ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ತಿ ಮೌಲ್ಯದ 5 ಪಟ್ಟು ಪರಿಹಾರ: ಯತ್ನಾಳ ಪಟ್ಟು

Last Updated 3 ಜನವರಿ 2012, 5:35 IST
ಅಕ್ಷರ ಗಾತ್ರ

ವಿಜಾಪುರ: `ಮಾಸ್ಟರ್ ಪ್ಲಾನ್ ಜಾರಿಯಿಂದ ತೆರವುಗೊಳ್ಳಲಿರುವ ಆಸ್ತಿಗಳ ಮಾಲೀಕರಿಗೆ ಮಾರುಕಟ್ಟೆ ದರದ ಐದು ಪಟ್ಟು ಪರಿಹಾರ ನೀಡಬೇಕು~ ಎಂದು ಕೇಂದ್ರದ ಮಾಜಿ ಸಚಿವ ಬಸನಗೌಡ ಪಾಟೀಲ ಯತ್ನಾಳ ಆಗ್ರಹಿಸಿದರು.

ವಿಜಾಪುರ ನಗರದಲ್ಲಿಯ ಮಾಸ್ಟರ್ ಪ್ಲಾನ್ ಜಾರಿ ಕುರಿತು ಸರ್ವಪಕ್ಷಗಳ ನಿಯೋಗದೊಂದಿಗೆ ಪ್ರಭಾರ ಜಿಲ್ಲಾಧಿಕಾರಿಗಳನ್ನು ಭೇಟಿಯಾದ ಸಂದರ್ಭದಲ್ಲಿ ಅವರು ಮಾತನಾಡಿದರು.

`ಆಸ್ತಿಗಳ ಮಾಲೀಕರಿಗೆ ಪರಿಹಾರ ನೀಡಲು ಒಪ್ಪಿಕೊಂಡಿರುವುದು ಸ್ವಾಗತಾರ್ಹ. ಆದರೆ, ಉಪ ನೋಂದಣಾಧಿಕಾರಿಗಳ ಕಚೇರಿ ಮೌಲ್ಯದಷ್ಟು ಪರಿಹಾರ ನೀಡಿದರೆ ಅನ್ಯಾಯವಾಗುತ್ತದೆ. ಆ ಮೌಲ್ಯದ ಐದು ಪಟ್ಟು ಪರಿಹಾರ ನೀಡಬೇಕು~ ಎಂದು ಒತ್ತಾಯಿಸಿದರು.

`ನಗರ ಯೋಜನಾ ಪ್ರದೇಶದಲ್ಲಿ ಮೂರು ನಕ್ಷೆಗಳಿವೆ. ರಾಜಕಾರಣಿಗಳು- ಪ್ರಭಾವಿ ವ್ಯಕ್ತಿಗಳ ಆಸ್ತಿಗಳನ್ನು ರಕ್ಷಿಸಿ
ಬಡವರ ಆಸ್ತಿಗಳನ್ನು ಒಡೆದು ಹಾನಿ ಮಾಡುವುದು ಬೇಡ. ಈ ತಾರತಮ್ಯ ತಪ್ಪಿಸಲು ಸಾರ್ವಜನಿಕರ ಸಮ್ಮುಖದಲ್ಲಿ ಪಾರದರ್ಶಕವಾಗಿ ಅಳತೆ ಮಾಡಬೇಕು~ ಎಂದರು.

`ಪರಿಹಾರ ನೀಡಿ ಕೆಡವಿ ಹಾಕಿದ ನಂತರ ಉಳಿಯುವ ಕಟ್ಟಡದ ಭಾಗವನ್ನು ರಿಪೇರಿ ಮಾಡಿಕೊಳ್ಳಲು ಅಥವಾ ಪುನರ್ ನಿರ್ಮಿಸಲಿಕ್ಕೆ ಪ್ರಾಚ್ಯವಸ್ತು ಸರ್ವೇಕ್ಷಣ ಇಲಾಖೆಯಿಂದ ಮೊದಲೇ ಅನುಮತಿ ಕೊಡಿಸಬೇಕು. ನೀವು ಕೆಡವಿ ಹಾಕಿದ ನಂತರ ಅವರು ಪರವಾನಿಗೆ ನೀಡಿದ್ದರೆ ಆ ಆಸ್ತಿಗಳೆಲ್ಲ ಹಾಳಾಗುತ್ತವೆ. ಈ ಗೊಂದಲವನ್ನು ನಿವಾರಿಸಬೇಕು~ ಎಂದು ಮನವಿ ಮಾಡಿದರು.

`ಈ ಎಲ್ಲ ಬೇಡಿಕೆಗಳ ಬಗ್ಗೆ ಜಿಲ್ಲಾ ಆಡಳಿತ ಸಕಾರಾತ್ಮಕವಾಗಿ ಸ್ಪಂದಿಸುತ್ತದೆ. ಎಷ್ಟು ಸಾಧ್ಯವೋ ಅಷ್ಟು ಹೆಚ್ಚಿನ ಪರಿಹಾರ ನೀಡಲು ಸರ್ಕಾರಕ್ಕೆ ಮನವಿ ಮಾಡುತ್ತೇವೆ~ ಎಂದು ಪ್ರಭಾರ ಜಿಲ್ಲಾಧಿಕಾರಿ ಕಾಶಿನಾಥ ಪವಾರ ಭರವಸೆ ನೀಡಿದರು.

ನಗರಸಭೆ ಅಧ್ಯಕ್ಷ ಪರಶುರಾಮ ರಜಪೂತ, ಜೆಡಿಎಸ್ ಮುಖಂಡ ವಿಜಯಕುಮಾರ ಪಾಟೀಲ, ಸಿದ್ಧೇಶ್ವರ ಸಂಸ್ಥೆಯ ಚೇರಮನ್ ಬಸಯ್ಯ ಹಿರೇಮಠ, ದಾನಪ್ಪ ಕಟ್ಟಿಮನಿ, ಚಿದಾನಂದ ಇಟ್ಟಂಗಿ, ರವೀಂದ್ರ ಕುಲಕರ್ಣಿ, ಗುರು ಗಚ್ಚಿನಮಠ ಇತರರು ಸಭೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT