ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸರೆಯಾದವ ಮರೆಯಾದಾಗ...

Last Updated 19 ಡಿಸೆಂಬರ್ 2012, 9:23 IST
ಅಕ್ಷರ ಗಾತ್ರ

ಕಾರವಾರ: ಆನಂದದಿಂದ ಕುಡಿದ ಆ ಕುಟುಂಬದವರ ಬದುಕಿನಲ್ಲಿ ಕಾರ್ಮೊಡಗಳು ಕವಿದಿದೆ. ಅವರ ಬದುಕಿಗೆ ಆರೆಯಾಗಿದ್ದ ಸೂರ್ಯ ಮರೆಯಾಗಿದ್ದಾನೆ. ಪತಿಯ ಅಗಲಿಕೆಯಿಂದ ಪತ್ನಿ ತೀವ್ರವಾಗಿ ನೊಂದಿದ್ದಾಳೆ. ಅತ್ತುಅತ್ತು ಕಣ್ಣೀರು ಬತ್ತಿ ಹೋಗಿದೆ. ತಂದೆ ಊಟ, ನಿದ್ದೆ ಬಿಟ್ಟು ಮೌನಕ್ಕೆ ಶರಣಾಗಿದ್ದಾರೆ. ಬದುಕಿಗೆ ಆಸರೆಯಾಗಿದ್ದ ಒಬ್ಬನೇ ಮಗನನ್ನು ಕಳೆದುಕೊಂಡ ತಾಯಿ ಬಿಕ್ಕಿಬಿಕ್ಕಿ ಅಳುತ್ತಾರೆ.

ಇದು ದುಷ್ಕರ್ಮಿಗಳ ಗುಂಡಿಗೆ ಬಲಿಯಾದ ಯಲ್ಲಾಪುರ ತಾಲ್ಲೂಕಿನ ಇಡಗುಂದಿ ಸಮೀಪ ಬೀರಗದ್ದೆಯ ನಿವಾಸಿ, ಅರಣ್ಯ ಇಲಾಖೆಯಲ್ಲಿ ವಾಚಮನ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಮಹಾದೇವ ಸಿದ್ದಿ ಅವರ ಕುಟುಂಬದ ಚಿತ್ರಣ. ಅರಣ್ಯ ರಕ್ಷಣೆಯೇ ತನ್ನ ಸರ್ವಸ್ವ ಎಂದು ನಂಬಿದ ಮಹಾದೇವ ಅವರನ್ನು ಕಳೆದುಕೊಂಡ ಕುಟುಂಬ ದುಃಖದ ಮಡುವಿನಿಂದ ಇನ್ನೂ ಹೊರಬಂದಿಲ್ಲ.

ಕರ್ತವ್ಯವೇ ತನ್ನ ಬಾಳಿನ ಉಸಿರು ಎಂದು ನಂಬಿದ ಸಿದ್ದಿ ಡಿ. 5ರಂದು ರಾತ್ರಿ ಪಾಳಿಗೆ ತೆರಳುತ್ತಿದ್ದ ಸಂದರ್ಭದಲ್ಲಿ ದುಷ್ಕರ್ಮಿಗಳು ಗುಂಡಿಕ್ಕಿದರು. ಸ್ಥಳದಲ್ಲೇ ಸಾವನ್ನಪ್ಪಿದ ಸಿದ್ದಿ ಅರಣ್ಯ ಸೇವೆಯಿಂದ ಶಾಶ್ವತವಾಗಿ ದೂರ ಸರಿದರು.

ಮಹಾದೇವ ಅವರು ಕುಟುಂಬದ ಆಧಾಸ್ತಂಭವಾಗಿದ್ದರು. ಅವರನ್ನು ಕಳೆದುಕೊಂಡ ಕುಟುಂಬಕ್ಕೆ ದಿಕ್ಕು ತೋಚದಂತಾಗಿದೆ. ಘಟನೆಯ ನಂತರ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಬಂದು ಒಂದು ಲಕ್ಷ ರೂಪಾಯಿ ಪರಿಹಾರ ನೀಡಿ ಸಾಂತ್ವನದ ಮಾತುಗಳನ್ನು ಹೇಳಿ ಮಹಾದೇವ ಅವರ ಪತ್ನಿಗೆ ಕೆಲಸ ಕೊಡುವ ಭರವಸೆ ನೀಡಿದ್ದಾರೆ.

`ಮಹಾದೇವ ಸಿದ್ದಿಗೆ ಊರಿನಲ್ಲಿ ಶತ್ರುಗಳೇ ಇರಲಿಲ್ಲ. ಎಲ್ಲರೊಂದಿಗೆ ಅವರು ಬೆರೆತುಕೊಂಡಿದ್ದರು. ಹೀಗೆ ಅಜಾತುಶತ್ರುವಾಗಿದ್ದ ಸಿದ್ದಿಗೆ ಯಾರು, ಯಾವ ಕಾರಣಕ್ಕಾಗಿ ಗುಂಡು ಹಾಕಿದರು ಎನ್ನುವುದು ಮಾತ್ರ ನಿಗೂಢವಾಗಿದೆ.

`ನನ್ನ ಮಗ ಯಾರೊಂದಿಗೆ ವೈರತ್ವ ಕಂಡಿಕೊಂಡವನಲ್ಲ. ಊರಿನಲ್ಲಿ ಎಲ್ಲರೊಂದಿಗೂ ಆತ್ಮೀಯತೆಯಿಂದಿದ್ದ. ಯಾರು, ಏಕೆ ಅವನಿಗೆ ಗುಂಡಿಕ್ಕಿದರು ಎನ್ನುವುದು ನನಗೆ ಅರ್ಥವಾಗುತ್ತಿಲ್ಲ. ಅವನಿಗೆ ಗುಂಡಿಕ್ಕಿದವರನ್ನು ಪೊಲೀಸರು ಬಂಧಿಸಲೇಬೇಕು. ಏಕೆ ಹೀಗೆ ಮಾಡಿದ್ದೀರಿ ಎಂದು ಅವರ ಬಳಿ ನಾನು ಕೇಳಬೇಕು' ಎಂದು ಗದ್ಗದಿತರಾದರು ಮಹಾದೇವನ ತಾಯಿ ಪಾರ್ವತಿ ಸಿದ್ದಿ.

ಬಾಬು ಮತ್ತು ಪಾರ್ವತಿ ಸಿದ್ದಿಗೆ ಒಬ್ಬ ಪುತ್ರಿ, ಪುತ್ರ ಸೇರಿದಂತೆ ಇಬ್ಬರು ಮಕ್ಕಳು. ಬರಗದ್ದೆಯ ಭಟ್ಟರ ಹೊಲದಲ್ಲಿ ದುಡಿದು ಜೀವನ ಸಾಗಿಸುತ್ತಿದ್ದರು. ಮಗ ವಯಸ್ಸಿಗೆ ಬಂದು ದಿನಗೂಲಿ ಆಧಾರದ ಮೇಲೆ ಅರಣ್ಯ ಇಲಾಖೆಯಲ್ಲಿ ಕೆಲಸಕ್ಕೆ ಸೇರಿದ ನಂತರ ಬಾಬು ಮತ್ತು ಪಾರ್ವತಿ ಸಿದ್ದಿ ಹೊಲಕ್ಕೆ ಹೋಗುವುದನ್ನು ನಿಲ್ಲಿಸಿದ್ದರು.

ಸಿದ್ದಿಗೆ ಒಂದು ಹೆಣ್ಣು, ಇಬ್ಬರು ಗಂಡು ಮಕ್ಕಳು. ಮಕ್ಕಳ ಪೈಕಿ ದೊಡ್ಡವಳು ಅರ್ಚನಾ ಯಲ್ಲಾಪುರದ ಪ್ರೌಢಶಾಲೆಯಲ್ಲಿ ಎಂಟನೇ, ಪುತ್ರ ಅಭಿಷೇಕ ಆರು ಮತ್ತು ಶಂಕರ ನಾಲ್ಕನೇ ತರಗತಿ ಓದುತ್ತಿದ್ದಾರೆ. ತಂದೆಯನ್ನು ಕಳೆದುಕೊಂಡ ಮಕ್ಕಳು ಭವಿಷ್ಯದ ಬಗ್ಗೆ ಚಿಂತಿತರಾಗಿದ್ದಾರೆ.

`ಅವರನ್ನು ನಮ್ಮನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದರು. ಒಂದಿನವೂ ಜೋರಾಗಿ ಮಾತನಾಡಿದವರಲ್ಲ. ಇಡಗುಂದಿಯಲ್ಲಿರುವ ವಲಯ ಅರಣ್ಯಾಧಿಕಾರಿಗಳ ಕಚೇರಿಗೆ ಹೋಗಿ ಲೈಟ್ ಹಾಕಬೇಕು ಎಂದು ಡಿ. 5ರಂದು 7.30ಗೆ ಹೊರಟಿದ್ದರು. ಅದೇ ನಾನು ಪತಿಯೊಂದಿಗೆ ಕಳೆದ ಕೊನೆ ಕ್ಷಣವಾಗಿತ್ತು' ಎಂದು ಬಿಕ್ಕಿಬಿಕ್ಕಿ ಅತ್ತರು ಮಹಾದೇವ ಸಿದ್ದಿ ಪತ್ನಿ.

`ತಪ್ಪಿತಸ್ಥರನ್ನು ಪೊಲೀಸರು ಕೂಡಲೇ ಬಂಧಿಸಿ, ಅವರಿಗೆ ಶಿಕ್ಷೆ ಕೊಡಬೇಕು ಆಗಲೆ ನಮಗೆ ಸಮಾಧಾನ ಎನ್ನುತ್ತಾರೆ ಮಹಾದೇವ ಸಿದ್ದಿಯ ಕುಟುಂಬದ ಸದಸ್ಯರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT