ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ಪತ್ರೆಯಲ್ಲಿ ನರಭಕ್ಷಕ ಹುಲಿ ಬೇಟೆಗಾರ

Last Updated 14 ಆಗಸ್ಟ್ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಸ್ವಾತಂತ್ರ್ಯಪೂರ್ವ ಭಾರತದ ನರಭಕ್ಷಕ ಹುಲಿ, ಚಿರತೆ ಬೇಟೆಗಾರರ ಪೈಕಿ ಅತಿ ದೊಡ್ಡ ಹೆಸರು ಜಿಮ್ ಕಾರ್ಬೆಟ್ ಮತ್ತು ಕೆನ್ನಿತ್ ಆಂಡರ್‌ಸನ್. ಕೆನ್ನಿತ್ ಅವರ ಪುತ್ರ ಡೊನಾಲ್ಡ್ ಆಂಡರ್‌ಸನ್ ಜಯನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದಾರೆ.

ನರಭಕ್ಷಕ ಹುಲಿ ಬೇಟೆಗಾರ 79 ವರ್ಷದ ಡೊನಾಲ್ಡ್ ಅವರಿಗೆ ವಯಸ್ಸಿನ ಕಾರಣದಿಂದ ಸಹಜವಾಗಿಯೇ ಆಯಾಸ ಕಾಡುತ್ತಿದೆ. ಉಸಿರಾಟದ ತೊಂದರೆ ಸೇರಿದಂತೆ ಆರೋಗ್ಯದ ಹಲವು ಸಮಸ್ಯೆಗಳಿವೆ. ಆದರೂ ಕಾಡಿನ ಮಾತೆತ್ತಿದರೆ ಸಾಕು ಉತ್ಸಾಹ ಪುಟಿದೇಳುತ್ತದೆ. ತೀವ್ರ ನಿಗಾ ಘಟಕದಲ್ಲಿ ಇದ್ದರೂ ಕಾಡು, ಬೇಟೆ, ಪರಿಸರದ ಬಗ್ಗೆ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಮಾತನಾಡಿದರು.

ಹೆಬ್ಬುಲಿಯ ಬೇಟೆಯ ಕಥೆಗಳು ಯಾರಿಗೆ ತಾನೇ ಇಷ್ಟವಿಲ್ಲ. ಪೂರ್ಣಚಂದ್ರ ತೇಜಸ್ವಿ ಅವರ ಕಾಡಿನ ಕಥೆಗಳಲ್ಲಿ ಆಂಡರ್‌ಸನ್ ಅವರ ಹೆಸರು ಸಾಕಷ್ಟು ಸಲ ಪ್ರಸ್ತಾಪವಾಗುತ್ತದೆ. ಕಾಡಿನ ಸುತ್ತ ಮುತ್ತಲಿದ್ದ ಹಳ್ಳಿಗಳ ಮೇಲೆ ದಾಳಿ ನಡೆಸಿ ನರಹತ್ಯೆ ನಡೆಸುತ್ತಿದ್ದ ಹೆಬ್ಬುಲಿಗಳನ್ನು ಕೊಲ್ಲಲೆಂದೇ ಬ್ರಿಟಿಷ್ ಆಡಳಿತ ಲೈಸೆನ್ಸ್ ನೀಡುತ್ತಿತ್ತು.

ಇಂದಾದರೆ ಕಾಡಿನ ನಡುವೆಯೂ ರಸ್ತೆಗಳಿವೆ. ಕೆಲವೆಡೆ ದಟ್ಟ ಅರಣ್ಯದ ನಡುವೆಯೂ ಮಣ್ಣಿನ ರಸ್ತೆಯಿದೆ. ಹಳ್ಳಿ ಹಳ್ಳಿಗಳಿಗೆ ಸಂಪರ್ಕ ದೊರಕಿದೆ. ಆದರೆ ಸೂರ್ಯನ ಬೆಳಕು ಇಣುಕಲು ಅಸಾಧ್ಯವಾದ ಕಾಡಿನ ನಡುವೆ ಅಂದಿನ ದಿನಗಳಲ್ಲಿ ಟೆಂಟ್ ಹಾಕಿ, ನರಭಕ್ಷಕ ಹುಲಿಗಳನ್ನು ಹೊಡೆದ ಅನೇಕ ಸಂದರ್ಭಗಳಲ್ಲಿ ಕೆನ್ನಿತ್ ಅವರ ಜೊತೆ ಡೊನಾಲ್ಡ್ ಸಹ ಇದ್ದರು.

ಕೆನ್ನಿತ್ ಮತ್ತು ಬ್ಲಾಸಮ್ ಮಗನಾದ ಡೊನಾಲ್ಡ್ ಅವರಿಗೆ ಆಸ್ಟ್ರೇಲಿಯದಲ್ಲಿ ನೆಲೆಸಿರುವ ಜೂನ್ ಎನ್ನುವ ತಂಗಿಯಿದ್ದಾರೆ. ಜೂನ್ ತಿಂಗಳಲ್ಲಿ ಜನಿಸಿದಳು ಎನ್ನುವ ಕಾರಣದಿಂದಲೇ ಜೂನ್ ಎಂದು ನಾಮಕರಣ ಮಾಡಿದರಂತೆ. ಇವರಿಬ್ಬರೂ ವ್ಯಾಸಂಗ ಮಾಡಿದ್ದು ಬಿಷಪ್ ಕಾಟನ್ ಶಾಲೆಯಲ್ಲಿ. ಮನೆ ಇದ್ದದ್ದು ಕಬ್ಬನ್‌ಪಾರ್ಕ್ ಪೊಲೀಸ್ ಠಾಣೆ ಬಳಿ.

1974ರಲ್ಲಿ ನಿಧನರಾದ ಕೆನ್ನಿತ್ ಅವರ ಸಮಾಧಿ ಹೊಸೂರು ರಸ್ತೆಯ ಕ್ರೈಸ್ತ ಸಮಾಧಿ ಸ್ಥಳದಲ್ಲಿದೆ. ಬಹುಶಃ ತೇಜಸ್ವಿ ಅವರಿಗೆ ಕೆನ್ನಿತ್ ಬೆಂಗಳೂರಿನಲ್ಲೇ ನೆಲೆಸಿರುವುದು ಗೊತ್ತಿದ್ದರೆ ಮತ್ತೊಂದು ಕುತೂಹಲಕಾರಿ ಪುಸ್ತಕ ಬರೆಯಲು ಕಾರಣವಾಗುತ್ತಿತ್ತು ಎನ್ನಬಹುದು.

79 ವರ್ಷವಾದರೂ ಡೊನಾಲ್ಡ್ ಕಾಡಿನ ಪ್ರೇಮವನ್ನು ಬಿಟ್ಟಿಲ್ಲ. ಕಳೆದ ವಾರವಷ್ಟೆ ನಾಗರಹೊಳೆಗೆ ಹೋಗಿದ್ದೆ ಎನ್ನುವ ಅವರು, `ಮೊದಲೆಲ್ಲಾ ಕಾಡಿನಲ್ಲಿ ನಡೆದೇ ಹೋಗಬೇಕಾಗಿತ್ತು. ಅಲ್ಲೇ ಟೆಂಟ್ ಹಾಕುತ್ತಿದ್ದೆವು. ಆದರೀಗ ಕಾರಿನಲ್ಲೇ ಕಾಡು ಸುತ್ತಬಹುದು. 1973-74ರಲ್ಲಿ ಅರಣ್ಯ ಸಂರಕ್ಷಣಾ ಕಾಯ್ದೆಗಳು ಜಾರಿಯಾದ ನಂತರ ಕಾಡಿನ ಪ್ರವೇಶ ಕಷ್ಟವಾಯಿತು~ ಎನ್ನುವರು.

ಎಷ್ಟು ಹುಲಿ ಕೊಂದಿರಬಹುದು ಎನ್ನುವ ಪ್ರಶ್ನೆಗೆ ಉತ್ತರ ನೀಡಲು ಬಯಸದ ಡೊನಾಲ್ಡ್, `ಜನ ನಾನು ಯಾವ ಕಾರಣಕ್ಕೆ ಹುಲಿ ಕೊಂದೆ ಎಂದು ಅರ್ಥ ಮಾಡಿಕೊಳ್ಳುವುದಿಲ್ಲ. ನಾನು ಎಷ್ಟು ಹುಲಿ ಸಾಯಿಸಿದೆ ಎನ್ನುವ ಉತ್ತರ ನೀಡಿದರೆ, ಯಾವ ಕಾರಣಕ್ಕೆ ಸಾಯಿಸಿದೆ ಎಂದು ಅರ್ಥ ಮಾಡಿಕೊಳ್ಳದೆ ಟೀಕೆ ಮಾಡುತ್ತಾರೆ~ ಎಂದು ನಗುತ್ತಾ ನುಡಿದರು.

ಆರು ತಿಂಗಳ ಮಗುವಾಗಿದ್ದಾಗಿನಿಂದ ನಿರಂತರವಾಗಿ ತಂದೆಯ ಜೊತೆ ಕಾಡು ಸುತ್ತಿರುವ ಅವರಿಗೆ ಅಂದಿನ ಕಾಡು, ಇಂದಿನ ಕಾಡು, ಬೇಟೆ ಬಗ್ಗೆ ಪ್ರಶ್ನಿಸಿದರೆ `ಆಗ ಕಾಡಿನಲ್ಲಿ ಹುಲಿ, ಚಿರತೆ, ಆನೆಯ ಸಂಖ್ಯೆ ಹೆಚ್ಚಾಗಿತ್ತು. ಕಾಡೂ ದಟ್ಟವಾಗಿತ್ತು. ಹುಲಿ ಕೊಲ್ಲಲು ಸರ್ಕಾರವೇ ಲೈಸೆನ್ಸ್ ನೀಡುತ್ತಿತ್ತು. ಆದರೀಗ ಕಾಯ್ದೆ, ಕಾನೂನು ಜಾರಿಗೆ ಬಂದ ಮೇಲೆ ಇಷ್ಟ ಬಂದಂತೆ ಕಾಡಿಗೆ ಹೋಗಲಾಗಲ್ಲ. ಸಫಾರಿಗೆ ಹೋಗಬೇಕಷ್ಟೆ. ಆದರೆ ಎಲ್ಲಾ `ಕಾಸ್ಟ್ಲಿ~ ಆಗಿದೆ. ಸರ್ಕಾರ ನಡೆಸುವ ಸಫಾರಿಯೂ ದುಬಾರಿ~ ಎಂದರು.

`ನನಗೆ ಉಸಿರಾಟದ ತೊಂದರೆಯಿದೆ. ಆದರೂ ಕಾಡಿಗೆ ಹೋದರೆ ಮಾನಸಿಕ ನೆಮ್ಮದಿ ಸಿಗುತ್ತದೆ. ಉಸಿರಾಟ ಉತ್ತಮವಾಗುತ್ತದೆ. ಬೆಂಗಳೂರಿನಲ್ಲಿ ವಾತಾವರಣ ಹಾಳಾಗಿದೆ. ಮಾಲಿನ್ಯ ಹೆಚ್ಚಾಗುತ್ತಿದೆ. ಗುಣಮಟ್ಟ ಕಡಿಮೆಯಾಗುತ್ತಿದೆ. ಅಂದಿನ ಬೆಂಗಳೂರಿಗೂ ಇಂದಿಗೂ ಬಹಳ ವ್ಯತ್ಯಾಸವಿದೆ. ಜನಸಂಖ್ಯೆ ಹೆಚ್ಚಾಗಿದೆ. ಅಂದ ಮೇಲೆ ನಗರ ಹೇಗೆ ಚೆನ್ನಾಗಿರುತ್ತೆ~ ಎಂದುಪ್ರಶ್ನಿಸುವರು.

ಸುಪ್ರೀಂಕೋರ್ಟ್‌ನ ಆದೇಶದ ಮೇಲೆ ತಾತ್ಕಾಲಿಕವಾಗಿ ನಿಲ್ಲಿಸಿರುವ ಸಫಾರಿ ಬಗ್ಗೆ ಪ್ರಶ್ನಿಸಿದರೆ, `ರೆಸಾರ್ಟ್ ಸಿಕ್ಕಾಪಟ್ಟೆ ಹೆಚ್ಚಾಗುತ್ತಿದೆ. ಫೋಟೋಗ್ರಫಿ ಎನ್ನುವುದು ಫನ್ ಆಗ್ತಿದೆ. ಆಫ್ರಿಕ ಕಾಡಿನಲ್ಲಿ ಒಂದು ಸಿಂಹ ಸಿಕ್ಕರೆ 10 ಜೀಪ್ ನಿಲ್ಲುತ್ತವೆ. ಇದೇ ರೀತಿ ಇಲ್ಲಿಯೂ ಆಗುತ್ತಿದೆ. ಆದರೆ ರೆಸಾರ್ಟ್‌ಗಳು, ಅದನ್ನು ನಡೆಸುತ್ತಿರುವ ಜನರೂ ಉಳಿಯಬೇಕಲ್ಲಾ. ಸಫಾರಿ ಬೇಡ ಎನ್ನುವುದು ಸುಲಭ. ಆದರೆ ಅವರೂ ಉಳಿಯಬೇಕಲ್ಲ. ಈ ವಿಚಾರದಲ್ಲಿ ಏನಾದರೂ ಆಗಬೇಕು~ ಎನ್ನುವರು.

`ಇಲ್ಲಿ ಇರುವ ಕಾಡು ಬೇರೆ ಕಡೆ ಇಲ್ಲ. ಬೆಂಗಳೂರಿನ ಕೆಲ ಜನ ಕಾಡನ್ನೇ ನೋಡಿಲ್ಲ. ಪಕ್ಕದಲ್ಲಿರುವ ಬನ್ನೇರುಘಟ್ಟವನ್ನೇ ನೋಡಲ್ಲ. ನಮ್ಮ ಕಾಡನ್ನು ಜನ ನೋಡಬೇಕು. ಇಂತಹ ಕಾಡು ಬೇರೆ ಕಡೆಯಿಲ್ಲ. ಇದರ ಲಾಭವನ್ನು ನಾವು ಪಡೆಯಬೇಕು~ ಎಂದರು.

ಇಂದಿಗೂ ಕಾಡು ಸುತ್ತುವ ಡೊನಾಲ್ಡ್ ಅವರಿಗೆ ಪರಿಸರ ಪ್ರೇಮ ಇರುವ ಸ್ನೇಹಿತರ ಗುಂಪೇ ಇದೆ. ಅನಾರೋಗ್ಯದಿಂದ ಬಳಲುತ್ತಿದ್ದ ಇವರನ್ನು ಜಯನಗರ ಆಸ್ಪತ್ರೆಯ ಸಂದರ್ಶನ ಸಮಿತಿಯ ಅಧ್ಯಕ್ಷ ಹರ್ಷ ಗರುಡನಗಿರಿ ಅವರು ಆಸ್ಪತ್ರೆಗೆ ಸೇರಿಸಿದ್ದಾರೆ. ಮಂಗಳವಾರ ಸ್ಥಳೀಯ ಶಾಸಕ ಬಿ.ಎನ್.ವಿಜಯಕುಮಾರ್ ಸಹ ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು. ಡಾ.ಸರೋಜ ಅವರ ಪ್ರಕಾರ ಡೊನಾಲ್ಡ್ ಚೇತರಿಸಿಕೊಳ್ಳುತ್ತಿದ್ದಾರೆ.
 

.............

`ಆಗ ಕಾಡಿನಲ್ಲಿ ಹುಲಿ, ಚಿರತೆ, ಆನೆಯ ಸಂಖ್ಯೆ ಹೆಚ್ಚಾಗಿತ್ತು. ಕಾಡೂ ದಟ್ಟವಾಗಿತ್ತು. ಹುಲಿ ಕೊಲ್ಲಲು ಸರ್ಕಾರವೇ ಲೈಸೆನ್ಸ್ ನೀಡುತ್ತಿತ್ತು. ಆದರೀಗ ಕಾಯ್ದೆ, ಕಾನೂನು ಜಾರಿಗೆ ಬಂದ ಮೇಲೆ ಇಷ್ಟ ಬಂದಂತೆ ಕಾಡಿಗೆ ಹೋಗಲಾಗಲ್ಲ. ಸಫಾರಿಗೆ ಹೋಗಬೇಕಷ್ಟೆ. ಆದರೆ ಎಲ್ಲಾ `ಕಾಸ್ಟ್ಲಿ~ ಆಗಿದೆ. ಸರ್ಕಾರ ನಡೆಸುವ ಸಫಾರಿಯೂದುಬಾರಿ~.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT