ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ಟ್ರೇಲಿಯಾ ಓಪನ್: ನಡಾಲ್‌ರತ್ತ ಎಲ್ಲರ ಚಿತ್ತ

Last Updated 16 ಜನವರಿ 2011, 20:30 IST
ಅಕ್ಷರ ಗಾತ್ರ

 ಹೊಸ ವರ್ಷದ ಮೊದಲ ಗ್ರ್ಯಾಂಡ್‌ಸ್ಲಾಮ್ ಟೆನಿಸ್ ಚಾಂಪಿಯನ್‌ಷಿಪ್ ಆದ ಆಸ್ಟ್ರೇಲಿಯಾ ಓಪನ್ ಜನವರಿ 17ರಿಂದ 30ರವರೆಗೆ ನಡೆಯಲಿದೆ.ವಿಶ್ವ ಟೆನಿಸ್ ಲೋಕದ ದಿಗ್ಗಜರಾಗಿರುವ  ಸ್ಪೇನ್‌ನ ರಫೆಲ್ ನಡಾಲ್ ಮತ್ತು ಸ್ವಿಟ್ಜರ್ಲೆಂಡಿನ ರೋಜರ್ ಫೆಡರರ್ ಅವರು ಈ ಬಾರಿಯೂ ಪುರುಷರ ಸಿಂಗಲ್ಸ್ ಪ್ರಶಸ್ತಿಗಾಗಿ ಹಣಾಹಣಿ  ಹೋರಾಟ ನಡೆಸುವುದು ನಿಶ್ಚಿತವಾಗಿದ್ದು ಕ್ರಮವಾಗಿ ಮೊದಲ ಎರಡು ಶ್ರೇಯಾಂಕದೊಡನೆ ಕಣಕ್ಕಿಳಿಯಲಿದ್ದಾರೆ.

ಇಬ್ಬರಿಗೂ ಪ್ರಶಸ್ತಿ ಗೆಲ್ಲುವುದು ಅನಿವಾರ್ಯ ಎನಿಸುವ ಪರಿಸ್ಥಿತಿ ಇದೆ.  ಕಳೆದ ವರ್ಷ ರೋಜರ್ ಫೆಡರರ್ ಅವರು ವರ್ಷದ ಮೊದಲ ಗ್ರ್ಯಾಂಡ್‌ಸ್ಲಾಮ್ ಪ್ರಶಸ್ತಿಯನ್ನು ಎತ್ತಿ ಹಿಡಿದರಷ್ಟೇ. ಉಳಿದ ಮೂರೂ ಗ್ರ್ಯಾಂಡ್‌ಸ್ಲಾಮ್‌ಗಳಲ್ಲಿ ನಡಾಲ್ ಅವರದ್ದೇ ಆಟ.ಆದರೆ ವರ್ಷದ ಕೊನೆಯಲ್ಲಿ ಫಿನಿಕ್ಸ್‌ನಂತೆ ಚೇತರಿಸಿಕೊಂಡಿರುವ ಫೆಡರರ್ ಎಟಿಪಿ ಚಾಂಪಿಯನ್‌ಷಿಪ್‌ನ ನಿರ್ಣಾಯಕ ಪಂದ್ಯದಲ್ಲಿ ನಡಾಲ್ ಅವರನ್ನು ಮಣಿಸುವ ಮೂಲಕ ತಾವು ಮತ್ತೆ ಫಾರಂಗೆ ಮರಳಿರುವುದನ್ನು ಸಾರಿದ್ದಾರೆ. ಕಳೆದ ವರ್ಷ ಎತ್ತಿ ಹಿಡಿದಿದ್ದ ಆಸ್ಟ್ರೇಲಿಯಾ ಓಪನ್ ಪ್ರಶಸ್ತಿಯನ್ನು ಈ ಬಾರಿಯೂ ಅವರು ಉಳಿಸಿಕೊಳ್ಳುವರೇ ಎಂಬುದು ಟೆನಿಸ್ ಲೋಕದಲ್ಲಿ ಆಸಕ್ತ ವಿಷಯವಾಗಿದೆ.

ಅಪ್ರತಿಮ ಸಾಧನೆ: ಕಳೆದ ವರ್ಷ ನಡಾಲ್ ಅವರದು ಅಪ್ರತಿಮ ಸಾಧನೆಯೇ ಸರಿ. ವರ್ಷದ ಮೊದಲ ಗ್ರ್ಯಾನ್‌ಸ್ಲಾಮ್ ಕೈಗೆಟುಕದಿದ್ದರೂ ಉಳಿದ ಮೂರು  ಗ್ರ್ಯಾನ್‌ಸ್ಲಾಮ್ ಗಳಾದ  ಫ್ರೆಂಚ್,  ವಿಂಬಲ್ಡನ್  ಹಾಗೂ  ಯುಎಸ್    ಓಪನ್‌ನಲ್ಲಿ ಪ್ರಶಸ್ತಿಯ ಕಿರೀಟ ಧರಿಸಿದರು. ಅದರಲ್ಲೂ ಕಡೆಯ ಎರಡೂ ಪ್ರಶಸ್ತಿಗಳು ಚೊಚ್ಚಲ ಬಾರಿ ದೊರಕಿದೆ. ಈ ವರ್ಷ ಮೊದಲ ಗ್ರ್ಯಾನ್‌ಸ್ಲಾಮ್ ಆದ ಆಸ್ಟ್ರೇಲಿಯ ಓಪನ್‌ನಲ್ಲಿ ನಡಾಲ್ ಪ್ರಶಸ್ತಿ ಗೆದ್ದರೆ ಸತತವಾಗಿ ಎಲ್ಲಾ ನಾಲ್ಕು ಗ್ರ್ಯಾನ್‌ಸ್ಲಾಮ್ ಗೆದ್ದಂತಾಗುತ್ತದೆ.

ಒಂದೇ ವರ್ಷದಲ್ಲಿ ಎಲ್ಲಾ ನಾಲ್ಕು ಗ್ರ್ಯಾನ್‌ಸ್ಲಾಮ್‌ಗಳನ್ನು ಗೆಲ್ಲುವುದು ದಿಗ್ಗಜರಿಗಷ್ಟೇ ಸಾಧ್ಯ. ಅಂತಹ ಸಾಧನೆ ವಿರಳವಾಗಿ ಬಂದಿದೆ.ಈ ಸಾಧನೆ ಮಾಡಲು ಸಾಧ್ಯವಾಗದಿದ್ದಾಗ ಕನಿಷ್ಠ ಎರಡು  ವರ್ಷದಲ್ಲಿ ಸತತವಾಗಿ ಎಲ್ಲಾ ನಾಲ್ಕು ಗ್ರ್ಯಾನ್‌ಸ್ಲಾಮ್‌ಗಳನ್ನು ಗೆಲ್ಲುವ ಅವಕಾಶವಿರುತ್ತದೆ. ಈಗ ನಡಾಲ್ ಇಂತಹ ಸಾಧನೆಯನ್ನು ಮಾಡುವರೇ ಎಂಬುದು ಕುತೂಹಲಕರ ಅಂಶವಾಗಿದೆ. ಕಳೆದ 42 ವರ್ಷಗಳಲ್ಲಿ ಇಂತಹ ಸಾಧನೆ ಯಾರಿಂದಲೂ ಬಂದಿಲ್ಲ. ನಡಾಲ್ ಒಂದು ಪಕ್ಷ ಆಸ್ಟ್ರೇಲಿಯ ಓಪನ್‌ನಲ್ಲಿ ಪ್ರಶಸ್ತಿ ಗೆದ್ದರೆ 42 ವರ್ಷಗಳ ನಂತರ ಸತತ ನಾಲ್ಕು ಗ್ರ್ಯಾನ್‌ಸ್ಲಾಮ್ ಗೆದ್ದ ಮೊದಲ ಆಟಗಾರನೆಂಬ ಹೆಗ್ಗಳಿಕೆಗೆ ಪಾತ್ರರಾಗುತ್ತಾರೆ. ಅತ್ಯಂತ ಹೆಚ್ಚಿನ ಗ್ರ್ಯಾನ್‌ಸ್ಲಾಮ್ (16) ಪಡೆದ ಆಟಗಾರನಾಗಿರುವ ಫೆಡರರ್ ಕೂಡಾ ಇಂತಹ ಸಾಧನೆ ಮಾಡಿಲ್ಲ ಎಂಬುದು ಗಮನಾರ್ಹ.ಆಸ್ಟ್ರೇಲಿಯಾದ ರಾಡ್ ಲೇವರ್ 1960ರ ದಶಕದಲ್ಲಿ ಅಪ್ರತಿಮ ಟೆನಿಸ್ ಆಟಗಾರರಾಗಿದ್ದು 1962 ಮತ್ತು 1969ರಲ್ಲಿ ಒಂದೇ ವರ್ಷ ಎಲ್ಲಾ ನಾಲ್ಕೂ ಗ್ರ್ಯಾನ್‌ಸ್ಲಾಮ್ ಪಡೆದ ಅಪರೂಪದ  ಸಾಧನೆ ಮಾಡಿದ್ದಾರೆ.

ಸಿಂಹಪಾಲು: 1993ರಿಂದ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿಗಳು ಬಹುಮಟ್ಟಿಗೆ ಫೆಡರರ್ ಮತ್ತು ನಡಾಲ್ ಅವರ ಪಾಲಾಗಿದೆ.ಈ ಏಳು ವರ್ಷಗಳಲ್ಲಿ ಇದ್ದ 28 ಪ್ರಶಸ್ತಿಗಳ ಸಿಂಹಪಾಲು ಫೆಡರರ್ (16) ಮತ್ತು ನಡಾಲ್ (9) ಅವರಿಗೆ ಸಂದಿವೆ. ಕೇವಲ ಮೂರು ಪ್ರಶಸ್ತಿಗಳು ಇತರರ ಪಾಲಾಗಿದೆ.  ಇವರಿಬ್ಬರು ವಿಶ್ವ ಟೆನಿಸ್ ರಂಗದಲ್ಲಿ ಯಾವ ರೀತಿ ದಿಗ್ಗಜರಾಗಿದ್ದಾರೆ ಎಂಬುದು ಇದರಿಂದ ಸಾಬೀತಾಗಿದೆ.

ಕಳೆದ ವರ್ಷ ನಡಾಲ್ ಆಸ್ಟ್ರೇಲಿಯಾ ಓಪನ್ ಕ್ವಾರ್ಟರ್ ಫೈನಲ್‌ನಲ್ಲಿ ಆಡುತ್ತಿದ್ದಾಗ ಗಾಯಗೊಂಡು ನಿವೃತ್ತರಾಗಿದ್ದರು. ಆದರೆ ತಮ್ಮ ಮೆಚ್ಚಿನ ಆವೆಮಣ್ಣಿನ ಅಂಕಣವಿರುವ ಫ್ರೆಂಚ್ ಓಪನ್‌ನಲ್ಲಿ ಪುಟಿದೆದ್ದು ಬಂದರಷ್ಟೇ ಅಲ್ಲ ವರ್ಷಾಂತ್ಯದ ವೇಳೆಗೆ 9ನೇ ಗ್ರ್ಯಾನ್‌ಸ್ಲಾಮ್ ಪಡೆದ ಗೌರವಕ್ಕೆ ಪಾತ್ರರಾದರು. ಫೆಡರರ್ ಇಲ್ಲವೇ ನಡಾಲ್ ವರ್ಷದ ಮೊದಲ ಖಾತೆಯನ್ನು ತೆರೆಯುತ್ತಾರೆ ಎಂದು ಹೇಳುವಂತಿಲ್ಲ.

ಏಕೆಂದರೆ 2008ರಲ್ಲಿ ಪ್ರಶಸ್ತಿ ಗೆದ್ದ ಸೆರ್ಬಿಯಾದ ನೊವಾಕ್ ಡಿಕೊವಿಕ್, ಕಳೆದ ಬಾರಿ ಫೈನಲ್ ತಲುಪಿದ್ದ ಬ್ರಿಟನ್ನಿನ ಆಯಂಡಿ ಮುರ್ರೆ ಅವರಂತಹ ಆಟಗಾರರು ದಿಗ್ಗಜರಿಗೆ ಪ್ರಬಲ ಪೈಪೋಟಿ ನೀಡುವರೇ ಎಂಬುದೂ ಕುತೂಹಲಕರ ಸಂಗತಿಯಾಗಿದೆ.ಸೆರೆನಾ ಇಲ್ಲ:ಕಳೆದ ಆರು ವರ್ಷಗಳಲ್ಲಿ ನಾಲ್ಕು ಬಾರಿ ಆಸ್ಟ್ರೇಲಿಯಾ ಓಪನ್‌ನಲ್ಲಿಯ ಮಹಿಳೆಯರ ಸಿಂಗಲ್ಸ್‌ನಲ್ಲಿ ಪ್ರಶಸ್ತಿ ಗಳಿಸಿರುವ ಅಮೆರಿಕದ ಸೆರೆನಾ ವಿಲಿಯಮ್ಸ್ ಅವರು ಗಾಯಗೊಂಡಿರುವ ಕಾರಣ ಈ ಬಾರಿ ಆಡುತ್ತಿಲ್ಲ. ಇದರಿಂದಾಗಿ ಹಾಲಿ ಡಬ್ಲ್ಯು.ಟಿ.ಎ.ದಲ್ಲಿ ಅಗ್ರ ರ್ಯಾಂಕ್ ಹೊಂದಿರುವ ಡೆನ್ಮಾರ್ಕ್‌ನ ಕರೊಲಿನ್ ವೊಜ್ನಿಕಿಗೆ ಮಹಿಳೆಯರ ಸಿಂಗಲ್ಸ್‌ನಲ್ಲಿ ಅಗ್ರ ಶ್ರೇಯಾಂಕ ದೊರಕಿದೆ.

ಕರೊಲಿನ್ ಇನ್ನೂ ಗ್ರ್ಯಾನ್‌ಸ್ಲಾಮ್ ಸಿಂಗಲ್ಸ್ ಪ್ರಶಸ್ತಿ ಗಳಿಸಬೇಕಿದೆ. ಎರಡು ವರ್ಷಗಳ ಹಿಂದೆ ಯುಎಸ್ ಓಪನ್‌ನಲ್ಲಿ ರನ್ನರ್ ಅಪ್ ಆಗಿದ್ದು ಇದುವರೆಗಿನ ಗರಿಷ್ಠ ಸಾಧನೆಯಾಗಿದೆ. ಪ್ರಶಸ್ತಿಗಾಗಿ ಅವರ ಜತೆ  ವೆರಾ ಜೊವನರೆವಾ, ಕಿಮ್ ಕ್ಲೈಸ್ಟರ್ಸ್, ವೀನಸ್ ವಿಲಿಯಮ್ಸ್ ಅವರೂ ಪೈಪೋಟಿ ನಡೆಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT