ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಹಾ...ಆಗಸಕ್ಕೇ ಬೊಗಸೆ!

Last Updated 1 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ನಾಲ್ಕು ನದಿಗಳು ಭೋರ್ಗೆರೆಯುತ್ತಿದ್ದ ಕಲ್ಪತರು ನಾಡಾಗಿದ್ದ ತುಮಕೂರು ಜಿಲ್ಲೆಯಲ್ಲೆಗ ಬರೀ ಬಿಸಿಲಿನದ್ದೇ ಮಾತು, ವಲಸೆಯದ್ದೇ ಕಥೆಗಳು. `ನಮ್ಮೂರಲ್ಲಿ ಹತ್ತು ಬೋರ್‌ವೆಲ್ ನಿಂತಿವೆ. ಆ ಮೂಲೆ ಮನೆಯವರು ಒಂದು ಸಾವಿರ ಅಡಿ ಕೊರೆಸಿದರೂ ನೀರು ಬರಲಿಲ್ಲ. ಬದುಕುಳಿದಿರುವ ಕೊಳವೆಬಾವಿಗಳ ಮೋಟರ್‌ಪಂಪ್‌ಗಳು ಬುಸು ಬುಸು ಗಾಳಿ ಸದ್ದಿನೊಂದಿಗೆ ಸುಮ್ಮನೇ ಗಿರಕಿ ಹೊಡೆದು ನಿಲ್ಲುತ್ತಿವೆ' ಎಂಬ ಮಾತುಗಳೇ ಕೇಳಿಬರುತ್ತವೆ.

ಈ ಎಲ್ಲ ಮಾತು, ನೋವುಗಳ ಜೊತೆಗೆ ಕುಡಿಯುವ ನೀರಿಗಾಗಿ ಮಹಿಳೆಯರ ಸೆಣಸಾಟ. ಜಿಲ್ಲೆಯ ಹತ್ತು ತಾಲ್ಲೂಕುಗಳಲ್ಲಿ ಪಾವಗಡ, ಶಿರಾ, ಮಧುಗಿರಿ, ಗುಬ್ಬಿ ತಾಲ್ಲೂಕಿನ ಅಂತರ್ಜಲದಲ್ಲಿ ಫ್ಲೋರೈಡ್ ತಾಂಡವವಾಡುತ್ತಿದೆ. ಇಂತಿಪ್ಪ ಜಿಲ್ಲೆಯಲ್ಲಿನ ಶಿರಾ ತಾಲ್ಲೂಕಿಗೆ ಸೇರಿದ ಇನಕನಹಳ್ಳಿಯೆಂಬ ಪುಟ್ಟ ಊರು ಈಗ ಎಲ್ಲರ ಕೇಂದ್ರಬಿಂದು. ಕುಡಿಯುವ ನೀರಿಗಾಗಿ ಇನ್ನಿಲ್ಲದಂತೆ ಹೆಣಗಾಡಿದ ನಂತರ ಆಕಾಶಕ್ಕೆ ಬೊಗಸೆಯೊಡ್ಡಿರುವ ಇಲ್ಲಿಯ ಜನರ ಸಾಹಸ ಕೌತುಕ, ಅಚ್ಚರಿ. ಆಕಾಶದಿಂದ ಉದುರುವ ಹನಿ ಹನಿ ನೀರನ್ನು ಬಿಡದೇ ಮುತ್ತಿನಂತೆ ಪೋಣಿಸಿಕೊಂಡವರಿವರು. ಬಸ್ಸು ಕೂಡ ಹೋಗದ ಈ ಗ್ರಾಮದಲ್ಲಿ ಮಟ ಮಟ ಮಧ್ಯಾಹ್ನದ ಹೊತ್ತು ತಣ್ಣಗಿನ ನೀರು ಸಿಗುತ್ತದೆ.

ಈ ಮಳೆ ನೀರಿನ ಮ್ಯಾಜಿಕ್ ಮಾಡಿರುವ ಈ ಪುಟ್ಟ ಗ್ರಾಮವು ಈಗ `ನೀರು ಕುಡಿಯುವ ಗ್ರಾಮ'! ಬರದ ನಾಡಿನಲ್ಲಿ ಮಟ ಮಟ ಮಧ್ಯಾಹ್ನವೂ ಸಿಹಿ ನೀರು ಸಿಗುತ್ತದೆ ಎಂಬುದಕ್ಕಿಂತ ಅದ್ಭುತ ಬೇರೊಂದಿಲ್ಲ. ಸುಮಾರು 120 ಮನೆಗಳ ಗ್ರಾಮವಿದು. ಇಲ್ಲಿಗೆ ಬಸ್ಸುಗಳು ಇಲ್ಲ. ಬೈಕ್ ಇಟ್ಟವರ ಸಂಖ್ಯೆ ಬೆರಳೆಣಿಕೆ ಮೀರುವುದಿಲ್ಲ. ಸ್ಕೂಲು, ಮಳೆ ನೀರು ಬಿಟ್ಟರೆ ಬೇರೆ ಯಾವೊಂದು ಸೌಲಭ್ಯವೂ ಕಾಣದ ಈ ಊರು `ಜಲ ಸಾಹಸ'ದ ಊರಾಗಿದೆ.

ಮಳೆ ನೀರಿಗೆ ಬೊಗಸೆ
ಈ ಗ್ರಾಮದ ಮನೆಯೊಂದರ ಮುಂದೆ ನಿಂತು `ನಿಮ್ಮೂರ‌್ನಾಗೆ ಮಳೆ ನೀರು ಕುಡಿಯುತ್ತೀರಂತೆ' ಎಂದಾಗ ಮನೆಯಲ್ಲಿದ್ದವರ ಮುಖಗಳೆಲ್ಲ ಅರಳಿ ನಿಂತವು. ಅಕ್ಕ ಪಕ್ಕದ ಮನೆಯವರೆಲ್ಲ ಸೇರಿಕೊಂಡು ಮಳೆ ನೀರಿನ ಕಥನ ಹೇಳ ತೊಡಗಿದರು.

`ಐದು ವರ್ಷಗಳವರೆಗೂ ನಮ್ಮೂರು, ನಿಮ್ಮೂರಂತೆಯೇ ಇತ್ತು. ಕಣ್ಣಿಗೆ ಕಾಣುವಂತೆ ಮದಲೂರು ಕೆರೆ ಇದ್ದರೂ ದಶಕಗಳಿಂದ ಅದರಲ್ಲಿ ಹನಿ ನೀರಿಲ್ಲ. ಕೊಳವೆಬಾವಿಯಲ್ಲಿ ಸಿಗುವ ನೀರು ಫ್ಲೋರೈಡ್ ನೀರು. ನೀರು ಹಿಡಿದಿಟ್ಟ ಗಂಟೆಯೊಳಗೆ ಹಾಲು ಕೆನೆಗಟ್ಟಿದಂತೆ ನೀರು ಕೆನೆಗಟ್ಟುತ್ತದೆ. ಚಿಕ್ಕ ಮಕ್ಕಳನ್ನೂ ಬಿಡದಂತೆ ಕಾಡುತ್ತಿದ್ದ ಮಂಡಿ, ಸೊಂಟ, ಬೆನ್ನುನೋವು. ಪರವೂರು, ನೆಂಟರ ಮನೆಗಳಿಗೆ ಹೋದರೆ ಕರೆಗಟ್ಟಿದ ಹಲ್ಲು ಮುಚ್ಚಿಕೊಂಡು ಮಾತನಾಡಬೇಕಾದ ಮುಜುಗರವನ್ನು ತೆರೆದಿಟ್ಟರು.

`ಒಂದಿನ ಊರಿಗೆ ಬೈಫ್ ಸಂಸ್ಥೆಯವರು (ಸರ್ಕಾರೇತರ ಸಂಸ್ಥೆ) ದೇವರಂತೆ ಬಂದ್ರು ಸಾರ್. ಫ್ಲೋರೈಡ್ ನೀರಿಗೆ ಪರಿಹಾರ ಏನೆಂದು ಚರ್ಚೆ ನಡೆಸಿದ್ರು. ಮಳೆ ನೀರು ಕುಡಿಯಬಹುದಲ್ಲ ಎಂದಾಗ ನಾವು ಒಪ್ಪಲೇ ಇಲ್ಲ. ವರ್ಷಗಟ್ಟಲೆ ಮಳೆ ನೀರು ಕುಡಿದರೆ ಮನುಷ್ಯ ಬದುಕುತ್ತಾನೆಯೇ ಎಂಬ ಪ್ರಶ್ನೆಯೇ ನಮ್ಮನ್ನು ಕಾಡುತ್ತಿತ್ತು. ಫ್ಲೋರೈಡ್ ಬೆರೆತ ನೀರು ಕುಡಿದು ದಿನದಿನ ಇಂಚಿಂಚು ಸಾಯುವ ಬದಲಿಗೆ ಮಳೆ ನೀರು ಕುಡಿದು ನೋಡೋಣ್ವ ಎಂಬ ಆಸೆಯೂ ಒಂದೆಡೆ ಚಿಗುರಿತು. ಅಲ್ಲಿಂದ ಮುಂದೆ ನಡೆದದ್ದು ನಮ್ಮೂರಿನ ಮಳೆ ನೀರಿನ ಮಹಾನ್ ಯಾನ' ಎಂದರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ಜಯಮ್ಮ.

`ಮೊದಲಿಗೆ ಉತ್ತರ ಕರ್ನಾಟಕದ ಮುಂಡರಗಿಗೆ ಹೋದೆವು. ಅಲ್ಲಿನ ಜನರು ಮಳೆ ನೀರನ್ನೇ ಕುಡಿಯುತ್ತಿದ್ದರು. ಸ್ವಲ್ಪ ಧೈರ್ಯ ಬಂತು. ಅಲ್ಲಿಂದ ಪಾವಗಡಕ್ಕೆ ತೆರಳಿದೆವು. ಇಲ್ಲೂ ಒಂದೆರಡು ಗ್ರಾಮಗಳಲ್ಲಿ ಮಳೆ ನೀರಿನ ವ್ಯವಸ್ಥೆ ಇತ್ತು. ಯಾಕೋ ಮುಂಡರಗಿ ಇಷ್ಟವಾಯ್ತು! ಏನೇ ಕಷ್ಟ ಪಟ್ಟರೂ ಸರಿಯೇ ಮಳೆ ನೀರಿಗೆ ಸೈ ಅನ್ನೋಣ ಎಂದು ಊರಿಗೆ ಊರೆ ನಿಂತೆವು' ಎಂದರು ಗ್ರಾಮದ ರಾಮಸ್ವಾಮಿ, ಲೀಲಾವತಿ.

ಗ್ರಾಮದಲ್ಲಿದ್ದ ಕೊಳವೆ ಬಾವಿಗಳಲ್ಲಿ ಉಪ್ಪುಪ್ಪು ನೀರು ಬರುತ್ತಿತ್ತು. ಕುಡಿಯಲು ಊರ ಹೊರಗಿನಿಂದ ನೀರು ತರುತ್ತಿದ್ದೆವು. ಆದರೆ ಅಲ್ಲಿ ಕೂಲಿಗೆ ಹೋಗುವವರಿಗೆ ಮಾತ್ರ ನೀರು ಕೊಡುತ್ತಿದ್ದರು. ಅಲ್ಲದೆ ಮೈಲಿ ದೂರದಿಂದ ಪ್ರತಿನಿತ್ಯ ನೀರು ಹೊತ್ತು ತರುವುದು ಸುಲಭದ ಕೆಲಸ ಸಹ ಆಗಿರಲಿಲ್ಲ. ಆದರೆ ಈಗ ಅಡುಗೆ ಮನೆಯೊಳಗೆ ಗಂಗಮ್ಮ ಬತ್ತಾ ಅವಳೆ... ಎಂದರು ಸಿದ್ದನಹಳ್ಳಿ ಗ್ರಾಮಸ್ಥರು.

ಸಿದ್ದನಹಳ್ಳಿಯ ಈಶ್ವರ್ ಅವರು ಪಕ್ಕದ ಮನೆಯ ರಾಮಸ್ವಾಮಿ ಅವರ ಹೆಂಚಿನ ಮನೆಯಿಂದ ನೀರು ಸಂಗ್ರಹಿಸುತ್ತಾರೆ. ಒಂದೆ ಮನೆಯಿಂದ ಎರಡೂ ಕುಟುಂಬಗಳಿಗೂ ಸಾಕಾಗುವಷ್ಟು ನೀರು ದೊರೆಯುತ್ತಿದೆ. ಅಡುಗೆ, ಊಟಕ್ಕೆ ಸಂಗ್ರಹಿಸಿದ ನೀರು ಬಳಕೆ ಮಾಡಲಾಗುತ್ತಿದೆ. ಉಳಿದಂತೆ ಕೊಳವೆಬಾವಿ ನೀರನ್ನು ಬಳಸಲಾಗುತ್ತಿದೆ.

ಮಳೆ ನೀರು ಹೇಗೆ?
ಮನೆಯ ಛಾವಣಿ ನೀರನ್ನು ಸಂಗ್ರಹಿಸುವುದೇ ಮಳೆ ನೀರಿನ ಸಂಗ್ರಹ. ಛಾವಣಿಯಿಂದ ನೆಲ ಸೇರುವ ನೀರಿಗೆ ಬೋಗಣಿಯಾಕಾರದ ಪ್ಲಾಸ್ಟಿಕ್ ಪೈಪ್ ಹಾಕಬೇಕು. ಪೈಪ್ ಕೊನೆಯಲ್ಲಿ ಮೂರುವರೆ ಇಂಚಿನ ಮತ್ತೊಂದು ಕೊಳವೆ ಜೋಡಿಸಿ ಮಳೆ ನೀರು ಶುದ್ಧೀಕರಣ ತೊಟ್ಟಿಗೆ ಬಿಡಬೇಕು. ಇಲ್ಲಿ ಶುದ್ಧೀಕರಣಗೊಂಡ ಮಳೆ ನೀರು ಸೀದಾ ಸಂಗ್ರಹ ತೊಟ್ಟಿಗೆ ಬೀಳುವಂತೆ ಮಾಡಬೇಕು.

ನೀರು ಸಂಗ್ರಹಿಸಲು ಸುಮಾರು 4 ಅಡಿ ಎತ್ತರ ಮತ್ತು 2 ಅಡಿ ಅಗಲದ ಶುದ್ಧೀಕರಣ ತೊಟ್ಟಿ ನಿರ್ಮಿಸಬೇಕು. ತೊಟ್ಟಿಯನ್ನು ನೆಲಮಟ್ಟದಿಂದ ಮೇಲೆ ಅಥವಾ ಕೆಳಗೆ ಎರಡೂ ರೀತಿಯಲ್ಲಿಯೂ ನಿರ್ಮಿಸಬಹುದು. ತೊಟ್ಟಿಯ ತಳಭಾಗದಲ್ಲಿ 1ಅಡಿ ಜಲ್ಲಿಕಲ್ಲು, ನಂತರ 3ಎಂಎಂ ಗಾತ್ರದ ಮೆಸ್, ಅದರೆ ಮೇಲೆ 1 ಅಡಿ ಇದ್ದಿಲು, ನಂತರ 1 ಅಡಿ ಮರಳು ತುಂಬಿಸಲಾಗುತ್ತದೆ. ನಂತರ ತೊಟ್ಟಿಯನ್ನು ಮುಚ್ಚಲಾಗುತ್ತದೆ. ಆಗಾಗ ತೊಟ್ಟಿಯನ್ನು ಸ್ವಚ್ಛಗೊಳಿಸಬೇಕು.

ವಾರ್ಷಿಕ ಸಾಮಾನ್ಯ ಕುಟುಂಬಕ್ಕೆ ಕುಡಿಯಲು ಮತ್ತು ಅಡುಗೆ ಮಾಡಲು ಸುಮಾರು 5 ಸಾವಿರ ಲೀಟರ್ ನೀರಿನ ಅವಶ್ಯಕತೆ ಇದೆ. ಹೆಂಚು, ತಗಡು, ಸಿಮೆಂಟ್, ಮಣ್ಣು ಅಥವಾ ಗುಡಿಸಲಿನ ಮಾಳಿಗೆಯಿಂದ ಸಹ ಮಳೆ ನೀರು ಸಂಗ್ರಹಿಸಬಹುದು. ಮಳೆಗಾಲದಲ್ಲಿ ಮನೆಯ ಮಾಳಿಗೆಯಿಂದ ಬರುವ ನೀರನ್ನು ಶುದ್ಧೀಕರಣ ತೊಟ್ಟಿಯಲ್ಲಿ ಸಂಗ್ರಹಿಸಲಾಗುತ್ತದೆ. ಕೆಲವು ಕುಟುಂಬಗಳು 15ರಿಂದ 20 ಸಾವಿರ ಲೀಟರ್ ಸಂಗ್ರಹ ತೊಟ್ಟಿಗಳನ್ನು ಸಹ ನಿರ್ಮಿಸಿಕೊಂಡಿದ್ದಾರೆ.

ಮಳೆ ನೀರು ಸಂಗ್ರಹದ ತೊಟ್ಟಿ ಕಟ್ಟಿಕೊಳ್ಳಲು ಒಬ್ಬೊಬ್ಬರು ರೂ. 20ರಿಂದ 25 ಸಾವಿರ ರೂಪಾಯಿವರೆಗೂ ವೆಚ್ಚ ಮಾಡಿದ್ದೇವೆ. ಗ್ರಾಮದ ಬಹುತೇಕರು ಕೂಲಿ ಕಾರ್ಮಿಕರು, ಸಣ್ಣಪುಟ್ಟ ಕೃಷಿಕರು. ಬೀಡಿ ಕಟ್ಟುವವರು. ಆದರೂ ಧೈರ್ಯಗುಂದದ ನಾವು ಸಾಲ ಮಾಡಿದೆವು. ಪ್ರತಿ ದಿನ ಬಿಡದೇ ಕೂಲಿ ಮಾಡಿದೆವು. ತಿಂಗಳುಗಟ್ಟಲೇ ಹಣ ಕೂಡಿಟ್ಟೆವು. ಈಗ ನಮ್ಮೂರಲ್ಲಿ ಮಳೆ ನೀರು ಎಂದಾಗ ಖುಷಿಯಾಗುತ್ತದೆ ಎನ್ನುತ್ತಾರೆ ಇಲ್ಲಿನ ಜನರು.

`ರಾಜ್ಯದ ಸಚಿವರು ಮಾತ್ರವಲ್ಲ, ಹೊರದೇಶದ ಜನರು ನಮ್ಮೂರ‌್ಗೆ ಬಂದು ನೀರು ಕೇಳಿ ಕುಡಿದಾಗ ಖುಷಿ ಆಗುತ್ತೆ. ಎಷ್ಟೋ ಜನ ಊರಿಗೆ ಬಂದು ನೀರು ಕೇಳಿ ಬಾಟಲಿಗಳಲ್ಲಿ ತುಂಬಿಕೊಂಡು ಹೋಗ್ತಾರೆ. ಯಾವ ಬಿಸ್ಲೆರಿ ನೀರೂ ನಮ್ಮೂರಿನ ನೀರಿಗೆ ಕಡಿಮೆ ಇಲ್ಲ' ಎಂಬ ಹೆಮ್ಮೆ ಲೀಲಮ್ಮನದು. ಪ್ರತಿ ಮನೆಯಲ್ಲೂ ಕನಿಷ್ಠ 5 ಸಾವಿರ ಲೀಟರ್‌ನಿಂದ 10 ಸಾವಿರ ಲೀಟರ್ ಮಳೆ ನೀರು ಸಂಗ್ರಹದ ತೊಟ್ಟಿಗಳಿವೆ. ಮಳೆ ನೀರನ್ನು ಕುಡಿಯಲು ಮತ್ತು ಅಡುಗೆ ಮಾಡಲು ಮಾತ್ರ ಬಳಸುತ್ತಾರೆ. ದಿನ ಬಳಕೆಗೆ ಮಾತ್ರ ಅದೇ ಫ್ಲೋರೈಡ್ ನೀರು !

ಮಳೆ ನೀರಿನ ತೊಟ್ಟಿಗೆ ಗಾಳಿ, ಬೆಳಕು ಹಾಯದಂತೆ ನೋಡಿಕೊಳ್ಳುವುದರ ಮೇಲೆ ಮಳೆ ನೀರು ಯಶೋಗಾಥೆ ನಿಂತಿದೆ. ಸಣ್ಣ ಕಿಂಡಿಯಿಂದ ಬೆಳಕು, ಗಾಳಿ ಹಾಯ್ದರೂ ನೀರಿಗೆ ಹುಳು ಬೀಳುತ್ತವೆ. ಹೀಗಾಗಿ ಭೂಮಿ ಒಳಗೆ ತೊಟ್ಟಿ ಮಾಡಿಕೊಂಡಿದ್ದಾರೆ. ಯಾರ ಮನೆಯಲ್ಲೂ ಯೋಜನೆ  ವಿಫಲಗೊಂಡಿಲ್ಲ. ವರ್ಷ ಪೂರಾ ನೀರು ಕುಡಿದರೂ ಯಾವುದೇ ಸಮಸ್ಯೆ ಕಂಡು ಬಂದಿಲ್ಲ. ವರ್ಷಕ್ಕೊಮ್ಮೆ ತೊಟ್ಟಿ ಸ್ವಚ್ಛಗೊಳಿಸುತ್ತಾರೆ. ಮಳೆಗಾಲ ಬಂದಾಗ ಕೆಲ ನಿಮಿಷ ಛಾವಣಿಯಿಂದ ಮಳೆ ನೀರು ಆಚೆ  ಬಿಟ್ಟು, ನಂತರ ತೊಟ್ಟಿ ಒಳಗೆ ಬಿಡಲಾಗುತ್ತದೆ. ತೊಟ್ಟಿ ತುಂಬಿದ ನಂತರ ಹೆಚ್ಚುವರಿ ನೀರು ಬೇರೆ ಪೈಪ್ ಮೂಲಕ ಹೊರಹೋಗುತ್ತದೆ. ಪ್ರತಿ ಮನೆಯಲ್ಲಿರುವ ಮಳೆ ನೀರಿನ ತೊಟ್ಟಿಗೆ  ಕೈ ಪಂಪ್ ಹಾಕಲಾಗಿದೆ. ಕೈ ಪಂಪ್ ಹೊತ್ತಿದಾಗ ಸಿಹಿ ನೀರು ಝಳ, ಝಳ.

ನೋವಿನಿಂದ ಮುಕ್ತಿ
ಮೊದಲೆಲ್ಲ ಊರೊಳಗೆ ಸೊಂಟ, ಬೆನ್ನು, ಮಂಡಿ ನೋವಿನಿಂದ (ವಾಯು) ಬಳಲುವವರು ಹೆಚ್ಚಿದ್ದರು. ಮಳೆ ನೀರು ಕುಡಿಯುಲು ಆರಂಭಗೊಂಡ ನಂತರದಲ್ಲಿ `ವಾಯು' ಸಮಸ್ಯೆಯಿಂದ ಯಾರೂ ನರಳುತ್ತಿಲ್ಲ. ಕೆಮ್ಮು, ನೆಗಡಿ ಊರೊಳಗೆ ಕಾಲಿಟ್ಟಿಲ್ಲ. ಇದೆಲ್ಲವೂ ಮಳೆ ನೀರಿನ ಮಹಿಮೆ ಎನ್ನುತ್ತಾರೆ ಜನ. ಊರಿಂದ ಬೇರೆ ಊರಿಗೆ, ಕೆಲಸಕ್ಕೆ ತೆರಳಿದಾಗ ನೀರಿನದೇ ಚಿಂತೆಯಾಗುತ್ತಿತ್ತು. ವಿದ್ಯುತ್ ಇದ್ದಾಗ ಮಾತ್ರ ನೀರು. ಮನೆಯಲ್ಲಿ ಅಡುಗೆ ಮಾಡಲು ನೀರು ಇಲ್ಲದೇ ಏನು ಮಾಡೋದು ಎಂಬುದೇ ದೊಡ್ಡ ಚಿಂತೆ. ಈಗ ಕರೆಂಟ್ ಬೇಡ. ಎಲ್ಲಿಗೆ ಹೋದ್ರು ನೀರಿನ ಚಿಂತೆ ಇಲ್ಲದೇ ನಗುತ್ತಾ ಮನೆ ಸೇರುತ್ತೇವೆ ಎನ್ನುತ್ತಾರೆ ಇಲ್ಲಿನ ಗೃಹಿಣಿಯರು.

ರಾಜ್ಯ ಸರ್ಕಾರ 2009ರಲ್ಲಿ ಜಾರಿಗೆ ತಂದ ಸಚೇತನ ಯೋಜನೆಯ ಸಹಾಯಧನದಡಿ `ಬೈಫ್' ಸಂಸ್ಥೆ ಮೂಲಕ ಯೋಜನೆ ಜಾರಿಗೊಳಿಸಲಾಗಿದೆ. ಒಬ್ಬೊಬ್ಬ ಫಲಾನುಭವಿಗೆ 15ರಿಂದ 20 ಸಾವಿರದವರೆಗೂ ಸಹಾಯಧನ ಸಿಕ್ಕಿದೆ. ಉಳಿದ ಹಣ ಆಯಾಯ ಕುಟುಂಬ ಭರಿಸಿದೆ ಎನ್ನುತ್ತಾರೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋವಿಂದರಾಜು.

ಈಗ ಗ್ರಾಮಸ್ಥರು ಮಳೆ ನೀರು ಸಂಗ್ರಹ ಮಾಡುವುದಕ್ಕಾಗಿ ಛಾವಣಿಯನ್ನು ಶುಚಿಯಾಗಿ ಇಟ್ಟುಕೊಳ್ಳುತ್ತಿದ್ದಾರೆ. ಅಲ್ಲದೆ ಗ್ರಾಮಗಳಲ್ಲಿ ಸ್ವಚ್ಛತೆ ಬಗ್ಗೆಯೂ ಅರಿವು ಮೂಡುತ್ತಿದೆ. ಈ ಯೋಜನೆಯಡಿ ತುಮಕೂರು ಜಿಲ್ಲೆಯ 30 ಗ್ರಾಮಗಳ 2800 ಮನೆಗಳಿಗೆ ಶುದ್ಧ ನೀರು ಒದಗಿಸುವ ಯೋಜನೆಯನ್ನು ಯಶಸ್ವಿಯಾಗಿ ಜಾರಿ ಮಾಡಲಾಗಿದೆ ಎನ್ನುತ್ತಾರೆ ಬೈಫ್ ಸಂಸ್ಥೆಯ ಎಂ.ಎನ್.ಕುಲಕರ್ಣಿ. ಬೈಫ್ ಸಂಸ್ಥೆ ಸಂಪರ್ಕಕ್ಕೆ:08134- 250658, 250659.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT