ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸರೆ ಗೃಹ ಪ್ರವೇಶಕ್ಕೆ ಸಜ್ಜು

Last Updated 20 ಫೆಬ್ರುವರಿ 2011, 11:25 IST
ಅಕ್ಷರ ಗಾತ್ರ

ಶತಶತಮಾನಗಳಿಂದ ಮಳೆಗಾಲದಲ್ಲಿ ತುಂಗಭದ್ರಾ ನದಿ ಪ್ರವಾಹಕ್ಕೆ ಸಿಲುಕಿ ನಿರಾಶ್ರಿತರಾಗುತ್ತಿದ್ದ ಮಲೇಬೆನ್ನೂರು ಸಮೀಪದ ಹಳೇಪಾಳ್ಯ, ಗೋವಿನಹಾಳು ಗ್ರಾಮದ ಜನರಿಗೆ ’ಆಸರೆ’ ಮನೆ   ನಿರ್ಮಾಣ ಕಾರ್ಯ ಮುಕ್ತಾಯ ಹಂತದಲ್ಲಿದ್ದು, ಸೂರಿನ ಕನಸು ನನಸಾಗುತ್ತಿದೆ.ಪ್ರತಿವರ್ಷ ಮಳೆಗಾಲದಲ್ಲಿ ಲಕ್ಕವಳ್ಳಿ, ಗಾಜನೂರಿನ ಅಣೆಕಟ್ಟು ತುಂಬಿ ಪ್ರವಾಹ ಭೀತಿಯಿಂದ ರಾತ್ರಿವೇಳೆ ಅಂಗೈಯಲ್ಲಿ ಜೀವ ಹಿಡಿದುಕೊಂಡು ಬದುಕುವ ಪರಿಸ್ಥಿತಿ ನಿರ್ಮಾಣವಾಗುತ್ತಿತ್ತು. ಮನೆಮಠ, ಧನಧಾನ್ಯ, ಕಾಗದ ಪತ್ರ ತೇಲಿಹೋಗಿದ್ದವು. ಪ್ರವಾಹದ ವೇಳೆ ಗಂಜಿಕೇಂದ್ರ ತೆರೆಯುವುದು, ರಾಜಕಾರಣಿಗಳ ಭೇಟಿ, ಸಾಂತ್ವನದ ಮಾತು ಬೇಸರ ತಂದಿತ್ತು.

ಆದರೆ, 2009-10ರ ಪ್ರವಾಹ ನೆರೆ ಸಮಸ್ಯೆಗೆ ಸರ್ಕಾರ ಸ್ಪಂದಿಸಿವಂತೆ ಮಾಡಿತು. ಮುಖ್ಯಮಂತ್ರಿಗಳಿಂದ ಶಂಕುಸ್ಥಾಪನೆಯಾದ ನಂತರ ಮನೆ ನಿರ್ಮಿಸಿಕೊಡುವ ಭರವಸೆ ನೀಡಿದ್ದ ವಿಪ್ರೋ ಹಾಗೂ ಅಮೆರಿಕದ ಗೋವಿಂದ ಪ್ರಸಾದ್ ಫೌಂಡೇಷನ್ ಮನೆ ನಿರ್ಮಿಸುವ ಭರವಸೆ ವಿಫಲವಾಗಿ  ನಿರಾಸೆ ಮೂಡಿಸಿತ್ತು.  ಆದರೆ, ಕರ್ನಾಟಕ ಭೂಸೇನಾ ನಿಗಮ ಕಾಮಗಾರಿ ನಿರ್ವಹಿಸಿರುವುದು ಸಂತಸದ ವಿಚಾರ ಎನ್ನುತ್ತಾರೆ ಗ್ರಾಮಸ್ಥರು.   

ಮನೆ ವಿನ್ಯಾಸದ ವಿವರ: ಪ್ರಸ್ತುತ 30X50 ನಿವೇಶನದಲ್ಲಿ, 325 ಚದರಡಿಯಲ್ಲಿ ಒಂದು ಮಲಗುವ ಕೋಣೆ, ಹಾಲ್, ಅಡುಗೆ ಮನೆ, ಬಚ್ಚಲು ಹಾಗೂ ಹೊರಗೆ ಶೌಚಾಲಯ ನಿರ್ಮಿಸಲಾಗಿದೆ. ಸೈಜ್‌ಕಲ್ಲಿನ ಬುನಾದಿ, ಕಬ್ಬಿಣದ ಬಳಸಿ ಪ್ಲಿಂತ್ ಬೀಮ್ ಹಾಕಲಾಗಿದೆ. ಗೋಡೆಗಳನ್ನು 6 ಇಂಚು ದಪ್ಪದ ಸಾಲಿಡ್ ಸಿಮೆಂಟ್ ಬ್ಲಾಕ್ ಸಿಮೆಂಟ್‌ಗಾರೆ ಮಿಶ್ರಣದೊಂದಿಗೆ ಕಟ್ಟಲಾಗಿದೆ. ತುಮಕೂರು ಜಲ್ಲಿ, ಕಬ್ಬಿಣದ ಕಿಟಕಿ, ಕಾಂಕ್ರಿಟ್ ಚೌಕಟ್ಟು ಉಪಯೋಗಿಸಿ ಪ್ಯಾನೆಲ್ ಬಾಗಿಲು ಅಳವಡಿಸಿ, ಮೇಲ್ಛಾವಣಿಗೆ ಆರ್‌ಸಿಸಿ ಹಾಕಿದೆ. ಗೋಡೆ ಒಳ ಹಾಗೂ ಹೊರಭಾಗ ಸಿಮೆಂಟ್ ಗಾರೆಯಿಂದ ಪ್ಲಾಸ್ಟರಿಂಗ್ ಹಾಗೂ ನೆಲಕ್ಕೆ ನಯವಾದ ಕಡಪ ಕಲ್ಲುಹಾಕಿ, ವಿದ್ಯುಚ್ಛಕ್ತಿ, ಕೊಳಾಯಿ, ಸುಣ್ಣ ಬಣ್ಣ ಕೆಲಸ ಮುನ್ನಡೆದಿದೆ. ಹಳೇಪಾಳ್ಯದ 111 ಮನೆಗಳಲ್ಲಿ 60 ಮುಗಿದಿದ್ದು, ಇನ್ನುಳಿದ 51 ಮತ್ತು ಗೋವಿನಹಾಳು ಗ್ರಾಮದಲ್ಲಿ 28 ಮನೆ ಕಾಮಗಾರಿ ಪ್ರಗತಿಯಲ್ಲಿದೆ.     ಪ್ರಸ್ತುತ ದುಬಾರಿ ಕಾಲದಲ್ಲಿ 3, 25 ಚದರಡಿ ಆರ್‌ಸಿಸಿ ಮನೆ 1 ಲಕ್ಷದ 30 ಸಾವಿರ ವೆಚ್ಚದಲ್ಲಿ ನಿರ್ಮಿಸಿದ್ದು, ಒಂದು ಸಾಧನೆ ಎಂದು ಭೂಸೇನಾ ನಿಗಮದ ಎಂಜಿನಿಯರ್ ರಂಗರಾಜು ಹರ್ಷವ್ಯಕ್ತಪಡಿಸಿದರು. 

ಕಾರ್ಮಿಕರ ಅಳಲು:
ಚಿಕ್ಕ ಮನೆ ಎಂದು ನಿರ್ಮಿಸಲು ಕಮ್ಮಿ ಬೆಲೆಗೆ ಗುತ್ತಿಗೆ ಹಿಡಿದೆವು. ಆದರೆ, ಈಗ ನಷ್ಟವಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸುತ್ತಾರೆ ಶಿಕಾರಿಪುರದ ಕಾರ್ಮಿಕ ಹುಸೇನ್. 
ಗ್ರಾಮಸ್ಥರ ಹರ್ಷ: ಮನೆ ಗುಣಮಟ್ಟದ ಬಗ್ಗೆ ಮೆಚ್ಚುಗೆ ಸೂಚಿಸುತ್ತಾರೆ ಕಾಮಗಾರಿ ಸ್ಥಳದಲ್ಲಿ ಗೋವಿನಹಾಳ್ ಕ್ಯಾಂಪ್‌ನ ಹನುಮಂತಪ್ಪ, ಪಾಳ್ಯದ ಬಸವರಾಜು ಮತ್ತಿತರರು.
ಶೀಘ್ರವಾಗಿ ರಸ್ತೆ, ಕುಡಿಯುವ ನೀರು, ಶಾಲೆ, ಸಮುದಾಯ ಭವನ, ಅಂಗನವಾಡಿ ಹಾಗೂ ವಾಚನಾಲಯ, ಮಾರುಕಟ್ಟೆ ಇನ್ನಿತರ ಸೌಲಭ್ಯ ನೀಡಿದರೆ ಜನತೆ ಹಳೇ ಊರಿನಿಂದ ‘ಆಸರೆ’ ಬಡಾವಣೆಗೆ ಸ್ಥಳಾಂತರವಾಗಲು ಸಾಧ್ಯ ಎನ್ನುತ್ತಾರೆ ಅವರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT