ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ತಿ ಕಬಳಿಸಲು ಕೆಲವರ ಸಂಚು

Last Updated 24 ಜೂನ್ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು:  `ನನ್ನ ಮೇಲೆ ಸುಳ್ಳು ಆರೋಪಗಳನ್ನು ಹೊರಿಸುವುದರ ಹಿಂದೆ ಅನೇಕ ಪಟ್ಟಭದ್ರ ಹಿತಾಸಕ್ತಿಗಳಿವೆ. ಬಹುಮುಖ್ಯವಾಗಿ ಆಶ್ರಮದ ಆಸ್ತಿಯನ್ನು ಕಬಳಿಸಲು ಕೆಲವರು ಸತತ ಪ್ರಯತ್ನ ನಡೆಸಿದ್ದಾರೆ~ ಎಂದು ಬಿಡದಿ ಧ್ಯಾನಪೀಠದ ಸ್ವಾಮಿ ನಿತ್ಯಾನಂದ ಆರೋಪಿಸಿದರು.

ಆಶ್ರಮದ ಟ್ರಸ್ಟಿಗಳಾಗಲು ಕೆಲವರು ನಡೆಸಿದ ಹುನ್ನಾರ, ಜಮೀನು ಕಬಳಿಸಲು ಕೆಲವರು ನಡೆಸಿರುವ ಸಂಚು ಮೊದಲಾದ ಸಂಗತಿಗಳನ್ನು ಸಂದರ್ಶನದಲ್ಲಿ ನಿತ್ಯಾನಂದ ಹೊರಗೆಡಹಿದರು.`ಕೆಲ ರಾಜಕಾರಣಿಗಳು, ಕೆಲ ಪ್ರಭಾವಿ ವ್ಯಕ್ತಿಗಳು ಉತ್ತಮ ಆಸ್ತಿ ಕಂಡಾಗ ಅದನ್ನು ತಮ್ಮದಾಗಿಸಿಕೊಳ್ಳಲು ಯತ್ನಿಸುವಂತೆ ಕೆಲವರು ಆಶ್ರಮದ ಆಸ್ತಿ ಮೇಲೆ ಕಣ್ಣು ಹಾಕಿದ್ದಾರೆ.

ಅದಕ್ಕಾಗಿ ಆಶ್ರಮದ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ, ನ್ಯಾಯಾಲಯದ ಮೆಟ್ಟಿಲು ಹತ್ತಿದ್ದಾರೆ. ಮಾಧ್ಯಮದ ಮೂಲಕ ದಾಳಿ ನಡೆಸುತ್ತಿದ್ದಾರೆ~ ಎಂದು ಅವರು ಅಸಮಾಧಾನ ತೋಡಿಕೊಂಡರು.

* ನಿಮ್ಮ ಆಶ್ರಮದ ಆಸ್ತಿ ಕಬಳಿಸಲು ಕೆಲ ವ್ಯಕ್ತಿಗಳು ಯತ್ನಿಸುತ್ತಿದ್ದಾರೆಯೇ?
ಹೌದು, ಹೌದು.

* ಯಾರವರು?
(ನಗು)

* ಹಲವು ಮಂದಿ ನಿಮ್ಮ ವಿರುದ್ಧ ಕತ್ತಿ ಹಿಡಿದು ನಿಂತಿದ್ದಾರೆ ಎಂಬಂತೆ ಮಾತನಾಡುತ್ತೀರಿ. ನೀವ್ಯಾಕೆ ಅಂತಹವರ ಹೆಸರುಗಳನ್ನು ಬಹಿರಂಗಪಡಿಸಬಾರದು?
ನಾನು ಬಹಿರಂಗವಾಗಿಯೇ ಹೇಳಿದ್ದೇನೆ. ಆಶ್ರಮದ ವ್ಯವಸ್ಥಾಪಕರು ತಮಿಳುನಾಡಿನಲ್ಲಿ ದೂರು ನೀಡಿದ್ದಾರೆ. ಅದರ ಆಧಾರದಲ್ಲಿ ಹಲವರ ಬಂಧನವಾಗಿದೆ.

`ಆಸ್ತಿ ಕಬಳಿಸಲು ಕೆಲವರ ಸಂಚು~
* ಕರ್ನಾಟಕದಲ್ಲಿ..?
ಕರ್ನಾಟಕದಲ್ಲಿ ಇಬ್ಬರು ವ್ಯಕ್ತಿಗಳು ಪ್ರಯತ್ನಿಸುತ್ತಿದ್ದಾರೆ. ಅವರ ಹೆಸರು ಬಹಿರಂಗಪಡಿಸುವ ಮುನ್ನ ನಾನು ಸ್ಪಷ್ಟ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಬೇಕಾಗಿದೆ.

*ನಿಮಗೆ ಯಾರ ಮೇಲಾದರೂ ಅನುಮಾನವಿದೆಯೇ?
ಆರ್‌ಎಸ್‌ಎಸ್‌ನ ಪ್ರಭಾವಿ ವ್ಯಕ್ತಿಯಾಗಿರುವ ಒಬ್ಬರ ಮೇಲೆ ನನಗೆ ಅನುಮಾನವಿದೆ. ಪುರಾವೆಗಳು ಸಿಕ್ಕ ಮೇಲೆ ಮಾಧ್ಯಮದವರಿಗೆ ತಿಳಿಸುತ್ತೇನೆ.

*ನಿಮ್ಮ ಆಸ್ತಿಯನ್ನು ಕಬಳಿಸಲು ಪ್ರಯತ್ನ ಮಾಡುತ್ತಿರುವವರು ಯಾರು ಎಂಬುದನ್ನು ಸ್ಪಷ್ಟವಾಗಿ ಹೇಳಿ?
ಖಂಡಿತವಾಗಿಯೂ, ಅನೇಕ ವ್ಯಕ್ತಿಗಳು ನನ್ನ ಆಸ್ತಿಯನ್ನು ಕಬಳಿಸಲು ಯತ್ನಿಸುತ್ತಿದ್ದಾರೆ. ಸಕ್ಸೇನಾ ಹಾಗೂ ನಕ್ಕೀರನ್ ಗೋಪಾಲ್ ನಮ್ಮ ಚೆನ್ನೈಯ ಆಸ್ತಿಯನ್ನು, ಪೊಪಟ್ ಎಂಬಾತ ಮನೋಹರ ಶಿಂಧೆ ಜೊತೆಗೂಡಿ ನನ್ನ ಲಾಸ್ ಏಂಜಲೀಸ್ ಆಸ್ತಿಯನ್ನು ಕಬಳಿಸಲು ಪ್ರಯತ್ನಿಸಿದ್ದಾರೆ.

*ನಿಮಗೆ ಬೆದರಿಕೆ ಹಾಕಿದವರು ಯಾರು?
ಕಿಶನ್ ರೆಡ್ಡಿ ಹಾಗೂ ಮನೋಹರ್ ಶಿಂಧೆ ಎಂದು ನಾನು ನೇರವಾಗಿ ಹೇಳುತ್ತೇನೆ. ನಾನು ಆಶ್ರಮದ ಟ್ರಸ್ಟಿ ಸ್ಥಾನದಿಂದ ಕೆಳಗಿಳಿದು ಅವರನ್ನು ಟ್ರಸ್ಟಿಗಳನ್ನಾಗಿ ಮಾಡಬೇಕು ಎಂಬುದು ಅವರ ಒತ್ತಾಯವಾಗಿತ್ತು.

*ಅವರ ಬೇಡಿಕೆಯನ್ನು ನೀವು ಒಪ್ಪಿದ್ದರೆ ಏನಾಗುತ್ತಿತ್ತು?
ಒಂದು ಪಕ್ಷ ಅವರ ಬೇಡಿಕೆಗಳನ್ನು ಒಪ್ಪಿದ್ದರೆ ನನ್ನ ವಿರುದ್ಧ ಸುಳ್ಳು ದೂರುಗಳು ದಾಖಲಾಗುತ್ತಿರಲಿಲ್ಲವೇನೊ.

*ಒಪ್ಪದ ಪರಿಣಾಮ?
ನನ್ನ ವಿರುದ್ಧ ಸುಳ್ಳು ಪ್ರಕರಣಗಳು ದಾಖಲಾದವು ಹಾಗೂ ನಾನು ಜೈಲಿಗೆ ಹೋಗುವಂತೆ ಆಯಿತು.

*ಅವರು ನಿಮಗೆ ನೇರವಾಗಿ ಬೆದರಿಕೆ ಹಾಕಿದ್ದಾರಾ?
ಹೌದು

*ನಿಮ್ಮ ಆಶ್ರಮದ ಆಸ್ತಿಗಳು ನೂರಾರು ಕೋಟಿಗಳು ಬೆಲೆ ಬಾಳುತ್ತವೆ ಎಂದು ಕೇಳಿದ್ದೇನೆ. ಹಾಗಾದರೆ ನಿಮ್ಮ ಆಸ್ತಿಗಳ ಒಟ್ಟು ಬೆಲೆ ಎಷ್ಟು?
ಆಶ್ರಮದ ಆಸ್ತಿಗಳ ಒಟ್ಟು ಮೌಲ್ಯ ನೂರಾರು ಕೋಟಿಗಳಷ್ಟಿಲ್ಲ. ಕರ್ನಾಟಕದಲ್ಲಿರುವ ಆಸ್ತಿ ಸೇರಿದಂತೆ ವಿಶ್ವದಾದ್ಯಂತ ಇರುವ ನಮ್ಮ ಆಸ್ತಿಗಳ ಒಟ್ಟು ಮೌಲ್ಯ ನೂರು ಕೋಟಿಗಿಂತಲೂ ಕಡಿಮೆಯೇ ಇದೆ. ಇದರಲ್ಲಿ ಯಾವುದೇ ಅಕ್ರಮ ಆಸ್ತಿಗಳು ಇಲ್ಲ. ನಮ್ಮ ಎಲ್ಲ ಸಂಪತ್ತು ನಿಯಮಿತವಾಗಿ ಲೆಕ್ಕಪರಿಶೋಧನೆಗೆ ಒಳಗಾಗಿದೆ. ದಾಖಲೆಗಳಿವೆ.

*ನೀವು ಆಸ್ತಿ ಮಾಡುತ್ತಿರುವುದು ಯಾರಿಗಾಗಿ?
ಸಾರ್ವಜನಿಕರಿಗಾಗಿ. ಆಧ್ಯಾತ್ಮಿಕ ಪ್ರಯೋಜನ ಪಡೆಯಲು ಅವರು ಬರಬೇಕು. ಅದಕ್ಕಾಗಿಯೇ ಈ ಆಶ್ರಮಗಳನ್ನು ಸ್ಥಾಪಿಸಿರುವುದು.

*ನಿಮ್ಮ ಮೇಲಿನ ದಾಳಿಯ ಹಿಂದೆ ರಾಜಕಾರಣಿ ಯಾರಾದರೂ ಇದ್ದಾರಾ?
ಇಲ್ಲವೇ ಇಲ್ಲ.

*ಆರ್‌ಎಸ್‌ಎಸ್ ಜತೆಗಿನ ನಿಮ್ಮ ಸಂಬಂಧ?
ವಿಶ್ವಹಿಂದೂ ಪರಿಷತ್ ಸಾರ್ವಜನಿಕವಾಗಿ ಆಶ್ರಮಕ್ಕೆ ಬೆಂಬಲ ನೀಡಿತ್ತು. ಈವರೆಗೆ ಆರ್‌ಎಸ್‌ಎಸ್ ಬಹಿರಂಗವಾಗಿ ನಮಗೆ ಬೆಂಬಲ ನೀಡಿಲ್ಲ. ಆದರೆ ಆರ್‌ಎಸ್‌ಎಸ್ ವಿರುದ್ಧ ಹೇಳಲು ನನ್ನಲ್ಲಿ ಏನೂ ಇಲ್ಲ.

*ಮದುರೈ ಆಧೀನಂ ನಿಮಗೆ ಪರ್ಯಾಯ ತಾಣ, ಬಿಡದಿಯಲ್ಲಿ ಹೆಚ್ಚು ಕಮ್ಮಿ ಆದಾಗ ಪಲಾಯನ ಮಾಡಲು ಬೇಕಾಗುತ್ತದೆ ಎಂದು ಮದುರೈ ಆಧೀನಂ ಇಟ್ಟುಕೊಂಡಿದ್ದಾರಾ?
ನನಗೆ ಅಂತಹ ಅವಶ್ಯಕತೆ ಇಲ್ಲ. ಮದುರೈ ಆಧೀನಂ ಪರ್ಯಾಯ ತಾಣ ಎಂದು ಯೋಚಿಸುವುದೂ ಇಲ್ಲ. ಆಂಧ್ರ ಪ್ರದೇಶ ಹಾಗೂ ತಮಿಳುನಾಡುಗಳಲ್ಲಿ ಈಗಾಗಲೇ ನನ್ನ ಆಶ್ರಮಗಳು ಇವೆ.

*ಮದುರೈಯ ಆಧೀನಂ ಮಠದ ಉತ್ತರಾಧಿಕಾರಿಯಾಗಲು ನೀವು ಅಲ್ಲಿನ ಹಿರಿಯ ಸ್ವಾಮೀಜಿಗೆ ಒತ್ತಡ ಹಾಕಿ ಒತ್ತಾಯ ಮತ್ತು ಬ್ಲಾಕ್‌ಮೇಲ್ ಮಾಡಿದ್ದೀರಿ ಎಂದು ಹೇಳುತ್ತಾರಲ್ಲ? ನಿಮ್ಮ ತಲೆ ಮೇಲೆ ಈಗಾಗಲೇ ಇಷ್ಟೊಂದು ಇರುವಾಗ ಈ ಒಂದು ಜವಾಬ್ದಾರಿ ಬೇಕಿತ್ತಾ?
ಆರೋಪದಿಂದ ಮುಕ್ತನಾಗುವುದು ಒಂದು. ಜವಾಬ್ದಾರಿ ಇನ್ನೊಂದು. ನಾನು ಮಾಡಬೇಕಾದ ಕೆಲಸಗಳಿಗೆ ನನ್ನ ವಿರುದ್ಧದ ಸುಳ್ಳು ಆರೋಪಗಳು ತೊಡಕಾಗಲು ಬಿಡುವುದಿಲ್ಲ. ನನ್ನನ್ನು ಉತ್ತರಾಧಿಕಾರಿ ಮಾಡಿ ಎಂದು ಯಾರನ್ನೂ ಒತ್ತಾಯ ಮಾಡಿಲ್ಲ. ಬ್ಲಾಕ್‌ಮೇಲ್ ಸಹ ಮಾಡಿಲ್ಲ.

*ನೀವು ಆಧೀನಂನ ಉತ್ತರಾಧಿಕಾರಿ ಆದಾಗ ವಿರೋಧ ವ್ಯಕ್ತವಾಗಿದ್ದು ಸಹಜ ತಾನೇ?
ನನ್ನ ಮೇಲೆ ತಪ್ಪು ಮಾಹಿತಿ ಹೊಂದಿರುವವರು ವಿರೋಧಿಸಿದ್ದಾರೆ ಎಂದು ಮಾತ್ರ ಹೇಳಬಲ್ಲೆ.

*ಇಂತಹ ವಿರೋಧ ಬರುತ್ತದೆ ಎಂದು ಗೊತ್ತಿದ್ದೂ ನೀವು ಮದುರೈ ಆಧೀನಂನ ಜವಾಬ್ದಾರಿ ವಹಿಸಿಕೊಳ್ಳಬೇಕಾಗಿತ್ತಾ?
ನಿಮಗೆ ಗೊತ್ತಿಲ್ಲ, ನನ್ನನ್ನು ಉತ್ತರಾಧಿಕಾರಿ ಮಾಡಲು ಹಿರಿಯ ಸ್ವಾಮೀಜಿ ಆಸಕ್ತಿ ತೋರಿಸಿದಾಗ ನಾನು ಅವರಿಗೆ ಹೇಳಿದೆ `ಬೇಕಿದ್ದರೆ ನನ್ನದೇ ಒಬ್ಬ ಸಮರ್ಥ ಶಿಷ್ಯನನ್ನು ನಿಮ್ಮಲ್ಲಿಗೆ ಕಳುಹಿಸಿ ಕೊಡುತ್ತೇನೆ. ನನ್ನನ್ನು ಉತ್ತರಾಧಿಕಾರಿಯಾಗಿ ಮಾಡಬೇಡಿ. ನನ್ನನ್ನು ಉತ್ತರಾಧಿಕಾರಿ ಮಾಡುವುದರಿಂದ ಭವಿಷ್ಯದಲ್ಲಿ ನೀವು ಅನೇಕ ತೊಂದರೆಗಳನ್ನು ಎದುರಿಸುತ್ತೀರಿ~ ಎಂದು.

*ಆಶ್ರಮದಲ್ಲಿ ನಿಮ್ಮ ಭಕ್ತರ ಮಧ್ಯೆ ನಿಮ್ಮ ಆತ್ಮೀಯತೆ ಗಳಿಸಲು ನಡೆದ ಪೈಪೋಟಿ ಈ ಅಹಿತಕರ ಘಟನಾವಳಿಗಳಿಗೆ ಮೂಲವೇ?
ಇಲ್ಲ. ನನಗೆ ಬಹಳ ಹತ್ತಿರದವರೆಂದು ಯಾರೂ ಇಲ್ಲ. ಎಲ್ಲರೂ ನನಗೆ ಸಮಾನರೇ. ಎಲ್ಲ ಭಕ್ತರಿಗೂ ನಾನೇ ಅವರು ಮತ್ತು ಅವರೇ ಆಶ್ರಮ ಎಂಬ ಭಾವವಿದೆ. ಬೇರೆ ಬೇರೆ ವ್ಯಕ್ತಿಗಳಿಗೆ ಬೇರೆ ಬೇರೆ ರೀತಿಯ ಜವಾಬ್ದಾರಿಗಳಿವೆ. ಆದರೆ ಎಲ್ಲರ ಜೊತೆಗೆ ಒಂದೇ ರೀತಿಯ ವೈಯಕ್ತಿಕ ಸಂಬಂಧ ಹೊಂದಿದ್ದೇನೆ.

ನಾಳೆ: `ನಾನು ಅಬ್ರಾಹ್ಮಣ: ದಾಳಿಗೆ ಅದೂ ಒಂದು ಕಾರಣ~
 

                               `ಕನ್ನಡಿಗರ ಬಗ್ಗೆ ಗೌರವ ಇದೆ~
*  ಕೆಲವರು ನಿಮ್ಮನ್ನು ಕರ್ನಾಟಕದಿಂದ ಗಡಿಪಾರು ಮಾಡಬೇಕು ಎಂದು ಹೇಳುತ್ತಿದ್ದಾರೆ. ನೀವೇನು ಹೇಳುತ್ತೀರಿ?
ಅವರು  ಸತ್ಯ ಸಂಗತಿಗಳನ್ನು ಮೊದಲು ತಿಳಿದುಕೊಳ್ಳಬೇಕು. ಅವರು ವಾಸ್ತವದ ಬಗ್ಗೆ ಗಮನ ಹರಿಸಬೇಕು ಎಂದು ವಿನಂತಿಸುತ್ತೇನೆ. ಈ ಹೋರಾಟದಲ್ಲಿ ಅಂತಿಮ ಜಯ ನನ್ನದೇ ಹಾಗೂ ಅವರ ವಿಶ್ವಾಸವನ್ನೂ ಪುನರ್ ಗಳಿಸುತ್ತೇನೆ ಎಂಬ ಖಾತ್ರಿ ಇದೆ.

* ಕರ್ನಾಟಕ ಹಾಗೂ ಕನ್ನಡಿಗರ ನಿಮ್ಮ ಅಭಿಪ್ರಾಯ ಏನು?
ನಾನು ಕನ್ನಡಿಗರನ್ನು ಪ್ರೀತಿಸುತ್ತೇನೆ, ಕನ್ನಡಿಗರನ್ನು ಗೌರವಿಸುತ್ತೇನೆ. ಕನ್ನಡಿಗರು ಹಾಗೂ ತಮಿಳರು ಶಾಂತಿಯಿಂದ, ಸ್ನೇಹಭಾವದಿಂದ ಇರಲು ನಾನು ಶಾಂತಿಯ ಸೇತುವೆಯಾಗಲು ಇಚ್ಛಿಸುತ್ತೇನೆ. ಕರ್ನಾಟಕದ ನ್ಯಾಯ ವ್ಯವಸ್ಥೆಯ ಮೇಲೆ ಮೇಲೆ ನಂಬಿಕೆ ಇದೆ.

* ನಿಮಗೆ ಕನ್ನಡ ಬರುತ್ತಾ?
(ಕನ್ನಡದಲ್ಲಿ ಒಂದಿಷ್ಟು ಮಾತು)
* ಕೆಲವರು ಹೇಳುತ್ತಿದ್ದಾರೆ ತಮಿಳುನಾಡಿನಲ್ಲಿ ನಿಮ್ಮ ಚಟುವಟಿಕೆ ನಡೆಸುತ್ತಿದ್ದರೆ ನಿಮಗೆ ಅದು ಕರ್ನಾಟಕದಷ್ಟು ಸುಲಭ ಆಗುತ್ತಿರಲಿಲ್ಲ. ಮುಖ್ಯವಾಗಿ ತಮಿಳುನಾಡು ಮುಖ್ಯಮಂತ್ರಿ ವಿರುದ್ಧ ದೂರು ದಾಖಲಿಸಲು ಹೋಗಿದ್ದರೆ ಕಥೆಯೇ ಬೇರೆ ಆಗುತ್ತಿತ್ತು ಎಂದು. ಈ ಬಗ್ಗೆ ನೀವೇನು ಹೇಳುತ್ತೀರಿ?
ನಾನು ಕರ್ನಾಟಕ ಹಾಗೂ ತಮಿಳುನಾಡನ್ನು ಹೋಲಿಕೆ ಮಾಡುವುದಿಲ್ಲ. ಆಧ್ಯಾತ್ಮಿಕ ಕಾರಣಗಳಿಗಾಗಿ ಮಾತ್ರ ಕರ್ನಾಟಕದ ಬಿಡದಿಯಲ್ಲಿ ಮಠ ಆರಂಭಿಸಿದೆ. ಅದಕ್ಕಿಂತ ಹೊರತಾದುದು ಏನೂ ಇಲ್ಲ.

*ನೀವು ಶಾಂತಿಯಿಂದ ಇರುವುದನ್ನು ಇಷ್ಟ ಪಡದ ನಿಮ್ಮ ದೊಡ್ಡ ಶತ್ರು ಕರ್ನಾಟಕದಲ್ಲಿ ಯಾರು?
(ಸುದೀರ್ಘ ಯೋಚನೆ) ನನಗೆ ಯಾವುದೇ ಒಂದು ಹೆಸರು ಜ್ಞಾಪಕಕ್ಕೆ ಬರುತ್ತಿಲ್ಲ
                           `ಲಕ್ಷಾಂತರ ರೂಪಾಯಿ ಸುಲಿಗೆ~
*   ನಿಮ್ಮಿಂದ ಯಾರಾದರೂ ಹಣ ಸುಲಿಗೆ ಮಾಡಿದ್ದಾರೆಯೇ?
ಹೌದು. ಲಕ್ಷಾಂತರ ರೂಪಾಯಿ ಸುಲಿಗೆ ಆಗಿದೆ. ಆರಂಭದಲ್ಲೇ ಲೆನಿನ್ ಹಾಗೂ ಆತನ ತಂಡದಿಂದ 42 ಲಕ್ಷ ರೂಪಾಯಿಗೆ ಬೇಡಿಕೆ.... ಆ ತಂಡದಲ್ಲಿ ಪ್ರಸನ್ನ, ಗೋಪಾಲ್, ಕಾಮರಾಜ್, ಸಕ್ಸೇನಾ, ಅಯ್ಯಪ್ಪ, ಆರತಿ ರಾವ್ ಹಾಗೂ ಲೆನಿನ್ ಸಹೋದರ ಇದ್ದರು. ಅವರೆಲ್ಲ ಹಣದೊಂದಿಗೆ ಆಸ್ತಿಯಲ್ಲಿ ಪಾಲನ್ನೂ ಕೇಳಿದ್ದರು.
                          `ಮುತ್ತಪ್ಪ ರೈ ಅವರಿಂದ ಸಮಸ್ಯೆ ಇಲ್ಲ~
*ಒಂದು ವಲಯದಲ್ಲಿ ಮುತ್ತಪ್ಪ ರೈ ಅವರ ಹೆಸರು ಸಹ ಕೇಳಿ ಬರುತ್ತಿದೆಯಲ್ಲ. ಅವರ ಬಗ್ಗೆ ಏನು ಹೇಳಲು ಬಯಸುತ್ತೀರಿ?
ಇಲ್ಲ, ಇಲ್ಲ, ಈ ಸಂಚಿನ ಹಿಂದೆ ಮುತ್ತಪ್ಪ ರೈ ಇಲ್ಲವೇ ಇಲ್ಲ. ಅವರೊಬ್ಬ ಬಹಳ ಒಳ್ಳೆಯ ವ್ಯಕ್ತಿ. ನನ್ನ ಜೊತೆಗೆ ಅವರು ಉತ್ತಮ ಬಾಂಧವ್ಯ ಹೊಂದಿದ್ದಾರೆ. ಅವರು ಯಾವತ್ತೂ ನಮ್ಮ ಭೂಮಿಯ ಮೇಲೆ ಕಣ್ಣಿಟ್ಟಿಲ್ಲ.

* ನಿಮ್ಮ ಸಮಸ್ಯೆಗಳಿಗೆ ಅವರು ಯಾವ ರೀತಿ ಪ್ರತಿಕ್ರಿಯಿಸಿದರು?
ಅವರು ಯಾವತ್ತೂ ಅಗೌರವ ಸೂಚಿಸಿಲ್ಲ. ಅವರು ನಮಗೆ ಬೆಂಬಲ ಸೂಚಿದ್ದಾರೆ. ಅವರು ಯಾರಿಗೂ ಕೆಟ್ಟದ್ದನ್ನು ಮಾಡಲು ಬಯಸುವ ವ್ಯಕ್ತಿ ಅಲ್ಲ. ದೇವಸ್ಥಾನ ಕಟ್ಟುವ ಸಮಯದಲ್ಲಿ 50 ಸಾವಿರ ರೂಪಾಯಿ ದೇಣಿಗೆ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT