ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ಪತ್ರೆ ಆವರಣದಲ್ಲಿ ಗಾಯಗೊಂಡವರ ಆಕ್ರಂದನ

ಹೊನ್ನಾಳಿ: ಕ್ಯಾಂಟರ್‌ ಅಪಘಾತ, 10 ಸಾವು
Last Updated 24 ಡಿಸೆಂಬರ್ 2013, 5:38 IST
ಅಕ್ಷರ ಗಾತ್ರ

ದಾವಣಗೆರೆ: ‘ಮದುವೆ ಮುಗಿಸಿಕೊಂಡು ಹೊನ್ನಾಳಿಯಲ್ಲಿರುವ ತೀರ್ಥರಾಮೇಶ್ವರದಿಂದ ವಾಪಸಾಗುತ್ತಿದ್ದೆವು. ಚಾಲಕ ಕುಡಿದ ಅಮಲಿನಲ್ಲಿ ವೇಗವಾಗಿ ಕ್ಯಾಂಟರ್‌ ವಾಹನ ಚಲಾಯಿಸುತ್ತಿದ್ದ, ಚಾಲಕನಿಗೆ ನಿಧಾನವಾಗಿ ವಾಹನ ಚಲಾಯಿಸಲು ಹೇಳಿದರು. ಆದರೂ ಡ್ರೈವರ್‌ ತಲೆಕೆಡಿಸಿಕೊಳ್ಳಲಿಲ್ಲ. ರಸ್ತೆ ಇಳಿಜಾರು ಇದ್ದಿದ್ದರಿಂದ ವಾಹನ ಚಾಲಕ ವೇಗವಾಗಿ ಬರುತ್ತಿದ್ದ ತಕ್ಷಣ ಎದುರಿನಿಂದ  ಬಂದ ವಾಹನಕ್ಕೆ ತಪ್ಪಿಸಲು ಹೋಗಿ ಕ್ಯಾಂಟರ್‌ ರಸ್ತೆ ಬಿಟ್ಟು ಹಳ್ಳಕ್ಕೆ ಇಳಿಯಿತು. ವಾಹನ ಉರುಳುವ ಸೂಚನೆ ಕಂಡ ತಕ್ಷಣ ನಾನು ಹಾರಿಕೊಂಡೆ. ಹೀಗಾಗಿ ತಲೆಗೆ ಮತ್ತು ಕಾಲುಗಳಿಗೆ ಬಲವಾದ ಪೆಟ್ಟು ಬಿದ್ದಿದೆ. ಕ್ಯಾಂಟರ್‌ನಲ್ಲಿ ಸುಮಾರು 40 ಮಂದಿ ಇದ್ದೇವು’ ಎಂದು ದುರ್ಘಟನೆ ವಿವರಿಸಿದರು ಗಾಯಗೊಂಡ ಭಾನುವಳ್ಳಿಯ ಬಸವರಾಜ್‌.

ಸೋಮವಾರ ಹೊನ್ನಾಳಿಯ ತುಗ್ಗಲಹಳ್ಳಿ ಸಮೀಪ ನಡೆದ ಕ್ಯಾಂಟರ್‌ ಅಪಘಾತದಲ್ಲಿ ಗಾಯಗೊಂಡಿದ್ದ ಅವರು ಇಲ್ಲಿನ ಜಿಲ್ಲಾ ಚಿಗಟೇರಿ
ಆಸ್ಪತ್ರೆಗೆ ದಾಖಲಾಗಿದ್ದಾಗ ಅಳಲನ್ನು ತೋಡಿಕೊಂಡರು.

ಅಪಘಾತಕ್ಕೆ ಒಳಗಾಗಿ ಮೃತಪಟ್ಟ ದೇಹಗಳನ್ನು ಹಾಗೂ ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡ ವ್ಯಕ್ತಿಗಳನ್ನು ನೋಡಲು ಅವರ ಸಂಬಂಧಿಗಳು ಆಸ್ಪತ್ರೆಗೆ ಧಾವಿಸಿ, ವೈದ್ಯರ ಬಳಿ ಮಾಹಿತಿ ಪಡೆಯುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಗಾಯಾಳುಗಳ ಮತ್ತು ಸಂಬಂಧಿಕರ ಆಕ್ರಂದನ ಆಸ್ಪತ್ರೆಯಲ್ಲಿ ಮುಗಿಲುಮುಟ್ಟಿತ್ತು.  ಗಾಯಾಳುಗಳು ತಮ್ಮ ವಿವರವನ್ನು ವೈದ್ಯರ ಬಳಿ
ನೀಡುತ್ತಿದ್ದರು.  ಆಘಾತಕ್ಕೊಳಗಾಗಿದ್ದ ಮಹಿಳೆ ತನ್ನ ಕಾಲುಗಳು ಸ್ವಾಧೀನ ಕಳೆದುಕೊಂಡಿದೆ ಎಂದು ವೈದ್ಯರ ಬಳಿ ಅಳಲು ತೋಡಿಕೊಂಡರು.
ವೈದ್ಯರು, ದಾದಿಯರು ಸಮಾರೋಪಾದಿಯಲ್ಲಿ ಚಿಕಿತ್ಸೆಯಲ್ಲಿ ತೊಡಗಿದ್ದರು.

ಅಪಘಾತ: 10 ಸಾವು
ಘಟನೆಯಿಂದಾಗಿ ಸ್ಥಳದಲ್ಲಿಯೇ 7ಮಂದಿ ಮೃತಪಟ್ಟಿದ್ದು, ತೀವ್ರವಾಗಿ ಗಾಯಗೊಂಡು 21 ಮಂದಿ ಚಿಕಿತ್ಸೆಗೆ ದಾಖಲಾಗಿದ್ದಾರೆ. ಇವರಲ್ಲಿ ಮೂವರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.

ಐವರ ಸ್ಥಿತಿ ಗಂಭೀರವಾಗಿದೆ. ಉಳಿದವರ ಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯರು ತಿಳಿಸಿದರು.

ಶಾಸಕ ಭೇಟಿ: ಹರಿಹರ ಶಾಸಕ ಎಚ್‌.ಎಸ್‌.ಶಿವಶಂಕರ್ ಮತ್ತು ಬೆಂಬಲಿಗರು ಚಿಗಟೇರಿ ಆಸ್ಪತ್ರೆಗೆ  ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದರು.

ಮೇಲಕ್ಕೆ ಸಾಗಿಸಿದೆ...
ಕ್ಯಾಂಟರ್‌ ಉರುಳುತ್ತಿದ್ದಂತೆ ನಾನು ಕೆಳಕ್ಕೆ ಹಾರಿಕೊಂಡೆ. ಜನ ಚೀರಾಡುತ್ತಿದ್ದರು. ಹನುಮಂತಪ್ಪ ಅವರ ಬಾಯಿಗೆ ನೀರು ಬಿಟ್ಟೆ. ಅವರು ಉಸಿರು ನಿಂತು ಹೋಯ್ತು. ವಾಹನದ ಕೆಳಕ್ಕೆ ಸಿಲುಕಿಕೊಂಡ ಕೆಲವರನ್ನು ಮೇಲಕ್ಕೆ ಸಾಗಿಸಿದೆ.

–ಬಸವರಾಜ್‌, ಗಾಯಾಳು.

ಪರಿಹಾರಕ್ಕೆ ಆಗ್ರಹ
ಮೃತರಿಗೆ ತಲಾ ₨ 5 ಲಕ್ಷ, ಗಾಯಾಳುಗಳಿಗೆ ₨ 50 ಸಾವಿರ ಪರಿಹಾರ ನೀಡುವಂತೆ ಶಾಸಕ ಎಚ್‌.ಎಸ್‌.ಶಿವಶಂಕರ್  ಅವರು, ಜಿಲ್ಲಾಧಿಕಾರಿ ಅಂಜನಕುಮಾರ್ ಅವರಲ್ಲಿ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿ ಘಟನೆ ಬಗ್ಗೆ ಮುಖ್ಯಮಂತ್ರಿಗಳಿಗೆ ತಿಳಿಸಿದ್ದೇನೆ. ಮುಖ್ಯಮಂತ್ರಿ  ಈ ಬಗ್ಗೆ ಪ್ರತಿಕ್ರಿಯಿಸಲಿದ್ದಾರೆ ಎಂದು ಅವರು ತಿಳಿಸಿದರು.

ಗ್ರಾಮದಲ್ಲಿ ಮಡುಗಟ್ಟಿದ ಶೋಕ

ಮಲೇಬೆನ್ನೂರು: ಭಾನುವಳ್ಳಿಯಿಂದ ಕೆಂಚಿಕ್ಕೊಪ್ಪದ ಬಳಿ ಕ್ಯಾಂಟರ್‌ ಉರುಳಿ 10 ಜನರು ಮೃತಪಟ್ಟ ಘಟನೆ ಮೃತರ ಬಂಧು ಮಿತ್ರರಿಗೆ ಬರಸಿಡಿಲಿನಂತೆ ಎರಗಿತು.ಮಸಣ ಸೇರಿದ ಬಂಧು ಮಿತ್ರರನ್ನು ಕಳೆದುಕೊಂಡ ಕುಟುಂಬಗಳ ಸದಸ್ಯರು ಕಣ್ಣೀರಿಟ್ಟರು. ಇಡೀ ಗ್ರಾಮದಲ್ಲಿ ನೀರವ ಮೌನ ಆವರಿಸಿದೆ.
‘ಹೊನ್ನಾಳಿ, ಶಿವಮೊಗ್ಗ, ದಾವಣಗೆರೆಗೆ ಗಾಯಗೊಂಡವರನ್ನು 108 ತುರ್ತು ವಾಹನ,  ಅಂಬುಲೆನ್ಸ್‌ಗಳಲ್ಲಿ ಸಾಗಿಸಿದ್ದಾರೆ ಎಂದು ತಿಳಿದುಬಂದಿದೆ. ಆಸ್ಪತ್ರೆಗೆ ಹೋಗುತ್ತಿದ್ದೇವೆ’ ಎಂದು  ಗ್ರಾಮಸ್ಥರು ಆತಂಕದಿಂದ ಹೇಳಿದರು.

‘ಗ್ರಾಮದಲ್ಲಿ ಇಂತಹ ಅಪಘಾತ ಸಾಮೂಹಿಕ ಸಾವಿನ ಘಟನೆ ಸಂಭವಿಸಿರಲಿಲ್ಲ’ ಎಂದು ಸಂಬಂಧಿಗಳನ್ನು ಕಳೆದುಕೊಂಡಿದ್ದ ಶಿವಕುಮಾರ್‌ ಮಾಹಿತಿ ನೀಡಿದರು. ಸಾಂತ್ವನ ಹೇಳುವ ಮುಖಂಡರ ಮನಸ್ಸು ಮೌನಕ್ಕೆ ಜಾರಿದ್ದವು.

ಸಂತಾಪ: ಹರಿಹರ ಕ್ಷೇತ್ರದ ಶಾಸಕ ಎಚ್‌.ಎಸ್‌.ಶಿವಶಂಕರ್‌, ಮಾಜಿ ಶಾಸಕ ಬಿ.ಪಿ.ಹರೀಶ್‌, ವೀರಭದ್ರಪ್ಪ, ಟಿ.ಮುಕುಂದ ಸಂತಾಪ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT