ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸೀಸ್ ದೌರ್ಬಲ್ಯಗಳೇ ನಮ್ಮ ಬಲ

Last Updated 21 ಮಾರ್ಚ್ 2011, 19:30 IST
ಅಕ್ಷರ ಗಾತ್ರ

ಚೆನ್ನೈ (ಐಎಎನ್‌ಎಸ್): ಪ್ರಸಕ್ತ ವಿಶ್ವಕಪ್ ಕ್ರಿಕೆಟ್ ಟೂರ್ನಿಯು ಯುವರಾಜ್ ಸಿಂಗ್ ಅವರ ವೃತ್ತಿಜೀವನದ ‘ಟರ್ನಿಂಗ್ ಪಾಯಿಂಟ್’ ಎನಿಸಿಕೊಳ್ಳುವ ಎಲ್ಲ ಲಕ್ಷಣಗಳೂ ಗೋಚರಿಸುತ್ತಿವೆ. ಟೂರ್ನಿಯ ಲೀಗ್ ಹಂತದಲ್ಲಿ ಅವರು ಮೂರು ಸಲ ‘ಪಂದ್ಯಶ್ರೇಷ್ಠ’ ಗೌರವಕ್ಕೆ ಪಾತ್ರರಾಗಿದ್ದಾರೆ.

ಈ ಟೂರ್ನಿಯಲ್ಲಿ ಯಾವುದೇ ತಂಡದ ಆಟಗಾರ ಮೂರು ಸಲ ಈ ಸಾಧನೆ ಮಾಡಿಲ್ಲ. ವೆಸ್ಟ್ ಇಂಡೀಸ್ ವಿರುದ್ಧ ಭಾನುವಾರ ಚೆನ್ನೈನಲ್ಲಿ ನಡೆದ ಪಂದ್ಯದಲ್ಲಿ ಯುವರಾಜ್ ಆಲ್‌ರೌಂಡ್ ಪ್ರದರ್ಶನ ನೀಡಿದ್ದರು. ಆಕರ್ಷಕ ಶತಕ (113) ಗಳಿಸಿದ್ದ ಅವರು 18 ರನ್ ನೀಡಿ ಎರಡು ವಿಕೆಟ್ ಪಡೆದಿದ್ದರು.

ಪಂಜಾಬ್‌ನ ಈ ಎಡಗೈ ಬ್ಯಾಟ್ಸ್‌ಮನ್ ಈಗಾಗಲೇ ಒಂದು ಶತಕ ಮತ್ತು ಮೂರು ಅರ್ಧಶತಕ ಗಳಿಸಿದ್ದಾರೆ. ಈ ಟೂರ್ನಿಯಲ್ಲಿ ಇಂತಹ ಸಾಧನೆಯನ್ನು ಯಾರಿಗೂ ಮಾಡಲು ಸಾಧ್ಯವಾಗಿಲ್ಲ. ಐರ್ಲೆಂಡ್ ವಿರುದ್ಧ ಬೆಂಗಳೂರಿನಲ್ಲಿ ನಡೆದ ಪಂದ್ಯದಲ್ಲಿ ‘ಯುವಿ’ ಆಲ್‌ರೌಂಡ್ ಆಟ ಪ್ರದರ್ಶಿಸಿದ್ದರು. ಅರ್ಧಶತಕ ಗಳಿಸಿದ್ದಲ್ಲದೆ, ಐದು ವಿಕೆಟ್ ಪಡೆಯಲೂ ಯಶಸ್ವಿಯಾಗಿದ್ದರು.

ಪಂದ್ಯವೊಂದರಲ್ಲಿ ಶತಕ ಗಳಿಸುವ ಜೊತೆಗೆ ಎರಡು ವಿಕೆಟ್ ಪಡೆದ ಒಂಬತ್ತನೇ ಆಟಗಾರ ಎಂಬ ಗೌರವವನ್ನೂ ಭಾನುವಾರ ಎಂ.ಎ. ಚಿಂದಂಬರಮ್ ಕ್ರೀಡಾಂಗಣದಲ್ಲಿ ಯುವರಾಜ್ ತಮ್ಮದಾಗಿಸಿಕೊಂಡರು. ಅಮೀರ್ ಸೊಹೇಲ್, ಅರವಿಂದ ಡಿಸಿಲ್ವ, ನೀಲ್ ಜಾನ್ಸನ್, ಫೀಕೊ ಕೊಪೆನ್‌ಬರ್ಗ್, ಸನತ್ ಜಯಸೂರ್ಯ, ರ್ಯಾನ್ ಟೆನ್ ಡಾಶೆಟ್, ತಿಲಕರತ್ನೆ ದಿಲ್ಶಾನ್ ಮತ್ತು ಪಾಲ್ ಸ್ಟಿರ್ಲಿಂಗ್ ಅವರು ಈ ಸಾಧನೆ ಮಾಡಿದ ಇತರ ಆಟಗಾರರಾಗಿದ್ದಾರೆ.

29ರ ಹರೆಯದ ಯುವರಾಜ್ ಸಿಂಗ್ ಅವರು ಈಗಾಗಲೇ 25.22ರ ಸರಾಸರಿಯಲ್ಲಿ ಒಂಬತ್ತು ವಿಕೆಟ್‌ಗಳನ್ನು ಪಡೆದಿದ್ದಾರೆ. ಟೂರ್ನಿಯೊಂದರಲ್ಲಿ ಅವರು ತೋರಿದ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ಇದಾಗಿದೆ. 2001 ರಲ್ಲಿ ಶ್ರೀಲಂಕಾದಲ್ಲಿ ನಡೆದ ಟೂರ್ನಿಯೊಂದರಲ್ಲಿ ಏಳು ವಿಕೆಟ್ ಪಡೆದದ್ದು ಅವರ ಇದುವರೆಗಿನ ಉತ್ತಮ ಪ್ರದರ್ಶನ ಎನಿಸಿತ್ತು. 

ಆಸೀಸ್ ದೌರ್ಬಲ್ಯಗಳೇ ನಮ್ಮ ಬಲ: ನಾಯಕ ರಿಕಿ ಪಾಂಟಿಂಗ್ ಬ್ಯಾಟಿಂಗ್ ವೈಫಲ್ಯ ಮತ್ತು ಕೆಲವು ಮುಖ್ಯ ಆಟಗಾರರ ನಿವೃತ್ತಿಯಿಂದಾಗಿ ಆಸ್ಟ್ರೇಲಿಯಾ ಮೊದಲಿನ ತಂಡವಾಗಿ ಉಳಿದಿಲ್ಲ. ಅವರ ದೌರ್ಬಲ್ಯಗಳನ್ನು ಚೆನ್ನಾಗಿ ಅರಿತಿರುವ ನಾವು ಕ್ವಾರ್ಟರ್‌ಫೈನಲ್‌ನಲ್ಲಿ ಗೆದ್ದೇ ಗೆಲ್ಲುತ್ತೇವೆ...’

ಚೆನ್ನೈನಲ್ಲಿ ಭಾನುವಾರ ವೆಸ್ಟ್ ಇಂಡೀಸ್ ವಿರುದ್ಧದ ವಿಶ್ವಕಪ್ ಕ್ರಿಕೆಟ್‌ನ ಕೊನೆಯ ಲೀಗ್ ಪಂದ್ಯದಲ್ಲಿ ಶತಕ ಬಾರಿಸಿದ ಭಾರತದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಯುವರಾಜ್ ಸಿಂಗ್ ಹೇಳಿಕೆಯಿದು.

’ವಿಶ್ವಕಪ್ ಟೂರ್ನಿಯಲ್ಲಿ ಆಸೀಸ್ ನಾಯಕ ಪಾಂಟಿಂಗ್ ಹೆಚ್ಚಿನ ರನ್ ಗಳಿಸಲು ಸಾಧ್ಯವಾಗಿಲ್ಲ. ಲೀಗ್ ಹಂತದಲ್ಲಿ ಅವರ ತಂಡವೂ ಐದು ಪಂದ್ಯಗಳನ್ನು ಗೆದ್ದಿದೆ.  ಮೇಲ್ನೋಟಕ್ಕೆ ನಾವು (ಭಾರತ) ಅವರು ಸಮಬಲಶಾಲಿಗಳು. ಗುರುವಾರದ ಎಂಟರ ಘಟ್ಟದ ಪಂದ್ಯದಲ್ಲಿ ಯಾರು ಉತ್ತಮವಾಗಿ ಆಡುತ್ತಾರೆಯೋ  ಅವರಿಗೆ ಗೆಲುವು ಒಲಿಯುತ್ತದೆ. ಕಳೆದ ಮೂರು ವಿಶ್ವಕಪ್ ಟೂರ್ನಿಗಳ ಚಾಂಪಿಯನ್ ಆಗಿರುವ ಆಸೀಸ್ ತಂಡವನ್ನು ನಾವು ಹಗುರವಾಗಿಯೂ ಪರಿಗಣಿಸಿಲ್ಲ’ ಎಂದು ಯುವಿ ಹೇಳಿದರು.
‘ಗ್ಲೆನ್ ಮೆಕ್ ಗ್ರಾ, ಶೇನ್ ವಾರ್ನ್ ಮತ್ತು ಆ್ಯಡಮ್ ಗಿಲ್‌ಕ್ರಿಸ್ಟ್ ಅವರು ನಿವೃತ್ತರಾಗಿದ್ದಾರೆ. ಆದರೆ, ಸದ್ಯದ ಅವರ ವೇಗಿಗಳ ಬೌಲಿಂಗ್ ದಾಳಿ ಪರಿಣಾಮಕಾರಿಯಾಗಿದೆ. ಅದನ್ನು ಎದುರಿಸಲು ನಾವು ಸಿದ್ಧರಾಗಿದ್ದೇವೆ. ಶಾರ್ಟ್ ಪಿಚ್ ಎಸೆತಗಳು ನಮಗೆ ಸಮಸ್ಯೆಯಲ್ಲ. ಟೆಸ್ಟ್ ಮತ್ತು ಏಕದಿನ ಕ್ರಿಕೆಟ್‌ಗಳಲ್ಲಿ ವಿಶ್ವದ ಅತ್ಯುತ್ತಮ ತಂಡ ನಮ್ಮದು. ಶಾಟ್‌ಪಿಚ್ ಎಸೆತಗಳನ್ನು ಆಡಲು ಬರದಿದ್ದರೆ ಈ ಅಗ್ರಪಟ್ಟ ಪಡೆಯಲು ಸಾಧ್ಯವಿತ್ತೆ’ ಎಂದು ಹೇಳಿದರು.

‘ವಿಶ್ವಕಪ್ ಗೆಲ್ಲಲೇಬೇಕೆಂಬ ಕನಸು ಇದ್ದಾಗ, ಯಾವ ತಂಡದ ವಿರುದ್ಧ ಆಡುತ್ತೇವೆ ಎನ್ನುವುದು ಮುಖ್ಯವಾಗುವುದಿಲ್ಲ. ಆಸ್ಟ್ರೇಲಿಯ, ಪಾಕಿಸ್ತಾನ ಮತ್ತು ಶ್ರೀಲಂಕಾದಂತಹ ಉತ್ತಮ ತಂಡಗಳನ್ನುಎದುರಿಸಲು ಸಿದ್ಧರಾಗಬೇಕು ಅಷ್ಟೇ’ ಎಂದರು.

‘ವಿಂಡೀಸ್ ವಿರುದ್ಧದ ಶತಕ ಖುಷಿ ತಂದಿದೆ. ಕ್ರಿಸ್‌ಗೆ ಬಂದಾಗಲೇ ಶತಕ ಹೊಡೆಯಬೇಕೆಂದು ನಿಶ್ಚಯಿಸಿದ್ದೆ. ಆ ಹಂತದಲ್ಲಿ ಅದರ ಅಗತ್ಯವೂ  ತಂಡಕ್ಕೆ ಇತ್ತು. ಚೆಂಡನ್ನು ಗಾಳಿಯಲ್ಲಿ ಹೊಡೆಯುವ ಬದಲು ತಾಳ್ಮೆಯಿಂದ ಗ್ರೌಂಡ್‌ಶಾಟ್ಸ್ ಆಡಿದೆ. ನನ್ನ ಹೊಡೆತಗಳು ಸತ್ವಯುತವಾಗಿದ್ದವು. ಇದೇ ಪ್ರದರ್ಶವನ್ನು  ಮುಂದುವರಿಸುತ್ತೇನೆ. ದೇಶ ಗೆದ್ದಾಗ ಆಗುವ ಸಂತಸ ಅಪಾರ’ ಎಂದರು.

‘ಹೊಟ್ಟೆಯ ಸ್ನಾಯಗಳಲ್ಲಿ ನೋವಿತ್ತು.  ಪಂದ್ಯದ ದಿನ ಬೆಳಿಗ್ಗೆ ಬಹಳಷ್ಟು ತೊಂದರೆ ಅನುಭವಿಸಿದ್ದೆ. ತಂಡದ ಕೆಲವು ಆಟಗಾರರಿಗೆ ಜಂತಿನ ಸಮಸ್ಯೆಯೂ ಇದೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT