ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ತಮಾಕ್ಕೆ ಮೀನು ಮದ್ದು ನೀಡಿಕೆ: ನೂಕುನುಗ್ಗಲು, ಸಾವು

Last Updated 8 ಜೂನ್ 2012, 19:30 IST
ಅಕ್ಷರ ಗಾತ್ರ

ಹೈದರಾಬಾದ್: ಆಸ್ತಮಾ ರೋಗಿಗಳಿಗೆ ವರ್ಷಕ್ಕೊಮ್ಮೆ ನೀಡುವ ಮೀನು ಔಷಧಿ ನೀಡಿಕೆ ವೇಳೆ ಶುಕ್ರವಾರ ಮಧ್ಯಾಹ್ನ ಸಂಭವಿಸಿದ ನೂಕುನುಗ್ಗಲು ಮತ್ತು ಕಾಲ್ತುಳಿತದಿಂದ ಒಬ್ಬರು ಸಾವಿಗೀಡಾದರು.

ಮಹಾರಾಷ್ಟ್ರದಿಂದ ಔಷಧಿಗಾಗಿ ಬಂದಿದ್ದ ಗೋರಖ್ ಪಟೇಲ್ (65) ಮೃತಪಟ್ಟ ದುರ್ದೈವಿ ವ್ಯಕ್ತಿ. ಕಾಲ್ತುಳಿತದಿಂದ ಗಾಯಗೊಂಡಿದ್ದ ಅವರನ್ನು ಒಸ್ಮಾನಿಯಾ ಆಸ್ಪತ್ರೆಗೆ ಸೇರಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು. ಇದೇ ಕಾಲ್ತುಳಿತದ ವೇಳೆ ಇತರ 20 ಜನರಿಗೆ ಗಾಯಗಳಾಗಿವೆ.

ಔಷಧಿ ನೀಡಿಕೆ ಸ್ಥಳವನ್ನು ಏಕಾಏಕಿ ಬದಲಾಯಿಸಿದ್ದು, ಈ ಕುರಿತು ಸಾಕಷ್ಟು ಮುಂಚಿತವಾಗಿ ಮಾಹಿತಿ  ನೀಡದಿದ್ದುದು ಹಾಗೂ ಸೂಕ್ತ ಬ್ಯಾರಿಕೇಡ್ ವ್ಯವಸ್ಥೆ ಇಲ್ಲದಿದ್ದುದು ದುರಂತಕ್ಕೆ ಕಾರಣವೆಂದು ಪೊಲೀಸರು ದೂರಿದ್ದಾರೆ.

ತೆಲಂಗಾಣ ಪ್ರಾಂತ್ಯದಲ್ಲಿ ಆಸ್ತಮಾ ಔಷಧಿಯಾಗಿ ಮೀನನ್ನು ವರ್ಷಕ್ಕೊಮ್ಮೆ ನೀಡಲಾಗುತ್ತದೆ. ಈ ಪ್ರಾಂತ್ಯದ ಸಾಂಪ್ರದಾಯಿಕ ಮದ್ದು ಇದಾಗಿದ್ದು ಇಲ್ಲಿನ ಬತಿನಿ ಕುಟುಂಬದ ಗೌಡ್ ಸಹೋದರರು ಇದನ್ನು ಉಚಿತವಾಗಿ ರಾಷ್ಟ್ರದ ವಿವಿಧೆಡೆಯಿಂದ ಆಗಮಿಸುವ ರೋಗಿಗಳಿಗೆ ನೀಡುತ್ತಾ ಬಂದಿದ್ದಾರೆ.

ಕಾಲ್ತುಳಿತದಿಂದ ವ್ಯಕ್ತಿಯೊಬ್ಬರು ಸಾವಿಗೀಡಾದ ನಂತರ ರಾಜ್ಯ ಸರ್ಕಾರವು ಕ್ರಮ ಕೈಗೊಂಡು, ಶಿಬಿರದ ಸ್ಥಳದಲ್ಲಿ ಸೂಕ್ತ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಬಿಗಿ ಬಂದೋಬಸ್ತ್ ಮಾಡಲು ರಂಗಾರೆಡ್ಡಿ ಜಿಲ್ಲಾಧಿಕಾರಿ ಅವರಿಗೆ ಸೂಚಿಸಿತು.

ಸರ್ಕಾರದ ಮುಖ್ಯ ಕಾರ್ಯದರ್ಶಿ ಪಂಕಜ್ ದ್ವಿವೇದಿ ಅವರು ಸಚಿವಾಲಯದಲ್ಲಿ ಅಧಿಕಾರಿಗಳೊಡನೆ ತುರ್ತು ಸಭೆ ನಡೆಸಿದರು. ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರಿಗೆ ಎಲ್ಲ ರೀತಿಯ ನೆರವು ನೀಡುವುದಾಗಿ ಪ್ರಕಟಿಸಿದರು.

ಮೀನಿನ ಔಷಧಿ ನೀಡಿಕೆಗೆ ಈ ವರ್ಷ ಹೊಸ ಸ್ಥಳ ನಿಗದಿ ಮಾಡಿತ್ತು. ಮುಂಚೆ ಈ ಔಷಧಿ ನೀಡುತ್ತಿದ್ದ ನಾಂಪಲ್ಲಿಯ ವಸ್ತುಪ್ರದರ್ಶನ ಮೈದಾನದಿಂದ 10 ಕಿ.ಮೀ. ಅಂತರದಲ್ಲಿರುವ  ಕಟೆದಾಮ್ ಕ್ರೀಡಾ ಸಂಕೀರ್ಣದ ಬಳಿ ಔಷಧಿ ವಿತರಿಸಲು ಸರ್ಕಾರ ಕೊನೆ ಕ್ಷಣದಲ್ಲಿ ಸೂಚಿಸಿತ್ತು.  ಇದಕ್ಕೆ ಪ್ರತಿವರ್ಷ ಭಾರಿ ಸಂಖ್ಯೆಯ ರೋಗಿಗಳು ಆಗಮಿಸುವುದು ಗೊತ್ತಿದ್ದರೂ ಸರ್ಕಾರ ಅಲ್ಲಿ ಯಾವುದೇ ವ್ಯವಸ್ಥೆ ಮಾಡಿರಲಿಲ್ಲ. ಹೀಗಾಗಿ ಅಲ್ಲಿ ವಿಪರೀತ ಗೊಂದಲವಿತ್ತು. ಔಷಧಿ ಪಡೆಯಲು ಸೇರುವ ಭಾರಿ ಜನಸ್ತೋಮಕ್ಕೆ ಈ ಕ್ರೀಡಾಂಗಣ ಚಿಕ್ಕದು ಎಂಬ ದೂರುಗಳು ಕೇಳಿಬಂದಿವೆ.

ಮೀನಿನ ಔಷಧಿ ಪಡೆಯಲು ಭಾರಿ ಜನಸ್ತೋಮ ಕಾದು ನಿಂತಿತ್ತು. ಒಂದೆಡೆ ಬಿಸಿಲ ಝಳ ಅಧಿಕವಿದ್ದರೆ ಮತ್ತೊಂದೆಡೆ ಸಂಘಟಕರು ಔಷಧಿ ನೀಡಿಕೆ ವಿಳಂಬ ಮಾಡಿದರು. ಜನ ಸಹನೆ ಕಳೆದುಕೊಳ್ಳುತ್ತಿದ್ದಂತೆ ತಳ್ಳಾಟ, ನೂಕುನುಗ್ಗಲು, ಕಾಲ್ತುಳಿತ ಸಂಭವಿಸಿತು ಎನ್ನಲಾಗಿದೆ.

ಅಲ್ಲಿ ಪ್ರಥಮ ಚಿಕಿತ್ಸೆ ನೀಡಲಾಗಲೀ ಅಥವಾ ಕುಡಿಯುವ ನೀರಿಗಾಗಲೀ ವ್ಯವಸ್ಥೆ ಇರಲಿಲ್ಲ. ದುರ್ಘಟನೆ ನಡೆದ ಜಾಗದ ಐದು ಕಿ.ಮೀ. ದೂರದಲ್ಲೇ ವಾಹನಗಳನ್ನು ತಡೆದು, ಮೀನಿನ ಮದ್ದು ನೀಡಿಕೆಯನ್ನು ಸ್ಥಗಿತಗೊಳಿಸಲಾಯಿತು.

`ಆಸ್ತಮಾಗೆ ತೆಲಂಗಾಣ ಪ್ರಾಂತ್ಯದಲ್ಲಿ ನೀಡಲಾಗುವ ಪರಂಪರಾಗತ ಮದ್ದು ಇದಾಗಿದೆ. ಇಲ್ಲಿನ ಗೌಡ್ ಸಹೋದರರು ಇದನ್ನು ಉಚಿತವಾಗಿ  ಲಕ್ಷಾಂತರ ಜನರಿಗೆ ನೀಡುತ್ತಾ ಬಂದಿದ್ದಾರೆ. ಆದರೆ ರಾಜ್ಯ ಸರ್ಕಾರ ಉದ್ದೇಶಪೂರ್ವಕವಾಗಿ ಇದಕ್ಕೆ ಕೆಟ್ಟು ಹೆಸರು ತಂದಿದೆ~ ಎಂದು ನಿಜಾಮಾಬಾದ್ ಸಂಸದ ಮಧು ಯಸ್ಕಿ ಗೌಡ್ ಆಪಾದಿಸಿದರು.

ಔಷಧಿ ಪಡೆಯಲು ಬರುವ ಅಸ್ತಮಾ ರೋಗಿಗಳೆಡೆಗಿನ ಸರ್ಕಾರದ ಉಪೇಕ್ಷೆಯೇ ಇದಕ್ಕೆ ಕಾರಣ ಎಂದು ನೆರೆದಿದ್ದ ಜನ ದೂರಿದರು.

`ಇಲ್ಲಿ ಈ ಬಾರಿ ಕುಡಿಯುವ ನೀರಿನ ವ್ಯವಸ್ಥೆಯನ್ನಾಗಲೀ, ಬಿಸಿಲಿನಿಂದ ರಕ್ಷಣೆ ನೀಡಲು ನೆರಳಿನ ವ್ಯವಸ್ಥೆಯನ್ನಾಗಲೀ ಮಾಡಿಲ್ಲ. ಔಷಧಿಗಾಗಿ ಮಕ್ಕಳೊಂದಿಗೆ ಬೆಳಿಗ್ಗೆಯಿಂದ ಕಾದು ನಿಂತಿದ್ದೆವು. ಇಲ್ಲಿ ಕನಿಷ್ಠ ಸೌಲಭ್ಯಗಳನ್ನಾದರೂ ವ್ಯವಸ್ಥೆ ಮಾಡಬೇಕಿತ್ತು~ ಎಂದು ಕರ್ನಾಟಕದಿಂದ ಆಗಮಿಸಿದ್ದ ಉದ್ಯಮಿ ಶಿವಕುಮಾರ್ ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT