ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಹಾಪುರುಷಾಹಂಕಾರಂ...

Last Updated 21 ಜನವರಿ 2011, 19:35 IST
ಅಕ್ಷರ ಗಾತ್ರ

ನೀ ವು ಹೆಂಡ್ತಿಗೆ ಹೊಡೆಯೋದು ಬಿಟ್ಟಿದ್ದೀರಾ..? ಗಂಡು ಜೀವಿಗಳನ್ನು ಇಕ್ಕಟ್ಟಿಗೆ ಸಿಕ್ಕಿಸುವ ಈ ಪ್ರಶ್ನೆ ಆಗಾಗ್ಗೆ ಹಾಸ್ಯ ಲೇಖನಗಳಲ್ಲಿ ಕಾಣಿಸಿಕೊಳ್ಳುತ್ತದೆ. ಓದುಗರಲ್ಲಿ ಅಯಾಚಿತವಾಗಿ ನಗು ಮೂಡಿಸುತ್ತದೆ. ಮೇಲ್ನೋಟಕ್ಕೆ ಸರಳ ಎಂಬಂತೆ ಕಾಣಿಸಿಕೊಳ್ಳುವ ಈ ಪ್ರಶ್ನೆ ಮಹಿಳೆಯ ಕುರಿತು ಭಾರತೀಯ ಸಮಾಜ ಹೊಂದಿರುವ ಮನೋಭಾವ, ಪೂರ್ವಗ್ರಹ ಧ್ವನಿಸುವಂತಿದೆ.

ಭಾರತದ ಯಾವುದೇ ಪ್ರದೇಶದ, ಯಾವುದೇ ವರ್ಗದ ಜನರಿಗೆ ಈ ಪ್ರಶ್ನೆ ಹಾಕಿ ನೋಡಿ. ಹೆಂಡತಿಗೆ ಹೊಡೆಯುವುದರಲ್ಲಿ ವಿಶೇಷ ಏನಿದೆ?  ಹೆಂಡ್ತಿ ಮೇಲೆ ಗಂಡನಿಗೆ ತಾನೇ ಅಧಿಕಾರ. ಕೋಪದಲ್ಲಿ ಎರಡೇಟು ಬಿಗಿದರೆ ತಪ್ಪೇನಿದೆ. ಅದನ್ನು ದೊಡ್ಡದು ಮಾಡಬೇಕೇ ಎಂಬ ಉತ್ತರವೇ ದೊರಕೀತು.

ಮಾತೃಪ್ರಧಾನ ವ್ಯವಸ್ಥೆ ಅನುಸರಿಸುವ ಕೆಲವೇ ಸಮುದಾಯಗಳು ಹಾಗೂ ಕೆಲ ಸುಶಿಕ್ಷಿತ ಕುಟುಂಬಗಳನ್ನು ಹೊರತುಪಡಿಸಿ ಭಾರತದಲ್ಲಿ ಶೇ 95ರಷ್ಟು ಪುರುಷ ಪ್ರಧಾನ ಕುಟುಂಬಗಳೇ ಇವೆ. ಒಂದು ಅಂದಾಜಿನ ಪ್ರಕಾರ ಇವುಗಳಲ್ಲಿ ಅರ್ಧದಷ್ಟಾದರೂ ಕುಟುಂಬಗಳಲ್ಲಿ ಕೌಟುಂಬಿಕ ಹಿಂಸೆ ನಡೆಯುತ್ತದೆ. ನಾಲ್ಕು ಗೋಡೆಗಳ ನಡುವೆ, ಮುಚ್ಚಿದ ಬಾಗಿಲ ಹಿಂದೆ ಸದ್ದಿಲ್ಲದೇ ನಡೆಯುವ ಈ ಕ್ರೌರ್ಯ ಬಯಲಿಗೆ ಬರುವುದೇ ಇಲ್ಲ.

ಅಪರೂಪಕ್ಕೊಮ್ಮೆ ಹೆಣ್ಣು ಗಂಡನ ದಬ್ಬಾಳಿಕೆ ವಿರುದ್ಧ ಧ್ವನಿ ಎತ್ತಿದರೂ ತವರು ಮನೆಯವರು ಸೇರಿದಂತೆ ಸಂಬಂಧಿಗಳೆಲ್ಲ ಆಕೆಯ ಬಾಯಿ ಮುಚ್ಚಿಸುತ್ತಾರೆ. ಗಂಡನ ಜತೆ ಹೊಂದಿಕೊಂಡು ಹೋಗು. ಅದರಲ್ಲೇ ನಿನ್ನ ಸುಖ ಅಡಗಿದೆ ಎಂಬ ಉಪದೇಶಾಮೃತವನ್ನು ಆಕೆ ಕೇಳಬೇಕಾಗುತ್ತದೆ.

ಈ ಹಿಂಸೆ ಕೇವಲ ಕೆಳವರ್ಗಕ್ಕೆ ಸೀಮಿತವಾಗಿಲ್ಲ. ಅಲ್ಲಿ ಹಿಂಸೆ, ಹೊಡೆದಾಟ ಎಲ್ಲ ಕಣ್ಣ ಮುಂದೆ ನಡೆದೀತು ಅಷ್ಟೆ. ಹೊರ ಜಗತ್ತಿನಲ್ಲಿ ಅತ್ಯುತ್ತಮ, ವಿನಯವಂತ ನಡವಳಿಕೆ ಹೊಂದಿದ ಕೆಲ ಉದ್ಯಮಿಗಳು, ಚಿತ್ರನಟರು, ಐಎಎಸ್, ಐಪಿಎಸ್ ಅಧಿಕಾರಿಗಳೂ ಮನೆಯಲ್ಲಿ ಪತ್ನಿಪೀಡಕರಾಗಿರುತ್ತಾರೆ.

ಹಕ್ಕು ಸಾಧನೆ
ಭಾರತದಲ್ಲಿ ಕೌಟುಂಬಿಕ ಹಿಂಸೆಯ ವಿರುದ್ಧ ಪರಿಣಾಮಕಾರಿ ಕಾನೂನು ಇದೆ ನಿಜ. ಆದರೆ, ಇಲ್ಲಿ ಶಿಕ್ಷೆಯಾಗುವ ಪ್ರಮಾಣ ಕಡಿಮೆ. ಅಲ್ಲದೇ ಅಪರಾಧ ನಡೆದದ್ದು ಬ್ರಿಟನ್‌ನಲ್ಲಿ. ಅಲ್ಲಿಯೇ ಆತನ ವಿಚಾರಣೆ ನಡೆಯಬೇಕಿತ್ತು ಎನ್ನುತ್ತಾರೆ ಇಂಗ್ಲಿಷ್‌ನಲ್ಲಿ ಬರೆಯುವ ಲೇಖಕಿ ಶಶಿ ದೇಶಪಾಂಡೆ.  ಸಂಗಾತಿಯನ್ನು ಥಳಿಸುವ, ಆಕೆಯ ಮೇಲೆ ಹಕ್ಕು ಸಾಧಿಸುವ ಈ ಮನೋಭಾವ ಭಾರತಕ್ಕೆ ಸೀಮಿತವಲ್ಲ. ಬಹುತೇಕ ಎಲ್ಲ ಸಮಾಜಗಳಲ್ಲೂ ಅದು ಇದೆ. ಅಲ್ಲದೇ ಎಲ್ಲ ವರ್ಗಗಳಲ್ಲೂ ಈ ಹಿಂಸೆ ಇದ್ದೇ ಇರುತ್ತದೆ. ಆದರೆ, ಬ್ರಿಟನ್, ಅಮೆರಿಕ ಇತ್ಯಾದಿ ದೇಶಗಳಲ್ಲಿ ಬೆಂಬಲ ವ್ಯವಸ್ಥೆ ಪ್ರಬಲವಾಗಿದೆ. ಗಂಡನ ಹಿಂಸೆ ತಾಳಲಾರದೇ ಹೆಣ್ಣು ಮನೆಬಿಟ್ಟು ಬಂದಲ್ಲಿ ಆಕೆಗೆ ಸರ್ಕಾರವೇ ಆಸರೆ ಒದಗಿಸುತ್ತದೆ. ಕಾನೂನು ಕ್ರಮ ಜರುಗಿಸಲಾಗುತ್ತದೆ ಎನ್ನುತ್ತಾರೆ ಅವರು.

ಅಸಹಜ ಸಾಧನೆಯ ಬಯಕೆ
 
ಮನೋವಿಜ್ಞಾನಿ ಹಾಗೂ ಬೆಂಗಳೂರು ವಿವಿ ನಿವೃತ್ತ ಕುಲಪತಿ ಡಾ. ಎಂ. ಎಸ್. ತಿಮ್ಮಪ್ಪ ಈ ಘಟನೆಯನ್ನು ವಿಶ್ಲೇಷಿಸುವುದು ಹೀಗೆ.
ಕೌಟುಂಬಿಕ ಕ್ರೌರ್ಯ ಸತತವಾಗಿ ನಡೆಯುತ್ತಿದ್ದಲ್ಲಿ ಅದು ವ್ಯಕ್ತಿಯ ಅಸಹಜ ಸಾಧನೆಯ ಬಯಕೆಯನ್ನು ತೋರಿಸುತ್ತದೆ. ತನ್ನ ಮನಸ್ಸಿನಲ್ಲಿ ಏನೋ ನಿರ್ದಿಷ್ಟ ಸಾಧನೆಯ ಹಂಬಲ, ಬಯಕೆ ಇದ್ದಾಗ ಅದನ್ನು ಸಾಧಿಸಲು ಸಾಧ್ಯವಾಗದೇ ಇದ್ದಾಗ ಆತ ಪತ್ನಿಗೆ ಹಿಂಸೆ ನೀಡುತ್ತಾನೆ. ಕೆಲವೊಮ್ಮೆ ಕಚೇರಿಯಲ್ಲಿ ಮೇಲಧಿಕಾರಿಯಿಂದ ಕಿರುಕುಳ ಅನುಭವಿಸುತ್ತಿದ್ದಲ್ಲಿ ಆ ದ್ವೇಷವನ್ನು ಪತ್ನಿಯ ಮೇಲೆ ತೀರಿಸಿಕೊಳ್ಳುತ್ತಾನೆ. ಆಕೆ, ಮಗುವಿಗೆ ಹೊಡೆಯುತ್ತಾಳೆ. ಮಗು ಮನೆಯಲ್ಲಿ ಸಾಕಿದ ಬೆಕ್ಕು ಅಥವಾ ನಾಯಿಯ ಮೇಲೆ ಅದನ್ನು ತೀರಿಸಿಕೊಳ್ಳುತ್ತದೆ. ಇಲ್ಲಿ ಕೋಪ ಸ್ಥಾನಪಲ್ಲಟವಾಗುತ್ತ ಸರಪಳಿ ಕ್ರಿಯೆಯಾಗಿ ಮುಂದುವರಿಯುತ್ತದೆ.

ಹೆಂಡತಿಗೆ ಗಂಡ ಹೊಡೆಯುವುದು ಅಥವಾ ಗಂಡನನ್ನು ಶ್ರೇಷ್ಠ ಎಂದು ಪತ್ನಿ ಭಾವಿಸುವುದು ನಮ್ಮ ಸಂಸ್ಕೃತಿಯಲ್ಲಿ ಒಪ್ಪಿತ ಮೌಲ್ಯವಾಗಿರುವುದರಿಂದ ಇಂತಹ ಘಟನೆಗಳನ್ನು ಅಸಹಜ ಎಂದು ಪರಿಗಣಿಸುವುದಿಲ್ಲ. ಅನಿಲ್ ವರ್ಮಾ ಘಟನೆಯಲ್ಲಿ ಮನೆಯಲ್ಲಿ ಕ್ರೈಸ್ತ ಸಂಪ್ರದಾಯದ ಕ್ರಿಸ್ಮಸ್ ಟ್ರೀ ನೋಡಿ ಆತ ಕೆರಳಿರಬಹುದು. ಮಗನ ಮೇಲಿನ ಕೋಪವನ್ನು ಪತ್ನಿಯ ಮೇಲೆ ತೀರಿಸಿಕೊಂಡಿರಬಹುದು ಎಂಬುದು ತಿಮ್ಮಪ್ಪ ಅವರ ಅಭಿಮತ.

ಪತಿಯೆಂಬ ರಿಂಗ್ ಮಾಸ್ಟರ್..
ಸಾಮಾನ್ಯವಾಗಿ ಕೌಟುಂಬಿಕ ಹಿಂಸೆ ನಡೆಯುವ ಕುಟುಂಬಗಳಲ್ಲಿ ಪತಿ ಸರ್ಕಸ್‌ನ ರಿಂಗ್ ಮಾಸ್ಟರ್‌ನ ಮನೋಭಾವ ಹೊಂದಿರುತ್ತಾನೆ. ಆತ ಹೇಳಿದಂತೆ ಎಲ್ಲವೂ ನಡೆಯಬೇಕು. ಅಲ್ಪಸ್ವಲ್ಪ ವ್ಯತ್ಯಾಸವಾದರೂ ಹೊಡೆತ ಅಥವಾ ಭಾವನಾತ್ಮಕವಾಗಿ ಕಿರುಕುಳ ನೀಡುವುದು. ಮದುವೆಯ ಆರಂಭಿಕ ವರ್ಷಗಳಲ್ಲಿ ಅದನ್ನು ಪ್ರತಿಭಟಿಸುವ ಹೆಣ್ಣು ಆಮೇಲೆ ಅದೇ ತನ್ನ ಹಣೆಬರಹ ಎಂದು ಒಪ್ಪಿಕೊಳ್ಳುತ್ತಾಳೆ.
ಅನವಶ್ಯಕ ಹೊಡೆತ ತಿನ್ನುವುದೇಕೆ ಎಂದು ಆತ ಹೇಳಿದ್ದನ್ನು ಚಾಚೂ ತಪ್ಪದೇ ಅನುಸರಿಸುತ್ತಾಳೆ. ಮಕ್ಕಳನ್ನು ಸಹ ಪತಿಯ ಅಣತಿಯಂತೆ, ನಿರೀಕ್ಷೆಯಂತೆ ಬೆಳೆಸುತ್ತಾಳೆ. 

ಶ್...ಸುಮ್ಮನಿರು, ಅಪ್ಪ ಬರ್ತಿದಾರೆ. ಟಿವಿ ಆಫ್ ಮಾಡು. ನಿಮ್ಮಪ್ಪಂಗೆ ಅದು ಇಷ್ಟವಿಲ್ಲ. ನನ್ನ ಕೇಳ್ಬೇಡ....ಇಂತಹ ಸಂಭಾಷಣೆಗಳೇ ಅಲ್ಲಿ ನಡೆಯುತ್ತವೆ.

ಕೌಟುಂಬಿಕ ಹಿಂಸೆ ನಿಧಾನ ವಿಷ...
ಯಾವುದೋ ಆತಂಕ, ಆತ್ಮವಿಶ್ವಾಸ ಕಳೆದುಕೊಂಡ ನಿಲುವು, ಯಾವ ಕ್ಷಣದಲ್ಲಿ ಏನು ಘಟಿಸುವುದೋ ಎಂಬ ಭೀತಿ, ಉದ್ವಿಗ್ನತೆ, ಏನನ್ನೋ ಕಳೆದುಕೊಂಡ ಭಾವ... ವರುಷಗಳ ಕಾಲ ಕೌಟುಂಬಿಕ ಹಿಂಸೆಗೆ ತುತ್ತಾದ ಮಹಿಳೆಯ ಮನಸ್ಥಿತಿ ಇದು.

 ಕೌಟುಂಬಿಕ ಹಿಂಸೆ ಎಂಬುದು ನಿಧಾನ ವಿಷದಂತೆ. ಹಿಂಸೆಗೆ ತುತ್ತಾಗುವ ಮಹಿಳೆಯ ಮೇಲಾಗಲಿ, ಕುಟುಂಬದ ಮೇಲಾಗಲಿ ತಕ್ಷಣ ಪರಿಣಾಮ ಗೋಚರಿಸುವುದಿಲ್ಲ.
 

ವರ್ಷಗಳೆದಂತೆ ಅದು ತೀವ್ರವಾಗುತ್ತದೆ. ಮಹಿಳೆ ಆತ್ಮವಿಶ್ವಾಸ ಕಳೆದುಕೊಳ್ಳುತ್ತಾಳೆ. ಖಿನ್ನತೆಗೆ ಜಾರುತ್ತಾಳೆ. ಸತತ ಹಿಂಸೆ, ಜಗಳವನ್ನು ನೋಡಿ ಬೆಳೆದ ಮಕ್ಕಳ ವ್ಯಕ್ತಿತ್ವದ ಮೇಲೂ ಅದು ಪ್ರಭಾವ ಬೀರುತ್ತದೆ. ಗಂಡು ಮಗು ಅಪ್ಪನ ದಬ್ಬಾಳಿಕೆಯ ವ್ಯಕ್ತಿತ್ವವನ್ನು ಮಾದರಿಯಾಗಿ ಸ್ವೀಕರಿಸಬಹುದು. ಹೆಣ್ಣು ಮಗು ಅಮ್ಮನ ಅಸಹಾಯಕತೆ, ತಲೆ ತಗ್ಗಿಸಿ ಒಪ್ಪಿಕೊಳ್ಳುವ ಮನೋಭಾವವನ್ನೇ ಆದರ್ಶ ಎಂದು ಪರಿಗಣಿಸಬಹುದು.

ಕೌಟುಂಬಿಕ ಹಿಂಸೆಯ ಘಟನೆಯೊಂದು ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಮಾಡಿರುವುದೇ ಇಲ್ಲಿ ಚರ್ಚಿಸಲು ಕಾರಣ.
ಬ್ರಿಟನ್‌ನ ಭಾರತೀಯ ಹೈಕಮಿಷನರ್ ಕಚೇರಿಯಲ್ಲಿ ಮೂರನೇ ಮುಖ್ಯ ಅಧಿಕಾರಿಯಾಗಿದ್ದ ಅನಿಲ್ ವರ್ಮಾ (45) ಕ್ಷುಲ್ಲಕ ಕಾರಣವೊಂದಕ್ಕೆ ತಮ್ಮ ಪತ್ನಿಯನ್ನು ಥಳಿಸಿದ ಆರೋಪ ಎದುರಿಸುತ್ತಿದ್ದಾರೆ. ಕೌಟುಂಬಿಕ ಹಿಂಸೆಗೂ ಕಲಿತ ಶಿಕ್ಷಣಕ್ಕೂ ಮತ್ತು ಆರ್ಥಿಕ ಮಟ್ಟಕ್ಕೂ ಸಂಬಂಧವೇ ಇಲ್ಲ ಎಂಬುದನ್ನು ಮತ್ತೆ ಸಾಬೀತು ಮಾಡಿದ್ದಾರೆ.
 

ಮಾಧ್ಯಮಗಳ ವರದಿ ಪ್ರಕಾರ ಡಿಸೆಂಬರ್ 11ರಂದು ಈ ಘಟನೆ ನಡೆದಿದೆ. ಅನಿಲ್ ವರ್ಮಾ ಪತ್ನಿ ಪರೋಮಿತಾ ಸಂಬಂಧಿಗಳು ಅವರ ಮಗನಿಗೆ ಕ್ರಿಸ್‌ಮಸ್ ಟ್ರೀ ಉಡುಗೊರೆಯಾಗಿ ನೀಡಿದ್ದರು. ಆ ದಿನ ಬೆಳಿಗ್ಗೆ ಎದ್ದ ಅನಿಲ್‌ಗೆ ಕ್ರಿಸ್‌ಮಸ್ ಟ್ರೀ ನೋಡಿ ಪಿತ್ಥ ನೆತ್ತಿಗೇರಿತಂತೆ.

ಅದನ್ನು ಎಸೆಯಲು ಹೋಗಿದ್ದಾರೆ. ‘ಕ್ರಿಸ್‌ಮಸ್ ಟ್ರೀ’ಯನ್ನು ಐದು ವರ್ಷದ ತಮ್ಮ ಮಗ ಆಸ್ಥೆಯಿಂದ ಅಲಂಕರಿಸಿದ್ದರಿಂದ ಪರೊಮಿತಾ ಅದನ್ನು ತಡೆದರಂತೆ. ಕೋಪಗೊಂಡ ಅನಿಲ್ ಅದರಲ್ಲೇ ಆಕೆಯ ಮುಖಕ್ಕೆ ಥಳಿಸಿದರು. ಮೂಗಿನ ಬದಿಯಿಂದ ರಕ್ತ ಬುಳು, ಬುಳು ಸುರಿಯತೊಡಗಿತು. ಘಟನೆ ನಡೆಯುವಾಗ ಮನೆ ಬಾಗಿಲು ತೆರೆದಿತ್ತು. ಗಾಬರಿಗೊಂಡ ಪರೋಮಿತಾ ಹೊರಕ್ಕೆ ಓಡಿದರು. ಅಕ್ಕಪಕ್ಕದ ಮನೆಯವರು ಕೂಡಲೇ ಪೊಲೀಸರಿಗೆ ಫೋನ್ ಮಾಡಿದರು. ಆಕೆಯನ್ನು ಆಸ್ಪತ್ರೆಗೆ ಸೇರಿಸಿದರು.

ಅನಿಲ್ ವರ್ಮಾ ಅವರ ವಿರುದ್ಧ ಅವರ ನೆರೆಹೊರೆಯವರು ದೂರು ದಾಖಲಿಸಿದರೂ ಬ್ರಿಟನ್ ಪೊಲೀಸರು ಅವರನ್ನು  ವಿಚಾರಣೆಗೆ ಒಳಪಡಿಸುವಂತಿರಲಿಲ್ಲ. ಅವರಿಗೆ ರಾಜತಾಂತ್ರಿಕರಿಗೆ ಸಹಜವಾಗಿ ದೊರಕುವ ರಕ್ಷಣಾತ್ಮಕ ಹೊದಿಕೆಯಿತ್ತು (diplomatic immunity)

ಬ್ರಿಟನ್ ಪೊಲೀಸರು ಈ ರಕ್ಷಣೆಯ ಕವಚ ತೆಗೆದು ಅವರ ಮೇಲೆ ಕಾನೂನು ಕ್ರಮ ಜರುಗಿಸಲು ಅನುವು ಮಾಡಿಕೊಡುವಂತೆ ಕೇಳಿಕೊಂಡರು.

ಘಟನೆಗೆ ರಾಯಭಾರ ಕಚೇರಿ, ವಿದೇಶಾಂಗ ಸಚಿವಾಲಯ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಬ್ರಿಟನ್ ಮಾಧ್ಯಮಗಳಲ್ಲಿ ಒತ್ತಡ ಹೆಚ್ಚಾದಾಗ ಭಾರತ ಸರ್ಕಾರ ಅವರನ್ನು ವಾಪಸು ಕರೆಯಿಸಿಕೊಳ್ಳುವ ನಿರ್ಧಾರಕ್ಕೆ ಬಂತು. ಮೂಲತಃ ಪಶ್ಚಿಮ ಬಂಗಾಳ ಕೇಡರ್ ಐಎಎಸ್ ಅಧಿಕಾರಿಯಾಗಿದ್ದ ವರ್ಮಾರನ್ನು ವಿದೇಶಾಂಗ ಇಲಾಖೆಗೆ ಎರವಲು ಸೇವೆಯ ಮೇಲೆ ನಿಯೋಜಿಸಲಾಗಿತ್ತು.

ಎಲ್ಲಕ್ಕಿಂತ ಹೆಚ್ಚಾಗಿ ದಿಗ್ಭ್ರಮೆಗೊಳಿಸುವಂತದ್ದು ಬ್ರಿಟನ್‌ನ ಭಾರತೀಯ ರಾಯಭಾರ ಕಚೇರಿಯಲ್ಲಿ ಡೆಪ್ಯುಟಿ ಹೈಕಮಿಷನರ್ ಆಗಿರುವ ರಾಜೇಶ್ ಪ್ರಸಾದ್ ಅವರ ಪ್ರತಿಕ್ರಿಯೆ. ಪರೋಮಿತಾ ಅವರನ್ನು ಎರಡು ಸಲ ಭೇಟಿ ಮಾಡಿದ ಅವರು, ಇಷ್ಟು ಚಿಕ್ಕ ವಿಚಾರಕ್ಕೆ ಇಷ್ಟು ರಂಪ ಮಾಡಬೇಕಿತ್ತೆ ಎಂದು ಗದರಿದರಂತೆ. ಈ ವಿಚಾರ ಮತ್ತಷ್ಟು ಬೆಳೆಸಿದರೆ ನಿನ್ನ ಮತ್ತು ಮಗನ ಜೀವಕ್ಕೆ ಅಪಾಯವಾಗಬಹುದು ಎಂಬಂತಹ ಪರೋಕ್ಷ ಬೆದರಿಕೆಯನ್ನೂ ಹಾಕಿದರಂತೆ.

ಈ ಘಟನೆಗೂ ಮೊದಲು ಅನಿಲ್ ವರ್ಮಾ ಹಲವು ಬಾರಿ ‘ನನಗೆ ರಾಜತಾಂತ್ರಿಕ ರಕ್ಷಣೆಯಿದೆ. ಯಾರೂ ಏನು ಮಾಡಲಾಗದು’ ಎಂದು ಪತ್ನಿಗೆ ಬೆದರಿಸುತ್ತಿದ್ದರಂತೆ.

ಅನಿಲ್ ವರ್ಮಾ ಅವರನ್ನು ಈಗ ಭಾರತಕ್ಕೆ ಕರೆಸಿಕೊಳ್ಳಲಾಗುತ್ತಿದೆ. ಪರೋಮಿತಾ ಮತ್ತು ಮಗ ಅಲ್ಲಿ ತಮ್ಮ ಸಂಬಂಧಿಗಳ ಮನೆಯಲ್ಲಿ ರಕ್ಷಣೆ ಪಡೆದಿದ್ದಾರೆ. ಮಾನವೀಯ ಆಧಾರದಲ್ಲಿ ತಮಗೆ ಬ್ರಿಟನ್‌ನಲ್ಲಿಯೇ ಇರಲು ಅವಕಾಶ ಮಾಡಿಕೊಡುವಂತೆ ಆಕೆ ಮನವಿ ಮಾಡಿಕೊಂಡಿದ್ದಾರೆ.

ಭಾರತಕ್ಕೆ ಬಂದರೆ ಪ್ರಭಾವಿಯಾಗಿರುವ ಪತಿ ಏನು ಬೇಕಾದರೂ ಮಾಡಬಲ್ಲರು ಎಂಬ ಭಯ ಆಕೆಗೆ ಇದ್ದಂತಿದೆ. ಭಾರತೀಯ ರೈಲ್ವೆಯ ಉದ್ಯೋಗಿಯಾಗಿರುವ ಪರೋಮಿತಾ ಎರಡು ವರ್ಷಗಳ ಅಧ್ಯಯನ ರಜೆ ಪಡೆದು ಲಂಡನ್‌ಗೆ ತೆರಳಿದ್ದರು.

ಅನಿಲ್ ವರ್ಮಾ ಪತ್ನಿಗೆ ಥಳಿಸಿದ ಪ್ರಸಂಗ ಮೇಲ್ನೋಟಕ್ಕೆ ಚಿಕ್ಕದಾಗಿ ಕಾಣಬಹುದು. ಆದರೆ, ಈ ಘಟನೆ ಜಾಗತಿಕ ವೇದಿಕೆಯಲ್ಲಿ ಭಾರತ ತಲೆತಗ್ಗಿಸುವಂತೆ ಮಾಡಿದೆ. ಉನ್ನತ ಶಿಕ್ಷಣ ಪಡೆದ ನಾಗರಿಕ ಸೇವಾ ಅಧಿಕಾರಿಯೊಬ್ಬರು ಈ ರೀತಿ ನಡೆದುಕೊಳ್ಳಬಹುದಾದರೇ ಇಡೀ ಭಾರತೀಯ ಸಮಾಜ ಹೆಣ್ಣನ್ನು ಹೇಗೆ ನೋಡುತ್ತದೆ ಎಂಬುದಕ್ಕೆ ಕನ್ನಡಿಯಾಗಿಯೂ ಇದು ನಿಲ್ಲುತ್ತದೆ.

ಈ ಘಟನೆಗೆ ಭಾರತ ಸರ್ಕಾರ ಹಾಗೂ ರಾಯಭಾರ ಕಚೇರಿ ಸ್ಪಂದಿಸಿದ ರೀತಿಯೂ ಆಕ್ಷೇಪಾರ್ಹ. ರಾಜತಾಂತ್ರಿಕ ರಕ್ಷಣೆಯ ಹೊದಿಕೆಯಲ್ಲಿ ಅಧಿಕಾರಿಗಳು ಹೇಗೆ ಬೇಕಾದರೂ ವರ್ತಿಸಬಹುದೇ? ಅದಕ್ಕೆ ಸರ್ಕಾರ ಸಮ್ಮತಿಸುತ್ತದೆಯೇ? ಎಂಬ ಪ್ರಶ್ನೆಯನ್ನೂ ಎತ್ತಿದೆ.   

ತಂತ್ರಜ್ಞಾನ ಕ್ರಾಂತಿ, ಆರ್ಥಿಕ ಅಭಿವೃದ್ಧಿಯಿಂದ ಬೀಗುತ್ತ ಜಗತ್ತಿನ ದೊಡ್ಡ ದೇಶಗಳ ಜತೆ ಹೆಗಲು ಜೋಡಿಸಲು ಮುಂದಾಗಿರುವ ರಾಜಕೀಯ ನಾಯಕರು ಈ ಪ್ರಶ್ನೆಗಳಿಗೆ ಮೊದಲು ಉತ್ತರಿಸಬೇಕು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT