ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ಟ್ರೇಲಿಯಾದ ಡೇನಿಯಲ್‌ಗೆ ಅಚ್ಚರಿಯ ಬೆಲೆ

Last Updated 10 ಜನವರಿ 2011, 5:40 IST
ಅಕ್ಷರ ಗಾತ್ರ

ಬೆಂಗಳೂರು:ಭಾರಿ ಕುತೂಹಲಕ್ಕೆ ಕಾರಣವಾಗಿದ್ದ ಐಪಿಎಲ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ 4ನೇ ಅವತರಣಿಕೆಯ ಹರಾಜು ಪ್ರಕ್ರಿಯೆಯ ಅಂತಿಮ ದಿನವೂ ಹಲವು ಅಚ್ಚರಿಗಳು ಕಂಡು     ಬಂದವು.

ಆದರೆ ಮೊದಲ ದಿನ ಆಟಗಾರರನ್ನು ಖರೀದಿಸಲು ಹಣದ ಹೊಳೆಯನ್ನೇ ಹರಿಸಿದ್ದ ಫ್ರಾಂಚೈಸಿಗಳು, ಎರಡನೇ ದಿನವಾದ ಭಾನುವಾರ ಅಲ್ಪ ಎಚ್ಚರಿಕೆ ವಹಿಸಿ ಹಣ ಖರ್ಚು ಮಾಡಿದವು. ಆಸ್ಟ್ರೇಲಿಯಾದ ಆಲ್‌ರೌಂಡರ್ ಡೇನಿಯಲ್ ಕ್ರಿಸ್ಟಿಯನ್ ಅವರು ಎರಡನೇ ದಿನದ ಹರಾಜಿನಲ್ಲಿ ‘ಅತ್ಯಂತ ಬೆಲೆಯುಳ್ಳ ಆಟಗಾರ’ ಎನಿಸಿಕೊಂಡರು.

ಉದ್ಯಾನನಗರಿಯಲ್ಲಿ ನಡೆದ ಹರಾಜಿನಲ್ಲಿ ಕ್ರಿಸ್ಟಿಯನ್ ಅವರನ್ನು ಡೆಕ್ಕನ್ ಚಾರ್ಜರ್ಸ್ ತಂಡ 4.14 ಕೋಟಿ ರೂ. ತೆತ್ತು ಖರೀದಿಸಿತು. 23 ಲಕ್ಷ ರೂ. ಮೂಲಬೆಲೆ ಹೊಂದಿದ್ದ ಕ್ರಿಸ್ಟಿಯನ್ ಅವರು 18 ಪಟ್ಟು ಅಧಿಕ ಬೆಲೆಗೆ ಹರಾಜಾದದ್ದು ಎರಡನೇ ದಿನದ ‘ಹೈಲೈಟ್’. ಶ್ರೀಲಂಕಾದ ಹಿರಿಯ ಆಟಗಾರ ಸನತ್ ಜಯಸೂರ್ಯ ಅವರನ್ನು ಕೊಳ್ಳಲು ಯಾವುದೇ ಫ್ರಾಂಚೈಸಿಗಳು ಮುಂದೆ ಬರಲಿಲ್ಲ. ಲಂಕಾದ ಇನ್ನೊಬ್ಬ ಆಟಗಾರ ಚಮಿಂದಾ ವಾಸ್ ಕೂಡಾ ನೆಲೆ ಕಂಡುಕೊಳ್ಳಲಿಲ್ಲ. ಸೌರವ್ ಗಂಗೂಲಿ ಅವರ ಹೆಸರು ಭಾನುವಾರ ನಡೆದ ಮರು ಹರಾಜಿನ ವೇಳೆಯೂ ಕೇಳಿ ಬರಲಿಲ್ಲ.

ಕರ್ನಾಟಕದ ವೇಗದ ಬೌಲರ್ ಆರ್. ವಿನಯ್ ಕುಮಾರ್ ಅವರನ್ನು ಕೊಚ್ಚಿ ತಂಡ 2.18 ರೂ. ಕೋಟಿ ನೀಡಿ ತನ್ನದಾಗಿಸಿಕೊಂಡಿತು. ಮತ್ತೊಬ್ಬ ವೇಗಿ ಅಭಿಮನ್ಯು ಮಿಥುನ್ (1.19 ಕೋಟಿ) ಅವರನ್ನು ರಾಯಲ್ ಚಾಲೆಂಜರ್ಸ್ ತನ್ನಲ್ಲೇ ಉಳಿಸಿಕೊಂಡಿತು.ಎರಡು ದಿನಗಳ ಹರಾಜಿನ ಕೊನೆಯಲ್ಲಿ ಭಾರತದ ಗೌತಮ್ ಗಂಭೀರ್ ಭಾರಿ ಬೆಲೆಯ ಆಟಗಾರ ಎನಿಸಿದರು. ಮೊದಲ ದಿನವಾದ ಶನಿವಾರ ಅವರನ್ನು ಕೋಲ್ಕತ್ತ ನೈಟ್ ರೈಡರ್ಸ್ ತಂಡ 11.40 ಕೋಟಿ ನೀಡಿ ಖರೀದಿ ಮಾಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT