ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಶೀರ್ವಾದ ಎನ್ನುವ ಅನಾಹುತ

ಚಿತ್ರ:ಆಶೀರ್ವಾದ
Last Updated 3 ಆಗಸ್ಟ್ 2013, 19:59 IST
ಅಕ್ಷರ ಗಾತ್ರ

ನಿರ್ಮಾಪಕ: ಸೂರ್ಯ ಮೋಹನ್
ನಿರ್ದೇಶಕ: ವಿಷ್ಣುಪ್ರಿಯನ್
ತಾರಾಗಣ: ಶ್ರೀಹರಿ, ಸೂರ್ಯ ಮೋಹನ್, ದಿಶಾ ಪೂವಯ್ಯ, ಪ್ರಶಾಂತ್‌ರಾಜ್, ಪಂಚತಾರಾ ಶ್ರೀನಿವಾಸ್, ಬದ್ರಿ, ಸೌಜನ್ಯ ಇತರರು
.

>ರಾಜ್ಯದಲ್ಲಿ ತೀವ್ರ ಬರ. ಮಳೆಯ ಬರ ಒಂದೆಡೆಯಾದರೆ, ಗಂಡುಗಳಿಗೆ ಸಾಕಷ್ಟು ಹೆಣ್ಣಿಲ್ಲ ಎನ್ನುವ ಬರ ಇನ್ನೊಂದೆಡೆ. ಆಡಳಿತದ ಚುಕ್ಕಾಣಿ ಹಿಡಿದಾತ ಮೊದಲು ಬಗೆಹರಿಸಲು ಮುಂದಾಗುವುದು ಹೆಣ್ಣುಗಳ ಬರವನ್ನು. ಅದಕ್ಕೆ ಆತ ಮೊರೆಹೋಗುವುದು ಲೋಕಕಲ್ಯಾಣಕ್ಕಾಗಿ ತನ್ನನ್ನು ಮುಡಿಪಾಗಿಟ್ಟುಕೊಂಡ ಸ್ವಾಮೀಜಿಯ ಬಳಿ. `ಆಪರೇಷನ್ ಗರ್ಲ್ಸ್' ಹೆಸರಿನಲ್ಲಿ ಈ ಸ್ವಾಮೀಜಿ ದೇಶವಿದೇಶದಲ್ಲಿರುವ ತನ್ನ ಆಶ್ರಮಗಳ ಅವಿವಾಹಿತ ಮಹಿಳೆಯರನ್ನು ಕರೆಯಿಸಿ ಮದುವೆ ಮಾಡಿಸುವ ಯೋಜನೆ ರೂಪಿಸುತ್ತಾರೆ!

ಎರಡೇ ವರ್ಷದಲ್ಲಿ ಕೋಟ್ಯಂತರ ರೂಪಾಯಿ ಆಸ್ತಿ ಒಡೆಯನಾದ ಸ್ವಾಮೀಜಿಯ ಹಿನ್ನೆಲೆಯೂ ಮಜವಾಗಿದೆ. ಆತ ಓದಿನಲ್ಲಿ ಸದಾ ಮುಂದೆ. ಕಾಲೇಜು ದಿನಗಳ ಬದುಕಿನಲ್ಲಿ ಒಬ್ಬಳು ಪ್ರೇಯಸಿಯೂ ಇದ್ದಾಳೆ. ಸಮಾಜದ ಉದ್ಧಾರವೇ ತನ್ನ ಗುರಿ ಎಂದು ಹೇಳುವ ಆತ ಪ್ರೇಯಸಿಯಿಂದ ದೂರವಾಗಿ, ಭ್ರಷ್ಟ ರಾಜಕಾರಣಿಗಳ ಬ್ಯಾಂಕ್ ಖಾತೆ ಹ್ಯಾಕ್ ಮಾಡಿ ಹಣ ಸಂಪಾದಿಸಿ ಆಶ್ರಮ ಸ್ಥಾಪಿಸುತ್ತಾನೆ. ಕಾಲೇಜಿನಲ್ಲಿ ಆತನಿಗೆ ಪಾಠ ಮಾಡುತ್ತಿದ್ದ ಗುರುವೇ ಮುಂದೆ ಸ್ವಾಮೀಜಿಗೆ ಶಿಷ್ಯನಾಗುತ್ತಾನೆ.

ಇದು `ಆಶೀರ್ವಾದ' ಸಿನಿಮಾದ ಕಥೆ. ಇಂಥದೊಂದು ಸಿನಿಮಾ ಮಾಡಬಹುದೇ ಎನ್ನುವ ಅಚ್ಚರಿ ಹಾಗೂ ಆತಂಕ ಎರಡನ್ನೂ ಹುಟ್ಟಿಸುವ ಸಿನಿಮಾ ಇದು. ಸಿನಿಮಾದ ವ್ಯಾಕರಣದ ಕುರಿತು ಹೇಳುವುದಾದರೆ- ಚಿತ್ರದಲ್ಲಿ ಕ್ಯಾಮೆರಾವನ್ನು ಮನಬಂದಂತೆ ತಿರುಗಿಸಿ ನಿಲ್ಲಿಸಲಾಗಿದೆ. ಕೆಲವರು ಅದರ ಮುಂದೆ ನಿಂತು ಕಂಠಪಾಠ ಸ್ಪರ್ಧೆಯಲ್ಲಿ ಮಕ್ಕಳು ಉರುಹೊಡೆದು ಪದ್ಯ ಹೇಳುವಂತೆ ಸಂಭಾಷಣೆ ಒಪ್ಪಿಸಿ ಮರೆಯಾಗುತ್ತಾರೆ.  ಬಾಲಿಶ ಮತ್ತು ಹಾಸ್ಯಾಸ್ಪದ ಸನ್ನಿವೇಶಗಳು ಚಿತ್ರದುದ್ದಕ್ಕೂ ಇವೆ.

ಸಂಭಾಷಣೆಯಲ್ಲಿನ ದ್ವಂದ್ವಾರ್ಥ ಸಭ್ಯತೆಯ ಗಡಿ ಮೀರಿದೆ. `ಸಿನಿಮಾ' ಮುಗಿದ ಮೇಲೆ ತೆರೆಯ ಮೇಲೆ ಮುಂದುವರೆಯಲಿದೆ...' ಎನ್ನುವ ಸಾಲು ಮೂಡುತ್ತದೆ. ನಿರ್ದೇಶಕರ ಆತ್ಮವಿಶ್ವಾಸವನ್ನು ಮೆಚ್ಚಿಕೊಳ್ಳದೆ ಇರಲಾದೀತೆ? ಕಥೆಯಷ್ಟೇ ತಂತ್ರಜ್ಞಾನದ ಬಳಕೆಯೂ ಕಸುಬುದಾರಿಕೆಯಿಂದ ಕೂಡಿಲ್ಲ. ಇಂಥ ಸಂದರ್ಭದಲ್ಲಿ ಕ್ಯಾಮೆರಾ ಮುಂದೆ ನಿಲ್ಲುವವರಿಂದ ಅಭಿನಯ ನಿರೀಕ್ಷಿಸುವುದು ತಪ್ಪಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT