ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ಪತ್ರೆ ಎತ್ತಂಗಡಿಗೆ ಯತ್ನ?

Last Updated 7 ಫೆಬ್ರುವರಿ 2011, 8:30 IST
ಅಕ್ಷರ ಗಾತ್ರ

ಕೋಲಾರ: ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನದ ಅಡಿ ದಿನದ 24 ಗಂಟೆಯೂ ಕಾರ್ಯನಿರ್ವಹಿಸುವ ಕೇಂದ್ರವಾಗಿ ಮೇಲ್ದರ್ಜೆಗೆ ಏರಿಸಲ್ಪಟ್ಟ, ನಗರದ ಹೃದಯ ಭಾಗದಲ್ಲಿರುವ, ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಹೆರಿಗೆ ಆಸ್ಪತ್ರೆಯ ಸೌಲಭ್ಯವನ್ನು ನಿಧಾನವಾಗಿ ಕಡಿತಗೊಳಿಸಿ ಅದನ್ನು ಜನರಿಗೆ ನಿರುಪಯುಕ್ತಗೊಳಿಸುವ ಯತ್ನ ನಡೆಯುತ್ತಿದೆ ಎಂದು ತಿಳಿದುಬಂದಿದೆ.

ಆರೋಗ್ಯ ಕೇಂದ್ರದ ಸುತ್ತಲೂ ಬೀದಿಬದಿ ವ್ಯಾಪಾರಿಗಳ ಹಾವಳಿ, ಕಸದ ರಾಶಿ ಬೀಳುವುದರಿಂದ ರೋಗಿಗಳಿಗೆ ಸೋಂಕು ತಗುಲಬಹುದು ಎಂಬ ಉದ್ದೇಶದಿಂದ, ಕೇಂದ್ರದಲ್ಲಿರುವ ಸೌಲಭ್ಯಗಳನ್ನು ಕಡಿತಗೊಳಿಸುವ ನಿರ್ಧಾರವನ್ನು ಕೈಗೊಳ್ಳಲಾಗುತ್ತಿದೆ. ಸ್ವಚ್ಛತೆ ನಿರ್ವಹಣೆಯಲ್ಲಿ ವಿಫಲವಾದ ನಗರಸಭೆಯ ತಪ್ಪಿಗೆ ಆರೋಗ್ಯ ಕೇಂದ್ರದ ಸೌಲಭ್ಯಗಳನ್ನು ಸ್ಥಳಾಂತರಗೊಳಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಜಿಲ್ಲೆಯ ಬೇರೊಂದು ತಾಲ್ಲೂಕಿನಲ್ಲಿರುವ, ಕೋಲಾರ ವಾಸಿಯಾದ ಆರೋಗ್ಯಾಧಿಕಾರಿಯೊಬ್ಬರನ್ನು ಇಲ್ಲಿಗೆ ವರ್ಗಾಯಿಸಿ ಅವರಿಗೆ ಅನುಕೂಲ ಕಲ್ಪಿಸುವ ಸಲುವಾಗಿಯೇ ಈ ಯತ್ನ ನಡೆಯುತ್ತಿದೆ ಎಂಬ ಆರೋಪವೂ ಇದೇ ಸಂದರ್ಭದಲ್ಲಿ ಕೇಳಿಬಂದಿದೆ.

1983ನಲ್ಲಿ ನಗರದ ಆನೂರು ಸರಸ್ವತಮ್ಮ ಮತ್ತು ಸೂರ್ಯನಾರಾಯಣ ಶೆಟ್ಟಿ ದಂಪತಿ ಕೊಡುಗೆ ನೀಡಿದ ಕಟ್ಟಡದಲ್ಲಿ ಕೇಂದ್ರ ಕಾರ್ಯ ನಿರ್ವಹಿಸುತ್ತಿದೆ. ಹೆರಿಗೆ ಸೌಲಭ್ಯ ಜನರಿಗೆ ಸಿಗಲಿ ಎಂಬ ಒಂದೇ ಸದುದ್ದೇಶದಿಂದ ದಂಪತಿ ಕಟ್ಟಡವನ್ನು ದಾನ ನೀಡಿದ್ದರು.  ಮುನ್ಸಿಪಲ್ ಆಸ್ಪತ್ರೆಯಾಗಿದ್ದ ಈ ಕೇಂದ್ರ ಈಗ ಜಿಲ್ಲಾ ಪಂಚಾಯಿತಿ ಆಡಳಿತ ವ್ಯಾಪ್ತಿಯಲ್ಲಿದೆ. ಇದೀಗ ಆ ದಂಪತಿಯ ಆಶಯಕ್ಕೂ ಧಕ್ಕೆ ಬರುವ ದಿನಗಳು ಹತ್ತಿರವಾಗುತ್ತಿದೆ ಎನ್ನಲಾಗಿದೆ.

ವರ್ಗಾವಣೆ ಯತ್ನ: 24/7 ನಿಯಮದ ಅಡಿಯಲ್ಲಿ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಮೂವರು ಸ್ಟಾಫ್ ನರ್ಸ್‌ಗಳ ಪೈಕಿ ಒಬ್ಬರನ್ನು ಬೇರೆ ಕಡೆಗೆ ವರ್ಗಾಯಿಸುವ ಪ್ರಯತ್ನಗಳೂ ನಡೆದಿದೆ. ಜಿಲ್ಲಾ ಕಾರ್ಯಕ್ರಮ ಅನುಷ್ಠಾನಾಧಿಕಾರಿಗಳು ಈ ಬಗ್ಗೆ ಮಾಹಿತಿಯನ್ನು ನೀಡಿದ್ದಾರೆ ಎಂದು ಕೇಂದ್ರದ ಮೂಲಗಳು ‘ಪ್ರಜಾವಾಣಿ’ಗೆ ಖಚಿತಪಡಿಸಿವೆ.

ಮೂವರು ನರ್ಸ್‌ಗಳು ಮೂರು ಪಾಳಿಯಲ್ಲಿ ಕೆಲಸ ಮಾಡುತ್ತಾರೆ. ಅವರಲ್ಲಿ ಒಬ್ಬರನ್ನು ವರ್ಗಾಯಿಸಿದರೆ, ಉಳಿದ ಇಬ್ಬರಿಗೆ ತಲಾ 12 ಅವಧಿ ಕೆಲಸ ಮಾಡುವಂತೆ ಹೇಳುವುದು ಮೂಲಭೂತ ಹಕ್ಕಿಗೆ ಚ್ಯುತಿ ತಂದಂತೆ ಆಗುತ್ತದೆ. ನರ್ಸ್ ವರ್ಗಾವಣೆಯಾದರೆ ಕೇಂದ್ರಕ್ಕೆ ಬರುವ ಜನರಿಗೆ ಸಕಾಲಕ್ಕೆ ಸೇವೆ ಒದಗಿಸುವುದು ಕಷ್ಟವಾಗಲಿದೆ. ಪ್ರತಿ ಗುರುವಾರ ಗರ್ಭಿಣಿಯರಿಗೆ, ಮಕ್ಕಳಿಗೆ ಲಸಿಕೆ ಹಾಕುವ ಕಾರ್ಯಕ್ರಮ ನಡೆಯುತ್ತದೆ. ಲಸಿಕೆಗಳನ್ನು ಹಾಕಲಾಗುವುದು. ಜನರೂ ಅಂದು ಹೆಚ್ಚಿಗೆ ಬರುತ್ತಾರೆ. ಇರುವ ಸಿಬ್ಬಂದಿ ಮಹಿಳೆಯರಿಗೆ ಇಂಜೆಕ್ಷನ್, ಮಕ್ಕಳಿಗೆ ಲಸಿಕೆ ಹಾಕಬಹುದು ಎಂದರೂ, ತುರ್ತು ಹೆರಿಗೆ ಪ್ರಕರಣಗಳು ದಾಖಲಾದರೆ ಸೇವೆ ನೀಡುವುದು ಅತ್ಯಂತ ಕಷ್ಟವಾಗಲಿದೆ ಎಂಬುದು ಮೂಲಗಳ ಅಸಹಾಯಕ ನುಡಿ.

ಹುನ್ನಾರ?: ಜಿಲ್ಲೆಯ ಬೇರೊಂದು ತಾಲ್ಲೂಕಿನ ಆರೋಗ್ಯ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ, ಕೋಲಾರ ವಾಸಿಯಾದ ಆರೋಗ್ಯಾಧಿಕಾರಿಯೊಬ್ಬರನ್ನು ಇಲ್ಲಿಗೆ ವರ್ಗಾಯಿಸಿ ಅವರಿಗೆ ಅನುಕೂಲ ಕಲ್ಪಿಸುವ ಸಲುವಾಗಿಯೇ ಈ ಯತ್ನ ನಡೆಯುತ್ತಿದೆ ಎಂಬ ಆರೋಪವೂ ಇದೇ ಸಂದರ್ಭದಲ್ಲಿ ಕೇಳಿಬಂದಿದೆ.

ಪ್ರಸ್ತುತ ಸ್ಥಿತಿ: ‘ನಿತ್ಯ 150 ಯಿಂದ 200 ಮಂದಿ ಕೇಂದ್ರಕ್ಕೆ ಚಿಕಿತ್ಸೆಗಾಗಿ ಬರುತ್ತಾರೆ. ಪ್ರತಿ ತಿಂಗಳೂ 10-15 ಹೆರಿಗೆ ಪ್ರಕರಣಗಳು ದಾಖಲಾಗುತ್ತವೆ. 24-7 ಕೇಂದ್ರವಾಗಿ ಉನ್ನತ ದರ್ಜೆಗೇರಿ ಒಂದು ವರ್ಷ ಕಳೆದಿದೆ. ಮೊದಲಿನಂತೆ ನೀರಿನ ಸಮಸ್ಯೆ ಇಲ್ಲ. ಎಲ್ಲಕ್ಕಿಂತ ಮೇಲಾಗಿ, ಒಂದೇ ಒಂದು ಸೋಂಕು ಪ್ರಕರಣಗಳು ಇದುವರೆಗೂ ಕಂಡುಬಂದಿಲ್ಲ. ಆದರೂ ಸೌಲಭ್ಯಗಳನ್ನು ಸ್ಥಳಾಂತರಿಸುವುದರ ಹಿಂದೆ, ಹೇಳುವ ನೆಪಕ್ಕಿಂತ ಅದರ ಹಿಂದಿನ ಕಾಣದ ಹುನ್ನಾರವೇ ದೊಡ್ಡದಿದೆ ಎನ್ನಿಸುತ್ತದೆ’ ಎಂಬುದು ಮೂಲಗಳ ಶಂಕೆ.

ಮೂರು ಹೆಡ್ ಆಫ್ ಅಕೌಂಟ್‌ನಲ್ಲಿ 7 ಎಎನ್‌ಎಂಗಳು, ಮೂವರು ಸ್ಟಾಫ್ ನರ್ಸ್, ಒಬ್ಬ ನರ್ಸ್, ಮೂವರು 3 ವೈದ್ಯರು (ಅವರಲ್ಲಿ ಒಬ್ಬರು ಪ್ರಭಾರಿ ತಾಲ್ಲೂಕು ಆರೋಗ್ಯಾಧಿಕಾರಿ) ಇಬ್ಬರು ಗುಮಾಸ್ತರು (ಅವರಲ್ಲಿ ಒಬ್ಬರು ಹಲವು ತಿಂಗಳಿಂದ ಜಿಲ್ಲಾ ಆರೋಗ್ಯಾಧಿಕಾರಿ ಕಚೇರಿಯಲ್ಲೆ ನಿಯೋಜನೆ ಮೇರೆಗೆ ಸೇವೆ ಸಲ್ಲಿಸುತ್ತಿದ್ದಾರೆ), ಒಬ್ಬ ಮೇಲ್ ವರ್ಕರ್ ಮತ್ತು ಐವರು ನಾಲ್ಕನೇ ದರ್ಜೆ ನೌಕರರಿದ್ದಾರೆ. ಒಬ್ಬೊಬ್ಬರನ್ನೆ ವರ್ಗಾಯಿಸಿ ಕೇಂದ್ರವನ್ನು ದುರ್ಬಲಗೊಳಿಸುವ ಯತ್ನವನ್ನು ಜಿಲ್ಲಾ ಪಂಚಾಯಿತಿ ತಡೆಯಬೇಕಿದೆ ಎಂಬುದು ಮೂಲಗಳ ಮನವಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT