ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಹಾರ ಸುರಕ್ಷತೆ ಕಾಯ್ದೆ ವಿರುದ್ಧ ಕಿಡಿ

Last Updated 17 ಜುಲೈ 2012, 6:20 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಕೇಂದ್ರ ಸರ್ಕಾರ ಈಚೆಗೆ ಜಾರಿಗೆ ತಂದಿರುವ ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ಕಾಯ್ದೆಯ ಸಾಧಕ ಬಾಧಕಗಳ ಕುರಿತು ನಗರದಲ್ಲಿ ಸೋಮವಾರ ನಡೆದ ಚರ್ಚಾ ಕಾರ್ಯಕ್ರಮದಲ್ಲಿ ಹೋಟೆಲ್ ಉದ್ಯಮಿಗಳು ಹಾಗೂ ಸಣ್ಣ ವ್ಯಾಪಾರಿಗಳು ಕಾಯ್ದೆ ಜಾರಿಗೆ ತಂದಿರುವವರ ವಿರುದ್ಧ ಕಿಡಿಕಾರಿದರು.

ಭಾರತೀಯ ಜೀವನ ವಿಧಾನಕ್ಕೆ ಹೊಂದಿಕೊಂಡಿರುವ ಆಹಾರ ಉದ್ಯಮ ಹಾಗೂ ಅದಕ್ಕೆ ಸಂಬಂಧಪಟ್ಟ ಚಟುವಟಿಕೆಗಳಿಗೆ ಕಂಟಕ ತರುವ ಬೃಹತ್ ಕಂಪೆನಿಗಳ ಹುನ್ನಾರ ಕಾಯ್ದೆಯ ಹಿಂದೆ ಇದೆ ಎಂದು ಅವರು ಆರೋಪಿಸಿದರು.

ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಸಮೀಕ್ಷಾ ಅಧಿಕಾರಿ ಡಾ. ಸುಭಾಸ ಬಬ್ರುವಾಡ ಕಾಯ್ದೆಯ ಕುರಿತು ಮಾಹಿತಿ ನೀಡಿದರು. ನಂತರ ಮಾತನಾಡಿದ ಹೋಟೆಲ್ ಉದ್ಯಮಿಗಳು, ವಿವಿಧ ವ್ಯಾಪಾರಿಗಳು ಹಾಗೂ ನಾಗರಿಕ ವೇದಿಕೆಯವರು ಕಾಯ್ದೆಯ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಕಾಯ್ದೆಯ ಬಗ್ಗೆ ಸಮಗ್ರವಾಗಿ ಚರ್ಚಿಸಲು ಪಾಲಿಕೆ ಆಯುಕ್ತರ ಉಪಸ್ಥಿತಿಯಲ್ಲಿ ಮತ್ತೊಂದು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ಕೊನೆಗೆ ನಿರ್ಧರಿಸಲಾಯಿತು.

ಪ್ರಾಸ್ತಾವಿಕವಾಗಿ ಮಾತನಾಡಿದ ಸುಭಾಸ ಬಬ್ರುವಾಡ, ಆಹಾರ ಉದ್ಯಮಿಗಳು ಗ್ರಾಹಕರಿಗೆ ಗುಣಮಟ್ಟದ ಆಹಾರವನ್ನು ನೀಡಬೇಕೆಂಬುದೇ ಈ ಕಾಯ್ದೆಯ ಉದ್ದೇಶ. ಹೋಟೆಲ್‌ಗಳಲ್ಲಿ ಸ್ವಚ್ಛತೆ ಕಾಪಾಡಲು ಆದ್ಯತೆ ನೀಡಬೇಕು. ಇದನ್ನು ಕಡೆಗಣಿಸಿದರೆ ಕಾಯ್ದೆಯಡಿ ದಂಡ ವಿಧಿಸಬೇಕಾಗುತ್ತದೆ~ ಎಂದು ಹೇಳಿದರು.
 
ಇದರಿಂದ ಕೆರಳಿದ ಹೋಟೆಲ್ ಉದ್ಯಮಿಗಳು ಕಾಯ್ದೆಯು ಕೇವಲ ಹೋಟೆಲ್ ಉದ್ಯಮವನ್ನೇ ಗುರಿಯಾಗಿರಿಸಿಕೊಂಡಿದ್ದು ನ್ಯೂನತೆಗಳನ್ನು ಮರುಪರಿಶೀಲಿಸದೇ ಕಾಯ್ದೆಯನ್ನು ಹೇರಲು ಬಂದರೆ ಪರಿಶೀಲನಾ ಅಧಿಕಾರಿಗಳನ್ನು ಹೋಟೆಲ್ ಒಳಗೆ ಸೇರಿಸಲಾರೆವು ಎಂದು ಹೇಳಿದರು.

ಹೋಟೆಲ್ ಉದ್ಯಮಿಗಳ ಸಂಘದ ಅಧ್ಯಕ್ಷ ಹರಿದಾಸ ಎನ್. ಶೆಟ್ಟಿ, ಪಾಲಿಕೆ ಒದಗಿಸುವ ಸೌಲಭ್ಯಗಳೇ ಸರಿಯಾಗಿಲ್ಲ. ಹೀಗಿರುವಾಗ ಕಾಯ್ದೆ ಬಯಸುವಂಥ ಶುದ್ಧ-ಸ್ವಚ್ಛ ಆಹಾರ ನೀಡಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರಲ್ಲದೆ ಪಾಲಿಕೆ ನೀರು ಸರಬರಾಜು ಮಾಡುವ ಟ್ಯಾಂಕ್‌ಗಳನ್ನು ಶುಚಿಗೊಳಿಸುವ ವರೆಗೆ ಕಾಯ್ದೆಯನ್ನು ಹೇರಲು ಬಿಡಲಾರೆವು ಎಂದರು.

`ಪಾಲಿಕೆ ಕಚೇರಿ ಬಳಿಯಲ್ಲೇ ಡಬ್ಬಾ ಅಂಗಡಿಗಳಿವೆ. ಅನೇಕ ಕಡೆ ಗಟಾರಗಳ ಬದಿಯಲ್ಲಿ ಶುಚಿತ್ವವನ್ನೇ ಮರೆತು ಆಹಾರವನ್ನು ನೀಡಲಾಗುತ್ತದೆ. ಇದನ್ನು ಸಾಬೀತು ಮಾಡಲು ವಿಡಿಯೋ ಚಿತ್ರಗಳನ್ನು ಬೇಕಾದರೂ ನಾವು ತೋರಿಸಬಲ್ಲೆವು. ಇಂಥವರ ಮೇಲೆ ಕ್ರಮ ಕೈಗೊಂಡ ಮೇಲೆ ನಮ್ಮ ಬಳಿಗೆ ಬಂದರೆ ಸಾಕು~ ಎಂದು ಅವರು ಖಡಾಕಂಡಿತವಾಗಿ ಹೇಳಿದರು. 

ನಾಗರಿಕ ವೇದಿಕೆಯ ಅಧ್ಯಕ್ಷ ವಿ.ಎನ್.ಶ್ಯಾನಭಾಗ್ ಮಾತನಾಡಿ, ಇದು ಸುಲಿಗೆಗಾಗಿ ಮಾಡಿರುವ ಕಾಯ್ದೆ. ನೀರೇ ಇಲ್ಲದ ಮೇಲೆ ಹೋಟೆಲ್‌ನವರು ಶುದ್ಧ ನೀರು ಕೊಡಬೇಕೆಂದು ಹೇಳುವುದಾದರೂ ಹೇಗೆ ಎಂದು ಪ್ರಶ್ನಿಸಿದರು.
ಆಹಾರ ಸಾಗಿಸುವ ಸಣ್ಣ ವಾಹನಗಳನ್ನು ಬಲಿ ತೆಗೆದುಕೊಂಡು ತಮ್ಮ ಬೃಹತ್ ವಾಹನಗಳಿಗೆ ಅವಕಾಶ ಮಾಡಿಕೊಡುವ ಕಂಪೆನಿಗಳ ಲಾಬಿ ಈ ಕಾಯ್ದೆಯ ಹಿಂದೆ ಇದೆ ಎಂದು ಗ್ರಾಹಕರೊಬ್ಬರು ದೂರಿದರು.

ಕೆಸಿಸಿಐ ಅಧ್ಯಕ್ಷ ಎನ್.ಪಿ.ಜವಳಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷರಾದ ವಸಂತ ಎನ್. ಲದ್ವಾ, ಅಂದಾನಪ್ಪ ಸಜ್ಜನರ, ಮಹೇಂದ್ರ ಎಚ್. ಲದ್ದಡ್, ಗೌರವ ಕಾರ್ಯದರ್ಶಿ ವಿಶ್ವನಾಥ ಗಿಣಿಮಾಂವ, ಗೌರವ ಜಂಟಿ ಕಾರ್ಯದರ್ಶಿ ಸಿ.ಎನ್.ಕರಿಕಟ್ಟಿ, ಹೋಟೆಲ್ ಉದ್ಯಮಿಗಳ ಸಂಘದ ಸಂಘಟನಾ ಕಾರ್ಯದರ್ಶಿ ಸುಧಾಕರ ಕೆ.ಶೆಟ್ಟಿ, ಖಜಾಂಚಿ ಸರ್ವೋತ್ತಮ ಕಾಮತ್, ಜಂಟಿ ಕಾರ್ಯದರ್ಶಿಗಳಾದ ಚೇತನ್ ಆರ್.ಕುಮಾರ ಹಾಗೂ ಸುಕುಮಾರ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಸರ್ವೋತ್ತಮ ಶೆಟ್ಟಿ, ಉಪಾಧ್ಯಕ್ಷರಾದ ಪ್ರಕಾಶ ರಾವ್ ಹಾಗೂ ಕೃಷ್ಣಮೂರ್ತಿ ಉಚ್ಚಿಲ, ಗೌರವಾಧ್ಯಕ್ಷ ರವಿ.ವಿ.ಗಾಯತೊಂಡೆ ಮತ್ತಿತರರು ಉಪಸ್ಥಿತರಿದ್ದರು.

ಉದ್ಯಮಿಗಳನ್ನು ಕೂಲಿಗೆ ಕಳಿಸುವ ಕಾಯ್ದೆ
ಕಾಯ್ದೆಯ ಬಗ್ಗೆ ವಿಶಿಷ್ಟ ಶೈಲಿಯಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ ವರ್ತಕ ಕಲ್ಮೇಶ ದೊಡ್ಡಗಾಣಿಗೇರ, ಈ ಕಾಯ್ದೆ ವರ್ತಕರು ಹಾಗೂ ಉದ್ಯಮಿಗಳನ್ನು ಕೂಲಿಗೆ ಕಳುಹಿಸಲಿದೆ ಎಂದರು. ಅನೇಕ ನ್ಯೂನತೆಗಳಿರುವ ಕಾಯ್ದೆ ಉದ್ಯಮಿಗಳ ಮಾನ ತೆಗೆಯಲಿದ್ದು ಇದರಿಂದ ತಪ್ಪಿಸಿಕೊಳ್ಳಬೇಕಾದರೆ ನಾವು ಈ ವೃತ್ತಿಯನ್ನು ಬಿಟ್ಟುಬಿಡಬೇಕಾಗುತ್ತದೆ ಎಂದು ಅವರು ಹೇಳಿದರು.

`ಸ್ವಲ್ಪ ಮಲಿನ ನೀರು ಕುಡಿಯುವುದು, ಅಲ್ಪ ಸ್ವಲ್ಪ ಸ್ವಚ್ಛತೆ ಇಲ್ಲದಿರುವುದು ಇತ್ಯಾದಿ ಭಾರತೀಯ ಜೀವನ ವಿಧಾನದಲ್ಲಿ ಸಹಜ. ಎಸಿ ಕೊಠಡಿಯಲ್ಲಿ ಕುಳಿತು ಕಾಯ್ದೆ ರೂಪಿಸಿದವರು ಫ್ರಿಜ್‌ನಲ್ಲಿಟ್ಟ ಆಹಾರ ಮಾತ್ರ ಸುರಕ್ಷಿತ ಎಂದು ಹೇಳಿರುವುದನ್ನು ಒಪ್ಪಲು ಸಾಧ್ಯವಿಲ್ಲ. ಹೀಗಾಗಿ ಕಾಯ್ದೆಯ ಮರುಪರಿಶೀಲನೆ ಆಗಬೇಕು~ ಎಂದು ಅವರು ಹೇಳಿದರು.

ಸರ್ಕಾರಿ ಆಸ್ಪತ್ರೆ, ಹೋಟೆಲ್: ಯಾವುದು ಮೇಲು?
ಪಾಲಿಕೆ ವ್ಯಾಪ್ತಿಯ ಸರ್ಕಾರಿ ಆಸ್ಪತ್ರೆಗಳೋ ಹೋಟೆಲ್‌ಗಳೋ ಸ್ವಚ್ಛತೆಯನ್ನು ಕಾಪಾಡುತ್ತಿರುವುದು ಎಂಬ ಪ್ರಶ್ನೆಯನ್ನು ಆಹಾರ ಸುರಕ್ಷತಾ ಕಾಯ್ದೆ ಕುರಿತ ಚರ್ಚೆಯಲ್ಲಿ ಕೇಳಿದವರು ಹೋಟೆಲ್ ಮಾಲೀಕರ ಸಂಘದ ಸಂಘಟನಾ ಕಾರ್ಯದರ್ಶಿ ಸುಧಾಕರ ಕೆ.ಶೆಟ್ಟಿ.

ಹೋಟೆಲ್‌ಗಳಲ್ಲಿ ಸ್ವಚ್ಛತೆ ಕಾಪಾಡಲು ಗಮನಹರಿಸಬೇಕು ಎಂದು ಸುಭಾಸ ಬಬ್ರುವಾಡ ಹೇಳಿದ್ದಕ್ಕೆ ಪ್ರತಿಕ್ರಿಯಿಸಿದ ಅವರು, ಕಾನೂನಿನಲ್ಲಿ ಹೋಟೆಲ್ ಮಾಲೀಕರ ಸುಲಿಗೆ ಮಾಡುವ ಹುನ್ನಾರ ಅಡಗಿದೆ, ಸ್ವಚ್ಛತೆಗೆ ನಾವು ಆದ್ಯತೆ ಕೊಟ್ಟೇ ಕೊಡುತ್ತೇವೆ. ಹಾಗೆಂದು ಮಿನರಲ್ ನೀರು ಕುಡಿದವರು ಮಾತ್ರ ಆರೋಗ್ಯವಂತರಾಗಿರುತ್ತಾರೆ ಎಂದು ಹೇಳುವುದಾದರೂ ಹೇಗೆ? ವಾಸ್ತವದಲ್ಲಿ ಕೆರೆ ನೀರು ಕುಡಿದವರು ಗಟ್ಟಿಯಾಗಿರುತ್ತಾರೆ, ಬಾಟ್ಲಿ ನೀರು ಸೇವಿಸಿದವರು ಆಸ್ಪತ್ರೆ ಸೇರುತ್ತಾರೆ ಎಂದರು.

ಕಾಯ್ದೆ ರೂಪಿಸಿದ ಸರ್ಕಾರ ತಾಕತ್ತಿದ್ದರೆ ಒಂದು ವರ್ಷ ಹೋಟೆಲ್ ನಡೆಸಲಿ. ನಾವು ಅಲ್ಲಿ ನೌಕರರಾಗಿ ದುಡಿಯುತ್ತೇವೆ. ಕಾನೂನು ಪಾಲನೆ ಎಷ್ಟರ ಮಟ್ಟಿಗೆ ಆಗುತ್ತದೆ ಎಂದು ಅಲ್ಲಿ ನೋಡೋಣ ಎಂದು ಹೇಳಿದ ಅವರು, ಪಾಲಿಕೆ ವ್ಯಾಪ್ತಿಯಲ್ಲಿ ಜನರ ಆರೋಗ್ಯ ಕಾಪಾಡಬೇಕಾದ ಆಸ್ಪತ್ರೆಗಳು ಎಷ್ಟರ ಮಟ್ಟಿಗೆ ಸ್ವಚ್ಛವಾಗಿವೆ ಎಂಬುದನ್ನು ಪರಿಶೀಲಿಸಲು ಅಧಿಕಾರಿಗಳು ನಮ್ಮಂದಿಗೆ ಬರಲಿ, ನಂತರ ಹೋಟೆಲ್‌ಗಳಿಗೆ ನುಗ್ಗಿದರೆ ಸಾಕು ಎಂದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT