ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ್ವಾಸ್‌ ವಿಶ್ವ ನುಡಿಸಿರಿ ವಿರಾಸತ್‌ 19ರಿಂದ

Last Updated 11 ಡಿಸೆಂಬರ್ 2013, 6:18 IST
ಅಕ್ಷರ ಗಾತ್ರ

ಬೆಳಗಾವಿ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಆಶ್ರಯದಲ್ಲಿ ಹಂಪಿ ಕನ್ನಡ ವಿಶ್ವವಿ­ದ್ಯಾಲಯದ ವಿಶ್ರಾಂತ ಕುಲಪತಿ ಡಾ. ಬಿ.ಎ. ವಿವೇಕ ರೈ ಸರ್ವಾಧ್ಯಕ್ಷತೆಯಲ್ಲಿ ಆಳ್ವಾಸ್‌ ವಿಶ್ವ ನುಡಿಸಿರಿ ವಿರಾಸತ್‌ 2013 ಡಿಸೆಂಬರ್‌ 19ರಿಂದ 22­ರವರೆಗೆ ಮೂಡುಬಿದಿರೆಯ ವಿದ್ಯಾಗಿರಿಯಲ್ಲಿ ನಡೆಯಲಿದೆ.

‘ಡಿ. 19ರಂದು ಮಧ್ಯಾಹ್ನ 3 ಗಂಟೆಗೆ ಕರ್ನಾಟಕ ಜಾನಪದ ಲೋಕವನ್ನು ಪ್ರತಿ­ನಿಧಿಸುವ ಬೃಹತ್ ಸಾಂಸ್ಕೃತಿಕ ಮೆರ­ವಣಿಗೆ ಮೂಡುಬಿದಿರೆಯಿಂದ ಆರಂಭ­ಗೊಳ್ಳಲಿದೆ. ಸಂಜೆ 6ಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಸಮಾರಂಭವನ್ನು ಉದ್ಘಾಟಿಸಲಿದ್ದಾರೆ. ರಾತ್ರಿ 9ರಿಂದ ಮೂರು ವೇದಿಕೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ’ ಎಂದು ಆಳ್ವಾಸ್‌ ಕಾಲೇಜಿನ ಪ್ರೊ. ಕುರಿಯನ್‌ ಇಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿದರು.

‘ಈ ಬಾರಿ 10ನೇ ವರ್ಷ ನುಡಿಸಿರಿ ಸಾಹಿತ್ಯ ಸಮ್ಮೇಳನ ನಡೆಯುತ್ತಿದೆ. 20ನೇ ವರ್ಷ ವಿರಾಸತ್‌ ಸಾಂಸ್ಕೃತಿಕ ಕಾರ್ಯಕ್ರಮ ನಡೆಯುತ್ತಿದೆ. ಹೀಗಾಗಿ ಇವೆರಡನ್ನೂ ಸೇರಿಸಿ ಆಳ್ವಾಸ್‌ ವಿಶ್ವ ನುಡಿ­ಸಿರಿ ವಿರಾಸತ್‌ ಹಮ್ಮಿಕೊಳ್ಳ­ಲಾಗಿದೆ. ನುಡಿಸಿರಿಯು 4 ವೇದಿಕೆಗಳಲ್ಲಿ ನಡೆಯಲಿದೆ. ವಿರಾಸತ್‌ ಸಾಂಸ್ಕೃತಿಕ ಕಾರ್ಯಕ್ರಮಗಳು 9 ವೇದಿಕೆಗಳಲ್ಲಿ ನಿತ್ಯ ಸಂಜೆ 6.30ರಿಂದ 12.30ರವರೆಗೆ ನಡೆಯಲಿದೆ’ ಎಂದು ತಿಳಿಸಿದರು.

‘ಮೂರು ಸಮಾವೇಶ ಗೋಷ್ಠಿ ನಡೆ­ಯ­ಲಿದೆ. ಡಿ. 20ರಂದು ನಡೆಯಲಿ­ರುವ ಸಾಹಿತ್ಯ ಗೋಷ್ಠಿಯಲ್ಲಿ ಡಾ. ಚಂದ್ರ­ಶೇಖರ ಕಂಬಾರ ಮತ್ತು ಡಾ.ಎಸ್.­ಎಲ್ ಭೈರಪ್ಪ ಪಾಲ್ಗೊಳ್ಳಲಿದ್ದಾರೆ. ಡಿ.21­ರಂದು ನಡೆಯಲಿರುವ ರಾಜ­ಕಾರಣ ಗೋಷ್ಠಿಯಲ್ಲಿ ಎಂ.ಸಿ. ನಾಣಯ್ಯ, ಬಿ. ಸುರೇಶ್ ಕುಮಾರ್ ಮತ್ತು ಬಿ.ಎಲ್. ಶಂಕರ್ ಭಾಗವಹಿಸ­ಲಿದ್ದಾರೆ. 22ರಂದು ನಡೆಯುವ ಮಾಧ್ಯಮ ಗೋಷ್ಠಿಯಲ್ಲಿ ಪ್ರಜಾವಾಣಿ ಕಾರ್ಯ­ನಿರ್ವಾಹಕ ಸಂಪಾದಕ ಪದ್ಮ­ರಾಜ ದಂಡಾವತಿ, ಕನ್ನಡ ಪ್ರಭ ಸಂಪಾ­ದಕ ವಿಶ್ವೇಶ್ವರ ಭಟ್ ಮತ್ತು ನಿರ್ದೇಶಕ ಟಿ.ಎನ್. ಸೀತಾರಾಂ ಭಾಗವಹಿ­ಸಲಿದ್ದಾರೆ’ ಎಂದು ತಿಳಿಸಿದರು.

‘ಡಿ. 20ರಿಂದ 22ರವರೆಗೆ ಸಮಾ­ನಾಂತರ ವೇದಿಕೆಗಳಲ್ಲಿ ಕೃಷಿಸಿರಿ, ಜಾನ­ಪದ ಸಿರಿ ಮತ್ತು ವಿದ್ಯಾರ್ಥಿ ಸಿರಿ ಸಮ್ಮೇಳನಗಳು ನಡೆಯಲಿದೆ. 22ರಂದು ಸಂಜೆ ಕೇಂದ್ರ ಸಚಿವ ಡಾ. ವೀರಪ್ಪ ಮೊಯಿಲಿ ಸಮಾರೋಪ ಭಾಷಣ ಮಾಡಲಿದ್ದಾರೆ’ ಎಂದು ತಿಳಿಸಿದರು. ‘ಸಮ್ಮೇಳನಕ್ಕೆ ಪ್ರತಿ ದಿನ 1.50 ಲಕ್ಷ ಜನರು ಆಗಮಿಸುವ ನಿರೀಕ್ಷೆ ಇದೆ.

50 ಸಾವಿರ ಜನರಿಗೆ ವಸತಿ ಸೌಲಭ್ಯ ಕಲ್ಪಿಸಲಾಗುತ್ತಿದೆ. ಪ್ರತಿ ದಿನ ಒಂದು  ಲಕ್ಷ ಜನರಿಗೆ ಊಟದ ಸೌಲಭ್ಯ ಕಲ್ಪಿಸಲಾಗುತ್ತಿದೆ. 125 ಕೌಂಟರ್‌ಗಳನ್ನು ತೆರೆಯ ಲಾಗುವುದು’ ಎಂದು ತಿಳಿಸಿದರು.  ಆಳ್ವಾಸ್‌ ಕಾಲೇಜಿನ ಪ್ರಾಧ್ಯಾಪಕಿ ಸಂಧ್ಯಾ, ಮಂಜುಶ್ರೀ, ಯತಿರಾಜ್‌ ಶೆಟ್ಟಿ, ವಿಠಲ್‌ ಹೆಗಡೆ, ಶಶಿಧರ ಘಿವಾರಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT