ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಷಾಢದಲ್ಲಿ 19 ಜೋಡಿ ಕಲ್ಯಾಣ ಮಹೋತ್ಸ

Last Updated 6 ಜುಲೈ 2012, 9:45 IST
ಅಕ್ಷರ ಗಾತ್ರ

ಚಿತ್ರದುರ್ಗ: ಸಾಮೂಹಿಕ ಕಲ್ಯಾಣ ಮಹೋತ್ಸವಗಳಲ್ಲಿ ಸಮಾಜದ ಎಲ್ಲ ವರ್ಗದವರು ಪಾಲ್ಗೊಳ್ಳುವ ಮೂಲಕ ಶ್ರೇಷ್ಠಮಟ್ಟದ ವಿಚಾರಕ್ಕೆ ಮತ್ತು ಬಾಂಧವ್ಯ ಬೆಸುಗೆಗೆ ವೇದಿಕೆ ಆಗುತ್ತಿರುವುದು ಆಶಾದಾಯಕ ಸಂಗತಿ ಎಂದು ವಿಧಾನ ಪರಿಷತ್ ಮಾಜಿ ಸದಸ್ಯರು ಮತ್ತು ಅಖಿಲ ಭಾರತ ವೀರಶೈವ ಮಹಾಸಭಾ ರಾಜ್ಯ ಘಟಕದ ನೂತನ ಅಧ್ಯಕ್ಷ ಎನ್. ತಿಪ್ಪಣ್ಣ ಅಭಿಪ್ರಾಯಪಟ್ಟರು.

ಗುರುವಾರ ನಗರದ ಮುರುಘಾಮಠದ ಬಸವೇಶ್ವರ ಸಭಾಂಗಣದಲ್ಲಿ ಆಯೋಜಿಸಿದ್ದ ಆಷಾಢ ಮಾಸದ 19 ಜೋಡಿ ಸರಳ, ಸಾಮೂಹಿಕ ಕಲ್ಯಾಣ ಮಹೋತ್ಸವದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಈ ಹಿಂದೆ ಬಡವರು, ದಿಕ್ಕಿದಲ್ಲದವರು ಸಾಮೂಹಿಕ ಕಲ್ಯಾಣ ಮಹೋತ್ಸವದಲ್ಲಿ ಭಾಗಿ ಆಗುತ್ತಿದ್ದರು. ಆದರೆ, ಇಂದು ಪರಿಸ್ಥಿತಿ ಬದಲಾಗಿದೆ. ಮುರುಘಾಮಠದಲ್ಲಿ ನಡೆಯುವ ಸಾಮೂಹಿಕ ವಿವಾಹ ತನ್ನದೇ ಆದ ವೈಶಿಷ್ಟ್ಯ ಹೊಂದಿದೆ. ಜಾತಿ, ಮತ, ಪಂಥ, ಲಿಂಗ ತಾರತಮ್ಯ  ದೂರವಿರಿಸಿ ಬಡವ, ಬಲ್ಲಿದ ಭೇದ ತೊಡೆದು ಹಾಕಿ ಸರ್ವ ಸಮಾನತೆ ಅಡಿ ನಡೆಯಲು ಕಾರಣವಾಗಿದೆ ಎಂದು ಅಭಿಪ್ರಾಯಪಟ್ಟರು.

ಯಾವುದೇ ಹಂತದಲ್ಲಿ ಕೆಲಸ ನಿರ್ವಹಿಸಬೇಕಾದರೆ ಪ್ರತಿಯೊಂದಕ್ಕೂ ಅಂಧಶ್ರದ್ಧೆಯನ್ನು ಅನುಸರಿಸುತ್ತ ಬಂದಿರುವುದು ವಿಷಾದದ ಸಂಗತಿ. ಇದು ಆಷಾಢ ಮಾಸವಾಗಿದ್ದರೂ ಶರಣರ ಮಾತಿಗೆ ಮನ್ನಣೆ ನೀಡಿ ತಮ್ಮ ಮಕ್ಕಳ ಮದುವೆಯಲ್ಲಿ ಸಾವಿರ ಸಂಖ್ಯೆಯಲ್ಲಿ ಸೇರಿರುವುದು ಪರಿವರ್ತನೆಯ ಸಂಕೇತ ಎಂದರು.

ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪಿ.ಎ. ಗೋಪಾಲ್ ಮಾತನಾಡಿ, ಸಾಮೂಹಿಕ ವಿವಾಹ ನಾಡಿನ ಹಿತದೃಷ್ಟಿಯಿಂದ ಅಭಿವೃದ್ಧಿಯ ಕಾರ್ಯ. ವಿವಾಹ ವಿವಿಧ ಕುಟುಂಬಗಳನ್ನು ಬೆಸೆಯುವ ಕಾರ್ಯ ವಿಧಾನವಾಗಿದೆ. ಬಡವರ ಪರವಾದ ಈ ಯೋಜನೆ ಸಾರ್ಥಕ್ಯ ಪಡೆದಿರುವುದು ಆಶಾದಾಯಕ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಶಿವಮೂರ್ತಿ ಮುರುಘಾ ಶರಣರು, ಮುರುಘಾಮಠದಲ್ಲಿ ಯಾವಾಗ, ಯಾವುದೇ ಕಾರ್ಯಕ್ರಮ ನಡೆಸಿದರೂ ಜನರು ಸ್ಪಂದಿಸಿ ಸಹಕಾರ ನೀಡುತ್ತಿದ್ದಾರೆ ಎನ್ನುವುದಕ್ಕೆ ಇಂದಿನ ಅಷಾಢಮಾಸದ 19 ಜೋಡಿಯ ಕಲ್ಯಾಣವೇ ಸಾಕ್ಷಿ. ಕಾಲವನ್ನು ನಾವುಗಳು ವಿಭಜನೆ ಮಾಡಿ ಪಂಚಾಂಗದ ಮೂಲಕ ಶುಭ-ಅಶುಭಗಳ ಲೆಕ್ಕಾಚಾರ ಮಾಡಿ ಅಮೂಲ್ಯ ಕಾಲವನ್ನು ವೃಥಾ ಹಾಳು ಮಾಡುತ್ತಿದ್ದೇವೆ. ಯಾವುದೇ ಕಾರಣಕ್ಕೂ ಕಾಲದಲ್ಲಿ ನ್ಯೂನತೆ ಇಲ್ಲ ಎಂದರು.

ಇದೇ ಜುಲೈ 16ರಂದು ಎಲ್ಲ ಜಾತಿ ಜನಾಂಗದ ಸ್ವಾಮಿಗಳು, ಜನಪ್ರತಿನಿಧಿಗಳು, ಪ್ರಗತಿಪರ ಚಿಂತಕರು, ವಿವಿಧ ಸಂಘಟನೆಗಳೊಂದಿಗೆ ಜಾಗೃತಿ ಸಮಾವೇಶ ನಡೆಸಲಾಗುವುದು ಎಂದು ತಿಳಿಸಿದರು.

ಅತ್ಯಾಧುನಿಕ ಜಗತ್ತಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಜನ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಸಮೀಕ್ಷೆ ಪ್ರಕಾರ ಭಾರತದಲ್ಲಿ ಕರ್ನಾಟಕ 5ನೇ ಸ್ಥಾನದಲ್ಲಿದೆ. ಅದು ಬೆಂಗಳೂರು ಪ್ರಥಮದಲ್ಲಿದೆ ಎನ್ನುವುದು ಅತ್ಯಂತ ನೋವಿನ ಸಂಗತಿ. ಭಾರತದಲ್ಲಿ ಪ್ರತಿ 4 ನಿಮಿಷಕ್ಕೊಬ್ಬರಂತೆ ಸಾಯುತ್ತಿದ್ದು, ಪ್ರತಿ 3 ನಿಮಿಷಕ್ಕೊಬ್ಬರಂತೆ ಮಗುವಿನ ಜನನವಾಗುತ್ತಿದೆ. ಈ ಆತ್ಮಹತ್ಯೆಯಲ್ಲಿ ಪ್ರತಿ 5 ಜನರಲ್ಲಿ ಒಬ್ಬ ಸ್ತ್ರೀ ಇದ್ದಾರೆ. ವರದಕ್ಷಿಣೆ, ಅತ್ತೆ ಕಾಟ, ಇನ್ನಿತರ ಕಾರಣಗಳಿರಬಹುದು. ಜನರು ಹಿಂಸೆಗೆ ಪ್ರಚೋದನೆ ನೀಡದೆ ಹೊಂದಾಣಿಕೆಯ ಸ್ವಭಾವವನ್ನು ರೂಢಿಸಿಕೊಳ್ಳಬೇಕು ಎಂದ ಸಲಹೆ ಮಾಡಿದರು.

ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಕುಮಾರಸ್ವಾಮಿ, ಜಿಲ್ಲಾ ವೀರಶೈವ ಸಮಾಜದ ಅಧ್ಯಕ್ಷ ಕೆ.ಆರ್. ಶಿವಪ್ರಕಾಶ್, ಎಸ್.ಜೆ.ಎಂ. ವಿದ್ಯಾಪೀಠದ ಗೌರವ ಕಾರ್ಯದರ್ಶಿ ಪ್ರೊ.ಎಸ್.ಎಚ್. ಪಟೇಲ್, ದಾಸೋಹ ಸೇವಾರ್ಥಿಗಳಾದ ಎ. ತಿಪ್ಪೇಸ್ವಾಮಿ, ಮಹಡಿ ಶಿವಮೂರ್ತಿ, ಎಸ್.ವಿ. ಕೊಟ್ರೇಶ್ ಉಪಸ್ಥಿತರಿದ್ದರು.
ಭೀಮಕ್ಕ ಜನಪದ ಗೀತೆಗಳನ್ನು ಹಾಡಿದರು.  ವೀರಶೈವ ಸಮಾಜದ ಖಜಾಂಚಿ ಎಸ್. ವೀರೇಶ್ ಸ್ವಾಗತಿಸಿದರು. ಪ್ರಾಂಶುಪಾಲ ಎನ್. ವಿಶ್ವನಾಥ್ ಕಾರ್ಯಕ್ರಮ ನಿರೂಪಿಸಿದರು. ಜ್ಞಾನಮೂರ್ತಿ ಮದುವೆ ವಿಧಾನ ನಡೆಸಿದರು. ಡಾ.ಜಯಣ್ಣ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT