ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಶಾ ಅಳಲು: ಕೇಳುವವರಾರು?

Last Updated 7 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಯಲ್ಲಾಪುರ ತಾಲ್ಲೂಕಿನ ಹಳ್ಳಿಯೊಂದರಲ್ಲಿ ಯುವಕನೊಬ್ಬನಿಗೆ ಮಧ್ಯರಾತ್ರಿಯಲ್ಲಿ ಹಾವು ಕಚ್ಚಿ ಆತ ಸಾವು ಬದುಕಿನ ಹೋರಾಟದಲ್ಲಿದ್ದ. ಆ ಸಂದರ್ಭದಲ್ಲೂ ಕರ್ತವ್ಯ ಕರೆಯನ್ನು ಸ್ವೀಕರಿಸುವ `ಆಶಾ~ ಕಾರ್ಯಕರ್ತೆ ಲಿಂಗಮ್ಮ ಗಡಿಬಿಡಿಯಲ್ಲಿ ಎದ್ದು, ಪ್ರಾಥಮಿಕ ಚಿಕಿತ್ಸೆಗೆ ಶಿರಸಿ ಆಸ್ಪತ್ರೆಗೆ ಕರೆದೊಯ್ಯುವುದರಲ್ಲಿದ್ದಳು. ಚಿಕಿತ್ಸೆಗೆ ಆತ ಸ್ಪಂದಿಸದೇ ಅಸುನೀಗಿದ. ಹೆಣ ಸಾಗಿಸುತ್ತಿದ್ದ ಕಾರ್ಯಕರ್ತೆಯನ್ನು ಮಾರ್ಗ ಮಧ್ಯದಲ್ಲಿ ಪೊಲೀಸರು ಅನಗತ್ಯ ಕಾರಣ ನೀಡಿ ಕಿರುಕುಳ ನೀಡಿದರು...

ಯಾವುದೇ ಭದ್ರತೆಯಿಲ್ಲದೇ `ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನ~ದಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ `ಆಶಾ~ ಕಾರ್ಯಕರ್ತೆಯರು ನಿತ್ಯ ಎದುರಿಸುವ ಇಂತಹ ಕಥೆಗಳಿಗೆ ಲೆಕ್ಕವಿಲ್ಲ, ಪರಿಹಾರವೂ ಇಲ್ಲ.

ಯಾರೀ `ಆಶಾ~ 
 ಕೇಂದ್ರ ಸರ್ಕಾರವು  2005ರಿಂದ 2012ರ ವರೆಗೆ `ಎಲ್ಲರಿಗೂ ಆರೋಗ್ಯ~ ಎಂಬ ಘೋಷಣೆಯಡಿ ಆರಂಭಿಸಿದ ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನದಲ್ಲಿ ಮಾನ್ಯತೆ ಪಡೆದ ಸಾಮಾಜಿಕ ಆರೋಗ್ಯ ಕಾರ್ಯಕರ್ತರು (ಅಕ್ರೆಡಿಟೆಡ್ ಸೋಷಿಯಲ್ ಹೆಲ್ತ್ ಆ್ಯಕ್ಟಿವಿಸ್ಟ್). ಗ್ರಾಮದಲ್ಲಿ ಪ್ರತಿ ಸಾವಿರ ಮಂದಿಗೆ ಒಬ್ಬ ಆಶಾ ಕಾರ್ಯಕರ್ತೆಯನ್ನು ನಿಯೋಜಿಸಲಾಗುತ್ತದೆ. ಕನಿಷ್ಠ 7ನೇ ತರಗತಿ ಪಾಸು ಮಾಡಿರುವ ಆಸಕ್ತ ಅಭ್ಯರ್ಥಿಗಳಿಗೆ ತಾಲ್ಲೂಕು, ಜಿಲ್ಲಾ ಮಟ್ಟದಲ್ಲಿ ತರಬೇತಿ ನೀಡಲಾಗುತ್ತದೆ ಮತ್ತು ಗುರುತಿನ ಚೀಟಿ ನೀಡಲಾಗುತ್ತದೆ. ಆದರೆ ಪದವೀಧರರು ಸಹ ಆಶಾ ಕಾರ್ಯಕರ್ತೆಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ದೇಶದಲ್ಲಿ ಒಟ್ಟು 6 ಲಕ್ಷ ಕಾರ್ಯಕರ್ತೆಯರಿದ್ದು, ರಾಜ್ಯದಲ್ಲಿ 35 ಸಾವಿರ ಆಶಾ ಕಾರ್ಯಕರ್ತೆಯರು ಸರ್ಕಾರದ ತಾತ್ಕಾಲಿಕ ಯೋಜನೆಗೆ ಪ್ರೋತ್ಸಾಹಧನದ ಹೆಸರಿನಲ್ಲಿ  ದುಡಿದು ದಣಿಯುತ್ತಿದ್ದಾರೆ.

ಇವರಿಗೇನು ಕೆಲಸ
ಗ್ರಾಮದಲ್ಲಿ ಆರೋಗ್ಯ ಮತ್ತು ನೈರ್ಮಲ್ಯ, ಹೆರಿಗೆ, ಪೌಷ್ಟಿಕ ಆಹಾರ, ರೋಗ ನಿರೋಧಕ ಚುಚ್ಚುಮದ್ದುಗಳ ಬಳಕೆ, ಶಿಶು ಮರಣ, ಮಾತೃ ಮರಣಗಳ ದಾಖಲೆ, ಕುಡಿಯುವ ನೀರು ಮತ್ತು ಚರಂಡಿ ನೈರ್ಮಲ್ಯ, ಗರ್ಭನಿರೋಧಕ ಕುರಿತು ಜಾಗೃತಿ ಮೂಡಿಸುವುದು - ಹೀಗೆ ಇವರ ಕೆಲಸದ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಇರುವ 24 ಗಂಟೆಗಳಲ್ಲಿ ಹೊಟ್ಟೆಪಾಡಿಗಾಗಿ ದುಡಿಯುವ ಕಾರ್ಯಕರ್ತೆಯರಿಗೆ ಕನಿಷ್ಠ ಸೌಲಭ್ಯಗಳೂ ಇಲ್ಲ.

ಕೇಂದ್ರ ಸರ್ಕಾರ ನಿರ್ದೇಶಿತ ಯೋಜನೆಯು 2005 ರಲ್ಲಿ ಎಲ್ಲಾ ರಾಜ್ಯಗಳಲ್ಲೂ ಆರಂಭಗೊಂಡಿದ್ದರೆ ಕರ್ನಾಟಕದಲ್ಲಿ ಮಾತ್ರ 2008 ರಲ್ಲಿ ಆರಂಭಗೊಂಡಿರುವುದು ಆಶಾ ಕಾರ್ಯಕರ್ತೆಯರನ್ನು ಗೊಂದಲಕ್ಕೀಡು ಮಾಡಿದೆ. ಇನ್ನು ಒಂದು ವರ್ಷದಲ್ಲೇ ಯೋಜನೆಯ ಅವಧಿ ಪೂರ್ಣಗೊಳ್ಳಲಿದ್ದು, ತಮ್ಮ ಕೆಲಸವನ್ನು ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಈ ಬಗ್ಗೆ ಆಶಾ ಕಾರ್ಯಕರ್ತೆಯರ ಸಂಘಟನೆಯು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದು, ತಮ್ಮ ವೇತನವನ್ನು ನಿಗದಿಪಡಿಸುವಂತೆ ಒತ್ತಾಯಿಸಿದೆ. ಆದರೆ ಕೇಂದ್ರವು, ಈಚೆಗಷ್ಟೆ ಕರ್ನಾಟಕ ರಾಜ್ಯವು ಆರೋಗ್ಯ ರಕ್ಷಣೆಯಲ್ಲಿ ಮುಂದುವರಿದ ರಾಜ್ಯವೆಂದು ಪರಿಗಣಿಸಿ ಕಾರ್ಯಕರ್ತೆಯರ ಗೌರವ ಧನವನ್ನು ರೂ 600 ಯಿಂದ 200ರೂಪಾಯಿಗೆ ಕಡಿತಗೊಳಿಸಿದೆ.

ಈಚೆಗೆ ಬೆಂಗಳೂರಿನಲ್ಲಿ ಆಶಾ ಕಾರ್ಯಕರ್ತೆಯರು ತಮ್ಮ ಸಮಸ್ಯೆಗಳ ಕುರಿತು ಚರ್ಚಿಸಲು ಸಮಾವೇಶವನ್ನು ಹಮ್ಮಿಕೊಂಡಿದ್ದರು. ಈ ಸಂದರ್ಭದಲ್ಲಿ ಮಾತಿಗೆ ಸಿಕ್ಕ ಆಶಾ ಕಾರ್ಯಕರ್ತೆ ಸಾವಿತ್ರಿ ಸತೀಶ್‌ವೈದ್ಯ ಮಾತನಾಡುತ್ತ ಕಾರ್ಯಕರ್ತೆಯರು ನಿತ್ಯ ಎದುರಿಸುತ್ತಿರುವ ಸಮಸ್ಯೆಗಳನ್ನು ಹೇಳುತ್ತಾ ಹೋದರು.

`ಇವರು ಗ್ರಾಮಗಳಲ್ಲಿ ಇತರರ ಆರೋಗ್ಯ ರಕ್ಷಣೆಗಾಗಿ ದಿನದ 24 ಗಂಟೆಯನ್ನು ವ್ಯಯಿಸುತ್ತಾರೆ. ಹೆರಿಗೆ ಸಂದರ್ಭದಲ್ಲಿ ಗರ್ಭಿಣಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವುದರಿಂದ ಹಿಡಿದು 9 ತಿಂಗಳ ಚುಚ್ಚು ಮದ್ದು ನೀಡುವವರೆಗೂ ಸಂಪೂರ್ಣ ಜವಾಬ್ದಾರಿ ನಮ್ಮದೇ. ಹೆರಿಗೆಯಾಗಿ 30 ದಿನದೊಳಗೆ 6 ಬಾರಿ ಬಾಣಂತಿಯನ್ನು ಭೇಟಿ ಮಾಡಿ ಸೂಕ್ತ ಮಾರ್ಗದರ್ಶನ ನೀಡಬೇಕು. ಒಂದು ವೇಳೆ ಗರ್ಭಿಣಿ  ಮರಣ ಹೊಂದಿದರೆ ಕಾರ್ಯಕರ್ತೆ ಸಾಮಾಜಿಕ ಇಬ್ಬಂದಿತನದ ಸಮಸ್ಯೆಯನ್ನು ಎದುರಿಸಬೇಕು. ಆದರೆ ಇದಕ್ಕೆಲ್ಲಾ ಆಕೆ ಪಡೆಯುವ ಗೌರವ ಧನ 200 ರೂಪಾಯಿ. ಇದು ಹೆರಿಗೆಯಾಗಿ 6 ತಿಂಗಳ ನಂತರ ದೊರೆಯುತ್ತದೆ. ಅಲ್ಲಿಯವರೆಗೂ ತಮ್ಮದೇ ಖರ್ಚಿನಲ್ಲಿ ಸಾರಿಗೆ ಮತ್ತು ಸಂಪರ್ಕವನ್ನು ಸಾಧಿಸುವ ಹೊರೆಯನ್ನು ಅನುಭವಿಸುತ್ತೇವೆ. ಇನ್ನು ಗುಡ್ಡಗಾಡು ಪ್ರದೇಶಗಳಲ್ಲಿರುವ ಕಾರ್ಯಕರ್ತೆಯರಿಗೆ 600 ರೂಪಾಯಿ ಗೌರವ ಧನ ನೀಡಲಾಗುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಅವರು ನಿರ್ವಹಿಸುವ ಕೆಲಸವನ್ನೇ ನಾವು ಮಾಡುತ್ತೇವೆ. ಆದರೂ ಏಕೀ ತಾರತಮ್ಯ?~ ಎಂದು ಪ್ರಶ್ನಿಸುತ್ತಾರೆ.

`ಇನ್ನು ಒಂದು ಹೆರಿಗೆಯನ್ನು ಮಾಡಿಸಿದ ಬಗ್ಗೆ ದಾಖಲೆ ನೀಡಲು ಸಂಬಂಧಪಟ್ಟ ವೈದ್ಯರನ್ನು ಕಾಣುತ್ತೇವೆ. ಕಾರ್ಯ ನಿರ್ವಹಿಸಿದ್ದರ ಕುರಿತು ದಾಖಲೆಯಿದ್ದರೂ ವೈದ್ಯಾಧಿಕಾರಿಗಳ ಸಹಿಗಾಗಿ ಪರದಾಡುತ್ತೇವೆ. ಆದರೆ ಸಹಿಗಾಗಿ ಕಾಯುವ ನಮ್ಮನ್ನು ಮನುಷ್ಯರೆಂದು ಪರಿಗಣಿಸದೇ ತುಚ್ಛವಾಗಿ ಕಾಣುವವರೇ ಹೆಚ್ಚು. ಕ್ಷಯ ರೋಗಿಯ ಕಫವನ್ನು ಪರೀಕ್ಷೆಗಾಗಿ ಪ್ಲಾಸ್ಟಿಕ್ ಕವರಿನಲ್ಲಿ ತೆಗೆದುಕೊಂಡು ಹೋಗುವ ನಮಗೆ 5 ರೂಪಾಯಿ ಪ್ರೋತ್ಸಾಹ ಧನ ನೀಡಲಾಗುತ್ತಿದೆ~ ಎಂದು ತಮ್ಮ ಅಳಲು ತೋಡಿಕೊಂಡರು.

ಆಸ್ಪತ್ರೆಗಳಲ್ಲಿ ದುರ್ವರ್ತನೆ
`ಖಾಸಗಿ ಆಸ್ಪತ್ರೆಗಳಲ್ಲಿಯೇ ನಮ್ಮನ್ನು ಗೌರವದಿಂದ ನಡೆಸಿಕೊಳ್ಳಲಾಗುತ್ತದೆ. ಆದರೆ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವಂತೆ ಪ್ರೇರೇಪಿಸುವ ನಮಗೆ ಅಲ್ಲಿ ನಡೆಯುವ ಭ್ರಷ್ಟಾಚಾರದಿಂದ ಮತ್ತಷ್ಟು ಹಿಂಸೆ ಅನುಭವಿಸುತ್ತೇವೆ. ರೋಗಿಯನ್ನು ಹಲವು ಕಾರಣ ನೀಡಿ ಸರ್ಕಾರಿ ಆಸ್ಪತ್ರೆಗೆ ಸೇರಿಸುತ್ತೇವೆ. ಆದರೆ ಪ್ರತಿ ಸೇವೆಗೆ ಇಂತಿಷ್ಟು ಎಂದು ಪಡೆಯುವ ಸರ್ಕಾರಿ ವೈದ್ಯರು ಮತ್ತು ಸಿಬ್ಬಂದಿಯಿಂದ ರೋಸಿ ಹೋಗುವ ರೋಗಿಯು ಖಾಸಗಿ ಆಸ್ಪತ್ರೆಗೆ ಸೇರಬಹುದಿತ್ತಲ್ಲವೇ ಎಂಬ ಪ್ರಶ್ನೆಯನ್ನಿಡುತ್ತಾರೆ. ಪ್ರತಿ ಹಂತದಲ್ಲೂ ತಮ್ಮದೇ ಸ್ವಂತ ಖರ್ಚಿನಲ್ಲಿ ಕಾರ್ಯನಿರ್ವಹಿಸುವ ಕಾರ್ಯಕರ್ತರನ್ನು ಪ್ರೋತ್ಸಾಹ ಧನಕ್ಕೆ ಅಗತ್ಯವಿರುವ ದೃಢೀಕರಣ ಪತ್ರ ನೀಡುವ ಸಂದರ್ಭದಲ್ಲಿ ವಿನಾಕಾರಣ ಸತಾಯಿಸಲಾಗುತ್ತದೆ. ಇನ್ನು ರೋಗಿಯನ್ನು ಆಸ್ಪತ್ರೆಗೆ ಸೇರಿಸಿದ ನಂತರ ಆಸ್ಪತ್ರೆಯಲ್ಲಿ ಉಳಿದುಕೊಳ್ಳಲು ನಮಗೆ  ಕನಿಷ್ಠ ಸೌಲಭ್ಯವಿಲ್ಲ. ಈ ಬಗ್ಗೆ ಸರ್ಕಾರದ ಗಮನ ಸೆಳೆದಿದ್ದರೂ ಯಾವುದೇ ಪ್ರಯೋಜವಾಗಿಲ್ಲ~ ಎಂಬುದು ಅನೇಕ ಕಾರ್ಯಕರ್ತೆಯರ ಅಳಲು.

2005ರಲ್ಲಿ ಜಾರಿಯಾದ ಈ ಯೋಜನೆಯು ಪೂರ್ವ ಬಂಗಾಳ, ಗುಜರಾತ್ , ರಾಜಸ್ಥಾನ ಮತ್ತು ಹೈದರಾಬಾದ್‌ನಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಂಡಿದೆ.  ಜನರೊಂದಿಗೆ ಸಂಪರ್ಕ ಸಾಧಿಸುವ ಸಲುವಾಗಿ ಈಚೆಗಷ್ಟೆ ನೆರೆಯ ರಾಜ್ಯ ಹೈದರಾಬಾದ್‌ನಲ್ಲಿ ಆಶಾ ಕಾರ್ಯಕರ್ತೆಯರಿಗೆ ಮೊಬೈಲ್ ನೀಡಲಾಗುತ್ತಿದೆ. ತಡವಾಗಿ ಆರಂಭಗೊಂಡ ಕರ್ನಾಟಕದಲ್ಲಿ ಮಾತ್ರ ಸೌಲಭ್ಯ ನೀಡಿಕೆ ಕುಂಟುತ್ತಾ ಸಾಗಿದ್ದು, ಇನ್ನು ಒಂದು ವರ್ಷದಲ್ಲಿ ಯೋಜನೆಯು ಅಂತ್ಯಗೊಳ್ಳಲಿರುವುದು ವಿಪರ್ಯಾಸ ಎಂದು ಕರ್ನಾಟಕ ರಾಜ್ಯ ಆಶಾ ಕಾರ್ಯಕರ್ತೆಯರ ಸಂಘಟನೆಯ ಅಧ್ಯಕ್ಷೆ ಎಸ್.ವರಲಕ್ಷ್ಮಿ ತಿಳಿಸಿದರು.

ಕೇಂದ್ರ (800 ಕೋಟಿ)  ಮತ್ತು ರಾಜ್ಯ ಸರ್ಕಾರ (200)ಗಳೆರಡು ಸೇರಿ ಪ್ರತಿ ವರ್ಷ ಈ ಯೋಜನೆಗಾಗಿ 1 ಸಾವಿರ ಕೋಟಿ ರೂಪಾಯಿ ಬಿಡುಗಡೆಗೊಳಿಸುತ್ತಿದೆ. ಆದರೆ ದಿನವಿಡೀ ಆರೋಗ್ಯ ರಕ್ಷಣೆಗಾಗಿ ದುಡಿಯುವ ಕಾರ್ಯಕರ್ತೆಯರಿಗಾಗಿ ಕಿಂಚಿತ್ತು ಸೌಲಭ್ಯ ಮತ್ತು ಗೌರವ ನೀಡದೇ ಪುಕ್ಕಟೆಯಾಗಿ ದುಡಿಸಿಕೊಳ್ಳುತ್ತಿರುವುದೇ ದೊಡ್ಡ ದೌರ್ಜನ್ಯ. ಈ ಬಗ್ಗೆ 2010 ನೇ ಸಾಲಿನಲ್ಲಿ ಕೇಂದ್ರ ಆರೋಗ್ಯ ಸಚಿವ ಗುಲಾಂ ನಬಿ ಅಜಾದ್ ಅವರಲ್ಲಿ ಮನವಿ ಸಲ್ಲಿಸಿದ ಸಂದರ್ಭದಲ್ಲಿ  `ಇನ್ನು ಮುಂದೆ ಆಶಾ ಕಾರ್ಯಕರ್ತೆಯರು `ಕಾಂಡೋಮ್~ಗಳನ್ನು ಮಾರಾಟ ಮಾಡಿ. ಗ್ರಾಮೀಣ ಭಾಗದಲ್ಲಿರುವ ಪುರಷರಿಗೆ ಕಾಂಡೋಮ್ ಬಳಸುವಂತೆ ಪ್ರೇರೇಪಿಸಿ. ಈ ಕೆಲಸವನ್ನು ಪರಿಗಣಿಸಿ ನಿಮ್ಮ ಗೌರವ ಧನವನ್ನು ಹೆಚ್ಚಿಸೋಣ~ ಎಂದಿದ್ದರು.
ಕೆಲವು ಆಸ್ಪತ್ರೆಗಳಲ್ಲಿ ಮತ್ತು ಕೆಲಸ ನಿರ್ವಹಿಸುವ ಸ್ಥಳಗಳಲ್ಲಿ ಆಶಾ ಕಾರ್ಯಕರ್ತೆಯರು ಲೈಂಗಿಕ ಕಿರುಕುಳದಂತಹ ಸಮಸ್ಯೆಗಳು ಎದುರಿಸುವ ಸಾಧ್ಯತೆಯಿದೆ. ಅನ್ಯರ ಆರೋಗ್ಯ ರಕ್ಷಣೆಗಾಗಿ  ಪ್ರತಿ ಕ್ಷಣವನ್ನು ಮುಡುಪಿಡುವ ಕಾರ್ಯಕರ್ತೆಯರು ಅನಾರೋಗ್ಯವನ್ನು ಲೆಕ್ಕಿಸದೇ ಕಾರ್ಯನಿರ್ವಹಿಸಬೇಕು. ಉದ್ಯೋಗ ಭದ್ರತೆ, ಅನುಕೂಲಕರ ವಾತಾವರಣ ಯಾವುದೊಂದೂ ಇಲ್ಲದೇ ಗೌರವಧನಕ್ಕಾಗಿ ದುಡಿಯುವ ಮಹಿಳೆಯರ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಸರ್ಕಾರ ಪ್ರಯತ್ನಿಸುತ್ತಿಲ್ಲ. ಆಶಾ ಕಾರ್ಯಕರ್ತೆಯರ ಕೆಲಸವನ್ನು ಕಾಯಂಗೊಳಿಸಿ, ಅವರಿಗೆ ಪ್ರತಿ ತಿಂಗಳು ಮೂರು ಸಾವಿರ ರೂಪಾಯಿ ಗೌರವ ಧನ ನೀಡಬೇಕು. ಅಕ್ಟೋಬರ್ 17 ರಂದು ಮುಖ್ಯಮಂತ್ರಿ ಅವರು ಕರೆದಿರುವ  ಸಭೆಯಲ್ಲಿ ಈ ಬಗ್ಗೆ ಒತ್ತಾಯಿಸಲಾಗುವುದು~ ಎಂದು ಹೇಳಿದರು.

ಕೇವಲ 7 ವರ್ಷದ ಯೋಜನೆಗಾಗಿ ಸರ್ಕಾರ ಆಶಾ ಕಾರ್ಯಕರ್ತರನ್ನು ನೇಮಿಸಿಕೊಂಡಿದೆ. ಆ ನಂತರ ಅವರ ಭವಿಷ್ಯವೇನು?ಆರೋಗ್ಯ ರಕ್ಷಣೆ ಎಂಬ ಘೋಷಣೆಯಡಿ ರಚನೆಯಾದ ಈ ಯೋಜನೆಯು ಸಮಯಾಧಾರಿತವೇ? ಪ್ರಾಯೋಗಿಕವಾಗಿ ಪೂರ್ಣ ಪ್ರಮಾಣದಲ್ಲಿ ಯಶಸ್ವಿಯಾಗದ ಯೋಜನೆ ಮುಂದುವರಿಯಲಿದೆಯೇ? ಈ ಬಗ್ಗೆ ಸರ್ಕಾರವಾಗಲಿ, ಸಂಬಂಧಪಟ್ಟ ಅಧಿಕಾರಿಗಳಾಗಲಿ ಇನ್ನೂ ಉತ್ತರ ಕಂಡುಕೊಂಡಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT