ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಶ್ರಯ ಮನೆಯಲ್ಲಿ ಅಂಗನವಾಡಿ

Last Updated 10 ಅಕ್ಟೋಬರ್ 2012, 7:00 IST
ಅಕ್ಷರ ಗಾತ್ರ

ಲಿಂಗಸುಗೂರ(ಮುದಗಲ್ಲ): ತಾಲ್ಲೂಕಿನಾದ್ಯಂತ ರಾಜಕಾರಣಿಗಳ ಇಚ್ಛಾಶಕ್ತಿಗನುಗುಣವಾಗಿ ಅಂಗನವಾಡಿ ಕೇಂದ್ರಗಳನ್ನು ತೆರೆಯಲಾಗಿದೆ. ಮಂಜೂರಾದ ಕೇಂದ್ರಗಳಿಗೆ ಸ್ವಂತ ನಿವೇಶನಗಳಿಲ್ಲ. ಅದೆಷ್ಟೊ ಕೇಂದ್ರಗಳಿಗೆ ಸ್ವಂತ ಕಟ್ಟಡಗಳಿಲ್ಲದೆ, ಆಶ್ರಯ ಮನೆ, ಎತ್ತಿನ ಮನೆ, ಜೋಪಡಿಗಳಲ್ಲಿ ಕೇಂದ್ರಗಳು ನಡೆಯುತ್ತಿವೆ.

ಹೀಗಾಗಿ ಮಕ್ಕಳಿಗೆ ಭದ್ರತೆ ಇಲ್ಲದಂತಹ ವಾತಾವರಣ ನಿರ್ಮಾಣಗೊಂಡಿದ್ದು ಸರ್ಕಾರ ಅಗತ್ಯ ಕ್ರಮಕ್ಕೆ ಮುಂದಾಗುವಂತೆ ಕರ್ನಾಟಕ ರಕ್ಷಣಾ ವೇದಿಕೆ ತಾಲ್ಲೂಕು ಅಧ್ಯಕ್ಷ ಜಿಲಾನಿಪಾಷ ಆಗ್ರಹಪಡಿಸಿದ್ದಾರೆ.
ತಾಲ್ಲೂಕಿನಾದ್ಯಂತ 500ಕ್ಕೂ ಹೆಚ್ಚು ಅಂಗನವಾಡಿ ಕೇಂದ್ರಗಳನ್ನು ತೆರೆಯಲಾಗಿದೆ.

ಕೆಲ ಕೇಂದ್ರಗಳಲ್ಲಿ ಮಕ್ಕಳ ಸಂಖ್ಯೆಯೆ ಇರುವುದಿಲ್ಲ. ಸಂಘಟನೆಗಳು, ಅಧಿಕಾರಿಗಳು ಭೇಟಿ ನೀಡಿದಾಗ ಮಕ್ಕಳ ಬಗ್ಗೆ ಕೇಳಿದರೆ ಇಂದು ಬಂದಿಲ್ಲ ಎಂಬ ಸಿದ್ಧ ಉತ್ತರ ದೊರಕುತ್ತದೆ. ಸದಾ ಮಕ್ಕಳ ಕೊರತೆ ಎದುರಿಸುವ ಕೇಂದ್ರಗಳಲ್ಲಿ ಸರ್ಕಾರ ಪೂರೈಸುವ ಆಹಾರ ಸಾಮಗ್ರಿ ಪೂರ್ಣ ಖರ್ಚಾಗುತ್ತಿದೆ. ನಾಯಿ ಕೊಡೆಗಳಂತೆ ಕೇಂದ್ರಗಳು ಹುಟ್ಟಿಕೊಂಡಿದ್ದರು ಕೂಡ ಅಪೌಷ್ಟಿಕ ಮಕ್ಕಳ ಸಂಖ್ಯೆ ನಿಯಂತ್ರಣಕ್ಕೆ ಬಾರದೆ ಹೋಗಿರುವುದು ಇಲಾಖೆ ಕೆಲಸದ ಬಗ್ಗೆ ಅಸಮಾಧಾನ ಮೂಡಿಸುವಂತಾಗಿದೆ.

ಈ ಕುರಿತಂತೆ ಕರವೇ ಕಾರ್ಯಕರ್ತರು ಗುಡಿಹಾಳ, ಆಮದಿಹಾಳ, ನೀರದೊಡ್ಡಿ, ನರಸಿಂಹನಾಯಕ ನಗರ ಸೇರಿದಂತೆ ಸುತ್ತಮುತ್ತಲ ತಾಂಡಾ ದೊಡ್ಡಿಗಳಲ್ಲಿ ನೋಡಲಾಗಿ ಸ್ವಂತ ಕಟ್ಟಡಗಳಿಲ್ಲ. ಹರಕು, ಮುರಕು ಜೋಪಡಿಗಳಲ್ಲಿ ಮಕ್ಕಳ ಸಂಖ್ಯೆ ಇಲ್ಲದೆ ಹೋಗಿದ್ದರು ಕೇಂದ್ರದ ನಾಮಫಲಕ ನೇತು ಹಾಕಲಾಗಿದೆ.
 
ಜನತಾ ಮನೆ, ದನದ ಕೊಟ್ಟಿಗೆ, ಜೋಪಡಿಗಳನ್ನು ಬಾಡಿಗೆ ಈಡಿರುವುದು ನೋಡಿದರೆ ಕೇಂದ್ರಕ್ಕೆ ಬದುವ ಮಕ್ಕಳಿಗೆ ಅಗತ್ಯ ಸೌಲಭ್ಯ ಕಲ್ಪಿಸುವಲ್ಲಿ ಆಡಳಿತ ಸಂಪೂರ್ಣ ವಿಫಲವಾಗಿರುವುದು ಸಾಬೀತಾಗುತ್ತದೆ ಎಂದು ಖೇದ ವ್ಯಕ್ತಪಡಿಸಿದ್ದಾರೆ.

ಪ್ರತಿಯೊಂದು ಅಂಗನವಾಡಿ ಕೇಂದ್ರಗಳಿಗೆ ಶೌಚಾಲಯ ನಿರ್ಮಿಸಿದ್ದಾಗಿ ತಾಲ್ಲೂಕು ಪಂಚಾಯಿತಿ ದಾಖಲೆಗಳು ದೃಢಪಡಿಸುತ್ತವೆ. ವಾಸ್ತವವಾಗಿ ಸ್ಥಳದಲ್ಲಿ ನೋಡಿದರೆ ಬಹುತೇಕ ಕೇಂದ್ರಗಳಿಗೆ ಸ್ವಂತ ಕಟ್ಟಡಗಳೆ ಇಲ್ಲ. ಅಂತಹ ಕೇಂದ್ರಗಳ ಹೆಸರಿನಲ್ಲಿ ಶೌಚಾಲ ನಿರ್ಮಿಸಿದ್ದಾಗಿ ಸಂಘ ಸಂಸ್ಥೆಗಳ ಹೆಸರಿನಲ್ಲಿ ಹಣ ಖರ್ಚು ಮಾಡಲಾಗಿದೆ.

ಸ್ವಂತ ನಿವೇಶನ ಅಥವಾ ಕಟ್ಟಡಗಳೆ ಇಲ್ಲವೆಂದಾದ ಮೇಲೆ ಶೌಚಾಲಯ ನಿರ್ಮಿಸಿದ್ದಾದರು ಎಲ್ಲಿ ಎಂಬುದರ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ. ತನಿಖೆ ನಡೆಸದೆ ಹೋದಲ್ಲಿ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಈ ಕುರಿತಂತೆ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕೆ. ಪ್ರಭಾಕರ ಅವರನ್ನು ಸಂಪರ್ಕಿಸಿದಾಗ, ತಾಲ್ಲೂಕಿನಾದ್ಯಂತ 525 ಕೇಂದ್ರಗಳ ಪೈಕಿ 215 ಕೇಂದ್ರಗಳಿಗೆ ನಿವೇಶನ ಮತ್ತು ಕಟ್ಟಡದ ಕೊರತೆ ಇರುವುದು ನಿಜ. ವಿವಿಧ ಯೋಜನೆಗಳಡಿ ಕಟ್ಟಡ ನಿರ್ಮಿಸಲು ಅವಕಾಶಗಳಿವೆ. ಆದರೆ, ನಿವೇಶನನ ಸಮಸ್ಯೆಗೆ ಪರಿಹಾರ ಇಲ್ಲದಂತಾಗಿದೆ. ಪ್ರತಿನಿಧಿಗಳ ಸಹಕಾರದಿಂದ ನಿವೇಶನ ಪಡೆಯಲು ಪ್ರಯತ್ನ ನಡೆದಿದೆ ಎಂದು ಸ್ಪಷ್ಟಪಡಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT