ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಹಾರ ಹಣದುಬ್ಬರ ಏರಿಕೆ

Last Updated 31 ಡಿಸೆಂಬರ್ 2010, 12:50 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ತರಕಾರಿಗಳು ಅದರಲ್ಲೂ ವಿಶೇಷವಾಗಿ ಈರುಳ್ಳಿ, ಹಣ್ಣು ಮತ್ತು ಪ್ರೊಟೀನ್ ಆಧಾರಿತ ಉತ್ಪನ್ನಗಳ ಬೆಲೆಗಳು ಏರಿಕೆಯ ಹಾದಿಯಲ್ಲಿಯೇ ಸಾಗಿರುವುದರಿಂದ ಡಿಸೆಂಬರ್ 18ಕ್ಕೆ ಕೊನೆಗೊಂಡ ವಾರಾಂತ್ಯದಲ್ಲಿ ಆಹಾರ ಹಣದುಬ್ಬರವು ಶೇ 14.44ರಷ್ಟಕ್ಕೆ ಏರಿಕೆ ದಾಖಲಿಸಿದೆ.

ಆಹಾರ ಪದಾರ್ಥಗಳ ಬೆಲೆಗಳು ಸತತ 5ನೇ ವಾರವೂ ಏರಿಕೆಯಾಗುತ್ತಿದ್ದು, ಕಳೆದ ವಾರ ಆಹಾರ ಹಣದುಬ್ಬರವು ಶೇ 12.13ರಷ್ಟಿತ್ತು. ಆದರೆ, ಕಳೆದ ವರ್ಷದ ಈ ಅವಧಿಯಲ್ಲಿನ ಶೇ 21.19ಕ್ಕೆ ಹೋಲಿಸಿದರೆ ಇದು ಕಡಿಮೆ ಪ್ರಮಾಣದಲ್ಲಿಯೇ ಇದೆ ಎನ್ನಬಹುದು.

ವಾರ್ಷಿಕ ಲೆಕ್ಕದ ಆಧಾರದ ಮೇಲೆ ಹೇಳುವುದಾದರೆ ಈರುಳ್ಳಿ ಬೆಲೆ ಶೇ 39.66ರಷ್ಟು ಮತ್ತು ವಾರದ ಆಧಾರದ ಮೇಲೆ ಶೇ 3.49ರಷ್ಟು ಹೆಚ್ಚಳವಾಗಿದೆ. ಅಕ್ಕಿ ಬೆಲೆ ಶೇ 29.26, ಹಣ್ಣು ಶೇ 21.97, ಹಾಲು ಶೇ 17.75ರಷ್ಟು ತುಟ್ಟಿಯಾಗಿವೆ. ಮೊಟ್ಟೆ, ಮಾಂಸ ಮತ್ತು ಮೀನಿನ ಬೆಲೆಗಳೂ ಶೇ 20.34ರಷ್ಟು ದುಬಾರಿಯಾಗಿವೆ.
ದ್ವಿದಳ ಧಾನ್ಯಗಳ ಬೆಲೆಗಳು ಶೇ 0.70ರಷ್ಟು ಮತ್ತು ಬೇಳೆಕಾಳು ಮಾತ್ರ ಶೇ 10.79ರಷ್ಟು ಅಗ್ಗವಾಗಿವೆ.

ನವೆಂಬರ್‌ನಲ್ಲಿ ಕೆಲ ಕಾಲ ಸಾಧಾರಣ ಮಟ್ಟದಲ್ಲಿದ್ದ ಆಹಾರ ಹಣದುಬ್ಬರವು ಆನಂತರ ಏರುಗತಿಯಲ್ಲಿಯೇ ಸಾಗಿದ್ದು, ಸರ್ಕಾರದ ಲೆಕ್ಕಾಚಾರಗಳನ್ನೆಲ್ಲ ತಲೆಕೆಳಗು ಮಾಡಿದೆ.

ವಾರದಿಂದ ವಾರಕ್ಕೆ ಹೆಚ್ಚುತ್ತಲೇ ಸಾಗಿರುವ ಆಹಾರ ಬೆಲೆ ಏರಿಕೆಯು, ಡಿಸೆಂಬರ್‌ನಲ್ಲಿ ಸಗಟು ಬೆಲೆ ಸೂಚ್ಯಂಕದ ಹಣದುಬ್ಬರದ ಮೇಲೆ ಪರಿಣಾಮ ಬೀರಬಹುದು ಎಂದು ಪರಿಣತರು ಅಭಿಪ್ರಾಯಪಟ್ಟಿದ್ದಾರೆ.

ಕಠಿಣ ಕ್ರಮ?: ಆಹಾರ ಬೆಲೆ ಏರಿಕೆಯು 10 ವಾರಗಳ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿರುವ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಕೇಂದ್ರ ಹಣಕಾಸು ಸಚಿವ ಪ್ರಣವ್ ಮುಖರ್ಜಿ, ಬೆಲೆ ಏರಿಕೆಗೆ ಕಡಿವಾಣ ವಿಧಿಸಲು ಸರ್ಕಾರ ಇನ್ನಷ್ಟು ಕಠಿಣ ಕ್ರಮಗಳನ್ನು ಕೈಗೊಳ್ಳಲಿದೆ ಎನ್ನುವ ಇಂಗಿತ ವ್ಯಕ್ತಪಡಿಸಿದ್ದಾರೆ.

ಈರುಳ್ಳಿಗೆ ಸಂಬಂಧಿಸಿದಂತೆ ಸರ್ಕಾರ ಈಗಾಗಲೇ ಸೂಕ್ತ ಕ್ರಮ ಕೈಗೊಂಡಿದೆ. ಆದರೆ, ಹಾಲು, ಹಣ್ಣು, ತರಕಾರಿ ಮತ್ತಿತರ ಕೆಲ ಸರಕುಗಳು ಆಹಾರ ಹಣದುಬ್ಬರ ಹೆಚ್ಚಳಕ್ಕೆ ಕಾರಣವಾಗುತ್ತಿವೆ ಎಂದರು.

ಆರ್‌ಬಿಐ ಕ್ರಮ: ಬೇಡಿಕೆ ಮತ್ತು ಪೂರೈಕೆ  ಹೊಂದಾಣಿಕೆಯಾಗದಿರುವುದು ಮತ್ತು ಜಾಗತಿಕವಾಗಿ ಕಚ್ಚಾ ತೈಲ, ಚಿನ್ನ- ಬೆಳ್ಳಿ,  ಕಬ್ಬಿಣದ ಅದಿರು, ಹತ್ತಿ ಮತ್ತಿತರ  ಸರಕುಗಳ ಬೆಲೆಗಳು ಹೆಚ್ಚಳಗೊಳ್ಳುತ್ತಿರುವುದರಿಂದ ಆಹಾರ ಹಣದುಬ್ಬರ ಏರುತ್ತಲೇ ಸಾಗಿದೆ. ಇದೊಂದು ಆತಂಕಕಾರಿ ಬೆಳವಣಿಗೆ ಎಂದು ಆರ್‌ಬಿಐ ಕಳವಳ ವ್ಯಕ್ತಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT