ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆವಿಷ್ಕಾರ ತ್ರೈಮಾಸಿಕ ಪತ್ರಿಕೆ ಬಿಡುಗಡೆ

Last Updated 12 ಡಿಸೆಂಬರ್ 2012, 6:46 IST
ಅಕ್ಷರ ಗಾತ್ರ

ಬಳ್ಳಾರಿ: ನಗರದ ಗಾಂಧೀ ಭವನದಲ್ಲಿ ಆವಿಷ್ಕಾರ ಪ್ರಗತಿಪರ ಸಾಂಸ್ಕತಿಕ ವೇದಿಕೆಯ ವತಿಯಿಂದ  ಆರಂಭಿಸಲಾದ `ಆವಿಷ್ಕಾರ' ತ್ರೈಮಾಸಿಕ ಪತ್ರಿಕೆಯನ್ನು ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಚಂದ್ರ ಪೂಜಾರಿ ಬಿಡುಗಡೆ ಮಾಡಿದರು.

ನಂತರ ಮಾತನಾಡಿದ ಪೂಜಾರಿ, ಇಂದು ವಿಶ್ವವಿದ್ಯಾಲಯದಲ್ಲಿ ಬರಹಗಾರರಲ್ಲಿ ಬರಹಕ್ಕೂ-ಬದುಕಿಗೂ ವ್ಯತ್ಯಾಸವಾಗುತ್ತಿದೆ. ಜನಜೀವನದ ಜೊತೆ ಬೆರೆತು ಬದ್ಧತೆಯಿಂದ ಬರೆದಲ್ಲಿ ಸೃಜನಶೀಲತೆ ಇನ್ನಷ್ಟು ಹೆಚ್ಚಾಗುತ್ತದೆ ಹಾಗೂ ಅದೊಂದು ಕ್ರಿಯಾತ್ಮಕ ವಿಚಾರವಾಗಿ ಚಲಾವಣೆಗೆ ಬರುತ್ತದೆ ಎಂದರು. 

ಅತಿಥಿಗಳಾಗಿದ್ದ ಆವಿಷ್ಕಾರ ಸಂಘಟನೆಯ ರಾಜ್ಯ ಸಂಘಟನಾಕಾರ ಎಸ್.ಎನ್. ಸ್ವಾಮಿ  ಮಾತನಾಡಿ,  `ಆವಿಷ್ಕಾರ' ನೂತನ ತ್ರೈಮಾಸಿಕವನ್ನು ಕೇವಲ ಸಾಹಿತ್ಯವೊಂದೇ ಅಲ್ಲ ಜೊತೆಗೆ ಕಲೆ, ಸಾಹಿತ್ಯದ ಕುರಿತಾದ ಲೇಖನಗಳುಳ್ಳ ಸಾಂಸ್ಕತಿಕ ಪತ್ರಿಕೆಯ ರೂಪದಲ್ಲಿ ಹೊರತರಲಿದ್ದೇವೆ  ಎಂದರು.

ಕಲೆ-ಸಾಹಿತ್ಯಗಳು ಸಮಾಜದ ಭಾಗವಾಗಿ, ಪ್ರಚಲಿತ ಘಟನೆಗಳಿಗೆ ಸ್ಪಂದಿಸುತ್ತಾ, ಸಂವಹಿಸುತ್ತಾ ಬೆಳೆಯಬೇಕು. ಇಂತಹ ಕೃತಿಗಳು ಸಮಾಜದ ಮೇಲೆ ಪ್ರಭಾವವನ್ನು ಬೀರುವುದರಿಂದ ಲೇಖಕರು-ಕಲಾವಿದರು ಸಮಾಜಕ್ಕೆ ಒಳ್ಳೆಯದನ್ನು, ಪ್ರಗತಿಪರವಾದುದನ್ನೇ ಕೊಡಬೇಕಾದ ಜವಾಬ್ದಾರಿ ಇದೆ.  ಆವಿಷ್ಕಾರ ಪತ್ರಿಕೆಯಲ್ಲಿ ಸಾಹಿತ್ಯ ಕ್ಷೇತ್ರದ, ಸಾಂಸ್ಕತಿಕ ಕ್ಷೇತ್ರದ ಹಲವಾರು ಕೃತಿಗಳ ಕುರಿತು ಚರ್ಚೆ, ವಸ್ತುನಿಷ್ಠ ವಿಮರ್ಶೆಯನ್ನು  ಸರಿಯಾದ ದೃಷ್ಟಿಕೋನದ ತಳಹದಿಯಲ್ಲಿ ನಡೆಸುವ ಉದ್ದೇಶ ಹೊಂದಿದೆ.  ಈ ಸಾಂಸ್ಕತಿಕ ಹೋರಾಟಕ್ಕೆ ಸುಚಿಂತನಾಶೀಲ, ಸಹೃದಯ ಜನತೆ ಪ್ರೋತ್ಸಾಹಿಸಬೇಕೆಂದು ವಿನಂತಿಸಿದರು.

ಆವಿಷ್ಕಾರ ಸಾಂಸ್ಕತಿಕ ವೇದಿಕೆಯ ಬಳ್ಳಾರಿ ಜಿಲ್ಲಾ ಸಂಚಾಲಕರಾದ  ರಾಧಾಕೃಷ್ಣ ಉಪಾಧ್ಯ ಅಧ್ಯಕ್ಷತೆ ವಹಿಸಿದ್ದರು.
ದೊಡ್ಡಬಸವ ಗವಾಯಿಗಳವರಿಂದ ಪ್ರಗತಿಪರ ಗೀತೆಗಳ ಗಾಯನ ಕಾರ್ಯಕ್ರಮ ತುಂಬಾ ಸೊಗಸಾಗಿ ಮೂಡಿಬಂತು.
ಕಾರ್ಯಕ್ರಮದಲ್ಲಿ ನಗರದ ಯುವ ಸಾಹಿತಿಗಳು, ಉಪನ್ಯಾಸಕರು, ವಿದ್ಯಾರ್ಥಿಗಳು, ನೂರಾರು ಸಾಹಿತ್ಯ ಪ್ರೇಮಿಗಳು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT