ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಹಾರ ಪೋಲು ಮಾಡದಿರಿ

Last Updated 17 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಘಟನೆಯ (ಎಫ್‌ಎಒ) ‘ವ್ಯರ್ಥವಾಗುತ್ತಿರುವ ಆಹಾರ ಪದಾರ್ಥಗಳ’ ಕುರಿತ ವರದಿಯು ಕೆಲವು ಆಘಾತಕಾರಿ ಸಂಗತಿಗಳನ್ನು ಬಯಲಿಗೆ ತಂದಿದೆ.  ಜಗತ್ತಿನಲ್ಲಿ ಮನುಷ್ಯನ ಬಳಕೆಗೆ ಉತ್ಪಾದನೆಯಾಗುತ್ತಿರುವ ಆಹಾರ ಪದಾರ್ಥಗಳಲ್ಲಿ ಮೂರನೇ ಒಂದು ಭಾಗದಷ್ಟು, ಅಂದರೆ ಸುಮಾರು 130 ಕೋಟಿ ಟನ್‌ಗಳಷ್ಟು ಪೋಲಾಗುತ್ತಿದೆ ಎಂದು ಆ ವರದಿ ಹೇಳಿದೆ.

ಜಗತ್ತಿನ ಜನಸಂಖ್ಯೆಯ ಪ್ರತಿ ಎಂಟರಲ್ಲಿ ಒಬ್ಬ ವ್ಯಕ್ತಿ, ಅಂದರೆ 87 ಕೋಟಿ  ಜನರು ಪೌಷ್ಟಿಕಾಂಶಗಳ ಕೊರತೆಯಿಂದ ಬಳಲುತ್ತಿರುವ ವಾಸ್ತವಾಂಶ ಒಂದೆಡೆ­ಯಾದರೆ, ಇನ್ನೊಂದೆಡೆ 130 ಕೋಟಿ ಟನ್ ಆಹಾರ ಪೋಲಾಗುತ್ತಿದೆ! ಹಣದ ಲೆಕ್ಕ ಹಾಕಿದರೆ ಸುಮಾರು 75 ಕೋಟಿ  ಅಮೆರಿಕನ್ ಡಾಲರ್‌ನಷ್ಟು ಮೌಲ್ಯದ ಆಹಾರ!  ಹೀಗೆ ವ್ಯರ್ಥವಾಗುತ್ತಿರುವ ಆಹಾರ ಪದಾರ್ಥಗಳಲ್ಲಿ ಶೇಕಡಾ 54ರಷ್ಟು ಉತ್ಪಾದನೆ ಮತ್ತು ದಾಸ್ತಾನು ಹಂತದಲ್ಲೇ ವ್ಯರ್ಥವಾಗುತ್ತಿದ್ದರೆ, ಶೇಕಡಾ 46ರಷ್ಟು ಸಂಸ್ಕರಣೆ, ವಿತರಣೆ ಮತ್ತು ಬಳಕೆಯ ಸಂದರ್ಭಗಳಲ್ಲಿ ಪೋಲಾಗುತ್ತಿದೆ.

ಅಂದರೆ ರೈತರು ಕಷ್ಟಪಟ್ಟು ದುಡಿದು ಬೆಳೆದ ಆಹಾರ ಧಾನ್ಯಗಳನ್ನು ಕೂಡಿಡಲು ಸೂಕ್ತ ಸೌಲಭ್ಯವುಳ್ಳ ಗೋದಾಮುಗಳಿಲ್ಲದೇ ದೊಡ್ಡ ಪ್ರಮಾಣದಲ್ಲಿ ನಷ್ಟ ಸಂಭವಿಸುತ್ತಿದೆ. ಗೋದಾಮಿನಿಂದ ಹೊರ ಬಂದ ಬಳಿಕ, ವಿವಿಧ ರೀತಿಯಲ್ಲಿ ಸಂಸ್ಕರಣೆಯಲ್ಲಿ ಮತ್ತು ಊಟದ ಟೇಬಲ್‌ನಲ್ಲೂ ಅಪಾರ ಪ್ರಮಾಣದಲ್ಲಿ ಆಹಾರ ಪೋಲಾಗುತ್ತಿದೆ. ಒಂದು ಹೊತ್ತಿನ ಕೂಳಿಗೂ ಗತಿಯಿಲ್ಲದೆ ನರಳುತ್ತಿರುವ ಕೋಟ್ಯಂತರ ಜನರ ಪಾಲಿಗೆ ಇದಕ್ಕಿಂತ ದೊಡ್ಡ ವಂಚನೆ ಬೇರೊಂದಿಲ್ಲ. ಅದರಲ್ಲೂ ಭಾರತದ ಪಾಲು ದೊಡ್ಡದಿದೆ. ಭಾರತದಲ್ಲಿ ಅತ್ಯಧಿಕ ಅಂದರೆ ಶೇಕಡಾ 40ರಷ್ಟು ಆಹಾರ ಪದಾರ್ಥಗಳು ಪ್ರತೀವರ್ಷ ವ್ಯರ್ಥವಾಗುತ್ತಿವೆ ಎಂದು ವರದಿ ತಿಳಿಸಿದೆ.

ಇದನ್ನು ತಡೆಯಲು ಮುಖ್ಯವಾಗಿ ನಮ್ಮಲ್ಲಿ ಅತ್ಯಾಧುನಿಕ ಗೋದಾಮು ಸೌಲಭ್ಯಗಳು ಸ್ಥಾಪನೆಯಾಗಬೇಕಿದೆ. ಚೀನಾದಲ್ಲಿ 15  ಕೋಟಿ ಟನ್‌  ಆಹಾರಧಾನ್ಯಗಳನ್ನು ಕೂಡಿಡುವ ಸಾಮರ್ಥ್ಯದ ಗೋದಾಮುಗಳಿವೆ. ಆದರೆ ಭಾರತದಲ್ಲಿ ಗೋದಾಮು ಸಾಮರ್ಥ್ಯ ಕೇವಲ ಆರು ಕೋಟಿ ಟನ್. ಇರುವ ಗೋದಾಮುಗಳಲ್ಲೂ ಇಲಿಗಳು ತಿಂದು, ಹುಳ ಹಿಡಿದು ವ್ಯರ್ಥವಾಗುವ ಆಹಾರಧಾನ್ಯಗಳದ್ದೇ ದೊಡ್ಡ ಸಮಸ್ಯೆ. ‘ಭಾರತದಲ್ಲಿ ಪ್ರತೀ  ವರ್ಷ 44 ಸಾವಿರ ಕೋಟಿ ರೂಪಾಯಿ ಮೌಲ್ಯದ ಆಹಾರ ಪದಾರ್ಥಗಳು ವ್ಯರ್ಥವಾಗುತ್ತಿದ್ದು, ಅದರಲ್ಲಿ ಹಣ್ಣು ಮತ್ತು ತರಕಾರಿಯ ಮೌಲ್ಯವೇ 13,309 ಕೋಟಿ ರೂಪಾಯಿಯಷ್ಟಿದೆ' ಎಂದು ಕಳೆದ ತಿಂಗಳು ಕೃಷಿ ಸಚಿವರು ಸಂಸತ್ತಿಗೆ ತಿಳಿಸಿದ್ದರು.

ಪೋಲಾದ ಆಹಾರಧಾನ್ಯಗಳನ್ನು ಉತ್ಪಾದಿಸಲು ನಮ್ಮ ಲಕ್ಷಾಂತರ ರೈತರು ಬಳಸಿದ ಶ್ರಮ, ವಿದ್ಯುತ್ ಮತ್ತು ಜಲಸಂಪತ್ತು ಕೂಡಾ ಪೋಲಾದಂತೆಯೇ! ಆಹಾರ ವ್ಯರ್ಥ ಮಾಡುವುದರಲ್ಲಿ ಕರ್ನಾಟಕದ ಪಾಲೂ ಕಡಿಮೆಯೇನಿಲ್ಲ. ಕಳೆದ ವರ್ಷ ಬೆಂಗಳೂರಿನ ಕಲ್ಯಾಣ ಮಂಟಪಗಳಲ್ಲಿ 940 ಟನ್‌ಗಳಷ್ಟು ಆಹಾರ ಪದಾರ್ಥಗಳನ್ನು ಊಟದ ತಟ್ಟೆಯಲ್ಲೇ ಚೆಲ್ಲಿ ಪೋಲು ಮಾಡಲಾಗಿದೆ ಎಂದು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಸಮೀಕ್ಷೆಯೊಂದು ಇತ್ತೀಚೆಗೆ ಬಹಿರಂಗಪಡಿಸಿದೆ. ಸರ್ಕಾರ ಮತ್ತು ಸಮಾಜ ಈ ವರದಿಗಳನ್ನು ಗಂಭೀರವಾಗಿ ಪರಿಗಣಿಸಿ ಆಹಾರ ಪೋಲು ತಡೆಯಲು ಸಾಧ್ಯವಿರುವ ಎಲ್ಲ ಕ್ರಮಗಳನ್ನೂ ಕೈಗೊಳ್ಳಬೇಕಿದೆ. ಏಕೆಂದರೆ ಜಗತ್ತಿನ ಪೌಷ್ಟಿಕಾಂಶ ಕೊರತೆಯ ಪ್ರತೀ ಮೂರು ಮಕ್ಕಳಲ್ಲಿ ಒಂದು ಮಗು ಭಾರತದ್ದು ಎನ್ನುವುದನ್ನು ನಾವು ಮರೆಯುವಂತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT