ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಹಾರ ಅಭದ್ರತೆ ಮಸೂದೆ

Last Updated 2 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ನಮ್ಮ ದೇಶದ ಪಡಿತರ ವ್ಯವಸ್ಥೆಗೆ ಒಂದು ಇತಿಹಾಸವಿದೆ. ಕಲ್ಯಾಣ ರಾಜ್ಯದ ಕಲ್ಪನೆಯಲ್ಲಿ ಯಾರೂ ಹಸಿದಿರಬಾರದೆಂದು ಪ್ರತಿ ಕುಟುಂಬದ ಕನಿಷ್ಠ ಆಹಾರದ ಅಗತ್ಯತೆಯನ್ನು ಸಾರ್ವಜನಿಕ ಪಡಿತರ ವ್ಯವಸ್ಥೆಯ ಮೂಲಕ ಸರ್ಕಾರವೇ ಪೂರೈಸುತ್ತಿತ್ತು.
 
ಈ ಜವಾಬ್ದಾರಿಯಿಂದ ಸರ್ಕಾರ ಹಿಂದೆ ಸರಿಯುತ್ತಿದೆ. ಸಾರ್ವತ್ರಿಕ ಪಡಿತರಕ್ಕೆ ಬದಲಾಗಿ ಗುರಿ ನಿರ್ದೇಶಿತ ವ್ಯವಸ್ಥೆಯಾಗಿ ಬಡತನಕ್ಕೊಂದು ರೇಖೆ ಎಳೆದು ರೇಖೆಯ ಮೇಲೆ- ಕೆಳಗೆ, ಕಡುಬಡವರು, ಎಂಬಿತ್ಯಾದಿ ವರ್ಗೀಕರಿಸಲಾಗಿದೆ.
 
ಜೊತೆಗೆ ಬಡತನವನ್ನು ನಿರ್ಮೂಲನ ಮಾಡಲು ಬೇಕಾದ ಗಟ್ಟಿಕ್ರಮ ಕೈಗೊಳ್ಳದೆಯೇ ಬಡವರ ಸಂಖ್ಯೆಯನ್ನು ಕಡಿಮೆ ತೋರಿಸಲು ಸರ್ಕಾರ ಯಥೇಚ್ಛ ಹಣ, ಶ್ರಮ, ಕಾಲವನ್ನು ವ್ಯರ್ಥ ಮಾಡುತ್ತಿದೆ.

ಏಕ ಕಾಲದಲ್ಲಿ ಎರಡು ಮೂರು ಇಲಾಖೆಗಳು, ಸಂಸ್ಥೆ ಗಳ ಮೂಲಕ ಪ್ರತ್ಯೇಕವಾಗಿ ಸಮೀಕ್ಷೆ  ನಡೆಸಲಾಗುತ್ತಿದೆ. ಎಷ್ಟೇ ಹೆಣಗಾಡಿದರೂ ಒಂದೇ ರೀತಿಯ ಫಲಿತಾಂಶಗಳು ಇದುವರೆಗೂ ಸಿಕ್ಕಿಲ್ಲ. ಈ  ಕಸರತ್ತಿನ ಭಾಗವೇ ಈಗ ಬರಲಿರುವ ಆಹಾರ ಭದ್ರತಾ ಕಾನೂನು.!

ಆಹಾರದ ಸುರಕ್ಷೆ ದೇಶದ  ಪ್ರಮುಖ ಸವಾಲಾಗಿದೆ. ಅಂತರ ರಾಷ್ಟ್ರೀಯ ಆಹಾರ ಯೋಜನಾ ಸಂಶೋಧನಾ ಸಂಸ್ಥೆಯ ವರದಿಯಂತೆ  ಅಭಿವೃದ್ಧಿಶೀಲ 88 ರಾಷ್ಟ್ರಗಳ ವಿಶ್ವ ಹಸಿವಿನ ಮಾಪನದಲ್ಲಿ ಭಾರತ 66 ಮತ್ತು ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ 134 ನೇ ಸ್ಥಾನದಲ್ಲಿದೆ.
 
ದೇಶದ ಜನಸಂಖ್ಯೆಯ ಶೇಕಡ 76ರಷ್ಟು ಭಾಗ ಅಗತ್ಯ ಆಹಾರ ಲಭ್ಯತೆಯಿಂದ ವಂಚಿತರು. ವಿಶ್ವದ ಜನಸಂಖ್ಯೆಯ ಶೇಕಡಾ 25ರಷ್ಟು  ಬಡವರು ಭಾರತದಲ್ಲಿದ್ದಾರೆ. ವಿಶ್ವದಲ್ಲಿಯೇ ಅತಿ ಹೆಚ್ಚು ಜನ ಹಸಿವಿನಿಂದ ಇರುವ ದೇಶ ನಮ್ಮದು. ಶಿಶುಗಳ ಅಪೌಷ್ಟಿಕತೆಯಲ್ಲಿ ಸಬ್ ಸಹರನ್ ಆಫ್ರಿಕಾ ದೇಶಗಳಿಗಿಂತ ಕೆಳಮಟ್ಟದಲ್ಲಿ ನಾವಿದ್ದೆೀವೆ.

ವ್ಯಕ್ತಿಯೊಬ್ಬರಿಗೆ ದಿನವೊಂದಕ್ಕೆ ಕನಿಷ್ಠ 2400 ಕ್ಯಾಲರಿ ಆಹಾರದ ಅಗತ್ಯವಿರುತ್ತದೆ. ಅದರಿಂದಲೂ ವಂಚಿತರಾದ 645ಮಿಲಿಯನ್ ಜನ ಈ ದೇಶದಲ್ಲಿದ್ದಾರೆ. ಒಂದು ಅಧ್ಯಯನದ ಪ್ರಕಾರ ಬಹುಪಾಲು ಭಾರತೀಯರ ತಲಾ ಆಹಾರ ಲಭ್ಯತೆ 436 ಗ್ರಾಂ ಗಳಿಗಿಂತಲೂ ಕಡಿಮೆ.
 
ಜನಸಂಖ್ಯೆಯ ಶೇಕಡಾ 70ಕ್ಕೂ ಹೆಚ್ಚು ಜನರ ದಿನದ ಆದಾಯ 20 ರೂಪಾಯಿಗಳಿಗಿಂತಲೂ ಕಡಿಮೆ. ದೇಶದ ಜನ ಸಂಪನ್ಮೂಲದ ರಕ್ಷಣೆಯ ಹೊಣೆ ಹೊತ್ತ ಸರ್ಕಾರದ ಕನಿಷ್ಠ ಜವಾಬ್ದಾರಿ ಎಂದರೆ ಹಸಿದ ಹೊಟ್ಟೆಗೆ ಅನ್ನ ನೀಡುವುದು. ಬಲಿಷ್ಟ ಕೈಗಳಿಗೆ ಕೆಲಸ ನೀಡುವುದು. ನಮ್ಮ ಸರ್ಕಾರಗಳು ಈ ಕನಿಷ್ಠ ಜವಾಬ್ದಾರಿಯನ್ನು ನಿರ್ವಹಿಸುತ್ತಿವೆಯೇ?

2001-2003 ರಲ್ಲಿ ದಾಖಲೆ ಬೆಳೆ ಬಂದಿತೆಂದು ವರದಿಯಾಗಿತ್ತು. ದೇಶದ ಕಾರ್ಡುದಾರರಿಗೆ ಗುರಿ ನಿರ್ದೇಶಿತ ಪಡಿತರ ನೀಡುವ ಪದ್ಧತಿಯನ್ನು ಜಾರಿಗೆ ತಂದ ಸರ್ಕಾರ  ಯುರೋಪಿಯನ್ ರಾಷ್ಟ್ರಗಳಿಗೆ ಪಶುಗಳ ಬಳಕೆಗೆ ಇಲ್ಲಿನ ಬಿ.ಪಿ.ಎಲ್. ಗಿಂತ ಕಡಿಮೆ ದರದಲ್ಲಿ ಧಾನ್ಯಗಳನ್ನು  ರಫ್ತು ಮಾಡಿತ್ತು.ಆಗಲೇ ಒರಿಸ್ಸಾದ ಕಾಳಹಂದಿಯಲ್ಲಿ ಜನ ಹಸಿವಿನಿಂದ ತತ್ತರಿಸುತ್ತಿದ್ದರು.

ಸರ್ಕಾರದ ಗೋದಾಮುಗಳಲ್ಲಿ 65 ಮಿಲಿಯನ್ ಟನ್ ಆಹಾರ ಧಾನ್ಯಗಳ ಹೆಚ್ಚುವರಿ ದಾಸ್ತಾನಿದೆ. ಅದರಲ್ಲಿ ಸುಮಾರು 15 ಮಿಲಿಯನ್ ಟನ್ ರಕ್ಷಣೆ ಇಲ್ಲದೆ ಕೊಳೆಯುತ್ತಿದೆ. 6 ಲಕ್ಷ ಜನರಿಗೆ 10 ವರ್ಷಗಳ ಕಾಲ ಪೂರೈಸಬಹುದಾಗಿದ್ದ 10,688 ಲಕ್ಷ ಟನ್ ಆಹಾರ ಧಾನ್ಯಗಳು ಎಫ್.ಸಿ.ಸಿ.ಐ ಗೋದಾಮುಗಳಲ್ಲಿ ಹಾಳಾದ ಸ್ಥಿತಿಯಲ್ಲಿದ್ದವೆಂದು  ಜನವರಿ 2010 ರಲ್ಲಿ ವರದಿಯಾಗಿತ್ತು.
 
2007 ರಲ್ಲಿ ಕೇಂದ್ರ ಸರ್ಕಾರದಿಂದ 3 ರೈಲ್ವೆ ವ್ಯಾಗನ್ -ಸರಿಸುಮಾರು 300 ಲಾರಿ ಭರ್ತಿ(ತಲಾ 10ರಿಂದ 12 ಟನ್) ರವಾನೆಯಾದ ಅಕ್ಕಿ ಮೂಟೆಗಳಲ್ಲಿ ಶೇಕಡ 50 ಭಾಗ ಹೊರಗಡೆಯೇ ಬಿದ್ದಿದ್ದು ಮುಗ್ಗಲಾಗಿವೆ ಎಂದು ಸೆಪ್ಟೆಂಬರ್ 2010ರಲ್ಲಿ ವರದಿಯಾಯಿತು. ಕರ್ನಾಟದ ಲೋಕಾಯುಕ್ತ ಸಮೀಕ್ಷೆಯ ಪ್ರಕಾರ ರಾಜ್ಯದಲ್ಲಿ 56.6 ಕೋಟಿ ಮೊತ್ತದ ಆಹಾರ ಧಾನ್ಯ ಸಾಗಾಣಿಕೆಯ ಹಂತದಲ್ಲಿಯೇ ಹಾಳಾಗುತ್ತಿದೆ.

`ದೇಶದ ಜನ ಹಸಿವಿನಿಂದ ನರಳುತ್ತಿರುವಾಗ ಧಾನ್ಯದ ಒಂದು ಕಾಳನ್ನು ಅಪವ್ಯಯ ಮಾಡುವುದೂ ಅಪರಾಧ- ತಕ್ಷಣ ಅಗತ್ಯವಿರುವವರಿಗೆ ಧಾನ್ಯ ಹಂಚಲು ವ್ಯವಸ್ಥೆ ಮಾಡಿ~ ಎಂದು ದೇಶದ ಸರ್ವೋಚ್ಚ ನ್ಯಾಯಾಲಯ ಕೇಂದ್ರ ಸರ್ಕಾರಕ್ಕೆ ಆದೇಶಿಸಿದೆ. ಆದರೆ ಸರ್ಕಾರ ಆ ಗೋಜಿಗೇ ಹೋಗದೆ ಹಣವಿಲ್ಲವೆಂಬ ಕಾರಣ ನೀಡಿದೆ!

ಸಿ.ಎ.ಜಿ. ವರದಿ ಪ್ರಕಾರ 2ಜಿ ಸ್ಪೆಕ್ಟ್ರಮ್ ಹಗರಣದ ಮೊತ್ತ 1,76,645 ಕೋಟಿಗಳು. ಕೇವಲ ಇಬ್ಬರು ಉದ್ಯಮಿಗಳಾದ ಹಸನ್ ಅಲಿ ಮತ್ತು ಕಾಶೀನಾಥ ತಪುರಿಯಾ ಅವರು ಕಟ್ಟಬೇಕಾದ ತೆರಿಗೆ ಮೊತ್ತ 70,000 ಕೋಟಿ ರೂಪಾಯಿಗಳು. ಕಳೆದ ಬಜೆಟ್‌ನಲ್ಲಿ  ಶ್ರೀಮಂತರಿಗೆ ಕೊಟ್ಟ ತೆರಿಗೆ ವಿನಾಯಿತಿ 5,00,000 ಕೋಟಿ ರೂಪಾಯಿಗಳು!

ದೇಶದಿಂದ ಕಳ್ಳತನದಲ್ಲಿ ಹೊರ ಹೋಗುತ್ತಿರುವ ಹಣದ ಮೊತ್ತ 20 ಲಕ್ಷ ಕೋಟಿ ರೂಪಾಯಿ! ಇನ್ನು ಬಳ್ಳಾರಿ ಗಣಿ ವಂಚನೆ, ಕೆಜಿ ಬೇಸಿನ್ ಗ್ಯಾಸ್ ಹಗರಣಗಳ ಪ್ರಮಾಣ ಎಷ್ಟು ಎಂದು ಇನ್ನೂ ಖಚಿತವಾಗಿಲ್ಲ.

ಇದೇ ಸರ್ಕಾರ ಹೊಸ ವಿಮಾನ ನಿಲ್ದಾಣಗಳನ್ನು ಕಟ್ಟಲು 10,000 ಕೋಟಿ ರೂಪಾಯಿ, ಕಾಮನ್ ವೆಲ್ತ್ ಕ್ರೀಡಾ ಕೂಟಕ್ಕೆ 40000 ಕೋಟಿ ರೂಪಾಯಿ ಖರ್ಚು ಮಾಡಿದೆ.ಹೊಟ್ಟೆಗೆ ಹಿಟ್ಟಿಲ್ಲ, ಜುಟ್ಟಿಗೆ ಮಲ್ಲಿಗೆ ಹೂ.

ಇದಕ್ಕೆ ವ್ಯತಿರಿಕ್ತವಾಗಿ ಸಾರ್ವತ್ರಿಕ ಪಡಿತರ ವ್ಯವಸ್ಥೆಗೆ  ಸೀಮೆ ಎಣ್ಣೆಯೂ ಸೇರಿದಂತೆ ನೀಡಲಾಗುತ್ತಿರುವ ವಾರ್ಷಿಕ ಸಬ್ಸಿಡಿ  ಕೇವಲ 60,000 ಕೋಟಿ ರೂಪಾಯಿ. ಸರ್ಕಾರ ಮಾಡಬೇಕಾದುದಿಷ್ಟೇ. ಶ್ರಿಮಂತರಿಗೆ ಮಣೆ ಹಾಕುವ ಬದಲು ಬಡವರಿಗೆ ಅನ್ನ ಕೊಡಲು ತಯಾರಾಗುವುದು.

ಜನರಿಗೆ ಮೋಸಮಾಡಿ ಹಗರಣಗಳ ಸರಮಾಲೆಯನ್ನೇ ಸೃಷ್ಟಿಸಿ ಬೆಳಗಾಗುವುದರೊಳಗೆ ಕೋಟ್ಯಧಿಪತಿಗಳಾಗಿರುವವರಿಂದ ಮುಲಾಜಿಲ್ಲದೆ ಅಕ್ರಮ ಗಳಿಕೆಯನ್ನು ವಸೂಲು ಮಾಡುವುದು.

ಯು.ಪಿ.ಎ ಸರ್ಕಾರ ಆಹಾರ ಸುರಕ್ಷಾ ಕಾನೂನನ್ನು ಜಾರಿಗೆ ತರುವ ಯೋಚನೆಯಲ್ಲಿದೆ. ಸೋನಿಯಾ ಗಾಂಧೀ ಅಧ್ಯಕ್ಷತೆಯ ರಾಷ್ಟ್ರೀಯ ಸಲಹಾ ಮಂಡಳಿ ರೂಪಿಸಿರುವ ಮಸೂದೆಯ ಮುಖ್ಯಾಂಶಗಳು ಹೀಗಿವೆ:

-150 ಜಿಲ್ಲೆಗಳಲ್ಲಿ ಮೂಲದ ಶೇಕಡಾ 90ರಷ್ಟು  ಗ್ರಾಮೀಣ ಮತ್ತು ಶೇಕಡಾ 75ರಷ್ಟು ನಗರದ ಜನರನ್ನು ಕಾಯ್ದೆಯ ವ್ಯಾಪ್ತಿಗೆ ತರುವುದು

-ಗರ್ಭಿಣಿಯರಿಗೆ  6 ತಿಂಗಳಿಗೆ 1000/ ರೂಪಾಯಿಗಳ ಸಹಾಯ ನೀಡುವುದು.

-ಜಿಲ್ಲೆಗಳಲ್ಲಿ ಸ್ವತಂತ್ರ ಕುಂದು ಕೊರತೆ ಪರಿಹಾರ ಮತ್ತು ಪರಿಶೀಲನಾ ವ್ಯವಸ್ಥೆಗೆ ಅವಕಾಶ 

ಇದರಲ್ಲಿ  ಜನರನ್ನು ಈಗಿರುವ ಗುರಿ ನಿರ್ದೇಶಿತ ಪದ್ಧತಿಯಿಂದಲೂ ಆಚೆ ತಳ್ಳುವ ಪ್ರಸ್ತಾಪವಿದೆ. ಒಂದು ಪ್ರದೇಶದ ಶೇಕಡಾ 90 ಇಲ್ಲವೇ 50  ಜನರನ್ನು ಗುರುತಿಸುವ ಮಾನದಂಡವೇನೆಂಬುದೇ ಸ್ಪಷ್ಟ ಇಲ್ಲ. ಇದು ಸಾಮಾಜಿಕ ಕಳಕಳಿಯ ಪಡಿತರ ವ್ಯವಸ್ಥೆಗೆ ಪೂರಕವಾಗಿಲ್ಲ ಎಂಬ ಅಭಿಪ್ರಾಯವಿದೆ.

ಹೀಗಿರುವಾಗ ಇದನ್ನು ಜಾರಿಮಾಡಲೆಂದು ಸರ್ಕಾರದಿಂದ ನಿಯೋಜಿತವಾಗಿರುವ ಸಚಿವರ ತಂಡದ ಇನ್ನಷ್ಟು ಅನಾಹುತಕಾರಿ ಸಲಹೆಗಳು ಹೀಗಿವೆ :
- ಗ್ರಾಮೀಣ ಪ್ರದೇಶದಲ್ಲಿ ಶೇಕಡಾ 75 ಮತ್ತು ನಗರಗಳಲ್ಲಿ ಶೇಕಡಾ 50ರಷ್ಟು ಜನರನ್ನು ವ್ಯಾಪ್ತಿಗೆ ತರುವುದು.

-ಗರ್ಭಿಣಿಯರ ಆರೈಕೆ ಕೈಬಿಡುವುದು. ಪರಿತ್ಯಕ್ತರು, ನಿರ್ವಸಿತರಿಗೆ ಸಿಗಬಹುದಾದ ಸಮೂಹ ಆಹಾರ ವ್ಯವಸ್ಥೆಯ ರದ್ದತಿ.

-ತಪ್ಪು ಮಾಡುವ ಅಧಿಕಾರಿಗಳನ್ನು ಶಿಕ್ಷಿಸುವ ಯಾವುದೇ ಅಧೀಕಾರವಿಲ್ಲದ ರಾಷ್ಟ್ರೀಯ ಆಹಾರ ಆಯೋಗದ ನೇಮಕ.

ಇದಿಷ್ಟೇ ಸಾಲದೆಂಬಂತೆ ಆಹಾರಕ್ಕೆ ಬದಲಾಗಿ ಅದರ ಮೊತ್ತದ ಹಣವನ್ನು ಕಾರ್ಡುದಾರರಿಗೆ ಪಾವತಿ ಮಾಡುವ ವಿಶ್ವ ಬ್ಯಾಂಕ್ ನಿರ್ದೇಶಿತ ಅಮೋಘ ಸಲಹೆಯೂ ಇದೆ. ಇದರ ಪ್ರಕಾರ ಒಂದು ಕುಟುಂಬಕ್ಕೆ 35 ಕಿಲೋ ಧಾನ್ಯದ ಬದಲಾಗಿ ಮಾಸಿಕ 70 ರೂಪಾಯಿಗಳ ನೇರ ಹಣ ಸಂದಾಯ.
 
ಎಂತಹ ಪವಿತ್ರ ಪ್ರಸ್ತಾಪ! ಇಷ್ಟು ದೊಡ್ಡ ಮೊತ್ತದ ಹಣ ಪಡೆಯಬೇಕೆಂದರೆ ಇದುವರೆಗೂ ಜಾರಿಗೆ ಬರದೆ ಇರುವ ಬಯೋಮೆಟ್ರಿಕ್ ಆಧಾರ್ ಗುರುತು ಚೀಟಿ ಹೊಂದಿರಲೇ ಬೇಕು.

ಈ ಕಾನೂನು ಇದೇ ರೂಪದಲ್ಲಿ ಅನುಷ್ಠಾನಗೊಂಡರೆ ಪಡಿತರ ವ್ಯವಸ್ಥೆಯ  ಪೂರ್ಣ ಅಧಿಕಾರ ಕೇಂದ್ರ ಸರ್ಕಾರದ ಕೈಗೆ ಹೋಗಲಿದೆ. ರಾಜ್ಯ ಸರ್ಕಾರಗಳು  ತಮ್ಮ ಬಜೆಟ್‌ನಲ್ಲಿ ಪಡಿತರಕ್ಕೆ ಹೊಂದಿಸಿಕೊಂಡು  ರಿಯಾಯಿತಿ ನೀಡಬಹುದಾದ ಹಕ್ಕುಗಳನ್ನು ಕಳೆದುಕೊಳ್ಳುತ್ತವೆ.
 
ಕೆಲವು ರಾಜ್ಯಗಳಲ್ಲಿ ಈಗಾಗಲೇ ಕಾರ್ಡುದಾರರು ರಾಜ್ಯ ಸರ್ಕಾರದಿಂದ ಪಡೆಯುತ್ತಿರುವ ರಿಯಾಯಿತಿಗಳಿಂದ ವಂಚಿತರಾಗುತ್ತಿದ್ದಾರೆ. ಜಗತ್ತಿನಲ್ಲಿ ಅತಿ ಹೆಚ್ಚು ಯುವಜನರನ್ನು ಹೊಂದಿರುವ ಭಾರತ ದೇಶ ತನ್ನ ಭಾವೀ ಪ್ರಜೆಗಳನ್ನು ಸದೃಢಗೊಳಿಸುವ ಪರಿ ಇದು.!

ಹಣದುಬ್ಬರದ ನಾಗಾಲೋಟವನ್ನು ತಡೆಯಲಾರದ ಮಾನವೀಯ ಮುಖದ ಸರ್ಕಾರ ದೇಶದ ದುಡಿಯುವ ಜನರಿಗೆ ಕೊಡುತ್ತಿರುವ ಆಹಾರದ ಸುರಕ್ಷೆ ಇದು.ಆಹಾರ ಸುರಕ್ಷೆ ಎಂದರೆ `ಸರ್ವರಿಗೂ ಸರ್ವಕಾಲದಲ್ಲೂ ದೈಹಿಕ ಮತ್ತು ಆರ್ಥಿಕ ಅಗತ್ಯಕ್ಕೆ ತಕ್ಕಂತೆ ಆರೋಗ್ಯ ಮತ್ತು ಕ್ರಿಯಾಶೀಲ ಬದುಕು ನಡೆಸಲು ಗುಣಮಟ್ಟದ, ಪೌಷ್ಟಿಕಾಂಶಗಳನ್ನೊಳಗೊಂಡ ಸಂಪೂರ್ಣ ಆಹಾರ ಒದಗಿಸುವುದು~ ಎಂದು ವಿಶ್ವ ಸಂಸ್ಥೆ ಅಭಿಪ್ರಾಯಪಟ್ಟಿದೆ.

ಸರ್ಕಾರವೇ ಕಳೆದ ಎರಡು ದಶಕಗಳಿಂದ ರೈತರನ್ನು ಆಹಾರ ಧಾನ್ಯದಿಂದ ವಾಣಿಜ್ಯ ಬೆಳೆಗೆ ಬದಲಾಯಿಸಿಕೊಳ್ಳುವಂತೆ ಪ್ರೇರೇಪಿಸುತ್ತಿದೆ. ಇದು ದೇಶದ ಆಹಾರ ಸ್ವಾವಲಂಬನೆಯನ್ನು ನಾಶಮಾಡುವುದಾಗಿದೆ.

ನಾವು ಚಿಕ್ಕವರಿದ್ದಾಗ ಪಿ.ಎಲ್. 480 ಹೆಸರಿನಲ್ಲಿ ಅಮೆರಿಕದಿಂದ ರವೆ ಮತ್ತು ಖಾದ್ಯ ತೈಲ ಬರುತ್ತಿತ್ತು. ಬಹುಷಃ ಅಲ್ಲಿಯ ಪಶುಗಳೂ ತಿನ್ನಲಾರದ ಆಹಾರವದು. `ಈಗ ಇಲ್ಲಿರುವ ಆಹಾರವನ್ನು ಇಲಿ ಹೆಗ್ಗಣಗಳಿಗೆ,ಗಾಳಿ ಮಳೆಗೆ ಬಿಸಾಡಿದರೂ ಸರಿ ನಮ್ಮ ದೊರೆಗಳ ಅಣತಿಯನ್ನು ಮೀರಿ ನಾವು ನಿಮಗೆ ಕೊಡಲಾರೆವು~ ಎನ್ನುವಂತಿದೆ ಸರ್ಕಾರದ ಧೋರಣೆ.

`ದಯವಿಟ್ಟು ನಿಮ್ಮ ಸೊಂಟದ ಬಟ್ಟೆಯನ್ನು ಬಿಗಿಯಾಗಿ ಕಟ್ಟಿಕೊಳ್ಳಿ. ಹಸಿವು ನಿಮ್ಮನ್ನು ಕಾಡದಿರಲಿ. ಇಂದಲ್ಲ ನಾಳೆ ಪರಿಸ್ಥಿತಿ ಸರಿಹೋಗಬಹುದು~ ಎಂದು ನಮ್ಮ ಪ್ರಧಾನಿಯವರು ಆಗಾಗ ಪಾಪ ನಿವೇದನೆ ಮಾಡಿಕೊಳ್ಳುತ್ತಿರುತ್ತಾರೆ. ಇದನ್ನು ನಾವು ನಂಬಬೇಕು.

ವಿವಾದಗಳು
* ಮುಖ್ಯ ವಿವಾದ 1
ಫಲಾನುಭವಿ ಕುಟುಂಬಗಳ ಸಂಖ್ಯೆ
-ಕಳೆದ ವರ್ಷದ ಫೆಬ್ರವರಿ ತಿಂಗಳಲ್ಲಿ ನಡೆದ ಮುಖ್ಯಮಂತ್ರಿಗಳ ಸಭೆಯಲ್ಲಿ ಕೇಂದ್ರ ಸರ್ಕಾರ ತಿಳಿಸಿದ ಪ್ರಕಾರ ಪಡಿತರ ಚೀಟಿಗೆ ಅರ್ಹವಾಗಿರುವ ಬಡತನದ ರೇಖೆಗಿಂತ ಮೇಲಿರುವ (ಎಪಿಎಲ್) ಮತ್ತು ಬಡತನದ ರೇಖೆಗಿಂತ ಕೆಳಗಿರುವ (ಬಿಪಿಎಲ್) ಕುಟುಂಬಗಳ ಸಂಖ್ಯೆ 18.03 ಕೋಟಿ.
 
ಇದು ಒಟ್ಟು ಜನಸಂಖ್ಯೆಯ ಶೇಕಡಾ 90ರಷ್ಟಾಗುತ್ತದೆ. ಆದರೆ ಕರಡು ಮಸೂದೆ ಗ್ರಾಮೀಣ ಪ್ರದೇಶದ ಶೇಕಡಾ 75ರಷ್ಟು  ಮತ್ತು ನಗರ ಪ್ರದೇಶದ ಶೇಕಡಾ 50ರಷ್ಟು ಕುಟುಂಬಗಳನ್ನಷ್ಟೇ ಒಳಗೊಂಡಿದೆ.

-ಕರಡು ಮಸೂದೆ ರಾಜ್ಯ ಸರ್ಕಾರಗಳು ನೀಡಿರುವ ಬಿಪಿಎಲ್ ಕುಟುಂಬಗಳ ಅಂದಾಜನ್ನು ನಿರ್ಲಕ್ಷಿಸಿದೆ. ಕೇಂದ್ರ ಸರ್ಕಾರದ ಅಂದಾಜು ಪ್ರಕಾರ ದೇಶದಲ್ಲಿರುವ ಬಿಪಿಎಲ್ ಕುಟುಂಬಗಳ ಸಂಖ್ಯೆ 6.52 ಕೋಟಿ.
 
ಆದರೆ ರಾಜ್ಯಸರ್ಕಾರಗಳು 11.03 ಬಿಪಿಎಲ್ ಕುಟುಂಬಗಳನ್ನು ಗುರುತಿಸಿ ಪಡಿತರ ಚೀಟಿ ನೀಡಿವೆ. ಇದು ದೇಶದ ಒಟ್ಟು ಜನಸಂಖ್ಯೆಯ ಶೇಕಡಾ 56ರಷ್ಟಾಗುತ್ತದೆ. ಆದರೆ ಮಸೂದೆಯ ಪ್ರಕಾರ ಕೇವಲ ಗ್ರಾಮೀಣ ಪ್ರದೇಶದಲ್ಲಿ ಶೇಕಡಾ 46ರಷ್ಟು  ಮತ್ತು ನಗರ ಪ್ರದೇಶದಲ್ಲಿ ಶೇಕಡಾ 28ರಷ್ಟು ಬಿಪಿಎಲ್ ಕುಟುಂಬಗಳಿವೆ.

-ಬಿಪಿಎಲ್ ಕುಟುಂಬಗಳ ಸಂಖ್ಯೆಯಲ್ಲಿನ ಈ ವ್ಯತ್ಯಾಸಕ್ಕೆ ಕೇಂದ್ರ ಸರ್ಕಾರ ಅನುಸರಿಸುತ್ತಿರುವ ಕೇಂದ್ರ ಯೋಜನಾ ಆಯೋಗದ ಮಾಹಿತಿ ಕಾರಣ. ಇದರ ಪ್ರಕಾರ ಗ್ರಾಮೀಣ ಪ್ರದೇಶದಲ್ಲಿ ದಿನಕ್ಕೆ 13 ರೂಪಾಯಿಗಿಂತ ಕಡಿಮೆ ಮತ್ತು ನಗರ ಪ್ರದೇಶದಲ್ಲಿ 18 ರೂಪಾಯಿಗಳಿಗಿಂತ ಕಡಿಮೆ ಆದಾಯ ಇರುವವರು ಮಾತ್ರ ಬಡವರು.

-ಬಡವರ ಸಂಖ್ಯೆಯನ್ನು ಗುರುತಿಸುವ ಸಂಪೂರ್ಣ ಅಧಿಕಾರವನ್ನು ಮಸೂದೆಯಲ್ಲಿನ ಸೆಕ್ಷನ್ 13 ಕೇಂದ್ರ ಸರ್ಕಾರಕ್ಕೆ ನೀಡಿದೆ. ರಾಜ್ಯ ಸರ್ಕಾರಗಳು ಬಡ ಕುಟುಂಬಗಳ ಸಮೀಕ್ಷೆ ನಡೆಸಬಹುದಾದರೂ ಅದು ಕೇಂದ್ರ ಸರ್ಕಾರದ ಮಾರ್ಗಸೂಚಿಗಳಿಗೆ ಅನುಗುಣವಾಗಿ ಇರಬೇಕು ಎಂದು ಮಸೂದೆಯ ಸೆಕ್ಷನ್ 21 ಹೇಳಿದೆ.

* ಮುಖ್ಯ ವಿವಾದ 2
ಆಹಾರ ಧಾನ್ಯದ ಪ್ರಮಾಣ
-ಪ್ರತಿ ಕುಟುಂಬಕ್ಕೆ 35 ಕಿಲೋ ಆಹಾರಧಾನ್ಯ ನೀಡುವ ಈಗಿನ ಕೋಟಾದ ಬದಲಿಗೆ ಪ್ರತಿ ವ್ಯಕ್ತಿಗೆ ತಲಾ 7 ಕಿಲೋ ಆಹಾರಧಾನ್ಯ ನೀಡುವ ಪದ್ದತಿಯನ್ನು ಕರಡು ಮಸೂದೆ ಒಳಗೊಂಡಿದೆ.

ಇದು ಹೆಚ್ಚು ವೈಜ್ಞಾನಿಕ ವಿಧಾನ ಎಂದು ಅಂದುಕೊಂಡರೂ  ಇದರಿಂದಾಗಿ ಕುಟುಂಬ ಕಲ್ಯಾಣ ಯೋಜನೆಯಡಿ ಕಡಿಮೆ ಮಕ್ಕಳನ್ನು ಹೊಂದಿದ ಬಡಕುಟುಂಬಗಳು ಕಡಿಮೆ ಆಹಾರಧಾನ್ಯ ಮತ್ತು ಅದನ್ನು ಪಾಲಿಸದ ಕುಟುಂಬಗಳು ಹೆಚ್ಚಿನ ಪ್ರಮಾಣದ ಆಹಾರಧಾನ್ಯ ಪಡೆಯಲು ಅನುಕೂಲವಾಗುತ್ತದೆ.

ಎಪಿಎಲ್ ಕುಟುಂಬಗಳ ಸ್ಥಿತಿ ಇನ್ನೂ ಚಿಂತಾಜನಕ. ಆ ಕುಟುಂಬಗಳ ಪ್ರತಿ ಸದಸ್ಯರಿಗೆ ತಲಾ ಮೂರು ಕಿಲೋ ಆಹಾರ ಧಾನ್ಯ ನೀಡಬೇಕೆಂದು ಕರಡು ಮಸೂದೆ ಹೇಳಿದೆ.

-ವಿವಾದಕ್ಕೆ ಕಾರಣವಾಗಿರುವ ಇನ್ನೊಂದು ಅಂಶ-ಬೆಲೆ. ದೇಶದ ಸುಮಾರು ಹತ್ತು ರಾಜ್ಯಗಳಲ್ಲಿ ಅಲ್ಲಿನ ಸರ್ಕಾರಗಳು ಎರಡು ರೂಪಾಯಿಗೆ ಒಂದು ಕಿಲೋ ಅಕ್ಕಿ ನೀಡುತ್ತಿದೆ. ತಮಿಳುನಾಡಿನಲ್ಲಿ ಒಂದು ರೂಪಾಯಿಗೆ ಒಂದು ಕಿಲೋ ಅಕ್ಕಿ ನೀಡಲಾಗುತ್ತಿದೆ.
 
ಕರಡು ಮಸೂದೆಯ ಪ್ರಕಾರ ಬಿಪಿಎಲ್ ಕುಟುಂಬಗಳು ಪಡೆಯುವ ಅಕ್ಕಿಯ ಬೆಲೆ ಕಿಲೋಗೆ ಎರಡು ರೂಪಾಯಿ. ಈ ಬೆಲೆಯನ್ನು ಬದಲಾವಣೆ ಮಾಡುವ ಅಧಿಕಾರವನ್ನು ಕೂಡಾ ಮಸೂದೆ ಕೇಂದ್ರ ಸರ್ಕಾರಕ್ಕೆ ನೀಡಿದೆ.

-ಎಪಿಎಲ್ ಕುಟುಂಬಗಳ ಸ್ಥಿತಿ ಇನ್ನೂ ಚಿಂತಾಜನಕ. ಈ ಕುಟುಂಬಗಳಿಗೆ ನೀಡುವ ಆಹಾರಧಾನ್ಯದ ಬೆಲೆಯನ್ನು ಸರ್ಕಾರ ರೈತರಿಗಾಗಿ ನಿಗದಿಪಡಿಸಿರುವ ಕನಿಷ್ಠ ಬೆಂಬಲ ಬೆಲೆಗೆ ಜೋಡಿಸಲಾಗಿದೆ. ಕನಿಷ್ಠ ಬೆಂಬಲ ಬೆಲೆಯ ಅರ್ಧದಷ್ಟನ್ನು ಎಪಿಎಲ್ ಕುಟುಂಬಗಳು ತಾವು ಪಡೆಯುವ ಆಹಾರಧಾನ್ಯಗಳಿಗೆ ನೀಡಬೇಕೆಂದು ಕರಡು ಮಸೂದೆ ಹೇಳಿದೆ.
 
ರೈತರು ಕನಿಷ್ಠ ಬೆಂಬಲ ಬೆಲೆಯನ್ನು ಹೆಚ್ಚಿಸಬೇಕೆಂದು ಒತ್ತಾಯಿಸಿದಾಗ ಬಳಕೆದಾರರು ಅದನ್ನು ವಿರೋಧಿಸುವ ಸಾಧ್ಯತೆ ಇರುವುದರಿಂದ ಈ ಬೆಲೆ ನಿಗದಿ ಕ್ರಮ ಅನಗತ್ಯ ಘರ್ಷಣೆಗೆ ದಾರಿ ಮಾಡಿಕೊಡುವ ಸಾಧ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT