ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ಟ್ರೇಲಿಯಾ ಓಪನ್: ಎರಡನೇ ಸುತ್ತಿಗೆ ರೋಜರ್ ಫೆಡರರ್ ಹೆಜ್ಜೆ

ಮರ್ರೆ, ಸರೆನಾ, ಕುಜ್ನೆತ್ಸೋವಾ, ಸಫರೊವಾಗೆ ಜಯ
Last Updated 15 ಜನವರಿ 2013, 19:59 IST
ಅಕ್ಷರ ಗಾತ್ರ

ಮೆಲ್ಬರ್ನ್ (ರಾಯಿಟರ್ಸ್): ಆಸ್ಟ್ರೇಲಿಯಾದಲ್ಲೆಗ ಸುಡು ಬಿಸಿಲು. ಆ ತಾಪಮಾನಕ್ಕೆ ಮೈಯೊಡ್ಡಿ ಆಡುವುದೇ ಆಟಗಾರರಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಆದರೆ 31 ವರ್ಷ ವಯಸ್ಸಿನ ಚಾಂಪಿಯನ್ ಆಟಗಾರ ರೋಜರ್ ಫೆಡರರ್ ಅವರ ಗೆಲುವಿನ ಓಟಕ್ಕೆ ಮಾತ್ರ ತಡೆಯೇ ಇಲ್ಲ.

ಸ್ವಿಟ್ಜರ್ಲೆಂಡ್‌ನ ಪೆಡರರ್ ಇಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ಓಪನ್ ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್‌ನಲ್ಲಿ ಎರಡನೇ ಸುತ್ತಿಗೆ ಮುನ್ನಡೆದಿದ್ದಾರೆ. ರಾಡ್ ಲವೆರಾ ಅರೆನಾದಲ್ಲಿ ಮಂಗಳವಾರ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ಅವರು 6-2, 6-4, 6-1ರಲ್ಲಿ ಫ್ರಾನ್ಸ್‌ನ ಬೆನೊಯಿಟ್ ಪೇರ್ ಅವರನ್ನು ಪರಾಭವಗೊಳಿಸಿದರು.

ಈ ಮೂಲಕ 18ನೇ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿಯೆಡೆಗಿನ ತಮ್ಮ ಓಟವನ್ನು ಯಶಸ್ವಿಯಾಗಿ ಆರಂಭಿಸಿದ್ದಾರೆ. 39 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶದ ವಾತಾವರಣದಲ್ಲಿ ನಡೆದ ಈ ಪಂದ್ಯದಲ್ಲಿ ಫೆಡರರ್ ಅತ್ಯುತ್ತಮ ಪ್ರದರ್ಶನ ತೋರಿದರು.

`ಖಂಡಿತ ಈಗಿನ ತಾಪಮಾನ ಆತಂಕಕ್ಕೆ ಕಾರಣವಾಗಿದೆ. ಆದರೆ ಈ ಬಗ್ಗೆ ನಾನು ಹೆಚ್ಚು ತಲೆಕೆಡಿಸಿಕೊಂಡಿಲ್ಲ. ಏಕೆಂದರೆ ಹಲವು ವರ್ಷಗಳಿಂದ ಇಂತಹ ಹವಾಮಾನದಲ್ಲಿ ಆಡಿದ ಅನುಭವ ನನಗಿದೆ' ಎಂದು ಫೆಡರರ್ ಪಂದ್ಯದ ಬಳಿ ಸುದ್ದಿಗಾರರಿಗೆ ತಿಳಿಸಿದರು.

ಒಲಿಂಪಿಕ್ ಚಿನ್ನದ ಪದಕ ವಿಜೇತ ಆ್ಯಂಡಿ ಮರ‌್ರೆ ಕೂಡ ಮುಂದಿನ ಹಂತಕ್ಕೆ ಮುನ್ನಡೆದಿದ್ದಾರೆ. ಮೂರನೇ ಶ್ರೇಯಾಂಕ ಪಡೆದಿರುವ ಮರ‌್ರೆ 6-3, 6-1, 6-3ರಲ್ಲಿ ಹಾಲೆಂಡ್‌ನ ರಾಬಿನ್ ಹಾಸ್ ಎದುರು ಗೆದ್ದರು. ಹೋದ ವರ್ಷ ಅಮೆರಿಕ ಓಪನ್ ಟೂರ್ನಿ ಗೆಲ್ಲುವ ಮೂಲಕ ಮೊದಲ ಗ್ರ್ಯಾನ್‌ಸ್ಲಾಮ್ ಗೆದ್ದ ಕೀರ್ತಿಗೆ ಪಾತ್ರರಾಗಿರುವ ಬ್ರಿಟನ್‌ನ ಮರ‌್ರೆಗೆ ಈ ಪಂದ್ಯ ಅಷ್ಟೇನು ಸವಾಲಾಗಲಿಲ್ಲ.

ಪುರುಷರ ವಿಭಾಗದ ಇತರ ಪಂದ್ಯಗಳಲ್ಲಿ ಫ್ರಾನ್ಸ್‌ನ ಗೇಲ್ ಮೊನ್‌ಫಿಲ್ಸ್ 6-7, 7-6, 6-3, 6-3ರಲ್ಲಿ ಉಕ್ರೇನ್‌ನ ಅಲೆಕ್ಸಾಂಡರ್ ಡೊಲ್ಗೊಪೊಲೊವ್ ಎದುರೂ, ಅಮೆರಿಕದ ರಾಜೀವ್ ರಾಮ್ 6-4, 6-3,3-6, 6-2 ಸ್ಪೇನ್‌ನ ಗಿಲೆರ್ಮೊ ಗ್ರೇಸಿಯಾ ಲೋಪೆಜ್ ವಿರುದ್ಧವೂ, ಕ್ರೊವೇಷ್ಯಾದ ಮರಿನ್ ಸಿಲಿಕ್ 6-4, 7-5, 6-2ರಲ್ಲಿ ಆಸ್ಟ್ರೇಲಿಯಾದ ಮರಿಂಕೊ ಮತೊಸೆವಿಕ್ ಎದುರೂ ಜಯ ಗಳಿಸಿದರು.

ಆತಂಕದಲ್ಲಿ ಸೆರೆನಾ: ಅಮೆರಿಕದ ಸೆರೆನಾ ವಿಲಿಯಮ್ಸ ಮಹಿಳೆಯರ ವಿಭಾಗದ ಸಿಂಗಲ್ಸ್‌ನಲ್ಲಿ ಶುಭಾರಂಭ ಮಾಡಿದ್ದಾರೆ. ಅವರು 6-0, 6-0ರಲ್ಲಿ ರುಮೇನಿಯಾದ ಎಡಿನಾ ಗ್ಯಾಲೊವಿಟ್ಸ್ ಎದುರು ಸುಲಭವಾಗಿ ಗೆದ್ದರು. ಆದರೆ ಅವರು ಈ ಪಂದ್ಯದ ವೇಳೆ ತೀವ್ರವಾಗಿ ಗಾಯಗೊಂಡರು. ಹಾಗಾಗಿ ಈ ಟೂರ್ನಿಯ ಮುಂದಿನ ಪಂದ್ಯಗಳಿಗೆ ಅವರು ಲಭ್ಯರಿರುತ್ತಾರೆಯೇ ಎಂಬುದು ಈಗ ದೊಡ್ಡ ಪ್ರಶ್ನೆಯಾಗಿದೆ.

ಅಗ್ರ ಶ್ರೇಯಾಂಕದ ಆಟಗಾರ್ತಿ ಬೆಲರಾಸ್‌ನ ವಿಕ್ಟೋರಿಯಾ ಅಜರೆಂಕಾ 6-1, 6-4ರಲ್ಲಿ ರುಮೇನಿಯಾದ ಮೊನಿಕಾ ನಿಕುಲೆಸ್ಕು ಎದುರು ಗೆದ್ದರು.

ಮಹಿಳೆಯರ ವಿಭಾಗದ ಸಿಂಗಲ್ಸ್‌ನ ಮೊದಲ ಸುತ್ತಿನ ಇನ್ನುಳಿದ ಪಂದ್ಯಗಳಲ್ಲಿ ರಷ್ಯಾದ ಮರಿಯಾ ಕಿರ್ಲೆಂಕೊ 6-4, 6-2ರಲ್ಲಿ ಅಮೆರಿಕದ ವಾನಿಯಾ ಕಿಂಗ್ ಎದುರೂ, ಚೀನಾದ ಪೆಂಗ್ ಶುಯೊ 6-3, 6-0ರಲ್ಲಿ ಕೆನಡಾದ ರೆಬೆಕಾ ಮರಿನೊ ವಿರುದ್ಧವೂ ಜಯ ಗಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT