ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ಕರ್‌ಗೆ ಸೋಲಿನ ರುಚಿ, ಬಿಜೆಪಿಗೆ ಒಲಿದ ಉಡುಪಿ

ಉಡುಪಿ
Last Updated 22 ಮಾರ್ಚ್ 2014, 9:52 IST
ಅಕ್ಷರ ಗಾತ್ರ

ಉಡುಪಿ: ಉಡುಪಿ ಕ್ಷೇತ್ರದ ಮತದಾರರು ಮೊದಲ ಬಾರಿಗೆ ಬಿಜೆಪಿ ಅಭ್ಯರ್ಥಿಗೆ ಬೆಂಬಲ ಸೂಚಿಸಿದ್ದು 1998ರ ಚುನಾವಣೆಯಲ್ಲಿ.
ಬಿಜೆಪಿಯಿಂದ ಸ್ಪರ್ಧಿಸಿದ್ದ ಐ.ಎಂ. ಜಯರಾಮ ಶೆಟ್ಟಿ ಅವರು ಕಾಂಗ್ರೆಸ್‌ ಅಭ್ಯರ್ಥಿ ಆಸ್ಕರ್‌ ಫರ್ನಾಂ­ಡಿಸ್‌ ಅವರನ್ನು 56,548 ಮತಗಳ ಅಂತರದಿಂದ ಪರಾಭವಗೊಳಿಸಿದರು. ಸತತವಾಗಿ ಐದು ಬಾರಿ ಗೆಲುವು ಸಾಧಿಸಿದ್ದ ಆಸ್ಕರ್‌ ಅವರಿಗೆ ಮತದಾರರು ಮೊದಲ ಬಾರಿಗೆ ಈ ಚುನಾವಣೆಯಲ್ಲಿ ಸೋಲಿನ ರುಚಿ ತೋರಿಸುತ್ತಾರೆ.

ರಾಷ್ಟ್ರೀಯ ಮತ್ತು ಸ್ಥಳೀಯ ವಿಷಯಗಳು ಈ ಚುನಾವಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದವು. ಕಾಂಗ್ರೆಸ್‌ ಮತ್ತು ಬಿಜೆಪಿಗೆ ಪ್ರತಿಷ್ಠೆಯಾಗಿದ್ದ ಈ ಚುನಾವಣೆಯಲ್ಲಿ ಮತದಾರರು ಸ್ಪಷ್ಟವಾಗಿ ಬಿಜೆಪಿ ಪರ ಒಲವು ತೋರಿದ್ದನ್ನು ಗಮನಿಸಬಹುದು. ಕಾಂಗ್ರೆಸ್‌ನ ಭದ್ರಕೋಟೆಯಲ್ಲಿ ಬಿಜೆಪಿ ಪ್ರಬಲವಾಗಿ ಬೆಳೆಯಲಾರಂಭಿಸಿದ್ದು ಈ ಚುನಾವಣೆ ನಂತರವೇ. ಆದರೆ ಬಿಜೆಪಿ ಈ ಕ್ಷೇತ್ರದಲ್ಲಿ 1984ರಲ್ಲಿ ಮೊದಲ ಬಾರಿ ಸ್ಪರ್ಧಿಸಿದಾಗಲೇ ಜನರು ಪಕ್ಷದ ಪರ ಒಲವು ತೋರಿಸಿದ್ದನ್ನು ಗಮನಿಸಬಹುದು.

ಮೊದಲ ಚುನಾವಣೆಯಲ್ಲಿಯೇ ಸುಮಾರು 1,45,076 ಮತಗಳನ್ನು ಬಿಜೆಪಿ ಅಭ್ಯರ್ಥಿ ಕೆ.ಎಸ್‌. ಹೆಗ್ಡೆ ಪಡೆದಿದ್ದರು. ಬಿಜೆಪಿಗೆ ಜನರ ಬೆಂಬಲ ಇದ್ದರೂ ಗೆಲುವು ಸಿಕ್ಕಿದ್ದು ಮಾತ್ರ ಐದನೇ ಚುನಾ­ವಣೆ­ಯಲ್ಲಿ ಎಂಬುದು ಗಮನಾರ್ಹ. ಜನರು ಬಿಜೆಪಿ ಪರ ಒಲವು ತೋರಿಸಿದರು ಎಂಬುದನ್ನು ಕಾಂಗ್ರೆಸ್‌ನ ಹಿರಿಯ ಮುಖಂಡರು ಸಂಪೂರ್ಣವಾಗಿ ಒಪ್ಪಿಕೊಳ್ಳುವುದಿಲ್ಲ. ಆಸ್ಕರ್‌ ಅವರು ಐದು ಬಾರಿ ಆಯ್ಕೆಯಾಗಿದ್ದ ಕಾರಣ ಜನರಿಗೆ ಬದಲಾವಣೆ ಬೇಕಿತ್ತು. ಅದೇ ಅಭ್ಯರ್ಥಿ ಗೆಲ್ಲು­ವುದು ಬೇಡ ಎಂಬ ಅಭಿಪ್ರಾಯ ಮತದಾರ­ದ್ದಾಗಿತ್ತು. ಅಲ್ಲದೆ ಆ ಚುನಾವಣೆಯಲ್ಲಿ ಆಸ್ಕರ್‌ ಅವರ ವಿರುದ್ಧ ಬಹಳಷ್ಟು ಅಪಪ್ರಚಾರ ಮಾಡಲಾ­ಗಿತ್ತು ಎಂದು ಅವರು ಹೇಳುತ್ತಾರೆ.

ಮಂಗಳೂರಿನಲ್ಲಿ ಎಂಆರ್‌ಪಿಎಲ್‌ ಬರಲು ಆಸ್ಕರ್‌ ಅವರೇ ಕಾರಣ. ಎಂಆರ್‌ಪಿಎಲ್‌ ಹೊರ ಹಾಕುವ ತ್ಯಾಜ್ಯ ಸಮುದ್ರ ಸೇರುತ್ತಿದೆ. ಕೆಲವು ವರ್ಷಗಳಲ್ಲಿ ಮತ್ಯ್ಯ ಸಂತತಿ ನಾಶ ಆಗಲಿದ್ದು ಮೀನುಗಾರರು ತೀವ್ರ ಸಂಕಷ್ಟಕ್ಕೆ ಸಿಲುಕಬೇ­ಕಾ­ಗುತ್ತದೆ ಎಂದು ಸುದ್ದಿ ಹಬ್ಬಿಸಲಾಯಿತು. ಈ ಬಗ್ಗೆ ವ್ಯವಸ್ಥಿತವಾಗಿ ಅಪಪ್ರಚಾರ ಮಾಡಲಾಯಿತು. ಈ ಅಂಶ ಅವರ ಸೋಲಿಗೆ ಪ್ರಮುಖ ಕಾರಣ ಎಂದು ಅವರು ವಿಶ್ಲೇಷಿಸುತ್ತಾರೆ.

‘1998ರ ಚುನಾವಣೆ ವೇಳೆಗೆ ಜನತಾ ದಳ ಹೋಳಾಗಿದ್ದ ಕಾರಣ ಹಿನ್ನಡೆಯಾಗಿತ್ತು. ಅಲ್ಲದೆ ಅಟಲ್‌ ಬಿಹಾರಿ ವಾಜಪೇಯಿ ಅವರ ಸರ್ಕಾರ ಪತನವಾಗಿತ್ತು. ಆದ್ದರಿಂದ ಸಹಜವಾಗಿಯೇ ಜನರು ಬಿಜೆಪಿ ಕಡೆ ಒಲವು ತೋರಿಸಿದ್ದರು ಎಂದು ಹೇಳಬಹುದು.
ಎಂಆರ್‌ಪಿಎಲ್‌ ಹೋರಾಟ ಆಗ ಅವಿಭಜಿತ ಜಿಲ್ಲೆಯಲ್ಲಿ ಜೋರಾಗಿತ್ತು’ ಎಂದು ನೆನಪು ಮಾಡಿಕೊಳ್ಳುತ್ತಾರೆ 1998ರ ಚುನಾವಣೆ­ಯಲ್ಲಿ ಜನತಾ ದಳದಿಂದ ಸ್ಪರ್ಧಿಸಿದ್ದ, ಹಾಲಿ ಬಿಜೆಪಿಯಲ್ಲಿರುವ ಮಟ್ಟಾರು ರತ್ನಾಕರ ಹೆಗ್ಡೆ.

ಗೆಲುವು ಸಾಧಿಸಿದರೂ ಐದು ವರ್ಷಗಳ ಕಾಲ ಜಯರಾಮ ಶೆಟ್ಟಿ ಅವರು ಸಂಸದರಾಗಿ ಕೆಲಸ ಮಾಡಲು ಸಾಧ್ಯವಾಗಲಿಲ್ಲ. ಕೇಂದ್ರ ಸರ್ಕಾರ ಪತನಗೊಂಡ ನಂತರ ಮತ್ತೆ 1999ರಲ್ಲಿ ನಡೆದ ಚುನಾವಣೆಯಲ್ಲಿ ಜಯರಾಮ ಶೆಟ್ಟಿ ಕಾಂಗ್ರೆಸ್‌ನ ವಿನಯ ಕುಮಾರ್‌ ಸೊರಕೆ ಎದುರು ಸೋತರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT