ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆವರಿಸಿದ ಧ್ವನಿ

Last Updated 17 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಸ್ಟಾರ್‌ವಾರ್ ಸಿನಿಮಾ ನೆನಪಿಸಿಕೊಳ್ಳಿ. ಪ್ರಾರಂಭದಲ್ಲಿ ಎಲ್ಲ ನಿಶ್ಶಬ್ದವಾಗಿರುತ್ತದೆ. ಆಗ ಇದ್ದಕ್ಕಿಂದ್ದಂತೆ ನಮ್ಮ ತಲೆಯ ಹಿಂಭಾಗದಲ್ಲಿ ಮೇಲೆ ಗುಂಯ್ ಎನ್ನುವ ಧ್ವನಿ ಕೇಳಿಬರುತ್ತದೆ. ಆ ಧ್ವನಿ ನಮ್ಮ ತಲೆಯ ಮೇಲಕ್ಕೆ ಬರುತ್ತದೆ. ಅದೇ ಸಮಯದಲ್ಲಿ ಪರದೆಯ ಮೇಲೆ ಒಂದು ಉಪಗ್ರಹ ಕಾಣಿಸಿಕೊಳ್ಳುತ್ತದೆ.

ಅದು ಮುಂದಕ್ಕೆ ಚಲಿಸುತ್ತಿರುತ್ತದೆ. ಅದು ಚಲಿಸುತ್ತಿದ್ದಂತೆ ಧ್ವನಿಯೂ ಮುಂದಕ್ಕೆ ಚಲಿಸುತ್ತಿರುತ್ತದೆ. ಕೊನೆಗೆ ಉಪಗ್ರಹ ಚಿಕ್ಕದಾಗಿ ಅಂತರ್ಧಾನವಾಗುತ್ತದೆ. ಉಪಗ್ರಹ ಪರದೆಯ ಮೇಲಿನಿಂದ ಮೊದಲು ದೊಡ್ಡದಾಗಿ ಕಾಣಿಸಿಕೊಂಡದ್ದು ಮುಂದಕ್ಕೆ ಹೋಗುತ್ತ ಚಿಕ್ಕದಾಗುತ್ತಾ ಹೋಗಿ ಕೊನೆಗೆ ಅಂತರ್ಧಾನವಾಗುತ್ತದೆ.

ಅದರಂತೆ ಧ್ವನಿಯೂ ಮೊದಲು ನಮ್ಮ ತಲೆಯ ಮೇಲೆ ಹಿಂಭಾಗದಲ್ಲಿ ಕೇಳಿಸಿಕೊಂಡು ನಂತರ ತಲೆಯ ಮೇಲೆ, ನಂತರ ಮುಂದಕ್ಕೆ ಹೋಗುತ್ತದೆ. ಹಾಗೆ ಧ್ವನಿಯು ಹೋಗುವಾಗ ಅದರ ವಾಲ್ಯೂಮ್ ಕೂಡ ಮೊದಲು ದೊಡ್ಡದಾಗಿದ್ದು ಕೊನೆಗೆ ಚಿಕ್ಕದಾಗುತ್ತದೆ. ಒಟ್ಟಿನಲ್ಲಿ ನಮಗೆ ನಮ್ಮ ತಲೆಯ ಹಿಂಭಾಗದಿಂದ ಒಂದು ಉಪಗ್ರಹ ಮುಂಭಾಗಕ್ಕೆ ಹೋದಂತೆ ಭಾಸವಾಗುತ್ತದೆ.

ಈ ರೀತಿಯ ಅನುಭವ ಮೂಡಿಬರಬೇಕಾದರೆ ಆವರಿಸಿದ ಧ್ವನಿ ಅಥವಾ ಸುತ್ತುವರಿದ ಧ್ವನಿ (surround sound) ಎಂಬ ತಂತ್ರಜ್ಞಾನ ಕೆಲಸ ಮಾಡುತ್ತಿರುತ್ತದೆ.
ಸರೌಂಡ್ ಸೌಂಡ್ ಸಿಸ್ಟಮ್‌ಗಳಲ್ಲಿ 5.1 ಹೆಚ್ಚು ಪ್ರಚಲಿತವಾಗಿರುವುದು. ಇದರಲ್ಲಿ ಒಟ್ಟು 6 ಸ್ಪೀಕರ್‌ಗಳ ಬಳಕೆಯಾಗುತ್ತದೆ.

ಮುಂಭಾಗದಲ್ಲಿ ಎರಡು, ಹಿಂಭಾಗದಲ್ಲಿ ಎರಡು, ಮುಂಭಾಗದಲ್ಲಿ ಮಧ್ಯದಲ್ಲಿ ಒಂದು ಮತ್ತು ಇನ್ನೊಂದು ಎಲ್ಲಿ ಬೇಕಾದರೂ ಇಡಬಹುದಾದ ಸಬ್‌ವೂಫರ್ ಇರುತ್ತದೆ.

ಈ ತಂತ್ರಜ್ಞಾನ 70ರ ದಶಕದಲ್ಲಿ ಡಾಲ್ಬಿ ಲ್ಯಾಬೊರೇಟರಿಯವರಿಂದ ಆವಿಷ್ಕರಿಸಲ್ಪಟ್ಟಿತು. ಪ್ರಾರಂಭದಲ್ಲಿ ಇದು ಸಿನಿಮಾಗಳಿಗೋಸ್ಕರ ಆವಿಷ್ಕಾರವಾದುದು. ಸಿನಿಮಾ ನೋಡುವಾಗ ಪರದೆಯ ಮೇಲೆ ಮೂಡುವ ಘಟನೆಗಳು ನಿಜವಾಗಿಯೂ ನಡೆಯುತ್ತಿವೆ ಎಂಬ ಭಾವನೆ ಮೂಡಲು ಈ ತಂತ್ರಜ್ಞಾನ ಸಹಾಯಕಾರಿ.
 
ಹಲವು ವರ್ಷಗಳ ನಂತರ ಡಿ.ವಿ.ಡಿ. ತಂತ್ರಜ್ಞಾನ ಬಂದಾಗ ಇದೇ ವಿಧಾನದಲ್ಲಿ ಸಿನಿಮಾಗಳು ಡಿವಿಡಿಯಲ್ಲಿ ಲಭ್ಯವಾಗತೊಡಗಿದವು. ಅವುಗಳನ್ನು ಡಿವಿಡಿ ಪ್ಲೇಯರ್‌ಗಳಲ್ಲಿ ಚಾಲನೆಗೊಳಿಸಿದಾಗ ಸಿನಿಮಾ ಥಿಯೇಟರಿನ ಅನುಭವ ಮನೆಯಲ್ಲೇ ಬರಲು 5.1 ಸ್ಪೀಕರ್ ಸಿಸ್ಟಮ್‌ಗಳು ಸಹಕಾರಿಯಾದವು. ಇಂತಹವುಗಳಿಗೆ ಹೋಮ್ ಥಿಯೇಟರ್ ಎನ್ನುವ ಹೆಸರಿದೆ. 

 ಸಂಪೂರ್ಣ ಸುತ್ತುವರಿದ ಧ್ವನಿಯ ಅನುಭವ ಬರಬೇಕಾದರೆ ಆಲಿಸುವ ವ್ಯಕ್ತಿ ಮಧ್ಯದಲ್ಲಿ ಕುಳಿತಿರತಕ್ಕದ್ದು. ಆತನ ಮುಂಭಾಗದಲ್ಲಿ ಎಡಕ್ಕೆ ಒಂದು ಮತ್ತು ಬಲಕ್ಕೆ ಇನ್ನೊಂದು ಸ್ಪೀಕರ್ ಇರುತ್ತವೆ. ಮುಂಭಾಗದಲ್ಲಿ ಮಧ್ಯದಲ್ಲಿ ಒಂದು ಸ್ಪೀಕರ್ ಇರುತ್ತದೆ. ಹಿಂಭಾಗದಲ್ಲಿ ಎಡಗಡೆ ಒಂದು ಮತ್ತು ಬಲಗಡೆ ಇನ್ನೊಂದು ಸ್ಪೀಕರ್ ಇರುತ್ತದೆ. ಇವೆಲ್ಲ ಅಲ್ಲದೆ ಇನ್ನೊಂದು ಸಬ್‌ವೂಫರ್ ಇರುತ್ತದೆ.
 
ಅದನ್ನು ಎಲ್ಲಿ ಬೇಕಾದರೂ ಇಡಬಹುದು ಈ ಎಲ್ಲ ಸ್ಪೀಕರ್‌ಗಳು ಒಟ್ಟು ಸೇರಿ ಧ್ವನಿಯ ಮೂರು ಆಯಾಮದ ಸುತ್ತುವರಿದ ಭಾವನೆಯನ್ನು ಉಂಟುಮಾಡುತ್ತವೆ. ಈ ಭಾವನೆ ಬರಬೇಕಾದರೆ ಮಾಮೂಲಿ ಬೂಮ್‌ಬಾಕ್ಸ್‌ಗಳಲ್ಲಿ ಸಾಧ್ಯವಿಲ್ಲ.

ಅಂತೆಯೇ ಮಾಮೂಲಿ ಟಿವಿಗಳಿಗೆ ಈ ರೀತಿ ಸ್ಪೀಕರ್ ಜೋಡಿಸಿಯೂ ಪ್ರಯೋಜನವಿಲ್ಲ. 5.1 (ಒಟ್ಟು 6) ಚಾನೆಲ್‌ಗಳನ್ನು ಪ್ರತ್ಯೇಕವಾಗಿ ಆಯಾ ಸ್ಪೀಕರ್‌ಗಳಿಗೆ ಉಣಿಸುವ ವ್ಯವಸ್ಥೆ ಆಂಪ್ಲಿಫೈಯರ್‌ನಲ್ಲಿರಬೇಕು.  7.1 ಸಿಸ್ಟಮ್‌ಗಳಲ್ಲಿ ಇನ್ನೂ ಎರಡು ಹೆಚ್ಚಿಗೆ ಸ್ಪೀಕರ್‌ಗಳಿರುತ್ತವೆ.

ಸಬ್‌ವೂಫರ್ (sub-woofer)
ಆಡಿಯೋ ಸಿಸ್ಟಮ್‌ಗಳ ಫ್ರೀಕ್ವೆನ್ಸಿ ರೆಸ್ಪೋನ್ಸ್ ಬಗ್ಗೆ ಇದೇ ಅಂಕಣದಲ್ಲಿ ವಿವರಿಸಲಾಗಿತ್ತು. ನಾವು 20 ಹರ್ಟ್ಸ್‌ನಿಂದ (Hz) 20,000 ಹರ್ಟ್ಸ್ (20 ಕಿಲೋಹರ್ಟ್ಸ್kHz)  ಕಂಪನಾಂಕ (frequency) ಇರುವ ಧ್ವನಿ ಅಲೆಗಳನ್ನು ಸ್ಪಷ್ಟವಾಗಿ ಆಲಿಸಬಲ್ಲೆವು. ತುಂಬ ಕಡಿಮೆ ಕಂಪನಾಂಕದ ಧ್ವನಿ ಸಾಮಾನ್ಯವಾಗಿ ಡ್ರಮ್, ಮೃದಂಗ, ತಬಲ, ಇತ್ಯಾದಿಗಳಿಂದ ಮೂಡಿಬರುತ್ತದೆ.

100-120 ಹರ್ಟ್ಸ್‌ಗಳಿಗಿಂತ ಕಡಿಮೆ ಕಂಪನಾಂಕದ ಧ್ವನಿ ಯಾವ ದಿಕ್ಕಿನಿಂದ ಬರುತ್ತದೆ ಎಂಬುದನ್ನು ನಾವು ಅರಿಯಲಾರೆವು. ಈ ಕಂಪನಾಂಕದ ಧ್ವನಿಯನ್ನು ಹೊರಡಿಸಲು ಬಳಸುವ ಸ್ಪೀಕರ್‌ಗಳಿಗೆ ಸಬ್‌ವೂಫರ್ ಎಂಬ ಹೆಸರಿದೆ. ಇವು ಹೊರಡಿಸುವ ಧ್ವನಿ ಯಾವ ದಿಕ್ಕಿನಿಂದ ಬರುತ್ತಿದೆ ಎಂಬುದನ್ನು ನಾವು ಅರಿಯಲಾರೆವಾದುದರಿಂದ ಈ ಸ್ಪೀಕರ್ ಅನ್ನು ಎಲ್ಲಿ ಬೇಕಾದರೂ ಇಡಬಹುದು. ಇವು ಗಾತ್ರದಲ್ಲಿ ತುಂಬ ದೊಡ್ಡದಾಗಿರುತ್ತವೆ. ಆದುದರಿಂದ ಇದನ್ನು ಯಾವುದಾದರೊಂದು ಮೂಲೆಯಲ್ಲಿ ಇಡಲಾಗುತ್ತದೆ.

ಈ ಆವರಿಸಿದ ಧ್ವನಿಯ ಇನ್ನೊಂದು ಬಳಕೆ ಗಣಕೀಕೃತ ಆಟಗಳಲ್ಲಿ. ಆಟಗಳಲ್ಲಿ ಹಲವು ವಿಧ. ಕೆಲವು ಆಟಗಳಲ್ಲಿ ವೈರಿಯೊಡನೆ ಗುದ್ದಾಟ ಇರುತ್ತದೆ. ವೈರಿಗೆ ಗುದ್ದಿದ ಅನುಭವ ಬರಬೇಕಾದರೆ ಧ್ವನಿಯೂ ಸಹಕರಿಸಬೇಕು.
 
ಒಂದು ಬದಿಯಿಂದ ಇನ್ನೊಂದು ಬದಿಗೆ ವಸ್ತುಗಳು ಚಲಿಸಿದ ಭಾವನೆ ಮೂಡಿಬರಲೂ ಇದೇ ತಂತ್ರಜ್ಞಾನ ಸಹಕಾರಿಯಾಗುತ್ತದೆ. ಒಟ್ಟಿನಲ್ಲಿ ಆಟ ಆಡುವಾಗ ನಿಜವಾಗಿಯೂ ಘಟನೆಗಳು ಅಲ್ಲೇ ನಡೆದಂತೆ ಭಾವನೆ ಮೂಡಿಬರುತ್ತದೆ.

ಎಲ್ಲ ಧ್ವನಿಗಳ ಆಕರದಲ್ಲಿ ಅಂದರೆ ಸಿ.ಡಿ., ಡಿವಿಡಿ, ರೇಡಿಯೋ, ಟೀವಿ, ಇತ್ಯಾದಿಗಳಲ್ಲಿ 5.1 ಚಾನೆಲ್ ಧ್ವನಿ ಮಾಹಿತಿ ಇರುವುದಿಲ್ಲ. ಇಂತಹವುಗಳಲ್ಲಿ ಎರಡು ಚಾನೆಲ್ ಮಾಹಿತಿ ಮಾತ್ರ ಇರುತ್ತದೆ. ನಾವು ಸಾಮಾನ್ಯವಾಗಿ ಆಲಿಸುವ ಎಲ್ಲ ಆಡಿಯೋ ಸಿ.ಡಿ.ಗಳು ಈ ಮಾದರಿಯವು.
 
ಕೆಲವು ಆಡಿಯೋ ಸಿಸ್ಟಮ್‌ಗಳಲ್ಲಿ ಸರೌಂಡ್ ಸೌಂಡ್ ಎಂಬ ಆಯ್ಕೆ ಇರುತ್ತದೆ. ಇವು ಧ್ವನಿಯ ಆಕರದಲ್ಲಿ 5.1 ಚಾನೆಲ್ ಧ್ವನಿ ಇಲ್ಲದಿದ್ದರೂ (ಅಂದರೆ ಕೇವಲ ಎರಡು ಚಾನೆಲ್‌ಗಳ ಸಿಗ್ನಲ್ ಮಾತ್ರ ಇರುತ್ತದೆ) ಅದು 5.1 ಚಾನೆಲ್ ಧ್ವನಿಯನ್ನು ಅನುಕರಿಸಿ ಉಂಟುಮಾಡುತ್ತದೆ (simulated surround sound). ಇವು 5.1 ಚಾನೆಲ್ ಮಾಹಿತಿ ಇರುವ ಡಿವಿಡಿಗಳು ಮೂಡಿಸುವ ಅನುಭವವನ್ನು ಮೂಡಿಸಲಾರವು. ಆದರೂ ಕೇವಲ ಎರಡು ಚಾನೆಲ್ ಸಂಗೀತಕ್ಕಿಂತ ಸ್ವಲ್ಪ ಚೆನ್ನಾಗಿ ಸಂಗೀತವನ್ನು ಅನುಭವಿಸಬಹುದು. 

ಗ್ಯಾಜೆಟ್ ಸಲಹೆ
ಕುಮಟದ ದೀಪಕ್ ಅವರ ಪ್ರಶ್ನೆ: ನನಗೆ ಅಂತರಜಾಲ ಸಂಪರ್ಕ ಇಲ್ಲ. ನಾನು ಟೋಮ್‌ಟೋಮ್ ಚಾಲನೆ ನಿರ್ದೇಶಕ ಬಳಸುವುದು ಹೇಗೆ?

ಉ: ಅದನ್ನು ಕೊಂಡುಕೊಂಡಾಗ ಅದರಲ್ಲಿ ಹಲವು ಮ್ಯಾಪ್‌ಗಳು ಸಂಗ್ರಹವಾಗಿರುತ್ತವೆ. ಅದನ್ನು ಬಳಸುವಾಗ ಅದಕ್ಕೆ ಅಂತರಜಾಲ ಸಂಪರ್ಕ ಬೇಕಾಗಿಲ್ಲ. ಆಗಾಗ ಮ್ಯಾಪ್‌ಗಳನ್ನು ನವೀಕರಿಸಿಕೊಳ್ಳಲು ಮಾತ್ರ ಗಣಕದ ಮೂಲಕ ಅಂತರಜಾಲಕ್ಕೆ ಸಂಪರ್ಕಿಸಬೇಕಾಗುತ್ತದೆ. ಇದನ್ನು ನೀವು ಒಂದೆರಡು ತಿಂಗಳಿಗೊಮ್ಮ ಯಾವುದಾದರೂ ಸೈಬರ್ ಕೆಫೆಗೆ ಹೋಗಿ ಮಾಡಿಕೊಳ್ಳಬಹುದು. 


 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT