ಹಾರಲು ಸಮರ್ಥವಾಗುತ್ತದೆ. ಹಾಗಾದೊಡನೆ ಮರಿಯನ್ನು ತ್ಯಜಿಸಿ ತಂದೆ-ತಾಯಿ ತಂತಮ್ಮ ದಾರಿ ಹಿಡಿಯುತ್ತವೆ. ಮುಂದೆ ಕೆಲ ದಿನಗಳಲ್ಲೇ ಮುಗಿಲಿಗೇರುವ ಮರಿ ಐದು ವರ್ಷ ಕಾಲ ಎಲ್ಲೂ ನೆಲ ಮುಟ್ಟುವುದಿಲ್ಲ. ಆ ನಂತರ-ಸಂತಾನ ಯೋಗ್ಯವಾದ ನಂತರ- ನೆಲಕ್ಕೆ ಇಳಿಯುತ್ತದೆ.

7. ಆಲ್‌ಬಟ್ರಾಸ್‌ಗಳ ಪ್ರಸ್ತುತ ಪರಿಸ್ಥಿತಿ ಹೇಗಿದೆ?
* ಮನುಷ್ಯಭರಿತ ಭೂ ಪರಿಸರದ ಪ್ರಸ್ತುತ ಸ್ಥಿತಿ ಆಲ್‌ಬಟ್ರಾಸ್‌ಗಳಿಗೆ ವಿಹಿತವಾಗಿಲ್ಲ. ಮಾನವ ಮೂಲದ ನಾನಾ ವಿಧ ಪ್ರತ್ಯಕ್ಷ-ಪರೋಕ್ಷ ಉಪದ್ರವಗಳಿಂದ ಆಲ್‌ಬಟ್ರಾಸ್‌ಗಳ ಎಲ್ಲ ಪ್ರಭೇದಗಳೂ ತೊಂದರೆಗೆ ಸಿಲುಕಿವೆ. ಕಡಲಲ್ಲಿನ ತೈಲ ಸೋರಿಕೆಗೆ, ಮೀನುಗಾರ ಹಡಗುಗಳ ಭಾರೀ ಅಗೋಚರ ಬಲೆಗಳಿಗೆ ಸಿಲುಕಿ, ಕಡಲಲ್ಲಿ ತೇಲುವ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಆಹಾರವೆಂದು ನುಂಗಿ ಈ ಹಕ್ಕಿಗಳು ಪ್ರಾಣ ಬಿಡುತ್ತಿವೆ.

ಆಲ್‌ಬಟ್ರಾಸ್‌ಗಳ ಸಂತಾನದ ನೆಲೆಗಳನ್ನು ಆಕ್ರಮಿಸಿರುವ ಮನುಷ್ಯರಿಗೂ ಅವರ ಸಹಚರರಾದ ಇಲಿ, ಬೆಕ್ಕು, ನಾಯಿಗಳ ದಾಳಿಗೂ ಈ ಹಕ್ಕಿಗಳ ಮೊಟ್ಟೆಗಳೂ ಮರಿಗಳೂ ಬಲಿಯಾಗುತ್ತಿವೆ.ಎಂಥ ಹಕ್ಕಿ! ಎಂಥ ಪರಿಸ್ಥಿತಿ!
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT