ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ಟ್ರೇಲಿಯಾ ‘ಕ್ಲೀನ್‌ ಸ್ವೀಪ್‌’ ಸಾಧನೆ

ಆ್ಯಷಸ್‌ ಟೆಸ್ಟ್‌: ಅಂತಿಮ ಪಂದ್ಯದಲ್ಲೂ ಮುಗ್ಗರಿಸಿದ ಇಂಗ್ಲೆಂಡ್‌, ಹ್ಯಾರಿಸ್‌ ಪ್ರಭಾವಿ ದಾಳಿ
Last Updated 5 ಜನವರಿ 2014, 19:30 IST
ಅಕ್ಷರ ಗಾತ್ರ

ಸಿಡ್ನಿ (ಎಎಫ್‌ಪಿ): ಇಂಗ್ಲೆಂಡ್‌ ತಂಡವನ್ನು ಕೇವಲ 31.4 ಓವರ್‌ಗಳಲ್ಲಿ ಆಲೌಟ್‌ ಮಾಡಿದ ಆಸ್ಟ್ರೇಲಿಯಾ ತಂಡ ಆ್ಯಷಸ್‌ ಕ್ರಿಕೆಟ್‌ ಟೆಸ್ಟ್‌ ಸರಣಿಯ ಅಂತಿಮ ಪಂದ್ಯದಲ್ಲಿ 281 ರನ್‌ಗಳ ಭರ್ಜರಿ ಗೆಲುವು ಪಡೆಯಿತು.

ಮೈಕಲ್‌ ಕ್ಲಾರ್ಕ್‌ ಬಳಗ ಈ ಮೂಲಕ ಐದು ಪಂದ್ಯಗಳ ಸರಣಿ ಯನ್ನು 5-0 ರಲ್ಲಿ ‘ಕ್ಲೀನ್‌ಸ್ವೀಪ್‌’ ಮಾಡಿಕೊಂಡಿತು. ಕೆಲ ತಿಂಗಳ ಹಿಂದೆ ಇಂಗ್ಲೆಂಡ್‌ ನೆಲದಲ್ಲಿ ನಡೆದಿದ್ದ ಆ್ಯಷಸ್‌ ಸರಣಿಯಲ್ಲಿ ಆಸೀಸ್‌ 0-3 ರಲ್ಲಿ ಸೋಲು ಅನುಭವಿಸಿತ್ತು. ಅಂದು ಎದುರಾಗಿದ್ದ ಸೋಲಿಗೆ ಮುಯ್ಯಿ ತೀರಿಸಿಕೊಂಡಿದೆ.

ಆಸ್ಟ್ರೇಲಿಯಾ ತಂಡ ಆ್ಯಷಸ್‌ ಸರಣಿಯ ಇತಿಹಾಸದಲ್ಲಿ ಮೂರನೇ ಬಾರಿ 5-0 ಅಂತರದಲ್ಲಿ ‘ಕ್ಲೀನ್‌ಸ್ವೀಪ್‌’ ಸಾಧನೆ ಮಾಡಿದೆ. 1920-21 ರಲ್ಲಿ ವಾರ್ವಿಕ್‌ ಆರ್ಮ್‌ಸ್ಟ್ರಾಂಗ್‌ ಮತ್ತು 2006-07 ರಲ್ಲಿ ರಿಕಿ ಪಾಂಟಿಂಗ್‌ ನೇತೃತ್ವದ ಆಸೀಸ್‌ ತಂಡ ಇಂತಹದೇ ಸಾಧನೆ ಮಾಡಿದ್ದವು. ಇದೀಗ ಮೈಕಲ್‌ ಕ್ಲಾರ್ಕ್‌ ಬಳಗ ಅಮೋಘ ಸಾಧನೆ ಮಾಡಿದೆ.

ಸಿಡ್ನಿ ಕ್ರಿಕೆಟ್‌ ಮೈದಾನದಲ್ಲಿ ಭಾನುವಾರ ಆಸ್ಟ್ರೇಲಿಯಾ ತನ್ನ ಎರಡನೇ ಇನಿಂಗ್ಸ್‌ನಲ್ಲಿ 276 ರನ್‌ಗಳಿಗೆ ಆಲೌಟಾಯಿತು. ಈ ಮೂಲಕ ಇಂಗ್ಲೆಂಡ್‌ ಗೆಲುವಿಗೆ 448 ರನ್‌ಗಳ ಗುರಿ ನೀಡಿತು.

ರ್‍ಯಾನ್‌ ಹ್ಯಾರಿಸ್‌ (25ಕ್ಕೆ 5) ಮತ್ತು ಮಿಷೆಲ್‌ ಜಾನ್ಸನ್‌ (40ಕ್ಕೆ 3) ಅವರ ಸಮರ್ಥ ಬೌಲಿಂಗ್‌ ದಾಳಿಗೆ ನಲುಗಿದ ಅಲಸ್ಟೇರ್‌ ಕುಕ್‌ ಬಳಗ 31.4 ಓವರ್‌ಗಳಲ್ಲಿ 166 ರನ್‌ಗಳಿಗೆ ಆಲೌಟಾಯಿತು. ಮೂರೇ ದಿನಗಳಲ್ಲಿ ಆಸೀಸ್‌ ಗೆಲುವಿನ ಸಂಭ್ರಮ ಆಚರಿಸಿಕೊಂಡಿದೆ.
ಕ್ಲಾರ್ಕ್‌ ಬಳಗ 4 ವಿಕೆಟ್‌ಗೆ 140 ರನ್‌ಗಳಿಂದ ಬೆಳಿಗ್ಗೆ ಆಟ ಮುಂದುವರಿ ಸಿತ್ತು. 73 ರನ್‌ಗಳೊಂದಿಗೆ  ಅಜೇಯ ರಾಗುಳಿದಿದ್ದ ರೋಜರ್ಸ್‌ ಶತಕ (119, 169 ಎಸೆತ, 15 ಬೌಂ) ಪೂರೈಸಿದರು. ಜಾರ್ಜ್‌ ಬೇಲಿ (46) ಮತ್ತು ಬ್ರಾಡ್‌ ಹಡಿನ್‌ (28) ಅವರಿಗೆ ಉತ್ತಮ ಬೆಂಬಲ ನೀಡಿದರು. ಇದರಿಂದ ಆಸೀಸ್‌ ತಂಡದ ಎರಡನೇ ಇನಿಂಗ್ಸ್‌ 276 ರನ್‌ಗಳವರೆಗೆ ಬೆಳೆಯಿತು.

ಬ್ಯಾಟಿಂಗ್‌ ವೈಫಲ್ಯ: ಸವಾಲಿನ ಗುರಿ ಬೆನ್ನಟ್ಟಿದ ಇಂಗ್ಲೆಂಡ್‌ ಮತ್ತೆ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿತು. ಕುಕ್‌ (7), ಇಯಾನ್‌ ಬೆಲ್‌್ (16) ಮತ್ತು ಕೆವಿನ್‌ ಪೀಟರ್‌ಸನ್‌ (6) ಬೇಗನೇ ಔಟಾದರು. ಚಹಾ ವಿರಾಮದ ವೇಳೆಗೆ ಪ್ರವಾಸಿ ತಂಡ ಮೂರು ವಿಕೆಟ್‌ಗೆ 87 ರನ್‌ ಗಳಿಸಿತ್ತು.

ಆದರೆ ದಿನದ ಅಂತಿಮ ಅವಧಿ ಯಲ್ಲಿ ಹಠಾತ್‌ ಕುಸಿತ ಕಂಡಿತು. ಕೇವಲ 52 ನಿಮಿಷಗಳಲ್ಲಿ ಕೊನೆಯ ಏಳು ವಿಕೆಟ್‌ಗಳು ಬಿದ್ದವು. ಒಟ್ಟು ಎಂಟು ವಿಕೆಟ್‌ ಪಡೆದ ರ್‍ಯಾನ್‌ ಹ್ಯಾರಿಸ್‌ ‘ಪಂದ್ಯಶ್ರೇಷ್ಠ’ ಗೌರವ ಪಡೆದರೆ, ಸರಣಿಯಲ್ಲಿ ಒಟ್ಟಾರೆ 37 ವಿಕೆಟ್‌ ಪಡೆದ ಮಿಷೆಲ್‌ ಜಾನ್ಸನ್‌ ‘ಸರಣಿ ಶ್ರೇಷ್ಠ’ ಗೌರವ ಪಡೆದರು.

ಸಂಕ್ಷಿಪ್ತ ಸ್ಕೋರ್‌: ಆಸ್ಟ್ರೇಲಿಯಾ ಮೊದಲ ಇನಿಂಗ್ಸ್‌ 76 ಓವರ್‌ಗಳಲ್ಲಿ 326 ಮತ್ತು ಎರಡನೇ ಇನಿಂಗ್ಸ್‌ 61.3 ಓವರ್‌ಗಳಲ್ಲಿ 276 (ಕ್ರಿಸ್‌ ರೋಜರ್ಸ್‌ 119, ಜಾರ್ಜ್‌ ಬೇಲಿ 46, ಬ್ರಾಡ್‌ ಹಡಿನ್‌ 28, ಸ್ಕಾಟ್‌ ಬ್ರಾಥ್‌ವಿಕ್‌ 33ಕ್ಕೆ 3, ಬೆನ್‌ ಸ್ಟೋಕ್ಸ್‌ 62ಕ್ಕೆ 2, ಜೇಮ್ಸ್‌ ಆ್ಯಂಡರ್‌ಸನ್‌ 46ಕ್ಕೆ 2, ಸ್ಟುವರ್ಟ್‌ ಬ್ರಾಡ್‌ 57ಕ್ಕೆ 2)

ಇಂಗ್ಲೆಂಡ್‌ ಮೊದಲ ಇನಿಂಗ್ಸ್‌ 58.5 ಓವರ್‌ಗಳಲ್ಲಿ 155 ಮತ್ತು ಎರಡನೇ ಇನಿಂಗ್ಸ್‌ 31.4 ಓವರ್‌ ಗಳಲ್ಲಿ 166 (ಮೈಕಲ್‌ ಕಾರ್ಬೆರಿ 43, ಬೆನ್‌ ಸ್ಟೋಕ್ಸ್‌ 32, ಸ್ಟುವರ್ಟ್‌ ಬ್ರಾಡ್‌ 42, ರ್‍ಯಾನ್‌ ಹ್ಯಾರಿಸ್‌ 25ಕ್ಕೆ 5, ಮಿಷೆಲ್‌ ಜಾನ್ಸನ್‌ 40ಕ್ಕೆ 3,  ನಥಾನ್‌ ಲಿಯೊನ್‌ 70ಕ್ಕೆ 2)

ಫಲಿತಾಂಶ: ಆಸ್ಟ್ರೇಲಿಯಾಕ್ಕೆ 281 ರನ್‌ ಗೆಲುವು ಹಾಗೂ 5-0 ರಲ್ಲಿ ಸರಣಿ ಜಯ;
ಪಂದ್ಯಶ್ರೇಷ್ಠ: ರ್‍ಯಾನ್‌ ಹ್ಯಾರಿಸ್‌,
ಸರಣಿ ಶ್ರೇಷ್ಠ: ಮಿಷೆಲ್‌ ಜಾನ್ಸನ್‌


ಆಸೀಸ್‌ ಸಾಧನೆ 
ಆಸ್ಟ್ರೇಲಿಯಾ ತಂಡ ಈ ಪಂದ್ಯದಲ್ಲಿ ಎರಡು ವಿಶೇಷ ಸಾಧನೆ ತನ್ನದಾಗಿಸಿಕೊಂಡಿತು. ಟೆಸ್ಟ್‌ನಲ್ಲಿ ಒಂದು ನಿರ್ದಿಷ್ಟ ತಂಡದ ವಿರುದ್ಧ ಒಟ್ಟು 300 ಶತಕ ಗಳಿಸಿದ ಮೊದಲ ತಂಡ ಎಂಬ ಗೌರವ ಆಸೀಸ್‌ಗೆ ಒಲಿದಿದೆ. ಮೊದಲ ಇನಿಂಗ್ಸ್‌ನಲ್ಲಿ ಸ್ಟೀವನ್‌ ಸ್ಮಿತ್‌ (115) ಶತಕ ಗಳಿಸಿದ್ದರು. ಆಸೀಸ್‌ ಬ್ಯಾಟ್ಸ್‌ಮನ್‌ವೊಬ್ಬ ಇಂಗ್ಲೆಂಡ್‌ ವಿರುದ್ಧ ಗಳಿಸಿದ 300ನೇ ಶತಕ ಇದಾಗಿದೆ.

ಅದೇ ರೀತಿ ಎರಡನೇ ಇನಿಂಗ್ಸ್‌ನಲ್ಲಿ ಕ್ರಿಸ್‌ ರೋಜರ್ಸ್‌ (119) ಗಳಿಸಿದ ಶತಕ ಕೂಡಾ ಆಸೀಸ್‌ ತಂಡದ ಹೊಸ ಸಾಧನೆಗೆ ಕಾರಣವಾಯಿತು. ಆಸ್ಟ್ರೇಲಿಯಾದ ಆರಂಭಿಕ ಆಟಗಾರನೊಬ್ಬ ಇಂಗ್ಲೆಂಡ್‌ ವಿರುದ್ಧ ಗಳಿಸಿದ 100ನೇ ಶತಕ ಇದಾಗಿತ್ತು. ಯಾವುದೇ ತಂಡ ಇಂತಹ ಸಾಧನೆ ಮಾಡಿಲ್ಲ.

ಅಂಕಿಅಂಶ: ಎಚ್‌ಆರ್‌ಜಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT