ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಹಾರ ಸಪ್ತಾಹ: ಹಂಚಿ ತಿಂದ ಮಹಿಳೆಯರು

Last Updated 3 ಸೆಪ್ಟೆಂಬರ್ 2011, 10:25 IST
ಅಕ್ಷರ ಗಾತ್ರ

ತಿಪಟೂರು: ಸುಲಭವಾಗಿ ಸಿಗುವ ಸೊಪ್ಪು, ತರಕಾರಿ, ತರಹೇವಾರಿ ಕಾಳು, ಮನೆಯಲ್ಲೇ ಸಿಗುವ ಹಾಲು ಮತ್ತಿತರ ಸಾಮಗ್ರಿಗಳಿಂದ ಶುಚಿರುಚಿಯಾದ ಉತ್ಕೃಷ್ಟ ಆಹಾರ, ತಿಂಡಿ ತಿನಿಸು ಮಾಡಿ ತಂದ ಮಹಿಳೆಯರು ಪರಸ್ಪರ ಹಂಚಿ ತಿಂದು ರಾಷ್ಟ್ರೀಯ ಪೌಷ್ಟಿಕ ಆಹಾರ ಸಪ್ತಾಹವನ್ನು ಅರ್ಥಪೂರ್ಣವಾಗಿ ಆಚರಿಸಿದರು.

ಮಕ್ಕಳ ಮತ್ತು ಮಹಿಳಾ ಅಭಿವೃದ್ಧಿ ಇಲಾಖೆ, ಕೊನೇಹಳ್ಳಿ ವಿಜ್ಞಾನ ಕೇಂದ್ರ ಮತ್ತು ಆರೋಗ್ಯ ಇಲಾಖೆ ಏರ್ಪಡಿಸಿದ್ದ ರಾಷ್ಟ್ರೀಯ ಪೌಷ್ಟಿಕ ಆಹಾರ ಸಪ್ತಾಹ ಕಾರ್ಯಕ್ರಮ ಸ್ಥಳೀಯ ನೆಲೆಯಲ್ಲೇ ಪೌಷ್ಟಿಕ ಆಹಾರ ಹುಡುಕಾಟದ ಮಾರ್ಗಗಳನ್ನು ತೆರೆದಿಟ್ಟಿತು. ಅಂಗನವಾಡಿ ಕಾರ್ಯಕರ್ತೆಯರು ತಾವು ಮಾಡಿ ತಂದಿದ್ದ ತಿನಿಸುಗಳ ಮೂಲಕ ಪೌಷ್ಟಿಕ ಅರಿವಿನ ವಿಸ್ತಾರ ಬಿಚ್ಚಿಟ್ಟರು.

ಬಹುತೇಕ ಮಹಿಳೆಯರು ರಾಗಿ ಹಲ್ವಾ, ಮಸಾಲೆ ರೊಟ್ಟಿ, ಗರಿಗರಿ ದೋಸೆ, ಶಾವಿಗೆ, ಮೊಳಕೆ ಹುರುಳಿ ಕಾಳಿನ ವಡೆ, ಬೆರಕೆ ಬೇಳೆಯ ಹಬೆ ಕಡುಬು, ನುಗ್ಗೆ ಸೊಪ್ಪಿನ ಬೋಂಡಾ, ಖರ್ಜಿ ಕಾಯಿ, ಎಳ್ಳೊಬ್ಬಟ್ಟು, ಸೊಪ್ಪಿನ ರೊಟ್ಟಿ ಮತ್ತಿತರರ ಖಾದ್ಯಗಳು ಗಮನ ಸೆಳೆದವು. ಕಾರ್ಯಕ್ರಮದ ನಂತರ ಮಹಿಳೆಯರು ಪರಸ್ಪರ ಹಂಚಿ ತಿಂದರು.
ಶಾಸಕ ಬಿ.ಸಿ.ನಾಗೇಶ್ ಕಾರ್ಯಕ್ರಮ ಉದ್ಘಾಟಿಸಿದರು. ನಗರಸಭೆ ಅಧ್ಯಕ್ಷೆ ಸರಸ್ವತಿ ಅಧ್ಯಕ್ಷತೆ ವಹಿಸಿದ್ದರು.

ಕೊನೇಹಳ್ಳಿ ಕೃಷಿ ವಿಜ್ಞಾನ ಕೇಂದ್ರದ ಆಹಾರ ತಜ್ಞೆ ಮಮತಾ ಮಾಹಿತಿ ನೀಡಿದರು. ತಾಲ್ಲೂಕು ಪಂಚಾತಿ ಉಪಾಧ್ಯಕ್ಷ ಭಾನುಪ್ರಕಾಶ್, ಜಿ.ಪಂ. ಸದಸ್ಯೆ ಯಶೋಧಾ ಗಂಗರಾಜು, ಎಸಿಡಿಪಿಒ ಓಂಕಾರಪ್ಪ ಮತ್ತಿತರರು ಇದ್ದರು. ಸಿಡಿಪಿಒ ಎಸ್.ನಟರಾಜ್ ಪ್ರಾಸ್ತಾವಿಕ ಮಾತನಾಡಿದರು. ಸುಂದರಮ್ಮ ಸ್ವಾಗತಿಸಿ, ದೀಪಾ ನಿರೂಪಿಸಿ, ಪ್ರೇಮಾ ವಂದಿಸಿದರು.

ಅಧ್ಯಯನ ಶಿಬಿರ ಇಂದು
ರಾಜ್ಯ ಅಂಗನವಾಡಿ ನೌಕರರ ಸಂಘದಿಂದ ನಗರದ ಟ್ಯಾಗೂರ್ ವಿದ್ಯಾಸಂಸ್ಥೆ ಆವರಣದಲ್ಲಿ ಸೆ. 3 ಮತ್ತು 4ರಂದು ಅಂಗನವಾಡಿ ಕಾರ್ಯಕರ್ತೆಯರ ಜಿಲ್ಲಾ ಮಟ್ಟದ ಅಧ್ಯಯನ ಶಿಬಿರ ನಡೆಯಲಿದೆ.

ಶೇಂಗಾ ಬೆಳೆಗೆ ರೋಗ
ಶಿರಾ: ತಾಲ್ಲೂಕಿನಲ್ಲಿ ಬಿತ್ತನೆಯಾಗಿರುವ ಶೇಂಗಾ ಬೆಳೆಗೆ ಅಲ್ಲಲ್ಲಿ ಸುರಳಿಪೂಚಿ ಕೀಟದ ಬಾಧೆ ಕಂಡುಬಂದಿದ್ದು, ಮಾನೋಕ್ರೋಟೋಪಾಸ್ ಅಥವಾ ಕ್ವಿನಾಲ್‌ಪಾಸ್ ಕೀಟನಾಶಕವನ್ನು ಸಿಂಪಡಿಸುವಂತೆ ಸಹಾಯಕ ಕೃಷಿ ನಿರ್ದೇಶಕ ಡಾ.ಎಚ್.ನಾಗರಾಜು ತಿಳಿಸಿದ್ದಾರೆ.

ಕೆಲವೆಡೆ ಶೇಂಗಾ ಎಲೆಗಳ ಭಾಗದಲ್ಲಿ ಕಪ್ಪು ಚುಕ್ಕೆಗಳು ಗೋಳಾಕಾರದಲ್ಲಿ ಕಂಡು ಬಂದಿರುವುದು ಟಿಕಾರೋಗ ವಾಗಿದ್ದು, ಇದರ ಹತೋಟಿಗೆ ಕಾರ್ಬನ್ ಡೈಜಿಮ್ 1 ಗ್ರಾಂ.ನ್ನು ಒಂದು ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸುವಂತೆ ಸಲಹೆ ಮಾಡಿದ್ದಾರೆ.

ಮಾಹಿತಿಗೆ ಸಮೀಪದ ರೈತ ಸಂಪರ್ಕ ಕೇಂದ್ರ ಅಥವಾ ಕೃಷಿ ಇಲಾಖೆ ಸಹಾಯಕ ನಿರ್ದೇಶಕರನ್ನು ಭೇಟಿ ಮಾಡುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಗಣೇಶೋತ್ಸವ
ಶಿರಾ: ನಗರದ ವಿದ್ಯಾಗಣಪತಿ ಮಂಡಳಿಯಿಂದ 65ನೇ ವರ್ಷದ ವಿದ್ಯಾ ಗಣಪತಿಯನ್ನು ಗಣೇಶ ದೇವಾಲಯ ದಲ್ಲಿ ಗುರುವಾರ ಪ್ರತಿಷ್ಠಾಪಿಸಲಾಗಿದ್ದು, ಈ ವರ್ಷದ ವಿಶೇಷ ಅಲಂಕಾರವಾಗಿ ವಿದ್ಯಾಗಣಪತಿಯ ಹಿಂಭಾಗದಲ್ಲಿ ಕೃಷ್ಣ ಬಲರಾಮರಿಂದ ಬಕಾಸುರ ಪಕ್ಷಿ ಸಂಹಾರವನ್ನು ದೃಶ್ಯೀಕರಿಸಲಾಗಿದೆ.

ಗಣೇಶೋತ್ಸವದ ಅಂಗವಾಗಿ ಸೆ.30ರವರೆಗೆ ಪ್ರತಿನಿತ್ಯ ಬೆಳಗ್ಗೆ 9ಗಂಟೆಗೆ ಪಂಚಾಮೃತ ಅಭಿಷೇಕ ಹಾಗೂ ಮಧ್ಯಾಹ್ನ 12.30ಕ್ಕೆ ಮಹಾ ಮಂಗಳಾರತಿ ನಡೆಯಲಿದೆ. ಪ್ರತಿದಿನ ಸಂಜೆ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಸೆ.3ರಿಂದ 5ರವರೆಗೆ ಸಂಜೆ ವೇಳೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆದರೆ, ಸೆ.6 ಮತ್ತು 7ರಂದು ಹರಿಕತೆ ಏರ್ಪಡಿಸಲಾಗಿದೆ. 8ರಂದು ಚಲಚಿತ್ರ ಪ್ರದರ್ಶನ, 9ರಂದು ಕರ್ನಾಟಕ ಶಾಸ್ತ್ರೀಯ ಸಂಗೀತ, 10ರಿಂದ 30ರವರೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT