ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಹಾರ ಮಸೂದೆಯಲ್ಲಿ ದೋಷ

Last Updated 14 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: `ದೇಶದ ಎಲ್ಲ ವರ್ಗದ ಜನರಿಗೂ ಅನ್ವಯವಾಗುವಂಥ ಸಮಾನವಾದ ರಾಷ್ಟ್ರೀಯ ಆಹಾರ ಭದ್ರತಾ ಮಸೂದೆಯನ್ನು ಸರ್ಕಾರ ಜಾರಿಗೆ ತರಬೇಕು~ ಎಂದು ರಾಷ್ಟ್ರೀಯ ಪಡಿತರ ವಿತರಕರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ವಿಶ್ವಂಬರ್ ಬಸು ಒತ್ತಾಯಿಸಿದರು.

ನಗರದಲ್ಲಿ ಮಂಗಳವಾರ ನಡೆದ ಕರ್ನಾಟಕ ರಾಜ್ಯ ಸರ್ಕಾರಿ ಪಡಿತರ ವಿತರಕರ ಸಂಘದ ಸಭೆಯಲ್ಲಿ ಮಾತನಾಡಿದ ಅವರು, `ಸರ್ಕಾರ ಈಗ ಜಾರಿಗೆ ತರಲು ಉದ್ದೇಶಿಸಿರುವ ಆಹಾರ ಭದ್ರತಾ ಮಸೂದೆ ಹಲವು ದೋಷಗಳಿಂದ ಕೂಡಿದೆ. ಆಹಾರದ ಉತ್ಪಾದನೆ ಹಾಗೂ ವಿತರಣೆಯ ಬಗ್ಗೆ ಮಸೂದೆಯಲ್ಲಿ ಸಮರ್ಪಕವಾದ ಅಂಶಗಳಿಲ್ಲ. ರಾಷ್ಟ್ರೀಯ ಪಡಿತರ ಚೀಟಿಯ ವಿತರಣೆಯ ಬಗ್ಗೆಯೇ ಹಲವು ಗೊಂದಲಗಳಿವೆ.

ಸರ್ಕಾರ ಈ ಮಸೂದೆಯ ಬಗ್ಗೆ ಪುನರ್ ಪರಿಶೀಲಿಸಬೇಕು. ದೇಶದ ಆಹಾರ ವಿತರಣಾ ವ್ಯವಸ್ಥೆಯ ಪ್ರಮುಖ ಮಾರ್ಗವಾಗಿರುವ ಪಡಿತರ ವಿತರಕರ ಸಮಸ್ಯೆಗಳ ಬಗ್ಗೆಯೂ ಸರ್ಕಾರ ಗಮನ ಹರಿಸಬೇಕು. ಈ ಸಂಬಂಧ ಮಾರ್ಚ್ 27 ರಂದು `ದೆಹಲಿ ಚಲೋ~ ಚಳವಳಿ ಹಮ್ಮಿಕೊಳ್ಳಲಾಗಿದೆ~ ಎಂದು ಅವರು ತಿಳಿಸಿದರು.

ಕರ್ನಾಟಕ ರಾಜ್ಯ ಸರ್ಕಾರಿ ಪಡಿತರ ವಿತರಕರ ಸಂಘದ ಅಧ್ಯಕ್ಷ ಟಿ.ಕೃಷ್ಣಪ್ಪ ಮಾತನಾಡಿ, `ಪಡಿತರ ವಿತರಕರು ಸಾರ್ವಜನಿಕರಿಗೆ ಪಡಿತರ ಪೂರೈಕೆಯಲ್ಲಿ ಅನ್ಯಾಯ ಮಾಡುತ್ತಿದ್ದಾರೆ ಎಂಬ ಆರೋಪಗಳೇ ಹೆಚ್ಚು. ಆದರೆ ಪಡಿತರ ವ್ಯವಸ್ಥೆಯ ಅಸಮರ್ಪಕತೆಗೆ ಸರ್ಕಾರಿ ಅಧಿಕಾರಿಗಳ ಭ್ರಷ್ಟಾಚಾರವೇ ಮುಖ್ಯ ಕಾರಣ. ಸರ್ಕಾರ ಮೊದಲು ಅಧಿಕಾರಿಗಳ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕು. ದೇಶದಲ್ಲಿ ಪಡಿತರ ವಿತರಕರ ಅಸಮಾನತೆಯನ್ನು ನಿವಾರಿಸಲು ಏಕರೂಪದ ಕಮಿಷನ್ ವ್ಯವಸ್ಥೆಯನ್ನು ಸರ್ಕಾರ ಜಾರಿಗೆ ತರಬೇಕು~ ಎಂದು ಅವರು ಆಗ್ರಹಿಸಿದರು.

`ರಾಜ್ಯದಲ್ಲಿ ಹೊಸದಾಗಿ ಆನ್‌ಲೈನ್ ನೋಂದಣಿಯ ವ್ಯವಸ್ಥೆಯನ್ನು ಸರ್ಕಾರ ಜಾರಿಗೆ ತಂದಿದೆ. ಆದರೆ ಇದರಿಂದ ಗ್ರಾಮೀಣ ಭಾಗದ ಜನರಿಗೆ ಅನ್ಯಾಯವಾಗಲಿದೆ. ಗ್ರಾಮಾಂತರ ಭಾಗಗಳಲ್ಲಿ ಬೆಳಿಗ್ಗೆಯಿಂದ ಸಂಜೆಯ ವರೆಗೂ ಸರಿಯಾದ ವಿದ್ಯುತ್ ಪೂರೈಕೆಯೇ ಇರುವುದಿಲ್ಲ. ಹೀಗಿರುವಾಗ ಗ್ರಾಮೀಣ ಜನರು ಆನ್‌ಲೈನ್ ಮೂಲಕ ಹೆಸರು ನೋಂದಾಯಿಸುವುದು ಅಸಾಧ್ಯ. ಸರ್ಕಾರ ಈ ಬಗ್ಗೆ ಪುನರ್ ಪರಿಶೀಲನೆ ನಡೆಸಬೇಕು~ ಎಂದರು.

ಸಭೆಯಲ್ಲಿ ಕರ್ನಾಟಕ ರಾಜ್ಯ ಪಡಿತರ ವಿತರಕರ ಸಂಘದ ಕಾರ್ಯಾಧ್ಯಕ್ಷ ಡಿ.ಎಂ.ಹಾಲಸ್ವಾಮಿ, ಪ್ರಧಾನ ಕಾರ್ಯದರ್ಶಿ ಎಂ.ಶಿವಪ್ರಸಾದ್ ಮತ್ತಿತರರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT