ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ಕರ್: ರೆಹಮಾನ್, ತಾರೀಖ್ ಅನ್ವರ್‌ಗೆ ನಿರಾಸೆ

Last Updated 28 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ

ಲಾಸ್ ಏಂಜಲೀಸ್ (ಪಿಟಿಐ): ಎರಡು ವರ್ಷಗಳ ಹಿಂದೆ ಎರಡು ಆಸ್ಕರ್ ಪ್ರಶಸ್ತಿ ಮುಡಿಗೇರಿಸಿಕೊಂಡು ‘ಜೈ ಹೋ’ ಎನ್ನಿಸಿಕೊಂಡಿದ್ದ ಖ್ಯಾತ ಸಂಗೀತ ನಿರ್ದೇಶಕ ಎ. ಆರ್. ರೆಹಮಾನ್ ಅವರಿಗೆ ಈ ಬಾರಿ ನಿರಾಸೆ ಎದುರಾಗಿದೆ. ಅವರಂತೆ ಅನಿವಾಸಿ ಭಾರತೀಯ ಸಂಕಲನಕಾರ ತಾರೀಖ್ ಅನ್ವರ್ ಅವರಿಗೂ ಪ್ರಶಸ್ತಿ ಕೈತಪ್ಪಿಹೋಗಿದೆ.

ಇಲ್ಲಿ ನಡೆದ 83ನೇ ಅಕಾಡೆಮಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಡ್ಯಾನಿ ಬೊಯ್ಲಾ ಅವರ ‘127 ಅವರ್ಸ್‌’ ಚಿತ್ರದ ಸಂಗೀತಕ್ಕೆ ರೆಹಮಾನ್ ಅವರಿಗೆ  ಅತ್ಯುತ್ತಮ ಮೂಲ ಸಂಗೀತ ಆಸ್ಕರ್ ಪ್ರಶಸ್ತಿ ಹಾಗೂ ‘ಇಫ್ ಐ ರೈಸ್’ ಹಾಡಿಗೆ ಅತ್ಯುತ್ತಮ ಹಾಡಿಗಾಗಿ ನೀಡುವ ಆಸ್ಕರ್ ಸಿಗುತ್ತದೆ ಎಂದು ಭಾವಿಸಲಾಗಿತ್ತು. ಆದರೆ ಎಲ್ಲಾ ನಿರೀಕ್ಷೆ ಹುಸಿಯಾಯಿತು.
ಉತ್ತಮ ಹಾಡು ಪ್ರಶಸ್ತಿ ರಾಂಡಿ ನ್ಯೂಮನ್ ಅವರಿಗೆ ‘ಟಾಯ್ ಸ್ಟೋರಿ 3’ ಚಿತ್ರದ  ‘ವಿ ಬಿಲಾಂಗ್ ಟುಗೆದರ್’ ಹಾಡಿಗೆ ಲಭಿಸಿದರೆ, ಉತ್ತಮ ಮೂಲ ಸಂಗೀತ ಪ್ರಶಸ್ತಿ ‘ದಿ ಸೋಷಿಯಲ್ ನೆಟ್‌ವರ್ಕ್’ ಚಿತ್ರಕ್ಕೆ ಸಂಗೀತ ನೀಡಿದ ಟ್ರೆಂಟ್ ರೆಜ್ನರ್ ಮತ್ತು ಅಟ್ಟಕಾಸ್ ರೋಸ್ ಅವರಿಗೆ ಲಭಿಸಿತು.

2009ರಲ್ಲಿ ರೆಹಮಾನ್ ಅವರು ಬೊಯ್ಲೆ ಅವರದೇ ಚಿತ್ರ ‘ಸ್ಲಂಡಾಗ್ ಮಿಲೇನಿಯರ್’ ಚಿತ್ರಕ್ಕೆ ನೀಡಿದ ಸಂಗೀತಕ್ಕೆ ಎರಡು ಆಸ್ಕರ್ ಪ್ರಶಸ್ತಿ ಗಳಿಸಿದ್ದರು. ಕಳೆದ ವರ್ಷ  ‘ಕಪಲ್ಸ್ ರಿಟ್ರೀಟ್’ ಚಿತ್ರದ ‘ನಾ ನಾ’ ಹಾಡು ಆಸ್ಕರ್ ಪ್ರವೇಶಿಸಲು ಯತ್ನಿಸಿತ್ತಾದರೂ, ಅದು ನಾಮನಿರ್ದೇಶನಗೊಂಡಿರಲಿಲ್ಲ.

ಬ್ರಿಟಿಷ್ ಚಿತ್ರ ‘ದಿ ಕಿಂಗ್ಸ್ ಸ್ಪೀಚ್’ನ ಸಂಕಲನಕ್ಕಾಗಿ ಆಸ್ಕರ್ ನಿರೀಕ್ಷಿಸಿದ್ದ ಅನಿವಾಸಿ ಭಾರತೀಯ ಸಂಕಲನಕಾರ ತಾರೀಖ್ ಅನ್ವರ್ ಅವರ ನಿರೀಕ್ಷೆಯೂ ಹುಸಿಯಾಯಿತು. ‘ದಿ ಸೋಷಿಯಲ್ ನೆಟ್‌ವರ್ಕ್’ನ ಆಂಗಸ್ ವಾಲ್ ಮತ್ತು ಕಿರ್ಕ್ ಬಕ್ಸ್‌ಟರ್ ಅವರಿಗೆ ಈ ಪ್ರಶಸ್ತಿ ಒಲಿಯಿತು. ಉತ್ತರ ಪ್ರದೇಶದ ಲಖನೌದಲ್ಲಿ ಜನಿಸಿದ್ದ ಅನ್ವರ್ ಅವರು ಬ್ರಿಟನ್‌ನ ಹೆಸರಾಂತ ಸಂಕಲನಕಾರರಲ್ಲಿ ಒಬ್ಬರು.

ರೆಹಮಾನ್ ಅವರಂತೆ ಭಾರಿ ನಿರೀಕ್ಷೆ ಮೂಡಿಸಿದ್ದ ‘127 ಅವರ್ಸ್‌’ ಚಿತ್ರಕ್ಕೂ ಒಂದೇ ಒಂದು ಆಸ್ಕರ್ ಪ್ರಶಸ್ತಿ ಲಭಿಸಲಿಲ್ಲ. ಒಟ್ಟು ಐದು ವಿಭಾಗಗಳಲ್ಲಿ ಈ ಚಿತ್ರ ನಾಮನಿರ್ದೇಶನಗೊಂಡಿತ್ತು.

‘ಪೀಪ್ಲಿ ಲೈವ್’ ಆಸ್ಕರ್ ಪ್ರಶಸ್ತಿ ಪಟ್ಟಿಯಲ್ಲಿ ಸ್ಥಾನ ಪಡೆಯಲು ತೆರಳಿದ್ದ ಭಾರತದ ಅಧಿಕೃತ ಚಿತ್ರವಾಗಿತ್ತು. ಉತ್ತಮ ವಿದೇಶಿ ಚಿತ್ರ ವಿಭಾಗದ ಅಂತಿಮ ಒಂಬತ್ತು ಚಿತ್ರಗಳ ಸಾಲಲ್ಲಿ ನಿಲ್ಲಲು ಅದು ವಿಫಲವಾಯಿತು. ಡೆನ್ಮಾರ್ಕ್‌ನ ಚಿತ್ರ ‘ಇನ್ ಎ ಬೆಟರ್ ವರ್ಲ್ಡ್’ಗೆ ಈ ಪ್ರಶಸ್ತಿ ಲಭಿಸಿತು.

‘ಬ್ಲ್ಯಾಕ್ ಸ್ವ್ಯಾನ್’ ಚಿತ್ರದಲ್ಲಿನ ಮನೋಜ್ಞ ಪಾತ್ರಕ್ಕಾಗಿ ನತಾಲಿಯಾ ಪೋರ್ಟ್‌ಮನ್ ಅವರಿಗೆ ಅತ್ಯುತ್ತಮ ನಟಿ ಆಸ್ಕರ್ ಪ್ರಶಸ್ತಿ ಲಭಿಸಿತು. ಈ ಪ್ರಶಸ್ತಿ ಲಭಿಸಿದ್ದರಿಂದ ಆನಂದತುಂದಿಲರಾದ ಅವರಿಗೆ ಪ್ರಶಸ್ತಿ ಸ್ವೀಕರಿಸುವುದೇ ಕಷ್ಟವಾಯಿತು. ತುಂಬು ಬಸುರಿಯಾದ ಅವರನ್ನು ಅವರ ಪ್ರಿಯಕರ ಹಾಗೂ ನೃತ್ಯ ಸಂಯೋಜಕ ಬೆಂಜಮಿನ್ ಮಿಲಿಪೈಡ್ ವೇದಿಕೆಗೆ ಬರಲು ಸಹಾಯ ಮಾಡಿದರು.

ಬಾಲಿವುಡ್ ನಟಿ ಐಶ್ವರ್ಯಾ ರೈ ಬಚ್ಚನ್, ಪತಿ ಅಭಿಷೇಕ್ ಬಚ್ಚನ್ ಅವರು ಈ ವರ್ಣರಂಜಿತ ಸಮಾರಂಭಕ್ಕೆ ಕಳೆ ತಂದರು. ರೆಹಮಾನ್ ಅವರೂ ತಮ್ಮ ಪತ್ನಿ ಸಾಯಿರಾ ಜತೆಗೆ ಇಲ್ಲಿಗೆ ಆಗಮಿಸಿದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT