ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ಟ್ರೇಲಿಯಕ್ಕೆ ಮುಖಭಂಗ

Last Updated 22 ಡಿಸೆಂಬರ್ 2010, 8:30 IST
ಅಕ್ಷರ ಗಾತ್ರ

ಬೆಂಗಳೂರಿನ ವೈದ್ಯ ಡಾ. ಮಹಮದ್ ಹನೀಫ್ ಅವರಿಗೆ ಪರಿಹಾರ ನೀಡುವ ಮೂಲಕ ಆಸ್ಟ್ರೇಲಿಯ ಮೂರು ವರ್ಷಗಳ ಹಿಂದೆ ಮಾಡಿದ್ದ  ತಪ್ಪನ್ನು ಸರಿಪಡಿಸಿಕೊಂಡಿದೆ. 2007ರಲ್ಲಿ ಸ್ಕಾಟ್ಲೆಂಡ್‌ನ ಗ್ಲಾಸ್ಗೊ ವಿಮಾನ ನಿಲ್ದಾಣ ಸ್ಫೋಟ ಯತ್ನದ ಭಯೋತ್ಪಾದಕ ಪ್ರಕರಣದಲ್ಲಿ ಹನೀಫ್ ಅವರನ್ನು ಸಿಲುಕಿಸುವ ಆಸ್ಟ್ರೇಲಿಯ ಪೊಲೀಸರ ಯತ್ನ ಸಾಕ್ಷ್ಯದ ಕೊರತೆಯಿಂದ ಬಿದ್ದು ಹೋಗಿತ್ತು. ಹನೀಫ್ ಭಯೋತ್ಪಾದಕ ಎಂಬ ಆರೋಪವಿರಲಿ, ಭಯೋತ್ಪಾದನೆಗೆ ಬೆಂಬಲ ನೀಡುತ್ತಿದ್ದ ಎಂಬ ಆರೋಪಗಳಿಗೂ ಪುರಾವೆ ಲಭಿಸಿರಲಿಲ್ಲ.

ತಾವು ಮಾಡಿದ್ದು ತಪ್ಪು ಎಂಬುದನ್ನು ಒಪ್ಪಿಕೊಂಡಿದ್ದ ಪೊಲೀಸರು ಎಲ್ಲ ಆರೋಪಗಳನ್ನೂ ಹಿಂದೆ ತೆಗೆದುಕೊಂಡಿದ್ದರು. ತಮ್ಮನ್ನು ವಿನಾಕಾರಣ ಬಂಧಿಸಿ ವಿಚಾರಣೆ ಇಲ್ಲದೆ ಜೈಲಿನಲ್ಲಿ ಇರಿಸಿ ಉಂಟು ಮಾಡಿದ ಮಾನಸಿಕ ಕ್ಷೋಭೆ, ವೃತ್ತಿಗೆ ಆಗಿರುವ ಹಾನಿ, ವರ್ಚಸ್ಸಿಗೆ ಆಗಿರುವ ಧಕ್ಕೆಗೆ ಪರಿಹಾರಕ್ಕಾಗಿ ನ್ಯಾಯಾಲಯದಲ್ಲಿ ಹೋರಾಟ ನಡೆಸಿದ ಹನೀಫ್ ಇದರಲ್ಲಿ ಗೆಲುವು ಪಡೆದಿದ್ದಾರೆ. ಭಯೋತ್ಪಾದಕ ಕೃತ್ಯಗಳನ್ನು ಪತ್ತೆ ಮಾಡುವಾಗ ಅವಸರದಲ್ಲಿ ತೆಗೆದುಕೊಳ್ಳುವ ನಿರ್ಧಾರ ಅಪಾಯಕಾರಿ ಎಂಬುದನ್ನು ಆಸ್ಟ್ರೇಲಿಯ ಪೊಲೀಸರು ಈ ಪ್ರಕರಣದಿಂದ ತಿಳಿಯುವಂತಾಗಿದೆ. ಹನೀಫ್ ಪ್ರಕರಣವನ್ನು ಭಯೋತ್ಪಾದನೆ ನಿಗ್ರಹ ಯತ್ನದಲ್ಲಿನ ಪ್ರಮುಖ ಕ್ರಮವೆಂದು ರಾಜಕೀಯ ಲಾಭ ಪಡೆಯಲು ಆಸ್ಟ್ರೇಲಿಯ ಪ್ರಧಾನಿ ಜಾನ್ ಹೊವಾರ್ಡ್ ನಡೆಸಿದ ಪ್ರಯತ್ನವೂ ವಿಫಲವಾಗಿದೆ. ಇದು ಆಸ್ಟ್ರೇಲಿಯ ಸರ್ಕಾರಕ್ಕೂ ಮುಖಭಂಗವಾದ ಪ್ರಕರಣ.

ಆಸ್ಟ್ರೇಲಿಯದಲ್ಲಿ ವೈದ್ಯಕೀಯ ವೃತ್ತಿ ನಡೆಸಲು ಬ್ರಿಟನ್‌ನಿಂದ ತೆರಳಿದ್ದ ಹನೀಫ್ ಕ್ವೀನ್ಸ್‌ಲ್ಯಾಂಡ್‌ನ ಗೋಲ್ಡ್ ಕೋಸ್ಟ್ ಆಸ್ಪತ್ರೆಗೆ ಸೇರಿಕೊಂಡಿದ್ದರು. ಗ್ಲಾಸ್ಗೊ ವಿಮಾನ ನಿಲ್ದಾಣದ ಸ್ಫೋಟದ ಸಂಚಿನಲ್ಲಿ ಸಿಕ್ಕಿದ ಇಬ್ಬರು ಆರೋಪಿಗಳಲ್ಲಿ ಸಿಕ್ಕಿದ ಮೊಬೈಲ್ ಸಿಮ್ ಕಾರ್ಡ್‌ನ ನೆಪದಲ್ಲಿ ಅವರ  ಸೋದರ ಸಂಬಂಧಿಯಾಗಿದ್ದ ಹನೀಫ್ ಆಸ್ಟ್ರೇಲಿಯ ಪೊಲೀಸರ ಸಂಶಯದ ದೃಷ್ಟಿಗೆ ಗುರಿಯಾಗಬೇಕಾಯಿತು. ಇದೀಗ ನ್ಯಾಯಾಲಯದಲ್ಲಿ ನಡೆಸಿದ ಹೋರಾಟದಲ್ಲಿ ಜಯಗಳಿಸಿ ತಮಗಾದ ಹಾನಿಗಾಗಿ ಸೂಕ್ತ ಪರಿಹಾರವನ್ನೂ ಪಡೆದಿರುವ ಹನೀಫ್ ಆಸ್ಟ್ರೇಲಿಯಲ್ಲಿಯೇ ವೃತ್ತಿಯನ್ನು ಮುಂದುವರಿಸಲು ಪ್ರಕಟಿಸಿರುವ ನಿರ್ಧಾರ ಸಮರ್ಪಕವಾದದ್ದು.
ಭಾರತೀಯರನ್ನು ಗುರಿಯಾಗಿಸಿ ಹಲ್ಲೆ ನಡೆಸುವ ಪ್ರಕರಣಗಳು ಆಗಾಗ ವರದಿಯಾಗುತ್ತಿವೆ. ಉನ್ನತ ಶಿಕ್ಷಣ ಮತ್ತು ಉದ್ಯೋಗಕ್ಕಾಗಿ ಆಸ್ಟ್ರೇಲಿಯಕ್ಕೆ ತೆರಳಿರುವ ಸಾವಿರಾರು ಭಾರತೀಯರು ಜನಾಂಗೀಯ ಹಿಂಸೆಯ ಬಿಸಿಯನ್ನು ಈಚಿನ ವರ್ಷಗಳಲ್ಲಿ ಎದುರಿಸುತ್ತಿದ್ದಾರೆ. ಈ ಪರಿಸ್ಥಿತಿಯನ್ನು ರಾಜತಾಂತ್ರಿಕ ನೆಲೆಯಲ್ಲಿ ಸುಧಾರಿಸುವ ಭಾರತದ ಪ್ರಯತ್ನಗಳು ಇನ್ನೂ ಯಶಸ್ವಿಯಾಗಿಲ್ಲ. ಆಸ್ಟ್ರೇಲಿಯ ಪೊಲೀಸರ ಅತಿರೇಕವನ್ನು ಬಹಿರಂಗಗೊಳಿಸಿ ಅದಕ್ಕೆ ಬೆಲೆ ತೆರುವಂತೆ ಮಾಡಿದ ಹನೀಫ್ ಪ್ರಕರಣ ಅಲ್ಲಿನ ಸರ್ಕಾರಕ್ಕೊಂದು ಪಾಠ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT