ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ಟ್ರೇಲಿಯಾಕ್ಕೆ ಮತ್ತೊಂದು ಆಘಾತ?

Last Updated 18 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಬ್ರಿಸ್ಬೇನ್: ತ್ರಿಕೋನ ಸರಣಿಯು ನಾಟಕೀಯ ತಿರುವು ಕಂಡಿದೆ. ಸತತ ಎರಡು ಪಂದ್ಯಗಳಲ್ಲಿನ ಸೋಲಿನಿಂದ ಆಸ್ಟ್ರೇಲಿಯಾ ಸಂಕಷ್ಟ ಹೆಚ್ಚಿದೆ. ಶ್ರೀಲಂಕಾ ಕೂಡ ಆತಿಥೇಯರನ್ನು ಮಣಿಸಿದ್ದು ಇಂಥ ಪರಿಸ್ಥಿತಿಗೆ ಕಾರಣ. ಇದೆಲ್ಲದರ ಪರಿಣಾಮವಾಗಿ ಭಾರತಕ್ಕೆ ಪ್ರಯೋಜನ.

ಮತ್ತೊಂದು ಪಂದ್ಯದಲ್ಲಿ ಕಾಂಗರೂಗಳ ನಾಡಿನ ಪಡೆಯನ್ನು ಮಣಿಸಿದಲ್ಲಿ ಪಾಯಿಂಟುಗಳ ಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಳ್ಳುವ ಅವಕಾಶ. ನಾಯಕ ಮಹೇಂದ್ರ ಸಿಂಗ್ ದೋನಿ ಆಶಯವೂ ಅದೇ ಆಗಿದೆ. ಲಂಕಾ ಎದುರು ಪಂದ್ಯ `ಟೈ~ ಆಗಿದ್ದರಿಂದ ಬೇಸರಗೊಳ್ಳದ ಭಾರತದವರು ಚಿಂತೆಬಿಟ್ಟು ಮುಂದಿನ ಸವಾಲಿನ ಕಡೆಗೆ ನೋಡುತ್ತಿದ್ದಾರೆ. `ಮಹಿ~ ಬಳಗವು ಈಗ ಆಸ್ಟ್ರೇಲಿಯಾ ಎದುರು ಮತ್ತೊಂದು ಗೆಲುವಿಗಾಗಿ ಹೋರಾಡಲು ಸಜ್ಜಾಗಿ ನಿಂತಿದೆ.

ಭಾನುವಾರ ಇಲ್ಲಿ ನಡೆಯಲಿರುವ ಪಂದ್ಯದಲ್ಲಿ ನಿರೀಕ್ಷೆಯಂತೆ ರಿಕಿ ಪಾಂಟಿಂಗ್ ನೇತೃತ್ವದ ತಂಡದ ಎದುರು ಜಯ ಸಾಧ್ಯವಾದರೆ ಫೈನಲ್ ಕಡೆಗಿನ ಹಾದಿಯೂ ಸ್ಪಷ್ಟವಾಗುತ್ತದೆ. ಸಿಂಹಳೀಯರ ವಿರುದ್ಧ ಸೋತು ಒತ್ತಡದ ಸುಳಿಗೆ ಸಿಲುಕಿರುವ ಆಸ್ಟ್ರೇಲಿಯಾ ಮಾತ್ರ ತನ್ನ ನಾಡಿನಲ್ಲಿಯೇ ಆಡಿದ ಸರಣಿಯ ಲೀಗ್ ಹಂತದಲ್ಲಿ ಅಗ್ರಸ್ಥಾನ ಕಳೆದುಕೊಳ್ಳುವ ಆತಂಕದಿಂದ ಸೊರಗಿದೆ. ಮೈಕಲ್ ಕ್ಲಾರ್ಕ್ ಗಾಯಗೊಳ್ಳುವುದರೊಂದಿಗೆ ಆರಂಭವಾದ ಕಷ್ಟಗಳ ಸರಣಿಯು ಆತಿಥೇಯರಿಗೆ ಸಹನೀಯ ಎನಿಸಿಲ್ಲ.

ಹಿಂದೆ ಅನೇಕ ಸರಣಿಗಳಲ್ಲಿ ತಂಡವನ್ನು ಯಶಸ್ಸಿನೆಡೆ ನಡೆಸಿದ ಪಾಂಟಿಂಗ್ ಅವರು ಭಾರತ ವಿರುದ್ಧ ಭಾನುವಾರ ನಡೆಯುವ ಪಂದ್ಯದಲ್ಲಿಯೂ ನಾಯಕತ್ವದ ಹೊಣೆಯನ್ನು ಹೊತ್ತುಕೊಳ್ಳಬೇಕಾಗಿದೆ. ಕ್ಲಾರ್ಕ್ ಅನುಪಸ್ಥಿತಿಯಲ್ಲಿ `ಪಂಟರ್~ ಸಮರ್ಥ ಮುಂದಾಳುವಾಗಿ ಕಾಣಿಸಿಕೊಂಡರೆ ತಂಡಕ್ಕೂ ಒಳಿತು. ಆಸೀಸ್ ಈ ಪಂದ್ಯದಲ್ಲಿ ಗೆದ್ದು ಪುಟಿದೇಳುವುದು ಅಗತ್ಯ. ಇಲ್ಲದಿದ್ದರೆ ಫೈನಲ್‌ನಲ್ಲಿ ಸ್ಥಾನ ಗಿಟ್ಟಿಸಲು ನಿಕಟ ಪೈಪೋಟಿ ನಡೆಸುವಂಥ ಕಷ್ಟಕಾಲ ಎದುರಾಗುತ್ತದೆ.

ಎರಡು ಪಂದ್ಯಗಳಲ್ಲಿ ಆಘಾತ ಅನುಭವಿಸಿದ ನಂತರ ಆಸ್ಟ್ರೇಲಿಯಾಕ್ಕೆ ಶ್ರೀಲಂಕಾ ಕೂಡ ಪಾಯಿಂಟ್ಸ್ ಪಟ್ಟಿಯಲ್ಲಿ ಹತ್ತಿರದ ಸ್ಪರ್ಧಿಯಾಗಿ ಬೆಳೆದಿದೆ. ಭಾರತ, ಆಸ್ಟ್ರೇಲಿಯಾ ಹಾಗೂ ಶ್ರೀಲಂಕಾ ಈ ಸರಣಿಯಲ್ಲಿ ಈಗ ತಲಾ ನಾಲ್ಕು ಪಂದ್ಯಗಳನ್ನು ಆಡಿವೆ. ಆದರೆ ಭಾರತದ ಸ್ಥಿತಿ ಉತ್ತಮವಾಗಿದೆ. ದೋನಿ ನೇತೃತ್ವದ ತಂಡವು ಸೋಲನುಭವಿಸಿದ್ದು ಕೇವಲ ಒಂದು ಪಂದ್ಯದಲ್ಲಿ. ಎರಡನ್ನು ಗೆದ್ದು, ಲಂಕಾ ಎದುರು ಒಂದು ಪಂದ್ಯವನ್ನು `ಟೈ~ ಮಾಡಿಕೊಂಡಿದೆ. ಆದ್ದರಿಂದ ಖಾತೆಯಲ್ಲಿ ಹತ್ತು ಪಾಯಿಂಟುಗಳನ್ನು ಹೊಂದಿದೆ. ಆದರೆ ಆಸ್ಟ್ರೇಲಿಯಾ ನಾಲ್ಕು ಪಂದ್ಯಗಳಿಂದ ಗಳಿಸಿದ್ದು ಒಂಬತ್ತು ಪಾಯಿಂಟ್ಸ್. ಏಳು ಪಾಯಿಂಟ್ಸ್‌ಗಳನ್ನು ಹೊಂದಿರುವ ಲಂಕಾ, ಆಸೀಸ್‌ನಿಂದ ಭಾರಿ ಅಂತರದಲ್ಲೇನು ಇಲ್ಲ.

ಈಗ ಆತಿಥೇಯರು ಪುಟಿದೆದ್ದು ಮತ್ತೆ ಜಯ ಪಡೆಯಲೇಬೇಕು. ಅಂದರೆ ಮಾತ್ರ ಒತ್ತಡ ನಿವಾರಣೆ ಆಗಲು ಸಾಧ್ಯ. ತಾನಾಡುವ ಬಾಕಿ ನಾಲ್ಕು ಪಂದ್ಯಗಳಲ್ಲಿ ಎದುರಾಗುವ ಪ್ರವಾಸಿಗಳಿಗೆ ತಿರುಗೇಟು ನೀಡುವಂಥ ಬಲ ಪ್ರದರ್ಶಿಸಿದಲ್ಲಿ ಫೈನಲ್ ಕನಸಿಗೆ ಕತ್ತಲೆ ಆವರಿಸುವುದಿಲ್ಲ.

ಇಕ್ಕಟ್ಟಿನ ಪರಿಸ್ಥಿತಿಯಲ್ಲಿ ಇರುವಾಗಲೇ ಆಸ್ಟ್ರೇಲಿಯಾ ತಂಡವನ್ನು ಮುನ್ನಡೆಸುವ ಹೊಣೆ ಪಡೆದಿರುವ ಪಾಂಟಿಂಗ್ ತಮ್ಮ ತಂಡವನ್ನು ಆಟಕ್ಕೆ ಹೇಗೆ ಯೋಜಿಸುತ್ತಾರೆಂದು ಕಾಯ್ದು ನೋಡಬೇಕು. ಲಂಕಾ ವಿರುದ್ಧ ಕುಸಿತದ ಹಾದಿ ಹಿಡಿದಿದ್ದರಿಂದ ದೊಡ್ಡ ಮೊತ್ತ ಗಳಿಸಲು ಸಾಧ್ಯವಾಗಲಿಲ್ಲ. ಭಾರತದ ಎದುರು ಕೂಡ ಅಂಥ ನಿರಾಸೆ ಕಾಡದಂತೆ ಆಡಲು ಬ್ಯಾಟಿಂಗ್ ಯೋಜನೆಯ ಬಲೆಯನ್ನು ಹೇಣೆದುಕೊಳ್ಳುವುದು ತುರ್ತು ಅಗತ್ಯ.

ಕಾಂಗರೂಗಳು ಮತ್ತೆ ಉತ್ಸಾಹದಿಂದ ಜಿಗಿಯುತ್ತಾ ಮುನ್ನುಗ್ಗದಂತೆ ತಡೆಯುವುದೇ ಭಾರತದವರ ಉದ್ದೇಶ ಹಾಗೂ ಗುರಿ. ಟೆಸ್ಟ್ ಸರಣಿಯಲ್ಲಿನ ಸೋಲು ಈಗಲೂ ದೋನಿ ಪಡೆಯನ್ನು ಕರಾಳ ನೆನಪಾಗಿ ಕಾಡುತ್ತಿದೆ. ಆ ಕಹಿಯನ್ನು ಮರೆಯುವ ನಿಟ್ಟಿನಲ್ಲಿ ತ್ರಿಕೋನ ಸರಣಿಯವಲ್ಲಿ ವಿಜಯದ ಸಿಹಿ ಸಿಗಬೇಕು. ಕಳೆದ ಮೂರು ಪಂದ್ಯಗಳಲ್ಲಿ ಲಯ ಕಂಡುಕೊಂಡಿರುವ ಭಾರತದವರು ಅದೇ ವಿಶ್ವಾಸದಿಂದ ಮುನ್ನುಗ್ಗಿದರೆ ಮೂರು ಪಂದ್ಯಗಳ ಫೈನಲ್ ತಲುಪಿ, ವಿಜಯ ಪತಾಕೆ ಹಾರಿಸುವುದು ಕಷ್ಟವೇನಲ್ಲ.
 

ತಂಡಗಳು
ಆಸ್ಟ್ರೇಲಿಯಾ: ರಿಕಿ ಪಾಂಟಿಂಗ್ (ನಾಯಕ), ಡೇವಿಡ್ ವಾರ್ನರ್ (ಉಪ ನಾಯಕ), ಜಾರ್ಜ್ ಬೈಲಿ, ಡೇನಿಯಲ್ ಕ್ರಿಸ್ಟೀನ್, ಕ್ಸೇವಿಯರ್ ಡೊಹರ್ಟಿ, ಪೀಟರ್ ಫಾರೆಸ್ಟ್, ಬೆನ್ ಹಿಲ್ಫೆನ್ಹಾಸ್, ಜಾನ್ ಹಾಲೆಂಡ್, ಡೇವಿಡ್ ಹಸ್ಸಿ, ಮೈಕ್ ಹಸ್ಸಿ, ಬ್ರೆಟ್ ಲೀ, ಕ್ಲಿಂಟ್ ಮೆಕ್‌ಕೀ, ಮೈಕಲ್ ಸ್ಟಾರ್ಕ್ ಮತ್ತು ಮ್ಯಾಥ್ಯೂ ವೇಡ್.
ಭಾರತ: ಮಹೇಂದ್ರ ಸಿಂಗ್ ದೋನಿ (ನಾಯಕ), ಸಚಿನ್ ತೆಂಡೂಲ್ಕರ್, ವೀರೇಂದ್ರ ಸೆಹ್ವಾಗ್, ವಿರಾಟ್ ಕೊಹ್ಲಿ, ರೋಹಿತ್ ಶರ್ಮ, ಸುರೇಶ್ ರೈನಾ, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಪ್ರವೀಣ್ ಕುಮಾರ್, ವಿಜಯ್ ಕುಮಾರ್, ಜಹೀರ್ ಖಾನ್ ಮತ್ತು ಉಮೇಶ್ ಯಾದವ್.
ಅಂಪೈರ್‌ಗಳು: ಬಿಲಿ ಬೌಡೆನ್ (ನ್ಯೂಜಿಲೆಂಡ್) ಮತ್ತು ಸ್ಟೀವ್ ಡೇವಿಸ್ (ಆಸ್ಟ್ರೇಲಿಯಾ); ಮೂರನೇ ಅಂಪೈರ್: ಬ್ರೂಸ್ ಆಕ್ಸೆನ್‌ಫೋರ್ಡ್ (ಆಸ್ಟ್ರೇಲಿಯಾ).
ಮ್ಯಾಚ್‌ರೆಫರಿ: ಆ್ಯಂಡಿ ಪೈಕ್ರಾಫ್ಟ್ (ಜಿಂಬಾಬ್ವೆ).
ಪಂದ್ಯ ಆರಂಭ (ಭಾರತೀಯ ಕಾಲಮಾನ): ಬೆಳಿಗ್ಗೆ 8.50ಕ್ಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT